ಮಾನವ ಮೂತ್ರ ಎಂಬುದು ಅತ್ಯಂತ ಶ್ರೇಷ್ಟ ಪೋಷಕಾಂಶ ಮತ್ತು ಶಿಲೀಂದ್ರ ನಾಶಕ. ಅದೇ ರೀತಿ ಮಾನವ ಮಲಕ್ಕೆ ಚಿನ್ನದ ಗೊಬ್ಬರ ಎಂದೇ ಹೆಸರು. ಎರಡನೆಯದನ್ನು ಉಪಯೋಗ ಮಾಡುವುದು ನಾಗರೀಕ ಸಮಾಜಕ್ಕೆ ಸೂಕ್ತವಲ್ಲ. ಆದರೆ ಮಾನವ ಮೂತ್ರವನ್ನು ಸಂಸ್ಕರಿಸಿ ಅಥವಾ ತಾಜಾವಾಗಿ ಬಳಕೆ ಮಾಡಬಹುದು.
ಮಾನವ ಎಲ್ಲಾ ಪ್ರಾಣಿಗಳಿಗಿಂತ ಉತ್ಕೃಷ್ಟ ಆಹಾರವನ್ನು ತಿನ್ನುವವ. ಆದ ಕಾರಣ ಅವನು ಮಾಡುವ ತ್ಯಾಜ್ಯಗಳಲ್ಲಿ ಅಷ್ಟೇ ಉತ್ಕೃಷ್ಟ ಸತ್ವಾಂಶಗಳು ಇರುತ್ತದೆ. ಹಿಂದೆ ಬಯಲು ಮಲ, ಮೂತ್ರ ವಿಸರ್ಜನೆ ಚಾಲ್ತಿಯಲ್ಲಿತ್ತು. ಆಗ ಸಸ್ಯ ಸಂಪತ್ತು ಚೆನ್ನಾಗಿ ಬೆಳೆಯುತ್ತಿತ್ತು. ನಮ್ಮಲ್ಲಿ ಹಿಂದೆ ಮೂತ್ರಾಲಯಗಳಿರಲಿಲ್ಲ. ಮನೆಯಲ್ಲಿ ಶೌಚಾಲಯ ಇರಲಿಲ್ಲ. ಆಗ ನಾವು ಮಲ ಮೂತ್ರಗಳನ್ನು ಬಯಲಿನಲ್ಲಿ ವಿಸರ್ಜನೆ ಮಾಡುತ್ತಿದ್ದೆವು. ಇದು ಅನಾಗರೀಕ ಕ್ರಮ. ರೋಗ ಹರಡಲು ರಹದಾರಿ. ಆಧುನಿಕತೆಯ ಕಾಲದಲ್ಲಿ ಹೀಗೆ ಮಾಡುವುದು ಸಮಂಜಸವಲ್ಲ.ಆದರೆ ಸೂಕ್ತ ವಿಲೇವಾರಿ ವ್ಯವಸ್ಥೆಗಳಿಲ್ಲದೆ , ಮೂತ್ರದ ಪೋಷಕಾಂಶಗಳನ್ನು ನಾವು ವ್ಯಯ ಮಾಡುವುದು ಮಾತ್ರ ದೇಶದ ಆರ್ಥಿಕತೆಗೆ ಮಾಡುವ ಅತೀ ದೊಡ್ಡ ನಷ್ಟ. ಇದನ್ನು source of alternative to natural fertiliser ಎನ್ನಲಾಗುತ್ತಿದೆ.
ಬೆಂಗಳೂರು ಕೃಷಿ ವಿಶ್ವವಿಧ್ಯಾನಿಲಯದ ಮಣ್ಣು ವಿಜ್ಞಾನ ಶಾಸ್ತ್ರ ವಿಭಾಗದ ವಿಜ್ಞಾನಿಗಳ ತಂಡ ಮಾನವ ಮೂತ್ರ ಮತ್ತು ಅದರ ಪೋಷಕಾಂಶಗಳ ಬಗ್ಗೆ ಅಧ್ಯಯನ ನಡೆಸಿದೆ. ಅವರ ಪ್ರಕಾರ ಮಾನವ ಮೂತ್ರ ಒಂದು ಸಂಪೂರ್ಣ ಪೋಷಕಾಂಶಗಳ ಘನಿ ಎಂದು ಹೇಳಿದೆ. ಚಿತ್ರದುರ್ಗದ ಒಬ್ಬ ಮಿತ್ರರು ಈ ವಿಚಾರದಲ್ಲಿ ಅದ್ಯಯನ ನಡೆಸಿ ವರದಿಯನ್ನು ಪ್ರಧಾನಮಂತ್ರಿಗಳ ತನಕ ತಲುಪಿಸಿದ್ದಾರೆ. ಅವರು ಅದನ್ನು man ki baat ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದು ಇದೆ.
ಮಾನವ ಮೂತ್ರದಲ್ಲಿ ಏನಿದೆ?
- ಮಾನವ ಮೂತ್ರವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಯಾವುದೇ ವಿಷಾಂಶ ( Toxic) ಕಂಡು ಬಂದಿಲ್ಲ.
- ಇದರಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಗಳು ಇರುವುದನ್ನು ಪತ್ತೆ ಮಾಡಲಾಗಿದೆ.
- ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ , ಮಧ್ಯಮ ಪ್ರಮಾಣದಲ್ಲಿ ರಂಜಕ ಮತ್ತು ಪೊಟ್ಯಾಶಿಯಂ, ಅಲ್ಲದೆ
- ದ್ವಿತೀಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ, ಮತ್ತು ಸಲ್ಫರ್ ಗಳು ಬೇಕಾದಷ್ಟು ಪ್ರಮಾಣದಲ್ಲಿಯೂ ,
- ಬಹುತೇಕ ಎಲ್ಲಾ ಲಘು ಪೋಷಕಾಂಶಗಳೂ, ವಿಟಮಿನ್ ಹಾಗು ಅಮೈನೊ ಆಮ್ಲಗಳು ಇದರಲ್ಲಿ ಅಡಕವಾಗಿವೆ.
- ಇದು ಒಂದು ಸಮತೋಲನ ಪ್ರಮಾಣದ ದ್ರವ ಗೊಬ್ಬರ.
- ಬರೇ ಇಷ್ಟೇ ಅಲ್ಲ, ಅದರಲ್ಲಿ ಶಿಲೀಂದ್ರ ನಾಶಕ ಗುಣವೂ ಅಡಕವಾಗಿದೆ.
- ಸಸ್ಯ ಬೆಳವಣಿಗೆ ಪ್ರಚೋದಕವೂ ( plant growth promoting substances) ಅಡಕವಾಗಿದೆ.
- ಇಷ್ಟೆಲ್ಲಾ ಇದ್ದಾಗ್ಯೂ ಇದನ್ನು ನಾವು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
- ಇದು ಸಮುದ್ರದಲ್ಲಿ ಸಾಕಷ್ಟು ನೀರು ಇದ್ದೂ ನೀರಿಗೆ ಬರಗಾಲ ಬಂದಂತೆ.
- ಈಗಿರುವ ಸ್ಥಿತಿಯಲ್ಲಿ ಇದನ್ನು ಕೃಷಿಗೆ ಬಳಕೆ ಮಾಡುವುದು ಅಸಾಧ್ಯವಾದ ವಿಚಾರ.
ತಂತ್ರಜ್ಞಾನ ಬೇಕಾಗಿದೆ:
- ಒಂದು ವೇಳೆ ಇದನ್ನು ಉಪಯೋಗ ಮಾಡುವ ತಂತ್ರಜ್ಞಾನವನ್ನು ಬಳಸಿಕೊಂಡದ್ದೇ ಆದರೆ ನಮ್ಮ ದೇಶದ ಕೃಷಿ ಉದ್ದೇಶಕ್ಕೆ ಬಳಕೆಯಾಗುವ ಪೋಷಕಾಂಶ ಅಥವಾ ಗೊಬ್ಬರದಲ್ಲಿ 25% ಕ್ಕೂ ಹೆಚ್ಚು ಉಳಿತಾಯ ಮಾಡಬಹುದು.
- ಕೃಷಿಕರು ಗೊಬ್ಬರಕ್ಕಾಗಿ ಖರ್ಚು ಮಾಡುವ ಮೊತ್ತದಲ್ಲಿ ಅರ್ಧಕೂ ಹೆಚ್ಚು ಉಳಿಸಬಹುದು.
- ನಮ್ಮಲ್ಲಿ ಲಭ್ಯವಾಗುವ 30 % ಮೂತ್ರವನ್ನು ಸಂಸ್ಕರಿಸಿ ಬಳಕೆ ಮಾಡಿದರೆ ಸುಮಾರು 7 ಮಿಲಿಯನ್ ಎನ್ ಪಿ ಕೆ ರಸ ಗೊಬ್ಬರ ಉಳಿಸಲು ಸಾಧ್ಯ.
- ದೇಶವು ರಸಗೊಬ್ಬರ ಆಮದಿಗೆ ವ್ಯಯ ಮಾಡುವ ವಿದೇಶೀ ವಿನಿಮಯವನ್ನೂ ಉಳಿಸಬಹುದು.
ಮಾನವ ಮೂತ್ರದ ಬಳಕೆ ಹೊಸದಲ್ಲ:
- ನಮ್ಮ ಹಿರಿಯರು ಮೂತ್ರ ಬಂದರೆ ತೆಂಗಿನ ಮರದ ಬುಡಕ್ಕೋ , ಅಥವಾ ಇನ್ಯಾವುದೋ ಮರದ ಬುಡ ಹುಡುಕಿ ಮಾಡುತ್ತಿದ್ದರು.
- ಮನೆ ಹೆಂಗಸರು ಮನೆಯಲ್ಲಿಒಂದು ಪಾತ್ರೆ ಇಟ್ಟು ಅದರಲ್ಲಿ ವಿಸರ್ಜನೆ ಮಾಡಿ ನಂತರ ಅದನ್ನು ಬೆಳೆಗಳ ಬುಡಕ್ಕೆ ಹಾಕುತ್ತಿದ್ದರು.
- ಆಗ ಇದು , ಕೊಟ್ಟಿಗೆ ಗೊಬ್ಬರ, ಮತ್ತು ಬೂದಿ ಬಿಟ್ಟರೆ ಬೇರೆ ಸಸ್ಯ ಪೋಷಕಗಳು ಇರಲಿಲ್ಲ.
- ಕೆಲವು ಕಡೆ ಈ ಪದ್ದತಿ ಇತ್ತೀಚಿನ ತನಕವೂ ಇತ್ತು.
- ಉಡುಪಿಯ ಶಂಕರಪುರದಲ್ಲಿ ಇದನ್ನು ಮತ್ತು ಬೂದಿಯಲ್ಲೇ ಮಲ್ಲಿಗೆ ಬೆಳೆ ಬೆಳೆಸುತ್ತಿದ್ದ ಒಂದು ಕಾಲವಿತ್ತು.
- ಈಗ ಅಲ್ಲಿ ಅದರ ಟಾಂಕಿಯ ಕುರುಹುಗಳು ಮಾತ್ರ ಅಲ್ಲಲ್ಲಿ ಇವೆ.
- ಮಾನವ ಮೂತ್ರವನ್ನು ನಮ್ಮ ವ್ಯವಸ್ಥೆ ಕೀಳು ಮಟ್ಟದಲ್ಲಿ ಕಾಣುತ್ತಿರುವುದು ಸೂಕ್ತವಲ್ಲ .
- ಸರಕಾರ, ಸ್ಥಳೀಯಾಡಳಿತ ವ್ಯವಸ್ಥೆಗಳು ಇದನ್ನು ಉತ್ಪಾದಕ ವಸ್ತುವಾಗಿ ಬಳಕೆ ಮಾಡಬಹುದು.
- ಅದರ ಉಪಯೋಗಕ್ಕೆ ಬೇಕಾಗುವ ತಂತ್ರಜ್ಞಾನಗಳು ಇದೆಯಾದರೂ ಅದನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ.
- ಈಗ ಹಿಂದಿಗಿಂತ ಮೂತ್ರ ದ ವಿಲೇವಾರಿ ಮಾಡುವುದು ಸುಲಭ. ಕಾರಣ ಈಗ ಮೂತ್ರ ಒಂದೋಂದು ಕಡೆ ಸಂಗ್ರಹವಾಗುತ್ತದೆ.
- ಸಾರ್ವಜನಿಕ ಶೌಚಾಲಯಗಳಲ್ಲಿ ಇದರ ಸಂಗ್ರಹ ಮತ್ತು ಅದರ ಉಪಚಾರಕ್ಕೆ (treatment) ವ್ಯವಸ್ಥೆಯನ್ನು ಮಾಡಿದ್ಡೇ ಆದರೆ ಅದೆಷ್ಟೋ ಪೋಷಕಗಳು ದೊರೆಯಬಹುದು.
- ಸೂಕ್ತ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯವೂ ಕಡಿಮೆಯಾಗಬಹುದು.
- ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವ ಮತ್ತು ಸಂಸ್ಕರಿಸುವ ವ್ಯವಸ್ಥೆಗಳು ವಿದೇಶಗಳಲ್ಲಿ ಇದೆ. ನಮ್ಮಲ್ಲೂ ಇದು ಬರಬೇಕಾಗಿದೆ.

- ಇಷ್ಟಕ್ಕೂ ಕೃಷಿಕರಾದ ನಾವು ನಮ್ಮ ಹೊಲದ ಬೆಳೆಗಳ ಬುಡಕ್ಕೆ ಮಾಡುವುದಕ್ಕೆ ಹೇಸಿಗೆ ಪಡಬೇಕಾಗಿಲ್ಲ.
- ಅದು ಮಾನವ ಸಹಜ ಕ್ರಿಯೆ. ಅದ ಕಾರಣ ಮೂತ್ರವನ್ನು ಅನವಶ್ಯಕವಾಗಿ ವ್ಯರ್ಥ ಮಾಡಬೇಡಿ.
- ತೆಂಗಿನ ಮರದ ಬುಡಕ್ಕೆ ಮಾಡಿ ಆರೋಗ್ಯಪೂರ್ಣ ಮರ ಬೆಳೆಸಿ ಮತ್ತು ಅಧಿಕ ಇಳುವರಿ ಪಡೆಯಬಹುದು.
ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು:
- ಈಗ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಾನೂನು ರೀತಿ ತಪ್ಪು ಎಂಬ ವಾದ ಇದೆ.
- ಇದು ಸರಿಯಾದರೂ ರಸ್ತೆ ಬದಿ ಮುಂತಾದ ಕಡೆ ಅಲ್ಲಲ್ಲಿ ಮೂತ್ರ ಶಂಕೆಗೆ ಅನುಕೂಲ ಮಾಡಿಕೊಡಬೇಕು.
- ಈ ಮೂತ್ರವು ಹೊಲಕ್ಕೋ , ಮರಗಿಡಗಳಿಗೋ ಹೋಗುವಂತಾದರೆ ಅಲ್ಲಿಯಾದರೂ ಸ್ವಲ್ಪ ಫಲವತ್ತತೆ ಲಭ್ಯವಾಗುತ್ತದೆ.
- ಮಾನವ ಮೂತ್ರ ಮತ್ತು ಮಲವನ್ನು ಶೌಚಾಲಯದಲ್ಲಿ ವಿಸರ್ಜನೆ ಮಾಡುವುದರಿಂದ ಅದರಲ್ಲಿರುವ ಮಿಥೇನ್ ಅನಿಲ ಮಣ್ಣಿನ ಕಣಗಳಲ್ಲಿ ಸೇರುತ್ತದೆ.
- ಅದು ಬಾವಿಯ ನೀರು ಇತ್ಯಾದಿಗಳನು ಕಲುಶಿತಗೊಳಿಸುತ್ತದೆ ಎಂಬ ವಾದವೂ ಇದೆ.
ಶಿಲೀಂದ್ರ ನಾಶಕವಾಗಿ ಮೂತ್ರ:
- ಮಾನವ ಮೂತ್ರವನ್ನು ಸೇವನೆ ಮಾಡುವವರು ( ಆವರವರ ಮೂತ್ರ) ಸಾಕಷ್ಟು ಜನ ಇದ್ದಾರೆ.
- ಇದು ಕೆಲವು ಆರೋಗ್ಯ ಸಮಸ್ಯೆಗೆ ಅತ್ಯುತ್ತಮ ಪರಿಹಾರವಂತೆ.
- ಇದು ಹಾಗಿರಲಿ. ಮಾನವ ಮೂತ್ರವು ಅಡಿಕೆ, ತೆಂಗು, ಮುಂತಾದ ಬೆಳೆಗಳ ಕೊಳೆಯುವ ರೋಗಕ್ಕೆ ಉತ್ತಮ ಔಷಧಿ.
- ಇದರಷ್ಟು ವೇಫ಼್ಗವಾಗಿ ಮತ್ತು ಖಾತ್ರಿಯಾಗಿ ಈ ರೋಗ ವಾಸಿ ಮಾಡುವ ರಾಸಾಯನಿಕ ಶಿಲೀಂದ್ರ ನಾಶಕ ಇಲ್ಲ.
- ಉಗುರಿನ ಸೆರೆಯಲ್ಲಿ ಶಿಲೀಂದ್ರ ಸೋಂಕು ಆಗುವುದಕ್ಕೆ ಹಿರಿಯರು ಮೂತ್ರ ಮಾಡಿ ಗುಣಪಡಿಸುತ್ತಿದ್ದರು.
- ಇದು ಈಗಿನ ಹಿರಿಯರಿಗೆ ಚೆನ್ನಾಗಿ ಗೊತ್ತಿದೆ.
ಅವರವರ ಮನೆಯಲ್ಲಿ ನಾಚಿಕೆ ಇಲ್ಲದೆ ತಮ್ಮ ಮೂತ್ರವನ್ನು ತಮ್ಮ ಮನೆಯ ತೆಂಗಿನ ಸಸಿ , ಅಡಿಕೆ ಸಸಿ ಇತ್ಯಾದಿಗಳ ಬುಡಕ್ಕೆ ಮಾಡಿ. ಅದರಲ್ಲಿ ನಾಚಿಕೆ ಪಟ್ಟುಕೊಳ್ಳಬೇಡಿ. ಉತ್ತಮ ಪೋಷಕಾಂಶವನ್ನು ಹಾಳು ಮಾಡಿ ಬೇರೆ ಪೊಷಕಾಂಶವನ್ನು ಹಣ ಕೊಟ್ಟು ತರುವುದು ಬೇಕೇ?
ವಿ. ಸೂ: ಓದುಗರು ಈ ಲೇಖನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಇದೆ.
ಉತ್ಕೃಷ್ಟ ಗೊಬ್ಬರ – ಆದರೆ ಉಪಯೋಗಕ್ಕಿಲ್ಲ.