ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು.
ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು ತುತ್ತೆಯನ್ನು 100 ಲೀ. ದ್ರಾವಣದಲ್ಲಿ ದ್ರವೀಕರಿಸುವುದು.1000 ಗ್ರಾಂ 100 ಲೀ. ಪ್ರಮಾಣಕ್ಕೆ ದ್ರವೀಕೃತವಾದಾಗ ಅದು ಶೇ. 1 ಆಗುತ್ತದೆ. 2 ಕಿಲೋ ಮೈಲುತುತ್ತೆ ಹಾಕಿದಾಗ ಅದು ಶೇ.2 ಆಗುತ್ತದೆ. ಅಧ್ಯಯನಗಳ ಮೂಲಕ ಶಿಲೀಂದ್ರವನ್ನು ತಡೆಯಲು ಶೇ.1 ರ ಪ್ರಮಾಣ ಸಾಕು ಎಂದು ತಿಳಿಯಲಾಗಿದೆ. ಈ ದ್ರಾವಣಕ್ಕೆ ಸುಣ್ಣವನ್ನು ಸೇರಿಸುವುದು ಮೈಲುತುತ್ತೆಯ ಆಮ್ಲೀಯ ಗುಣವನ್ನು ಕಡಿಮೆಮಾಡಿ ತಟಸ್ಥ ರೂಪಕ್ಕೆ ತರುವ ಉದ್ದೇಶಕ್ಕೆ.
ಬಹಳಷ್ಟು ರೈತರು ಬೋರ್ಡೋ ದ್ರಾವಣವನ್ನು ತಯಾರಿಸುವಾಗ ಮೈಲುತುತ್ತೆಯನ್ನು 200 ಲೀ. ದ್ರಾವಣಕ್ಕೆ 2 ಕಿಲೋ ಪ್ರಮಾಣದಲ್ಲಿ ಸೇರಿಸುತ್ತಾರೆ. ಸುಣ್ಣವನ್ನು ಮಾತ್ರ 2-3 ಕಿಲೋ ತನಕವೂ ಸೇರಿಸುವುದು ಉಂಟು. ಹೆಚ್ಚಿನವರು 3 ಕಿಲೋ ಸುಣ್ಣವನ್ನು ಸೇರಿಸುವವರೇ. ಈ ರೀತಿ ಸುಣ್ಣವನ್ನು ಹೆಚ್ಚಾಗಿ ಸೇರಿಸುವುದರಿಂದ ಕೊಳೆ ರೋಗ ಬರುವುದಿಲ್ಲ ಎಂಬ ತರ್ಕ ಅವರದ್ದು. ಸುಣ್ಣದ ಗುಣ ಕ್ಷಾರಿಯ. ಅಂದರೆ ಅದು ಸುಡುವ ಗುಣವನ್ನು ಹೊಂದಿದೆ. ಮೈಲುತುತ್ತೆಯ ಆಮ್ಲೀಯತೆ ರಸಸಾರ pH ಮಾಪನದಲ್ಲಿ 3 ರಷ್ಟು ಇರುತ್ತದೆ. ಸುಣ್ಣದ ಕ್ಷಾರೀಯತೆ 13 -14 ತನಕವೂ ಇರುತ್ತದೆ. ಸುಣ್ಣವನ್ನು ದ್ರಾವಣದಲ್ಲಿ ಉಪಯೋಗಿಸುವುದೇ ಆಮ್ಲೀಯತೆಯನ್ನು ತಗ್ಗಿಸುವುದಕ್ಕೋಸ್ಕರ. ಬೇರೆ ಯಾವುದೇ ಮಿತವ್ಯಯದ ವಸ್ತು ಇರುವುದಿಲ್ಲ. ಅದಕ್ಕಾಗಿ ಸುಣ್ಣವನ್ನು ಸೇರಿಸಲಾಗುತ್ತದೆ.

ಸುಣ್ಣದ ಗುಣ ಏನು?
- ಸುಣ್ಣ ಎಂಬುದು ಮೊದಲೇ ಹೇಳಿದಂತೆ ಕ್ಷಾರೀಯ ವಸ್ತು.
- ಸಾಮಾನ್ಯವಾಗಿ ಬೇಯಿಸಿದ ಅಥವಾ ಬಿಸಿ ಮಾಡಿದ ಕಪ್ಪೆ ಚಿಪ್ಪನ್ನು (Calsium hydroxide) ಸುಣ್ಣವಾಗಿ ಬಳಕೆ ಮಾಡುತ್ತಾರೆ.
- ಈಗ ಸಿದ್ದ ರೂಪದ ಹುಡಿ ಸುಣ್ಣವೂ ಲಭ್ಯ. ಇದಲ್ಲೆದರ ರಸ ಸಾರ 13 ಕ್ಕಿಂತ ಮೇಲೆಯೇ ಹೊರತು ಕಡಿಮೆ ಇಲ್ಲ.
- ಸುಣ್ಣದ ಗುಣ ಸುಡುವಂತದ್ದು. ಇದನ್ನು ಆಂಟಾಸಿಡ್ ಎಂಬುದಾಗಿ ಕರೆಯುತ್ತಾರೆ.
- ಇದನ್ನು ದ್ರವೀಕರಿಸಿ ಹುಳಿ ಅಥವಾ ಆಮ್ಲೀಯ ಗುಣದ ದ್ರಾವಣದೊಂದಿಗೆ ಸೇರಿಸಿದಾಗ ಅದರ ಆಮ್ಲೀಯತೆ ತಗ್ಗುತ್ತದೆ.
- ಆಮ್ಲೀಯ ದ್ರಾವಣದಲ್ಲಿ ಹಾನಿಕಾರಕ ಶಿಲೀಂದ್ರಗಳು ಬದುಕುತ್ತವೆ.
- ಕ್ಷಾರೀಯ ಅಥವಾ ತಟಸ್ಥ ಗುಣದಲ್ಲಿ ಅವು ಬೆಳವಣಿಗೆಯಾಗುವುದಿಲ್ಲ.
- ಅದಕ್ಕಾಗಿ ಸುಣ್ಣವನ್ನು ಸೇರಿಸುದಾಗಿರುತ್ತದೆ.
- ಮೈಲುತುತ್ತೆಯ ದ್ರಾವಣಕ್ಕೆ ಸುಣ್ಣವನ್ನು ಸೇರಿಸಿದಾಗ ಸುಣ್ಣದ ಪ್ರಮಾಣವನ್ನು ಹೊಂದಿ ಅದರ ಆಮ್ಲೀಯತೆ ಕಡಿಮೆಯಾಗಿ ಕ್ಷಾರಿಯವಾಗುತ್ತಾ ಬರುತ್ತದೆ.
- ಮಣ್ಣಿಗೆ ಸುಣ್ಣ ಸೇರಿಸಿದಾಗಲೂ ಅದೇ ಕ್ರಿಯೆ ಉಂಟಾಗುತ್ತದೆ.

ಸುಣ್ಣ ಹೆಚ್ಚಾದರೆ ಏನಾಗುತ್ತದೆ?
- ಸುಣ್ಣವನ್ನು ಎಷ್ಟು ಬೇಕೋ ಅಷ್ಟು ಮಾತ್ರ ಸೇರಿಸಬೇಕು.
- ಹೆಚ್ಚಾದರೆ ಅದು ಸುಡುವ ಗುಣವನ್ನು ತೋರ್ಪಡಿಸುತ್ತದೆ.
- ಎಲೆ ಅಡಿಕೆ ತಿನ್ನುವಾಗ ಸುಣ್ಣ ಹೆಚ್ಚಾದರೆ ಚರ್ಮ ಸುಡುವಂತೆ ಇದೂ ಸಹ.
- ಸುಣ್ಣ ಎಷ್ಟು ಅಗತ್ಯವೋ, ಹೆಚ್ಚಾದರೆ ಅಷ್ಟೇ ತೊಂದರೆದಾಯಕವೂ ಸಹ.
- ಎಲೆ ಅಡಿಕೆ ತಿನ್ನುವವರಿಗೆ ಗೊತ್ತಿರಬಹುದು.
- ಬರೇ ಎಲೆ ಹುಳಿ. ಅದು ಆಮ್ಲೀಯ.
- ಅದೇ ರೀತಿ ತಂಬಾಕು ಬಳಸುವವರೂ ಗಮನಿಸಿರಬಹುದು.
- ಅದೂ ಸಹ ಆಮ್ಲೀಯ.
- ಇದನ್ನು ತಟಸ್ಥ ಗುಣಕ್ಕೆ ಅಥವಾ ಸಮಪಾಕಕ್ಕೆ ತಿರುಗಿಸಿದಾಗ ಅದರ ನೈಜ ರುಚಿ ಅಥವಾ ಆನಂದ ಸಿಗುತ್ತದೆ.
- ಸುಣ್ಣವನ್ನು ಹೆಚ್ಚು ಮಾಡಿದಾಗ ಬಾಯಿಸುಡುತ್ತದೆ ಮತ್ತು ಬಾಯಿಯಲ್ಲಿ ಹುಣ್ಣುಗಳಾಗಿ ಅದು ಬೇರೆ ಸಮಸ್ಯೆಯನ್ನೂ ಉಂಟು ಮಾಡಬಹುದು.
- ಹಾಗಾಗಿ ಸುಣ್ಣದ ಬಳಕೆಯಲ್ಲಿ ಜಾಗರೂಕತೆ ವಹಿಸಬೇಕು.
- ಬೋರ್ಡೋ ದ್ರಾವಣಕ್ಕೆ ಸುಣ್ಣವನ್ನು ಹೆಚ್ಚು ಸೇರಿದರೂ ಇದೇ ಸಮಸ್ಯೆ ಉಂಟಾಗುತ್ತದೆ.
- ಬೋರ್ಡೋ ದ್ರಾವಣ ಯಾವಾಗಲೂ ತಟಸ್ಥವಾಗಿದ್ದರೆ ಒಳ್ಳೆಯದು.
- ಅದು ಸಾಧ್ಯವಾಗದಿದ್ದರೆ ಅಲ್ಪ ಸ್ವಲ್ಪ ಕ್ಷಾರಿಯವಾದರೂ ಅಂತಹ ಸಮಸ್ಯೆ ಇಲ್ಲ.
- 2 ಕಿಲೋ ತುತ್ತದ ದ್ರಾವಣಕ್ಕೆ 2 ಕಿಲೋ ಸುಣ್ಣ ಕರಗಿಸಿದ ದ್ರಾವಣವನ್ನು ಹಾಕಿದಾಗಲೂ ಅದರ ರಸ ಸಾರ 11 ತನಕ ಇರುವ ಕಾರಣ ಅದಕ್ಕಿಂತ ಹೆಚ್ಚು ಅಂದರೆ 3- 4 ಕಿಲೋ ಹಾಕಿದಾಗ ಏನಾಗಬಹುದು ಯೋಚಿಸಿ.
- ಕ್ಷಾರೀಯತೆ ಹೆಚ್ಚಾದಂತೆ ಅದರ ಸುಡುವ ಗುಣ ಹೆಚ್ಚಾಗುತ್ತದೆ.
- ಅದು ಸಸ್ಯ ಭಾಗಗಳಲ್ಲೂ ಆಗುತ್ತದೆ.
- ರೈತರು ಬೋರ್ಡೋ ದ್ರಾವಣ ಸಿಂಪಡಿದ ತರುವಾಯ ಕಾಯಿಯ ಮೇಲೆ ಸುಟ್ಟಂತಹ ಕಲೆಗಳಾಗುವುದನ್ನು ಗಮನಿಸಿರಬಹುದು.
- ಇದು ತುತ್ತೆಯಿಂದ ಆದ ಹಾನಿಯಲ್ಲ.
- ಸುಣ್ಣದ ಕ್ಷಾರೀಯತೆಯ ಪರಿಣಾಮ.
- ಮಳೆ ಬೀಳುವ ಸಮಯದಲ್ಲಿ ಸಿಂಪಡಿಸುವಾಗ ಅಲ್ಪ ಸ್ವಲ್ಪ ಸುಣ್ಣ ತೊಳೆದು ಹೋಗಿ ಹಾನಿ ಕಡಿಮೆಯಾಗಬಹುದು.
- ಆದರೆ ಒಣಗಿದ ದಿನಗಳಲ್ಲಿ ಸಿಂಪರಣೆ ,ಮಾಡಿದಾಗ ಸುಡುವ ಸಾಧ್ಯತೆ ಹೆಚ್ಚು.

ಸಿಂಪರಣಾ ದ್ರಾವಣಕ್ಕೆ ರಸಸಾರದ ಮಹತ್ವ:
- ಎಲೆ, ಕಾಯಿ ಮುಂತಾದ ಹಸುರು ಭಾಗಗಳಿಗೆ ಯಾವುದೇ ಸಿಂಪರಣಾ ದ್ರಾವಣ ಬಳಕೆ ಮಾಡುವಾಗ (Folier Spray) ಆ ದ್ರಾವಣದ ರಸಸಾರ ತಟಸ್ಥವಾಗಿದ್ದರೆ ಅದರ ಪರಿಣಾಮ ಅಧಿಕ.
- ಅಂದರೆ ಸಸ್ಯ ಜೀವ ಕೊಶಗಳು ಅದನ್ನು ಹೀರಿಕೊಳ್ಳುತ್ತವೆ.
- ಆಮ್ಲೀಯ ಅಥವಾ ಕ್ಷಾರೀಯ ಆಗಿದ್ದರೆ ಹೀರಿಕೊಳ್ಳಲು ಕಷ್ಟವಾಗುತ್ತದೆ.
- ಹಾಗಾಗಿ ಆಮ್ಲೀಯ ಅಥವಾ ಕ್ಷಾರೀಯ ದ್ರಾವಣವನ್ನು ಸಿಂಪರಣೆ ಮಾಡುವುದು ಸೂಕ್ತವಲ್ಲ.
- ರಸಸಾರ pH (Potential Hydrogen- ಜಲಜನಕದ ಆಯಾನುಗಳ ಸಾಂದ್ರತೆ) ಎಂದರೆ ಧಾರಣಾ ಸಾಮರ್ಥ್ಯ.
- ಇದನ್ನು ಅಳೆಯಲು ಒಂದು ಮಾಪನ ಇದೆ.
- ಅದರಲ್ಲಿ 1 ರಿಂದ 14 ತನಕ ಮೌಲ್ಯಗಳನ್ನು ಸೂಚಿಸಲಾಗಿದೆ.
- ಜಲಜನಕದ ಅಯಾನುಗಳ ಸಾಂದ್ರತೆ ಕಡಿಮೆ ಇದ್ದರೆ ಅದು ಆಮ್ಲೀಯ(1 ರಿಂದ 6).
- ಹೆಚ್ಚು ಇದ್ದರೆ ಕ್ಷಾರೀಯ (8ರಿಂದ 14). ಸಮತೋಲನ ಎಂದರೆ 7.ಕರಾರುವಕ್ಕಾಗಿ ಇದನ್ನು ಹೊಂದಿಸಲು ಈಗ pH balancer ಎಂಬ ದ್ರಾವಣ ಸಿಗುತ್ತದೆ.
- ಸರಳವಾಗಿ ಹೇಳಬೇಕೆಂದರೆ ನಾಲಗೆಗೆ ರುಚಿ ಕೊಡುವ ಸ್ಥಿತಿಯನ್ನು ಸಮತೋಲನ ಎನ್ನಬಹುದು.
- ಬೆಳೆಗಳಿಗೆ ಸಿಂಪಡಿಸುವ ಬೋರ್ಡೋ ದ್ರಾವಣದ ಸ್ಥಿತಿ ಸಮತೋಲನದಲ್ಲಿದ್ದರೆ ಒಳ್ಳೆಯದು.
- 1 ಕಿಲೋ ಮೈಲುತುತ್ತೆಗೆ 1 ಕಿಲೋ ಸುಣ್ಣ ಹಾಕಿದರೆ ದ್ರಾವಣದ ರಸಸಾರ 10 ತನಕ ಏರುತ್ತದೆ.
- 1 ಕಿಲೋಗೆ 750 ಗ್ರಾಂ ಸುಣ್ಣ ಸೇರಿಸಿದಾಗ 9 ಕ್ಕೆ ಇಳಿಯುತ್ತದೆ.
- ಸುಣ್ಣ ಕಡಿಮೆಮಾಡಿದಂತೆ ರಸಸಾರ ಸಮತೋಲನಕ್ಕೆ ಬರುತ್ತದೆ.
- ಮಳೆ ಇರುವ ಕಾರಣ ಸ್ವಲ್ಪ ಕ್ಷಾರೀಯವಾದರೂ ಅಂತಹ ತೊಂದರೆ ಆಗಲಾರದು.
ಬೆಳೆಗಾರರಾದ ನಾವು ಯಾವುದೇ ಬೇಸಾಯ ಕ್ರಮವನ್ನು ಕೈಗೊಳ್ಳುವಾಗ ಅದರ ಬಗ್ಗೆ ಸ್ವಲ್ಪ ವೈಜ್ಞಾನಿಕವಾಗಿಯೂ ಯೋಚಿಸಬೇಕು. ಅಡಿಕೆಗೆ ಕೊಳೆ ಔಷಧಿ ಸಿಂಪರಣೆ ಮಾಡುವಾಗ ಪೈಂಟ್ ತರಹ ಬಿಳಿ ಬಣ್ಣ ಲೇಪನ ಅದರೆ ಮಾತ್ರ ಅದು ಪರಿಣಾಮಕಾರಿ ಎಂಬ ಭಾವನೆ ತಪ್ಪು. ಔಷಧಿ ಯಾವಾಗಲೂ ಸಮತೋಲನದಲ್ಲಿದ್ದರೆ ಮಾತ್ರ ಪರಿಣಾಮಕಾರಿ.
ಯಾರೋ ಹೇಳಿದರು, ಅವರು ಮಾಡಿದ್ದಾರೆ, ಅಲ್ಲಿ ಯಶಸ್ವಿಯಾಗಿದೆ ಎಂದು ಅದನ್ನು ನಾವೂ ಅನುಸರಿಸುವುದಲ್ಲ. ಕೃಷಿಯಲ್ಲಿ ಎಲ್ಲಾ ಕಡೆ ಎಲ್ಲವೂ ಏಕ ಪ್ರಕಾರವಾಗಿ ಹೊಂದಾಣಿಕೆಯಾಗುವುದಿಲ್ಲ. ಅವರವರ ಹೊಲ,ಕಾಲ, ಪರಿಸರಕ್ಕೆ ಅನುಗುಣವಾಗಿ ಬೇಸಾಯ ಕ್ರಮ, ಬೆಳೆ ನಿರ್ವಹಣೆ ಮಾಡಬೇಕು. ಪ್ರತೀಯೊಂದನ್ನೂ ತಾರ್ಕಿಕವಾಗಿ ಯೋಚಿಸಬೇಕು. ಈಗ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.