ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ.

ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ ಔಷಧಿಯನ್ನು ಸಿಂಪಡಿಸುತ್ತಾರೆ.  ಕೆಲವೊಮ್ಮೆ ಮುಂಗಾರು ಮಳೆ ಪ್ರಾರಂಭವಾಗಿ ರೈತರ ಈ ಕೆಲಸಕ್ಕೆ  ಅನುಕೂಲವಾಗಲಿ ಎಂದು ಸ್ವಲ್ಪ ವಿರಾಮವನ್ನು ನೀಡುತ್ತದೆ. ಕೆಲವೊಮ್ಮೆ ಹಿಡಿದ ಮಳೆ ಬಿಡುವುದೇ ಇಲ್ಲ. ಸಿಂಪರಣೆಗೆ ಅವಕಾಶವೇ ಸಿಗುವುದಿಲ್ಲ. ನಿರಂತರ ಮಳೆ, ಗಾಳಿ, ಎಡೆ ಎಡೆಯಲ್ಲಿ ಬಿಸಿಲಿನ ವಾತಾವರಣ ಇರುವ ಸಮಯದಲ್ಲಿ ಕೊಳೆ ರೋಗ ಉಂಟುಮಾಡುವ ರೋಗಾಣುಗಳು ಬೀಜಾಂಕುರವಾಗಿ ಹಾನಿ ಮಾಡಲು ಪ್ರಾರಂಭಿಸುತ್ತವೆ. ರೋಗಾಣುಗಳು ಬೀಜಾಂಕುರವಾಗಲು ಅವಕಾಶ ಸಿಗದಂತೆ ಮಾಡಲು ಮಳೆಗಾಲ ಬರುವ ಮುಂಚೆಯೇ  ಔಷಧಿ ಸಿಂಪಡಿಸಬೇಕು. ಎಲ್ಲರೂ ತಿಳಿದಿರಬೇಕಾದ ವಾಸ್ತವ ಎಂದರೆ ಮಳೆಗಾಲ ಪ್ರಾರಂಭವಾಗುವಾಗ ಮತ್ತು ಮಳೆ ಮುಗಿಯುವ ಸಮಯದಲ್ಲಿ  ಮನುಷ್ಯರಿಗೂ ಶೀತ, ಜ್ವರ ಮುಂತಾದ ಖಾಯಿಲೆ ಜಾಸ್ತಿ. ಸಸ್ಯಗಳಿಗೂ ಹಾಗೆಯೇ. 

ರೋಗಾಣುಗಳು ಎಲ್ಲಿಂದ ಬರುತ್ತವೆ?

  • Phytophthora  ಜಾತಿಯ ಶಿಲೀಂದ್ರಗಳು ಹಾನಿಕಾರಕ ಶಿಲೀಂದ್ರಗಳಾಗಿರುತ್ತವೆ.
  • ಈ ಶಿಲೀಂದ್ರವು ವಾರಾವರಣದಲ್ಲಿ ಇರುವಂತದ್ದು. ನಿರಂತರ ತೇವಾಂಶ ಇರುವ ಸ್ಥಳದಲ್ಲಿ ವರ್ಷಪೂರ್ತಿ ಅದು ಜೀವಂತವಾಗಿರುತ್ತದೆ.
  • ಬೇಸಿಗೆಯ ಬಿಸಿಗೆ ಅದು ಸುಪ್ತಾವಸ್ಥೆಯಲ್ಲೇ ಇರುತ್ತದೆ.
  • ಈ ಶಿಲೀಂದ್ರವು ಪ್ರಖರ ಬಿಲಿಗೆ ಸತ್ತು ಹೋಗುತ್ತದೆ.
  • ತೇವಾಂಶ ಇರುವ  ಅಂದರೆ ಸ್ಪ್ರಿಂಕ್ಲರ್  ನೀರಾವರಿ ಇರುವ ತೋಟದಲ್ಲಿ ನಿರಂತರ ತೇವಾಂಶ ಇದ್ದಾಗ ವರ್ಷಾನುಗಟ್ಟಲೆ ಬೀಜಾಣು ರೂಪದಲ್ಲಿ (Spores can survive years for years in mist soil) ಇರುತ್ತದೆ.
  • ನೆಲ ಒಣಗಿದಾಗ ಅದರ ಸಂಖ್ಯೆ ಕಡಿಮೆಯಾಗುತ್ತದೆ.
  • ಮಳೆ ಬರುವಾಗ ಗಾಳಿಯ ಮೂಲಕ ಎಲ್ಲೆಲ್ಲಿಂದಲೋ ಇದು ಬರುತ್ತದೆ.
  • ಅದರದ್ದೇ ಆದ ಕೆಲವು ಆಶ್ರಯ ಸಸ್ಯಗಳಲ್ಲಿ ಬೀಜಾಂಕುರವಾಗಿ ಹಾನಿ ಮಾಡಲು ಪ್ರಾರಂಭಿಸುತ್ತದೆ.
  • ಫ್ಹೈಟೋಪ್ತೆರಾ ಶಿಲೀಂದ್ರಗಳಲ್ಲಿ  ಬೇರೆ ಬೇರೆ ಸಸ್ಯಕ್ಕೆ ಬೇರೆ ಬೇರೆ ಜಾತಿಯವು ತೊಂದರೆ ಮಾಡುತ್ತವೆ.
  • ಅಡಿಕೆಗೆ ಫ್ಹೈಟೋಪ್ಥೆರಾ  ಅರೆಕಾ (Phytophthora arecae) ಹಾನಿ ಮಾಡುವಂತದ್ದು.
  • ನಿರಂತರ ಮಳೆ ಇದ್ದಾಗ ಶಿಲೀಂದ್ರದ  ಬೀಜಗಳು ಮೊಳೆಯುವುದಕ್ಕಿಂತ ಹೆಚ್ಚಾಗಿ ಬಿಸಿಲು ಮಳೆ ಮಿಶ್ರ ವಾತಾವರಣ ಇರುವಾಗ ಬೆಳವಣಿಗೆ ಜಾಸ್ತಿ.
  • ಬೀಜಾಣು ರೂಪ ಅಂದರೆ ಸುಪ್ತಾವಸ್ಥೆ. ಬೀಜಾಂಕುರ sporangia ಎಂದರೆ ಕೋಟ್ಯಾಂತರ ಸಂಖ್ಯೆಯಲ್ಲಿ ಶಿಲೀಂದ್ರಗಳ ಉತ್ಪಾದನೆ.
  • ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಬೀಜಾಣುಗಳು ಏಲಕ್ಕಿ ತರಹ  ಕಾಣಿಸುತ್ತದೆ.
  • ಮೊಳಕೆ ಒಡೆದಾಗ ಹತ್ತಿಯ ನೂಲಿನ ತರಹ ಕಂಡು ಅದರಲ್ಲಿ ಅಲ್ಲಲ್ಲಿ ಗಂಟುಗಳ ತರಹ ಇರುತ್ತದೆ.
  • ನೀರು ನಿಂತ ಜಾಗದಲ್ಲಿ ಇದರ ಸಂಖ್ಯಾಭಿವೃದ್ದಿ ಹೆಚ್ಚು.

ಹೇಗೆ ಸಂಖ್ಯಾಭಿವೃದ್ದಿಯಾಗುತ್ತದೆ?

  • ಗಾಳಿಯ ಮೂಲಕ, ನೀರಿನ ಮೂಲಕ ಹರಡಲ್ಪಡುವ ಫೈಟೋಪ್ಥೆರಾ ಶಿಲೀಂದ್ರವು ಅಡಿಕೆ ಮರದ ಸುಳಿಭಾಗದಲ್ಲಿ, ಕಾಯಿಗಳಲ್ಲಿ, ನೆಲದಲ್ಲಿ  ಸೇರಿಕೊಳ್ಳುತ್ತದೆ.
  • ಸಸ್ಯಗಳಲ್ಲಿರುವ ಪ್ರತಿರೋಧ ಶಕ್ತಿಯು ಅದರ ತೀವ್ರ ಹಾನಿಯನ್ನು ತಡೆಯುತ್ತದೆ.
  • ಆದರೆ ವಾತಾವರಣದ ಅನುಕೂಲ ಅದರ ಶಕ್ತಿಯನ್ನು ಮೀರಿ ಬೆಳೆಯುವಂತೆ ಮಾಡುತ್ತದೆ.
  • ಸುಳಿಯಲ್ಲಿ ಸೇರಿಕೊಂಡ ಶಿಲೀಂದ್ರ ಅಲ್ಲಿ ಮೊಳಕೆ ಒಡೆದು ಶಿರ ಕೊಳೆ ರೋಗಕ್ಕೆ (BUD ROT) ಕಾರಣವಾಗುತ್ತದೆ.
  • ಕಾಯಿಗಳ ಮೇಲೆ ಸೇರಿಕೊಂಡಂತವುಗಳು ಕಾಯಿ ಕೊಳೆ (Fruit rot) ಗೆ ಕಾರಣವಾಗುತ್ತದೆ.
  • ನೆಲಕ್ಕೆ ಸೇರಿಕೊಂಡಂತದ್ದು ಬೇರು ಕೊಳೆಗೆ (Foot rot)  ಕಾರಣವಾಗುತ್ತದೆ.
  • ಎಲ್ಲದಕ್ಕೂ ಕಾರಣ ನೀರು ನಿಂತಿರುವುದು.
  • ಸುಳಿಯ ಬಾಗದಲ್ಲಿ ಮಳೆ ಬಂದು ಒಂದೆರಡು ದಿನ ಬಿಸಿಲು ಬಂದರೆ  ಅಲ್ಲಿರುವ ಸೆರೆ ಅಥವಾ ಎಲೆ ಕಂಕುಳದ ಅವಕಾಶದಲ್ಲಿ ನೀರು ಹಳಸಲು ಆಗಿ ಅಲ್ಲಿ ಶಿಲೀಂದ್ರ ಬೆಳೆಯುತ್ತದೆ.
  • ಕಾಯಿಯ ಗೊನೆಯ ಬುಡ, ಕಾಂಡ ಮತ್ತು ಗೊನೆಯ  ಸಂಧಿಯಲ್ಲಿ ನೀರು ನಿಂತು ಅಲ್ಲಿ ಬೆಳವಣಿಗೆಯಾಗುತ್ತದೆ.
  • ನೆಲದಲ್ಲಿ ಜೌಗು ಸ್ಥಿತಿ ಉಂಟಾಗಿ ಅಲ್ಲಿ ತೊಂದರೆ ಆಗುತ್ತದೆ.
  • ಯಾವಾಗಲೂ ಹರಿದು ಹೋಗುತ್ತಿರುವ ನೀರಿನಿಂದ ಅಂತಹ ತೊಂದರೆ ಇರುವುದಿಲ್ಲ.
  • ಜೌಗು ಅಥವಾ  ಹಳಸಲು ನೀರಿನಲ್ಲಿ ಮಾತ್ರ ತೊಂದರೆಗಳು. ಹಳಸಲು (ಹರಿಯದೆ ತಂಗಿ ನಿಂತ ನೀರು) ಆದ ನೀರಿನಲ್ಲಿ 1-2 ಗಂಟೆ ಕಾಲ ನಡೆದಾಡಿದರೆ ಪಾದದ ಚರ್ಮಕ್ಕೆ ಶಿಲೀಂದ್ರ ಸೋಂಕು ತಗಲುವುದು ನಮಗೆಲ್ಲಾ ಗೊತ್ತಿರುವಂತದ್ದು.
  • ದಿನ ಪೂರ್ತಿ ಹರಿಯುವ ನೀರಿನಲ್ಲಿ ನಡೆದಾಡಿದರೆ ಆ ಸಮಸ್ಯೆ ಬರುವುದಿಲ್ಲ.
  • ಕಾರಣ ನೀರು ಹಳಸಲು ಆದರೆ ಅದರಲ್ಲಿ ಹಾನಿಕಾರಕ ಜೀವಾಣುಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ.
  • ಹೀಗೆಯೇ ಕೊಳೆ ರೋಗದ ಶಿಲೀಂದ್ರವೂ ಸಹ.
  • ಅಡಿಕೆ ಮರದಲ್ಲಿ ಉದುರದೆ ಒಣಗಿದ ಹೋಗೊಂಚಲು, ಹಾಳೆಗಳಲ್ಲೂ ಶಿಲೀಂದ್ರ ಬೆಳವಣಿಗೆಯಾಗುವ ಸಾಧ್ಯತೆ ಇಲ್ಲದಿಲ್ಲ.  
ಗೊನೆಯ ಕಂಕುಳದಲ್ಲಿ ಮೊದಲ ಒಂದೆರಡು ಮಳೆ ಬಂದಾಗ ನೀರು ನಿಲ್ಲುತ್ತದೆ. ಅಲ್ಲಿ ರೋಗಾಣು ಸಂತಾನಾಭಿವೃದ್ದಿ ಆಗಲು ಅನುಕೂಲವಾಗುತ್ತದೆ.

ಮಳೆಗಾಲಕ್ಕೆ ಮುಂಚೆ ಯಾಕೆ ಸಿಂಪರಣೆ ಮಾಡಬೇಕು:

  • ಮಳೆಗಾಲ ಇನ್ನೇನು ಪ್ರಾರಂಭವಾಗುತ್ತದೆ ಎಂದು ಮಾಹಿತಿ ಸಿಕ್ಕಾಗಲೇ ಸಿಂಪರಣೆ ಮಾಡಿದರೆ ಔಷಧಿಯು ಚೆನ್ನಾಗಿ ಅಂಟಿಕೊಳ್ಳುತ್ತದೆ.
  • ನಾವು ಬಳಸುವ ಬಹುತೇಕ ಕೊಳೆ ಔಷಧಿಗಳು ಮುನ್ನೆಚ್ಚರಿಕೆಯವುಗಳಾಗಿದ್ದು (Priventive), ಬೀಜಾಣುಗಳನ್ನು ಆ ಹಂತದಲ್ಲೇ ನಿಶ್ಕ್ರಿಯಗೊಳಿಸುವಂತವುಗಳು.
  • ಸಂಖ್ಯೆ ಕಡಿಮೆ ಇರುವಾಗ ಅದರ ಹತ್ತಿಕ್ಕುವಿಕೆ ಸುಲಭ ಮತ್ತು ಫಲಕಾರಿ. 
  • ಹಾಗಾಗಿ ಮಳೆ ಪ್ರಾರಂಭವಾಗುವ ಮುಂಚೆಯೇ ಸಿಂಪರಣೆ ಮಾಡುವುದು ಸೂಕ್ತ ಕ್ರಮ.
  • ಕೊಳೆ ಔಷಧಿಯಾಗಿ ಬಳಕೆ ಮಾಡುವ ಬೋರ್ಡೋ ದ್ರಾವಣ ಅಥವಾ ತಾಮ್ರ ಆಧಾರಿತ ಇತರ ಶಿಲೀಂದ್ರ ನಾಶಕದಲ್ಲಿ  ಬರೇ ಶಿಲೀಂದ್ರನಾಶಕ ಗುಣ ಮಾತ್ರವಲ್ಲದೆ ಅದರಲ್ಲಿ ಸಸ್ಯ ಪೋಷಕಾಂಶಗಳೂ ಇರುತ್ತವೆ.
  • ಉದಾಹರಣೆಗೆ ಬೋರ್ಡೋ ದ್ರಾವಣ. ಇದರಲ್ಲಿ ತಾಮ್ರ, ಕ್ಯಾಲ್ಸಿಯಂ ಮತ್ತು ಗಂಧಕ ಈ ಮೂರು ಅಂಶಗಳಿರುತ್ತವೆ.
  • ಕೆಲವು ಶಿಲೀಂದ್ರ ನಾಶಕಗಳಲ್ಲಿ ಸತು (Zink) ಮೆಗ್ನೀಶಿಯಂ (Megnisium) ಮುಂತದವುಗಳನ್ಮು ಸೇರಿಸಿರುತ್ತಾದೆ.
  • ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಾಯಿಗಳ, ಹಸಿರು ಭಾಗಗಳ ಮೂಲಕ  ಅವುಗಳನ್ನು  ಸಸ್ಯಗಳು ಹೀರಿಕೊಳ್ಳುತ್ತವೆ.
  • ಇದಕ್ಕೆ ಸ್ವಲ್ಪ ಸಮಯವಾದರೂ ಒಣ ವಾತಾವರಣ ಬೇಕಾಗುತ್ತದೆ.
  • ಸಸ್ಯಗಳ ಒಳಗೆ ಹೀರಿಕೊಂಡ ಈ ಪೋಷಕಗಳು ರೋಗ ತಡೆಯುವಲ್ಲಿಯೂ ಸಹಕಾರಿಯಾಗುತ್ತವೆ. 

ಬೋರ್ಡೋ ದ್ರಾವಣವೇ ಉತ್ತಮ:

  • ಕೊಳೆ ರೋಗ ಬಾರದಂತೆ ತಡೆಯಲು ಎಲ್ಲದಕ್ಕಿಂತ ಅಗ್ಗ ಮತ್ತು ಪರಿಣಾಮಕಾರಿ ಬೋರ್ಡೋ ದ್ರಾವಣ. Bordeaux mixture
  • ಮೈಲುತುತ್ತೆ (Copper Sulphate) ಮತ್ತು  ಸುಣ್ಣವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ವಿಧಾನದಲ್ಲಿ ಮಿಶ್ರಣ ಮಾಡಿದಾಗ ಅದು ಬೋರ್ಡೋ ದ್ರಾವಣವಾಗುತ್ತದೆ.
  • ಇದು ಕಾಯಿಗಳ ಮೇಲೆ ಅಂಟಿಕೊಂಡಾಗ ಯಾವುದೋ ಒಂದು  ಪರವಸ್ತು (foreign body) ಅದರ ಮೇಲೆ ಲೇಪನವಾದಂತೆ ಆಗುತ್ತದೆ.
  • ಸುಣ್ಣ ಒಮ್ಮೆ ಅಂಟಿಕೊಂಡರೆ ಬೇಗ ತೊಳೆದುಹೋಗುವುದಿಲ್ಲ.
  • ಮೈಲುತುತ್ತೆ ಸುಣ್ಣದ ಜೊತೆಗೆ ಸೇರಿದಾಗ ಅದು ಸಹ ಜೊತೆಗೆ ಅಂಟಿಕೊಳ್ಳುತ್ತದೆ.
  • ಮೈಲುತುತ್ತೆ ಎಂಬುದು ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಪಡೆಯುವ ಹರಳು ವಸ್ತುವಾಗಿರುತ್ತದೆ.
  • ತಾಮ್ರಕ್ಕೆ ಶಿಲೀಂದ್ರ ನಾಶಕ ಗುಣ ಇದೆ, ಅದು ಲೋಹ ರೋಪದಲ್ಲಿದ್ದರೆ ನೀರಿನಲ್ಲಿ ಕರಗದು.
  • ಕರಗುವ ರೂಪಕ್ಕೆ ತರಲು ಸಲ್ಫರ್ ಜೊತೆ ಉಪಚರಿಸಲಾಗುತ್ತದೆ.
  • ಸುಣ್ಣದ ದ್ರಾವಣದ ಜೊತೆ ಸೇರಲ್ಪಟ್ಟಾಗ ಮಾತ್ರ ಅದು ಕಾಯಿಯ, ಎಲೆಯ ಮೇಲೆ ಅಂಟಿಕೊಂಡು ಧೀರ್ಘ ಕಾಲದ ತನಕ ತೊಳೆದು ಹೋಗದೆ ರಕ್ಷಣೆಯನ್ನು ಕೊಡುತ್ತದೆ.  
  • ಒಂದು ಲೀ. ಬೋರ್ಡೋ ದ್ರಾವಣದ ಉತ್ಪಾದನಾ ವೆಚ್ಚ ಕೇವಲ 3.5 ರೂ. ಗಳಷ್ಟು.  
  • ಇಷ್ಟು ಅಗ್ಗದಲ್ಲಿ ತಯಾರಾಗುವ ಬೇರೆ ಶಿಲೀಂದ್ರ ನಾಶಕಗಳು ಇರಲಿಕಿಲ್ಲ.
  • ಹಾಗಾಗಿ ಬೋರ್ಡೋ ದ್ರಾವಣ ಮುನ್ನೆಚ್ಚರಿಕಾ ಔಷಧಿಯಾಗಿ ಬಳಸಲು ಉತ್ತಮ.
  • ರೋಗ ಬಂದ ಮೇಲೆ ಹರಡಂತೆ ತಡೆಯಲು ಬೇರೆ ಬೇರೆ ಅಂತರ್ವ್ಯಾಪೀ ಶಿಲೀಂದ್ರ ನಾಶಕಗಳಿವೆ.
  • ದುಬಾರಿಯಾದ ಕಾರಣ ಅಗತ್ಯ ಇದ್ದಾಗ ಮಾತ್ರ ಅದನ್ನು ಬಳಸುವುದು ಸೂಕ್ತ.

ಯಾವಾಗಲೂ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯುತ್ತಮ. ರೋಗ ಬರಲಿಕ್ಕಿಲ್ಲ ಎಂದು ದೈರ್ಯವಾಗಿರುವುದು ಸರಿಯಲ್ಲ. ಬಂದ ಮೇಲೆ ಹಪಹಪಿಸುವುದಕ್ಕೆ ಅರ್ಥವೇ ಇಲ್ಲ. ರೋಗ ನಮ್ಮ ಗಮನಕ್ಕೆ ಬರುವ ಸಮಯದಲ್ಲಿ ಅದು ಉಲ್ಬಣವಾಗಿರುತ್ತದೆ. ಹಾಗಾಗಿ ಮಳೆ ಬರುವ ಮುಂಚೆಯೇ ಸಿಂಪರಣೆ ಮಾಡಿ.

Leave a Reply

Your email address will not be published. Required fields are marked *

error: Content is protected !!