ಎಲ್ಲಿ ಹೋದವೋ ಕುಂಟುನೇರಳೆ-ಕುಂಟಾಲ ಮರಗಳು!

ಕುಂಟು ನೇರಳೆ-ಹೂವು

ಕುಂಟು ನೇರಳೆ , ಕುಂಟಾಲ ಎಂಬ ಕಾಡು ಸಸ್ಯ ಒಂದು ಕಾಲದಲ್ಲಿ ಎಲ್ಲಾ ಕಡೆಯಲ್ಲೂ  ಕಾಣಸಿಗುತ್ತಿದ್ದ ಸಸ್ಯವಾಗಿತ್ತು. ಈಗ ಅದು ಭಾರೀ ಕ್ಷೀಣಗೊಳುತ್ತಿದ್ದು, ಪರಿಸರದ ಅಸಮತೋಲನಕ್ಕೆ ಇದೂ ಒಂದು ಕಾರಣವಾಗಿದೆ. ಈ ಸಸ್ಯವನ್ನು ಅವಲಂಭಿಸಿ ಬದುಕುವ ಒಂದಷ್ಟು ಜೀವಿಗಳು ಆಹಾರವಿಲ್ಲದೆ ಬೇರೆ ಬೆಳೆ ಆಶ್ರಯಿಸುವಂತಾಗಿದೆ.

ಕುಂಟು ನೇರಳೆ, ಅಥವಾ ಕುಂಟಾಲ ಇದು ನೇರಳೆ ಜಾತಿಯ ಸಸ್ಯವಾಗಿದ್ದು, ಹಿಂದೆ ಎಲ್ಲಾ ಕಡೆ ಇದರ ಸಸ್ಯಗಳು, ಮರಗಳು ಇದ್ದವು.ಇದರ ವೈಜ್ಞಾನಿಕ ಹೆಸರು Syzygium caryophyllatum  , ಹೆಚ್ಚು ಎತ್ತರಕ್ಕೆ ಬೆಳೆಯದ ಸಾಧಾರಣ ಸಸ್ಯ ಇದು. ಈ ಎಲ್ಲಾ ಹೆಸರುಗಳಿಂದ Jamun, jambolan, jambolan plum, Jambul, black plum, java plum, Indian blackberry, Portuguese plum, Malabar plum, purple plum, damson plum, Duhat Jambu, and damson plum. ಇದನ್ನು ಕರೆಯುತ್ತಾರೆ. ವರ್ಷಪೂರ್ತಿ ಎಲೆಗಳನ್ನು  ಉಳಿಸಿಕೊಂಡು ಬೆಳೆಯುವ ಈ ಸಸ್ಯ ಮಾರ್ಚ್ ತಿಂಗಳಿಂದ ಹೂ ಬಿಡಲು ಪ್ರಾರಂಭವಾಗಿ ಜೂನ್ ತನಕ ಹಣ್ಣನ್ನು ಹೊಂದಿರುತ್ತದೆ. ಇದರ ಹಣ್ಣು ನೇರಳೆ ಬಣ್ಣದಲ್ಲಿದ್ದು, ತಿನ್ನುವ ಹಣ್ಣಾಗಿರುತ್ತದೆ. ನೇರಳೆ ಮರ ದೈತ್ಯ ಗಾತ್ರದ ಮರವಾದರೆ ಇದು ಸ್ವಲ್ಪ ಕುಬ್ಜ, ಹಾಗಾಗಿ ಇದಕ್ಕೆ ಕುಂಟು ನೇರಳೆ ಎಂಬ ಹೆಸರು ಬಂದಿರಬಹುದು. ಕರಾವಳಿ ತೀರದ ಮತ್ತು ಮಲೆನಾಡಿನ ಕುರುಚಲು ಸಸ್ಯವರ್ಗ ಬೆಳೆಯುವ ಸಾಮಾನ್ಯ ಕಾಡಿನಲ್ಲಿ, ನಿರುಪಯುಕ್ತ ಭೂಮಿಯಲ್ಲಿ ಇದರ   ಸಸ್ಯಗಳು ಇರುತ್ತಿದ್ದವು ಈಗ ಇವು ನಮ್ಮ ಕೃಷಿ ವಿಸ್ತರಣೆ ಮತ್ತು  ಇನ್ನಿತರ ಕಾರಣಗಳಿಂದ ಕ್ಷೀಣಿಸಲಾರಂಭಿಸಿದೆ. ಕೆಲವು ಕಡೆ ಅಲ್ಪ ಸ್ವಲ್ಪ ಇದೆಯಾದರೂ ಹಿಂಗಿಂತ ಈಗ 90%  ಇಲ್ಲ ಎಂದರೂ ತಪ್ಪಾಗಲಾರದು.

ಕುಂಟಾಲ ಹಣ್ಣು ತಿಂದ ನೆನಪು:

ನಾವು ಶಾಲೆಗೆ ಹೋಗುವಾಗ  ಮತ್ತು ಬರುವಾಗ ದಾರಿಯುದ್ದಕ್ಕೂ ಸಿಕ್ಕ ಸಿಕ್ಕಲ್ಲಿ ಕುಂಟು ನೇರಳೆ ಹಣ್ಣು ತಿನ್ನುತ್ತಾ ಹೋಗುತ್ತಿದ್ದೆವು ಆಗ ಎಲ್ಲಿ ನೋಡಿದರಲ್ಲಿ ಇದರ ಸಸಿಗಳು ಇರುತ್ತಿದ್ದವು. ಕೆಲವೊಮ್ಮೆ ತಿಂದದ್ದು  ಹೆಚ್ಚಾಗಿ ವಾಂತಿ ಮಾಡಿದ್ದೂ ಇದೆ. ನಾವು ತಿಂದ ಹಣ್ಣಿನ ಬೀಜವನ್ನು ಉಗುಳಿದ್ದು, ಹಕ್ಕಿಗಳು ತಿಂದು ಹಿಕ್ಕೆ ಹಾಕಿದ್ದು  ಅಲ್ಲಲ್ಲಿ ಹುಟ್ಟಿ ಮತ್ತೆ ಸಸಿಯಾಗುತ್ತಿತ್ತು. ಆಗಲೂ ಜನ ಹಟ್ಟಿ ಅಡಿಯ ಸೊಪ್ಪಿಗಾಗಿ ಇದರ ಗೆಲ್ಲು ಸವರುತ್ತಿದ್ದರು. ಆದರೂ ಅದು ಮತ್ತೆ ಚಿಗುರಿ ಬೆಳೆಯುತ್ತಿತ್ತು. ಕುಂಟಾಲ ಹಣ್ಣು ಮಳೆಗಾಲಕ್ಕೆ ಮುಂಚೆ ತಿನ್ನಲು ರುಚಿ. ಸ್ವಲ್ಪ ಸಿಹಿ ಇರುತ್ತದೆ. ಆರೋಗ್ಯಕ್ಕೆ ಯಾವ ಹಾನಿಯೂ ಇಲ್ಲ.  

ಕುಂಟು ನೇರಳೆ ಹೂವುಗುಚ್ಚ

ಪರಾಗದಾನಿಗಳು ಮತ್ತು ಕುಂಟು ನೇರಳೆ:

ಹಿಂದೆ ಜೇನು ಸಾಕಣೆ ಮಾಡುವವರಿಗೆ ಪ್ರಮುಖ ಹೂವಿನ ಸಸ್ಯ ಎಂದರೆ ಕುಂಟುನೇರಳೆ. ಆಗ ಅದಲ್ಲದೆ ಬೇರೆ ಬೇರೆ ಮರಗಳೂ ಇದ್ದವು. ಮೊದಲಾಗಿ ನೊರೆಕಾಯಿ( ಆಂಟುವಾಳದ) ಜೇನು ತದನಂತರ ಪ್ರಾರಂಭವಾಗುತ್ತಿದ್ದುದು ಕುಂಟು ನೇರಳೆ. ಎಲ್ಲೆಂದರಲ್ಲಿ ಸಸ್ಯಗಳು ಇರುತ್ತಿದ್ದ ಕಾರಣ 15 ದಿನಕ್ಕೊಮ್ಮೆ ಜೇನು ತೆಗೆಯಲು ಸಿಗುತ್ತಿತ್ತು. ಜೇನು ನೊಣಗಳಲ್ಲದೆ ಹಲವಾರು ಪರಾಗದಾನಿಗಳಿಗೆ ಈ ಕುಂಟು ನೇರಳೆ ಆಶ್ರಯವಾಗಿರುತ್ತಿತ್ತು. ಆಗ ಜೇನು ಕುಂಟುಂಬಗಳು ಪೆಟ್ಟಿಗೆಯಲ್ಲಿ ಅಲ್ಲದೆ ಹುತ್ತ, ಮರದ ಪೊಟರೆಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತಿತ್ತು. ಕುಂಟು ನೇರಳೆ ಅಪರೂಪವಾದ ನಂತರ ಜೇನು ನೊಣಗಳಿಗೆ ನೈಸರ್ಗಿಕ ಹೂವುಗಳೇ ಇಲ್ಲದಾಯಿತು. ಸ್ವಲ್ಪ ಮಟ್ಟಿಗೆ ರಬ್ಬರ್ ಎಲೆಯ ರಸ ಸ್ರಾವ ಜೇನಿಗೆ ಆಕರವಾಯಿತು. ಈಗೀಗ ಜೇನು ಸಾಕುವವರು ಸಕ್ಕರೆ ದ್ರಾವಣ ತಿನ್ನಿಸಿಯೇ ಜೇನು ಉತ್ಪಾದನೆ  ಮಾಡುವ ಸ್ಥಿತಿ ಬಂದಿದೆ.

ಕುಂಟು ನೇರಳೆ ಸೊಪ್ಪು ಮತ್ತು ಕೃಷಿ.

ಹಣ್ನು

ಕುಂಟು ನೇರಳೆ ಸೊಪ್ಪು ಉತ್ತಮ ಹಸುರು ಸೊಪ್ಪು. ದಪ್ಪ ಸೊಪ್ಪು ಹಾಗೂ ಉತ್ತಮ ಟ್ಯಾನಿನ್ ಆಂಶ ಇರುವ ಕಾರಣ ಎರೆಹುಳಗಳಿಗೆ ಉತ್ತಮ ಆಹಾರವಾಗುತ್ತಿತ್ತು. ಹಾಗಾಗಿ ಮಣ್ಣಿನ ಫಲವತ್ತತೆ ಸಹ ಹೆಚ್ಚಾಗುತ್ತಿತ್ತು. ಆಗ ರೈತರು ಹಸು ಸಾಕಣೆ ತಪ್ಪದೆ ಮಾಡುತ್ತಿದ್ದರು. ಹಸುಗಳ ಕಾಲ ಬುಡಕ್ಕೆ ಕುಂಟು ನೇರಳೆ ಸೊಪ್ಪು , ಮುಂತಾದ ಸೊಪ್ಪನ್ನು  ಹಾಕುತ್ತಿದ್ದರು. ಕೆಲವು ಹಸುಗಳು ಇದನ್ನು ತಿನ್ನುತ್ತಲೂ ಇದ್ದವು. ಇದು ಉತ್ತಮ ಗೊಬ್ಬರವಾಗಿ ಸಿಗುತ್ತಿತ್ತು. ಕೃಷಿಕರಿಗೆ ಹಸುರೆಲೆ ಸೊಪ್ಪಿಗೆ ಉತ್ತಮ ಮೂಲವಾಗಿರುವುದರ ಜೊತೆಗೆ ಕಟ್ಟಿಗೆಗೂ ಇದನ್ನೇ ಬಳಸುತ್ತಿದ್ದರು. ವರ್ಷ ವರ್ಷವೂ ಕಟ್ಟಿಗೆಗೆ ಕಡಿದು ಮರಗಳು ಕಡಿಮೆಯಾದವು.

ನಾಶಕ್ಕೆ ಕಾರಣ:

ಹೇರಳವಾಗಿದ್ದ ಈ ಸಸ್ಯ ಜನ ಸೊಪ್ಪು ಕಡಿದೂ ನಾಶವಾಗಲಿಲ್ಲ. ಕಟ್ಟಿಗೆ ಕಡಿದೂ ನಾಶವಾಗಲಿಲ್ಲ. ಕಾರಣ ಅವರು ಬುಡ ಉಳಿಸಿ ಕಡಿದಿದ್ದರು. ಯಾವಾಗ ಯಂತ್ರಗಳ ಮೂಲಕ ಮಣ್ಣು ಅಗೆದು ಕೃಷಿ ಪ್ರಾರಂಭವಾಯಿತೋ ಆಗ ಇದರ ನಾಶಕ್ಕೆ ನಾಂದಿಯಾಯಿತು. ರಬ್ಬರ್ ಬೆಳೆ. ಅಡಿಕೆ ಕೃಷಿ ಆತಿಕ್ರಮಣ ಇವೆಲ್ಲವೂ ಕುಂಟು ನೇರಳೆ ಸಸ್ಯವನ್ನು  ಹಾಗೆಯೇ ಇನ್ನಿತರ ಸಸ್ಯಗಳನ್ನು ಬಲಿ ಪಡೆಯಿತು. ರಬ್ಬರ್ ತೋಟಕ್ಕೆ ಪರಿಚಯಿಸಲ್ಪಟ್ಟ ಮುಚ್ಚಲು ಬೆಳೆ Rubber cover crop ಹಾಗೆಯೇ  ಎಲ್ಲೆಂದರಲ್ಲಿ ಬೆಳೆಯುವ ನರೆ ಬಳ್ಳಿಯಿಂದಾಗಿ (Diascoria)  ಹಲವಾರು ಸಸ್ಯ ವೈವಿಧ್ಯಗಳು ಸತ್ತು ಹೋಗುವ ಸ್ಥಿತಿ ಬಂತು. ಇದಕ್ಕೆ ಸಂಬಂಧಿಸಿದವರು ಗಮನಿಸಿದ್ದರೋ ಇಲ್ಲವೋ ದಕ್ಶಿಣ ಕನ್ನಡ ಸೇರಿದಂತೆ ಮಲೆನಾಡಿನಲ್ಲಿ  ಇಂತಹ ಹಲವಾರು ಸಸ್ಯ ವೈವಿಧ್ಯಗಳು ಈಗ ವಿನಾಶದ ಅಂಚಿಗೆ ತಲುಪಿದ್ದು ಇದೇ ಕಾರಣದಿಂದ. ಕಾರಿಂಜದ ರಕ್ಷಿತಾರಣ್ಯದಲ್ಲಿ ಹಬ್ಬಿರುವ ಬಳ್ಳಿಗಳು ಸಧ್ಯವೇ ಕಾಡನ್ನು ಬಲಿ ಪಡೆದರೂ ಅಚ್ಚರಿ ಇಲ್ಲ.  ಇವೆಲ್ಲಾ ಆಗಿರುವುದು ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯದಿಂದಾಗಿ.

ಸಸ್ಯ ವೈವಿಧ್ಯಗಳ ನಾಶ ಒಂದು ದೃಷ್ಟಿಯಲ್ಲಿ ಕೃಷಿಕರಿಗೆ ದೊಡ್ಡ ಆತಂಕ. ಕೆಲವು ಸಸ್ಯಗಳಲ್ಲಿ ಆಶ್ರಯ ಪಡೆದ ಕೀಟಗಳು, ಇನ್ನಿತರ ಜೀವಿಗಳು ಬೇರೆ ಆಶ್ರಯ ಹುಡುಕುವಂತಾಯಿತು. ಪಕ್ಷಿ, ಕೋತಿ, ಅಳಿಲು, ಮುಂತಾದವುಗಳು ರೈತರ ಬೆಳೆಗೆ ತಿಂದರೆ ಮಾಡುವಂತಾಯಿತು. ಕೀಟ ಬಾಧೆ ಹೆಚ್ಚಳವಾಯಿತು. ಮಣ್ಣಿನ ಫಲವತ್ತತೆ ಕ್ಷೀಣಿಸಲಾರಂಭಿಸಿತು. ಇನ್ನಾದರೂ ಅರಣ್ಯ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಇದನ್ನು ಗಮನಿಸಬೇಕು. ಖಾಲಿ ಸ್ಥಳಗಳ ಅತಿಕ್ರಮವನ್ನು ನಿಲ್ಲಿಸಿ ಅಲ್ಲಿ ಮಾನವ ಹಸ್ತಕ್ಷೇಪ ನಿಂತರೆ ಎಲ್ಲವೂ ಸರಿಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!