ಗುಣಮಟ್ಟದ ಕೊಕ್ಕೋ ಬೀಜಕ್ಕೆ ಒಳ್ಳೆಯ ತಳಿಆಯ್ಕೆ ಅಗತ್ಯ. ಒಟ್ಟಾರೆ ಮಾಡಿದರೆ ಅನುಕೂಲ ಇಲ್ಲ. ಅನುತ್ಪಾದಕ ಸಸ್ಯ, ಪೊಳ್ಳು ಬೀಜ ಇದರ ತೊಂದರೆ. ಬೀಜ ತೂಕ ಇರಬೇಕು. ಕೋಡಿನಲ್ಲಿ ತುಂಬಾ ಬೀಜ ಇರಬೇಕು. ಇಂತಹ ತಳಿ ಒಳ್ಳೆಯದು.
ನಮ್ಮ ತೋಟದಲ್ಲಿ ಬೆಳೆಯುವ ಕೊಕ್ಕೋ ಮೂಲತಳಿಯಲ್ಲಿ ಈಗ ಸಾಕಷ್ಟು ಬದಲಾವಣೆ ನೈಸರ್ಗಿಕವಾಗಿ ಆಗಿದೆ, ಬಣ್ಣಗಳಲ್ಲಿ ವೆತ್ಯಾಸವಾಗಿದೆ. ಎಲ್ಲಾ ಸಸಿಯ ಕೋಡುಗಳೂ ಏಕ ಪ್ರಕಾರ ಇರುವುದಿಲ್ಲ. ಕೆಲವು ಪೊಳ್ಳು ಕಾಯಿಗಳನ್ನೇ ಬಿಡುವಂತದ್ದೂ ಇದೆ. ಇದು ತಳಿ ಮಿಶ್ರಣದಿಂದ ಆಗಿದೆ ಎನ್ನಬಹುದು. ಇದೆಲ್ಲವೂ ಫಲಬಿಟ್ಟ ನಂತರ ತಿಳಿಯುವ ಸಂಗತಿಗಳಾಗಿವೆ.
ಒಳ್ಳೆಯ ತಳಿಯ ಶುದ್ಧತೆ:
ತಳಿ ಶುದ್ಧತೆ ಇದ್ದಾಗ ಕೊಕ್ಕೋ ಸಸ್ಯದಲ್ಲಿ ಬಿಡುವ ಕೋಡುಗಳು ಎಕ ಪ್ರಕಾರವಾಗಿರುತ್ತದೆ. ತಳಿ ಮಿಶ್ರವಾದರೆ ಕೆಲವು ಗಿಡಗಳು ಉತ್ತಮ ಇಳುವರಿಯನ್ನೂ ಮತ್ತೆ ಕೆಲವು ಕಡಿಮೆ ಇಳುವರಿಯನ್ನೂ ಕೊಡುತ್ತವೆ. ಈಗಾಗಲೇ ಬಹುತೇಕ ಕೊಕ್ಕೋ ಬೆಳೆಗಾರರ ತೋಟಗಳಲ್ಲಿ ಹಳೆಯ ತಳಿಗಳು ಮತ್ತು ಏಫ್ 1 ತಳಿಯ ಕೊಕ್ಕೋ ಸಸ್ಯಗಳಿದ್ದು, ಇದರಲ್ಲಿ ಕೊಕ್ಕೋ ಏನೋ ಆಗುತ್ತದೆ. ಆದರೆ ಕೊಕ್ಕೋ ಗಿಡದಲ್ಲಿ ಎಂಥಃ ಕೋಡುಗಳಾಗಬೇಕು. ಯಾವ ರೀತಿಯ ಗುಣಮಟ್ಟದ ಬೀಜ ಇರಬೇಕು, ಬೀಜ ಮತ್ತು ಲೋಳೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಬಗ್ಗೆ ಹೆಚ್ಚಿನ ರೈತರಿಗೆ ಗೊತ್ತಿಲ್ಲ. ಬೀಜಗಳಿರುತ್ತವೆ. ಹಸಿ ಬೀಜ ಮಾರುತ್ತಾರೆ. ಒಂದು ಬುಟ್ಟಿ ಕೊಕ್ಕೋ ಕೋಡುಗಳಿದ್ದರೆ ಸುಮಾರು 4 ಕಿಲೋ ಕೊಕ್ಕೋ ಹಸಿ ಬೀಜ ದೊರೆಯುತ್ತದೆ. ಇದು ನಮ್ಮ ರೈತರಲ್ಲಿ ಇರುವ ಲೆಕ್ಕಾಚಾರ.

ಗುಣಮಟ್ಟ ಎಂದರೆ ಹೇಗೆ:
ವಾಸ್ತವಾಗಿ ಉತ್ತಮ ಗುಣಮಟ್ಟದ 5-6 ಕೋಡು ಕೊಕ್ಕೋ 1 ಕಿಲೋ ಹಸಿ ಬೀಜವನ್ನು ಕೊಡಬೇಕು. ಆಗ ಕೊಕ್ಕೋ ಕೋಡುಗಳ ಸಂಖ್ಯೆ ಕಡಿಮೆಯಾದರೂ ಇಳುವರಿ ಉತ್ತಮವಾಗಿರುತ್ತದೆ. ಕೊಕ್ಕೋ ಕೋಡುಗಳೆಂದರೆ ಬರೇ ಅದರಲ್ಲಿ ಬೀಜಗಳು ಇದ್ದರೆ ಸಾಲದು ಆ ಬೀಜಗಳು ತಿರುಳು ತುಂಬಿ ತೂಕವುಳ್ಳದ್ದಾಗಿದ್ದರೆ, ಅದು ಬೆಳೆಸುವ ರೈತನಿಗೆ ಲಾಭದಾಯಕ.ರಾಶಿ ರಾಶಿ ಕೊಕ್ಕೋ ಕೋಡುಗಳಿದರೂ ಬೀಜದ ರಿಕವರಿ ಕಡಿಮೆಯಾದರೆ ಅದು ಲಾಭದಾಯಕವಲ್ಲ. ಸಸ್ಯಗಳಿಗೆ ನೀರು ಗೊಬ್ಬರ ಕೊಡುವಾಗ ಅದರಿಂದ ಗರಿಷ್ಟ ಇಳುವರಿ ಪಡೆಯಬೇಕು.ಈ ವಿಷಯದಲ್ಲಿ ಈಗ ಕೊಕ್ಕೋ ಬೆಳೆಯುತ್ತಿರುವ ಬಹಳ ಬೆಳೆಗಾರರು ಹಿಂದೆ ಇದ್ದಾರೆ. ಅನುತ್ಪಾದಕ, ಮತ್ತು ಕಡಿಮೆ ಇಳುವರಿ ನೀಡುತ್ತಿರುವ ಕೊಕ್ಕೋ ಸಸ್ಯಗಳನ್ನು ಉಳಿಸಿಕೊಳ್ಳುವ ಬದಲಿಗೆ, ಉತ್ತಮ ಇಳುವರಿ ಕೊಡಬಲ್ಲ ತಳಿಶುದ್ಧತೆ ಇರುವ ಸಸ್ಯಗಳನ್ನು ಬದಲಾಯಿಸುವುದು ಸೂಕ್ತ.
ಗುಣಮಟ್ಟದ ಕೊಕ್ಕೋ ಕೋಡುಗಳು:

ಉತ್ತಮ ಗುಣಮಟ್ಟದ ಕೊಕ್ಕೋ ಕೋಡುಗಳ ಸಿಪ್ಪೆ ತೆಳುವಾಗಿಯೂ ಇರದೆ ತೀರಾ ದಪ್ಪವಾಗಿಯೂ ಇರದೆ ಮಧ್ಯಮ ದಪ್ಪದ್ದಾಗಿರಬೇಕು. ಹೆಚ್ಚು ದಪ್ಪ ಇರುವ ಸಿಪ್ಪೆಯ ಕೊಕ್ಕೋ ಕೊಡುಗಳಲ್ಲಿ ಬೀಜಗಳ ಪ್ರಮಾಣ ಕಡಿಮೆ ಇರುತ್ತದೆ. ಕೊಕ್ಕೋ ಕೋಡುಗಳನ್ನು ಒಡೆಯುವುದು ಕಷ್ಟವಾಗಬಹುದು.ತುಂಬಾ ತೆಳು ಸಿಪ್ಪೆಯ ಕೊಡುಗಳಾದರೆ ಇಲಿ,ಅಳಿಲುಗಳು ತಕ್ಷಣ ಅದನ್ನು ಹಾನಿ ಮಾಡುತ್ತವೆ. ತೆಳು ಸಿಪ್ಪೆಯ ಕೋಡುಗಳಲ್ಲಿ ಬೀಜಗಳು ಹೆಚ್ಚು ಇರುತ್ತವೆ. ಅದೇ ರೀತಿಯಲ್ಲಿ ಉತ್ತಮ ಗುಣಮಟ್ಟದ ಬೀಜಗಳೂ ಇರುತ್ತವೆ. ಗಟ್ಟಿ ನೆಲಕ್ಕೆ ಸುಮಾರು 5-6 ಅಡಿ ಎತ್ತರದಿಂದ ಬಿದ್ದರೂ ಸಹ ಒಡೆದು ಬೀಜಗಳು ಉದುರುತ್ತವೆ. ಕಾಪಿಡುವ ಶಕ್ತಿ ತುಂಬಾ ಕಡಿಮೆ ಇರುತ್ತದೆ.ಮಧ್ಯಮ ದಪ್ಪದ ಸಿಪ್ಪೆ ಉಳ್ಳ ಕೋಡುಗಳಾದರೆ ಒಳ್ಳೆಯದು. ಇದರ ಕೋಡುಗಳನ್ನು ಕೊಯಿಲು ಮಾಡುವಾಗ ಒಡೆಯುವಿಕೆ ಕಡಿಮೆ. ಇಲಿ, ಅಳಿಲು ಕಾಡು ಬೆಕ್ಕು ಮುಂತಾದ ಪ್ರಾಣಿಗಳು ಹಾನಿ ಮಾಡುವುದೂ ಸ್ವಲ್ಪ ಕಡಿಮೆ. ಇದರಲ್ಲಿ ಬೀಜಗಳ ಗುಣ ಮಟ್ಟ ಉತ್ತಮವಾಗಿರುತ್ತದೆ.ಉತ್ತಮ ಕೊಕ್ಕೋ ಕೋಡಿನಲ್ಲಿ ಲಭ್ಯವಾಗುವ ಬೀಜಗಳು ತೂಕ ಇರಬೇಕು. ಭಾರ ಇರುವ ಬೀಜಗಳು ಲೋಳೆಯ ಒಳಗೆ ಮಸುಕಾಗಿ ಕಾಣಿಸುತ್ತವೆ. ಹಸಿ ಬೀಜವನ್ನು ಮಾರಾಟ ಮಾಡುವಾಗ ಇದರ ಮಹತ್ವ ಅಷ್ಟಾಗಿ ಇಲ್ಲದಿದ್ದರೂ ಸಂಸ್ಕರಣೆ ಮಾಡುವಾಗ ಅಂತಹ ಬೀಜಗಳಿದ್ದರೆ ಅದರ ತೂಕ ಹೆಚ್ಚು ದೊರೆಯುತ್ತದೆ.

ನಿಮ್ಮ ತೋಟದಲ್ಲಿ ಕೊಕ್ಕೋ ಸಸಿ ಇರಬಹುದು, ನೀವು ಬಹಳಷ್ಟು ವರ್ಷಗಳಿಂದ ಕೊಕ್ಕೋ ಬೆಳೆ ಬೆಳೆಸುತ್ತಿರುವವರು ಆಗಿರಬಹುದು. ಆದರೆ ನಿಮ್ಮ ತೋಟದ ಸಸಿಗಳಲ್ಲಿ ದೊರೆಯುವ ಕೊಕ್ಕೋ ಕೊಡುಗಳ ಸರಾಸರಿ ತೂಕ, ಅದರಲ್ಲಿ ಬೀಜ, ಬೀಜದ ಗುಣದ ಬಗ್ಗೆ ತಿಳಿದು ಕೊಂಡದ್ದು ಕಡಿಮೆ ಇರಬಹುದು. ಕೊಕ್ಕೋ ಬೆಳೆಯುವಾಗ ಇದೂ ಅತೀ ಮುಖ್ಯ
ರೈತರು ಕೊಕ್ಕೋ ತಳಿಯನ್ನು ಆಯ್ಕೆ ಮಾಡುವಾಗ ಒಂದೋ ನಂಬಿಗಸ್ತ ನರ್ಸರಿಗಳಿಂದ ಸಸಿಗಳನ್ನು ಖರೀದಿ ಮಾಡಬೇಕು. ಇಲ್ಲವೇ ತಮ್ಮ ತೋಟದಲ್ಲಿ ಮೂಲ ತಳಿಗಳಿದ್ದರೆ ಅದರಲ್ಲೇ ಸಸ್ಯಾಭಿವೃದ್ದಿ ಮಾಡಿಕೊಳ್ಳಬೇಕು. ಕೇರಳದಲ್ಲಿ ಮಾಂಬಾ ಎಂಬ ತಳಿಯ ಕೊಕ್ಕೋವನ್ನು ರೈತರೊಬ್ಬರು ಆಯ್ಕೆ ಮಾಡಿದ್ದಿದೆ. ಅದು ಅವರ ಹೊಲದಲ್ಲೇ ಪರಿವರ್ತನೆ ಅಥವಾ ಇನ್ಯಾವುದೋ ಕಾರಣದಲ್ಲಿ ನೈಸರ್ಗಿಕವಾಗಿ ಅಭಿವೃದ್ದಿಯಾದ ತಳಿ. ನಿಮ್ಮ ತೋಟದಲ್ಲಿ ಉತ್ತಮ ತಳಿ ಇದ್ದರೆ ಅದನು ಕಸಿಮೂಲಕ ಸಸ್ಯಾಭಿವೃದ್ಧಿ ಮಾಡಿದರೆ ಒಳ್ಳೆಯದು.
