ಅಧಿಕ ಇಳುವರಿ ನೀಡಬಲ್ಲ ಗುಣದ ಕೊಕ್ಕೋ ತಳಿ ಪಡೆಯಲು ಸಂಶೋಧಕರ ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅದರ ಫಲವೇ ಹೈಬ್ರೀಡ್ ಕೊಕ್ಕೋ ತಳಿಗಳು. ಹೊಸತಾಗಿ ಕೊಕ್ಕೊ ಬೆಳೆಸುವವರು ಇಂತಹ ಉತ್ತಮ ತಳಿ ಬೆಳೆಸುವುದು ಲಾಭದಾಯಕ.
ಸಿ ಪಿ ಸಿ ಆರ್ ಐ ಕೇಂದ್ರ ವಿಟ್ಲದಲ್ಲಿ ಉತ್ತಮ ಇಳುವರಿ ಮತ್ತು ನೀರಿನ ಕೊರತೆ, ವಿವಿಧ ಹವಾಗುಣಕ್ಕನುಗುಣಕ್ಕೆ ಹೊಂದಿಕೆಯಾಗುವಂತೆ ಸುಮಾರು 5 ಸಂಕರ ತಳಿಗಳೂ ಕೊಕ್ಕೋದಲ್ಲಿ ಅಭಿವೃದ್ದಿಯಾಗಿದೆ. ಜೊತೆಗೆ ಇನ್ನೂ 2 ತಳಿಗಳು ಭರವಸೆಯ ತಳಿಗಳಾಗಿ ಕೆಲವೇ ಸಮಯದಲ್ಲಿ ಬಿಡುಗಡೆಯಾಗುವ ಹಂತದಲ್ಲಿವೆ. ರೈತರಿಗೆ ಇಲ್ಲಿ ಈ ತಳಿಗಳು ಲಭ್ಯ. ಇವುಗಳ ಪರಿಚಯ ಹೀಗಿದೆ. ನೈಜೀರಿಯಾದಲ್ಲಿ 8 ಹೈಬ್ರೀಡ್ ತಳಿಗಳು ಚಾಲ್ತಿಯಲ್ಲಿವೆ.
ವಿಟಿ ಎಲ್ ಸಿ ಎಚ್ -1: (VTLCH 1)
ವಿಟ್ಲ ಕೊಕ್ಕೋ ಹೈಬ್ರಿಡ್-1,ಇದು ಮಲೇಶಿಯಾದಿಂದ ಸಂಗ್ರಹಿಸಿದ ವಂಶವಾಹೀ ತಳಿಗಳೆರಡರ ಮಧ್ಯೆ ಸಂಕರಣ ಮಾಡಿ ಪಡೆದ ತಳಿ.ಕಾಯಿ ಬೆಳೆದಾಗ ಹಸುರು ಮತ್ತು ಹಳದಿ ಮಿಶ್ರಿತ ಬಣ್ಣ ಬರುತ್ತದೆ. ದಾರೆಗಳು ಹಳದಿಯಾಗಿದ್ದು, (ತಗ್ಗು ಭಾಗ) ಉಬ್ಬು ಭಾಗ ಹಸುರು ಇರುತ್ತದೆ. ಅಲ್ಪ ಸ್ವಲ್ಪ ಹಸುರು ಇರುವಾಗಲೇ ಹಣ್ಣಾಗುತ್ತದೆ.ತೀರಾ ಬೆಳೆದಾಗ ಹಳದಿ ಬಣ್ಣ ಬರುತ್ತದೆ. ವರ್ಷಕ್ಕೆ 50 ಹಳದಿ ಬಣ್ಣದ ಹಣ್ಣುಗಳನ್ನು ನೀಡುತ್ತದೆ. ಹಣ್ಣುಗಳ ಆಕಾರ ಸಾಧಾರಣ ದೊಡ್ದದಿದ್ದು, ಹಣ್ಣಿನ ತೂಕ ಸರಾಸರಿ 350 ಗ್ರಾಂ ಗಳಷ್ಟು ಇದ್ದು ಸರಾಸರಿ 40 ಬೀಜಗಳನ್ನು ಒಳಗೊಂದಿದೆ. ತಿರುಳಿನ ಪ್ರಮಾಣ 87 % ಇದೆ, ಕೊಬ್ಬಿನ ಪ್ರಮಾಣ 54 % ಇದೆ. ಅಧಿಕ ಇಳುವರಿ ನೀಡುವ ಗುಣ ಹೊಂದಿದೆ. ಕೊಳೆ ರೋಗ, ಟಿ-ಸೊಳ್ಳೆ, ಮತ್ತು ಬರ ಸಹಿಷ್ಣು ಗುಣ ಹೊಂದಿದೆ.

ವಿಟಿ ಎಲ್ ಸಿ ಎಚ್ -2:
ವಿಟ್ಲ ಕೊಕ್ಕೋ ಹೈಬ್ರಿಡ್-2, ಇದನ್ನು ಬೆಂಗಳೂರಿನ ಲಾಲ್‍ಬಾಗ್ ನಲ್ಲಿದ್ದ ಎರಡು ಕೊಕ್ಕೋ ತಳಿಗಳ ಮಧ್ಯೆ ಸಂಕರಣ ಮಾಡಿ ಪಡೆದ ತಳಿ. ಒಂದು ಗಿಡ ವರ್ಷಕ್ಕೆ ಸರಾಸರಿ 50 ಹಣ್ಣುಗಳನ್ನು ಕೊಡಬಲ್ಲುದು. ಪ್ರತೀ ಕಾಯಿಯಲ್ಲಿ 40 ರಷ್ಟು ಬೀಜಗಳಿರುತ್ತವೆ. ಬೀಜದಲ್ಲಿ ಕೊಬ್ಬಿನ ಅಂಶ 54 % ಮತ್ತು ತಿರುಳಿನ ಪ್ರಮಾಣ 89 % ಇರುತ್ತದೆ.ಅಧಿಕ ಇಳುವರಿ ಕೊಡುವ ಗುಣ ಇದರ ವಿಷೇಷತೆ. ಕೊಕ್ಕೋ ಬೆಳೆಯಲ್ಲಿ ಅತೀ ದೊಡ್ಡ ಸಮಸ್ಯೆಯಾದ ಮಳೆಗಾಲದ ಬೆಳೆಯನ್ನು ಅರ್ದಕ್ಕರ್ಧ ಹಾಳು ಮಾಡುವ ಕೊಳೆ ರೋಗಕ್ಕೆ ಬಹು ಮಟ್ಟಿಗೆ ನಿರೋಧಕ ಶಕ್ತಿ ಹೊಂದಿದೆ.ಬೆಳೆಯುತ್ತಿರುವಾಗ ತಿಳಿ ಹಸುರು ಬಣ್ಣಕ್ಕೆ ತಿರುಗುತ್ತದೆ. ಪೂರ್ತಿ ಪಕ್ವವಾದಾಗ ಕೋಡಿನ ಉಬ್ಬು ಭಾಗ ತಿಳಿಹಸುರು ಮತ್ತು ತಗ್ಗು ಭಾಗ ಹಳದಿಯಾಗಿ ಕಾಣಿಸುತ್ತದೆ.
ವಿಟಿ ಎಲ್ ಸಿ ಎಚ್ -3:
ಇದು ಮಲೇಶಿಯಾ ಮತ್ತು ನೈಜೀರಿಯಾ ಮೂಲದ ಕೊಕ್ಕೋ ತಳಿಗಳ ಮಧ್ಯೆ ಸಂಕರಣ ಮಾಡಿ ಪಡೆದ ತಳಿ.ಪ್ರತೀ ಗಿಡಕ್ಕೆ ಸರಾಸರಿ 41 ಹಣ್ಣುಗಳನ್ನು ಕೊಡುತ್ತದೆ. ಪ್ರತೀ ಹಣ್ಣಿನ ತೂಕ ಸುಮಾರು 440 ಗ್ರಾಂ ಇದ್ದು ಹಳದಿ ಬಣ್ಣದ ಹಣ್ಣುಗಳು. ಒಂದು ಕೋಡಿನಲ್ಲಿ ಸರಾಸರಿ 41 ಬೀಜಗಳಿರುತ್ತವೆ.ಬೀಜದಲ್ಲಿ 87 % ತಿರುಳಿನ ಪ್ರಮಾಣವೂ, 51 % ಕೊಬ್ಬಿನ ಅಂಶವೂ ಇದೆ. ನೀರು ಕಡಿಮೆ ಇರುವ ಪ್ರದೇಶಕ್ಕೆ ಹೊಂದಿಕೆಯಾಗುವ ತಳಿ. ಅಧಿಕ ಇಳುವರಿ ಕೊಡಬಲ್ಲುದು.
ವಿಟಿ ಎಲ್ ಸಿ ಎಚ್ -4
ಇದು ಮಲೇಶಿಯಾ ಮತ್ತು ನೈಜೀರಿಯಾ ದೇಶಗಳ ತಳಿಗಳ ಮೂಲದಿಂದ ಸಂಕರಣ ಮಾಡಿ ಪಡೆದುದಾಗಿದೆ.ಹಣ್ಣುಗಳು ಬೆಳೆಯುತ್ತಿರುವಾಗ ತಿಳಿ ನೇರಳೆ ಬಣ್ಣದಲ್ಲಿದ್ದು ಹಣ್ಣಾಗುವಾಗ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣಿನತೂಕ ಸರಾಸರಿ 400 ಗ್ರಾಂ ಇದ್ದು, ಒಂದು ಹಣ್ಣಿನಲ್ಲಿ ಸರಾಸರಿ 40 ಬೀಜಗಳು ಇರುತ್ತವೆ. ಬೀಜದಲ್ಲಿ ಸರಾಸರಿ ತಿರುಳಿನ ಪ್ರಮಾಣ 87 % ಇದ್ದು ಕೊಬ್ಬಿನ ಅಂಶ 51% ಇರುತ್ತದೆ. ಅಧಿಕ ಇಳುವರಿ ಕೊಡಬಲ್ಲುದು, ನೀರಾವರಿ ಕಡಿಮೆ ಇದ್ದರೂ ಬೆಳೆ ಬರುವಂತಹ ಗುಣ ಹೊಂದಿದೆ.

ವಿಟಿ ಎಲ್ ಸಿ ಎಚ್ -5 :
ನೇತ್ರ ಸೆಂಚುರಾ ಎಂಬುದು ಇದರ ಹೆಸರು. ಕೇಂದ್ರದ ಜೆರ್ಮ್‍ಪ್ಲಾಸಂ ಸಂಗ್ರಹದ ಎರಡು ತಳಿಗಳ ಮಧ್ಯೆ ಸಂಕರಣ ಮಾಡಿ, ಅದಕ್ಕೆ ವಿಟಿಎಲ್‍ಸಿಪಿ-1 ಎಂಬ ಹೆಸರನ್ನು ನೀಡಲಾಗಿದೆ.ಪ್ರತೀ ಗಿಡಕ್ಕೆ ಸರಾಸರಿ 66 ಹಣ್ಣುಗಳನ್ನು ಕೊಡುತ್ತದೆ. ಹಣ್ಣಿನ ತೂಕ ಸರಾಸರಿ 450 ಗ್ರಾಂ ತನಕ ಇರುತ್ತದೆ. ಹಣ್ಣಿನಲ್ಲಿ ಸುಮಾರು 43 ಬೀಜಗಳಿರುತ್ತವೆ. ಬೀಜದಲ್ಲಿ ಸರಾಸರಿ 88 % ತಿರುಳಿನ ಪ್ರಾಮಾಣ ಇದ್ದು, ಕೊಬ್ಬಿನ ಅಂಶ 52 % ಇದೆ. ಶೀಘ್ರ ಇಳುವರಿಗೆ ಪ್ರಾರಂಭವಾಗುವ ಗುಣ ಇದೆ. ಕಾಯಿ ಕೊಳೆ ರೋಗ, ಟಿ- ಸೊಳ್ಳೆಗಳ ಉಪಟಳ ಕಡಿಮೆ. ಸ್ವಲ್ಪ ಮಟ್ಟಿನ ನೀರಿನ ಕೊರತೆಯನ್ನೂ ಸಹಿಸಬಲ್ಲ ತಳಿ.
ಕೊಕ್ಕೊ ಆಹಾರ ಬೆಳೆಯಾಗಿದ್ದು ಉತ್ತಮ ಭವಿಷ್ಯವನ್ನು ಹೊಂದಿದೆ. ಅಡಿಕೆ, ತೆಂಗು, ರಬ್ಬರ್, ಮುಂತಾದ ಬೆಳೆಗಳ ಮಧ್ಯದಲ್ಲಿ ಇದನ್ನು ಬೆಳೆಸಿ ಎಡೆ ಆದಾಯ ಗಳಿಸಬಹುದು.
