ಒಂದು ಕಾಲದಲ್ಲಿ ಸುಮಾರು 20 ವರ್ಷಕ್ಕೆ ಹಿಂದೆ ವನಿಲ್ಲಾ ಎಂಬ ಸಾಂಬಾರ ಬೆಳೆ ಭಾರೀ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ವನಿಲ್ಲಾ ಬೆಳೆಯೊಂದಿದ್ದರೆ ಕೃಷಿಕನ ಸ್ಥಿತಿಗತಿಯೇ ಬದಲಾಗಲಿದೆ ಎಂಬ ಹವಾ ಇತ್ತು. ಜನ ಭಾರೀ ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದರು. ಸಾಕಷ್ಟು ಪ್ರಯೋಗಗಳನ್ನೂ ಮಾಡಿದ್ದರು. ಮಾಹಿತಿಗಾಗಿಯೇ ಕೆಲವು ತಜ್ಞರು ಸಿದ್ದರಾಗಿದ್ದರು. ಈ ಬೆಳೆ ರೈತರನ್ನು ಮರುಳು ಮಾಡಿದಷ್ಟು ಯಾವ ಬೆಳೆಯೂ ಮಾಡಿರಲಿಕ್ಕಿಲ್ಲ. ಬಹುಷಃ ಈ ಬೆಳೆಯನ್ನು ಬೆಳೆಸದವರೇ ಇರಲಿಕ್ಕಿಲ್ಲ. ಅದೇ ಸ್ಥಿತಿ ಕರಿಮೆಣಸಿಗೆ ಬರಬಹುದೇ? ಸಾಧ್ಯತೆ ಇಲ್ಲದಿಲ್ಲ.
ಯಾವುದೇ ಬೆಳೆ ಹಿತಮಿತವಾಗಿದ್ದರೆ ಅದಕ್ಕೆ ಬೆಲೆ-ಬೇಡಿಕೆ ಸ್ಥಿರವಾಗಿರುತ್ತದೆ. ಮಿತಿ ಮೀರಿದಾಗ ಬೆಲೆ ಕುಸಿಯುತ್ತದೆ. ಇಂದು ಅಡಿಕೆ ಬೆಳೆ ಒಂದು ಸಂತೃಪ್ತ ಮಟ್ಟಕ್ಕೆ ತಲುಪಿದ ಮುನ್ಸೂಚನೆ ಕಾಣಿಸಲಾರಂಭಿಸಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಅಡಿಕೆ ಲಭ್ಯವಿದ್ದು , ವರ್ತಕರು ಮನಬಂದಂತೆ ದರ ಹಾಕುವ ಸ್ಥಿತಿ ಬಂದಿದೆ. 2 ನೇ ದರ್ಜೆಯ ಅಡಿಕೆಗಳಾದ ಒಡೆದ, ಕರಿ, ಸಿಪ್ಪೆ ಅಡಿಕೆ ಇವುಗಳಿಗೆ ಬೇಡಿಕೆ ತುಂಬಾ ಕಡಿಮೆಯಾಗಲಾರಂಭಿಸಿದೆ. ಈ ವಿಧ್ಯಮಾನ ಅಡಿಕೆ ಬೆಳೆಯ ಮುಂದಿನ ಭವಿಷ್ಯವನ್ನು ಸೂಚಿಸುತ್ತದೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಇರುತ್ತದೆ. ಆದರೆ ಒಳ್ಳೆಯ ಅಡಿಕೆಯೇ ಸಾಕಷ್ಟು ಸಿಗುವಂತಾದರೆ ದ್ವಿತೀಯ ದರ್ಜೆಯದ್ದು ಯಾರಿಗೆ ಬೇಕು. ಆಗ ಸಹಜವಾಗಿ ಬೆಳೆಗಾರರಿಗೆ ಸಿಗುವ ದರ ಕಡಿಮೆಯಾಗುತ್ತದೆ. 1 ಕಿಲೋ ಅಡಿಕೆ ಉತ್ಪಾದನೆಯಾಗುವಾಗ ಅದರಲ್ಲಿ 600-700 ಗ್ರಾಂ ಮಾತ್ರ ಉತ್ತಮ ಅಡಿಕೆ ಸಿಗುತ್ತದೆ. ನಾವು ಪಡೆಯುವ ಕಿಲೋ 500 ರೂ. ಎಂಬುದು ಆಗ 400 ಕ್ಕೆ ಸಮನಾಗುತ್ತದೆ. ಇಂತಹ ಸ್ಥಿತಿ ಉಂಟಾಗಿ ಕ್ರಮೇಣ ಬೆಲೆ ಕುಸಿಯಲಾರಂಭಿಸುತ್ತದೆ. ಅಂದು ವೆನಿಲ್ಲಾ ಬೆಳೆ ಹೇಳ ಹೆಸರಿಲ್ಲದಾಗಲು ಕಾರಣ ಹಲವು ಇರಬಹುದು. ಹೇಳಲ್ಪಡುವ ಬಹುತೇಕ ಕಾರಣಗಳಿಗೆ ಸರಿಯಾದ ತಳಹದಿ ಇಲ್ಲ. ನೈಸರ್ಗಿಕ ವನಿಲ್ಲಾ ಬಳಕೆ ಯಥಾಸ್ಥಿತಿಯಲ್ಲಿದ್ದರೂ ಬೇಡಿಕೆಯೇ ಕುಸಿಯಬೇಕಾದರೆ ನಿಜ ಕಾರಣ ಅಧಿಕ ಉತ್ಪಾದನೆಯೇ ಸರಿ. ಒಮ್ಮೆ ಇದರ ಮಾರುಕಟ್ಟೆ ವ್ಯವಸ್ಥೆಯೇ ಸ್ಥಬ್ಧವಾಯಿತು. ಬಹುಶಃ ಸ್ಟಾಕು ಮುಗಿದ ತರುವಾಯ ಮತ್ತೆ ಬೇಡಿಕೆ ಪ್ರಾರಂಭವಾಯಿತು. ವನಿಲ್ಲಾಕ್ಕೆ ಈಗ ಬೇಡಿಕೆ ಉತ್ತಮವಾಗಿದೆ. ಬೆಲೆಯೂ ಆಕರ್ಷಕವಾಗಿದೆ. ಆದರೆ ಬೆಳೆಯುವವರ ಆಸಕ್ತಿ ಮಾತ್ರ ಹೊರಟುಹೋಗಿದೆ. ಕರಿಮೆಣಸಿಗೆ ಇದೇ ಸ್ಥಿತಿ ಬರಬಹುದೇ? ಇಲ್ಲಿದೆ ಅದಕ್ಕೆ ಪುಷ್ಟಿ ನೀಡಬಲ್ಲ ಕೆಲವು ಸಂಗತಿಗಳು.
ಕರಿಮೆಣಸಿಗೆ ಬೇಡಿಕೆ ಇಲ್ಲ ಎಂದಾಗುವುದಿಲ್ಲ. ಉತ್ಪಾದನಾ ವೆಚ್ಚ ಭರಿಸುವ ಬೆಲೆ ಇಲ್ಲದಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಬೆಳೆ ಪ್ರದೇಶ ಬಹಳ ಹೆಚ್ಚಾಗಿದೆ:
ಹಿಂದೆ ಕರಿಮೆಣಸು ಕರಾವಳಿ, ಮಲೆನಾಡು ಮತ್ತು ಕೇರಳದಲ್ಲಿ ಒಂದು ಮಿಶ್ರ ಬೆಳೆಯ ಸ್ಥಾನದಲ್ಲಿ ಇತ್ತು. ಕಾಫೀ ತೋಟದಲ್ಲಿ ನೆರಳಿನ ಮರಗಳಲ್ಲಿ ಇದನ್ನು ಬೆಳೆಯುತ್ತಿದ್ದರು. ಕರಾವಳಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಡಿಕೆ, ತೆಂಗಿನ ಮರಗಳಲ್ಲಿ ಬೆಳೆಯಲಾಗುತ್ತಿತ್ತು. ಈಗ ಕರಿಮೆಣಸನ್ನೇ ಮುಖ್ಯ ಬೆಳೆಯಾಗಿ ಬೆಳೆಸುವ ಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲಿ ಕರಾವಳಿ ಮಲೆನಾಡು ಅಲ್ಲದೆ,ಅರೆ ಮಲೆನಾಡಿನ ಕೆಲವು ಭಾಗ, ಬಯಲು ಸೀಮೆಯಲ್ಲೂ ಸಹ ಕರಿಮೆಣಸಿನ ಬೆಳೆ ಬೆಳೆಯಲಾಗುತ್ತಿದೆ. ಚಿತ್ರದುರ್ಗದ ಕೆಲವು ಭಾಗಗಳಲ್ಲಿಯಂತೂ ಮಲೆನಾಡಿನಂತೆಯೇ ಬೆಳೆ ತಲೆ ಎತ್ತುತ್ತಿದೆ. ಇನ್ನು ತಮಿಳುನಾಡು, ಆಂದ್ರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಬೆಳೆ ಪ್ರಾರಂಭವಾಗಿದೆ. ವರ್ಷವರ್ಷವೂ ಕೋಟ್ಯಾಂತರ ಕರಿಮೆಣಸಿನ ಸಸಿಗಳು ಸಾವಿರಾರು ದೊಡ್ಡ ,ಸಣ್ಣ ನರ್ಸರಿಗಳ ಮೂಲಕ ತಯಾರಾಗಿ ಮಾರಾಟವಾಗುತ್ತಿದೆ. ಒಂದು ಕ್ವಿಂಟಾಲು ಮೆಣಸು ಬಳೆಯುತ್ತಿದ್ದವರು ಈಗ ಟನ್ ಗೆ ತಲುಪಿದ್ದಾರೆ. ಪ್ರದೇಶ ವಿಸ್ತರಣೆ ನಡೆಯುತ್ತಲೇ ಇದೆ. ಒಗತ್ತಿನ ಒಟ್ಟು ಕರಿಮೆಣಸಿನ ಬೇಡಿಕೆ 500,000 to 525,000 ಟನ್ ಗಳಷ್ಟು. ಇದರಲ್ಲಿ ಭಾರತದ ಉತ್ಪಾದನೆ 126,500 ( Spices Board 2024 ) ಇದರಲ್ಲಿ 60% ಕರ್ನಾಟಕದಲ್ಲಿ ಉತ್ಪಾದನೆ ಆಗುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಉಳಿದ 37 ಲಕ್ಷ ಟನ್ ಅನ್ನು ವಿಯೆಟ್ನಾಂ, ಬ್ರೆಜ಼ಿಲ್, ಇಂಡೋನೇಶಿಯಾ, ಶ್ರೀಲಂಕಾ, ಚೈನಾ, ಥೈಲಾಂದ್ .ಮಲೇಶಿಯಾ ಮತ್ತು ಆಫ್ರೀಕಾದ ಕೆಲವು ಪ್ರದೇಶಗಳು. ಇಲ್ಲಿಯೂ ಬೆಳೆ ವಿಸ್ತರಣೆ ಆಗುತ್ತಿದೆ. ಕಾರಣ ಇದಕ್ಕೆ ಜಾಗತಿಕ ಬೇಡಿಕೆ ಇದೆ. ಇದರ ಬಳಕೆ ಭಾತರ, ವಿಯೆಟ್ನಾಂ, ಚೈನಾ, ಆಮೇರಿಕಾ, ಐರೋಪ್ಯ ರಾಷ್ಟ್ರಗಳು. ಇದನ್ನು ಆಹಾರ ಉದ್ದಿಮೆ, ಫಾರ್ಮಸುಟಿಕಲ್ಸ್, ಮತ್ತು ಸೌಂದರ್ಯವರ್ಧಕ ಮತ್ತು ಸಾಂಪ್ರದಾಯಿಕ ಔಷದೋಪಚಾರಗಳಿಗೆ ಬಳಸಲಾಗುತ್ತದೆ. ಭಾರತ ಒಂದರಲ್ಲೇ 60,000-70000 ಟನ್ ಬಳಕೆ ಆಗುತ್ತಿದೆ. ನಾವು ಈಗಾಗಲೇ ದೇಶಿಯಾ ಬಳಕೆಗಿಂತ 30% ಹೆಚ್ಚು ಉತ್ಪಾದಿಸುತ್ತಿದೇವೆ. ಇದು ಇನ್ನು ಎರಡು ಮೂರು ವರ್ಷಗಳಲ್ಲಿ 50% ಕ್ಕಿಂತಲೂ ಹೆಚ್ಚಾಗುವ ಸ್ಥಿತಿ ಇದೆ. ಹವಾಮಾನ ವೈಪರೀತ್ಯ ಒಂದಿಲ್ಲದಿದ್ದರೆ ಇನ್ನೂ ಹೆಚ್ಚಾಗಬಹುದು.
ವಿದೇಶಗಳಲ್ಲಿ ಬೆಳೆ ಪ್ರದೇಶದ ಹೆಚ್ಚಳ:
ಕರ್ನಾಟಕದಲ್ಲಿ ಅಸಾಂಪ್ರದಾಯಿಕ ಪ್ರದೆಶಗಳಲ್ಲಿ ಸ್ವಲ್ಪ ಬೆಳೆ ವಿಸ್ತರಣೆ ಆಗುತ್ತಿದೆ. ಅಸ್ಸಾಂ, ಮೇಘಾಲಯ, ಅಂಡಮಾನ್ ನಿಕೋಬಾರ್ ಇಲ್ಲಿಯೂ ನೆರೆಯ ತಮಿಳುನಾಡು, ಮಹಾರಾಷ್ಟ್ರದ ಕೊಂಕಣ ಸೀಮೆಯಲ್ಲಿ ಪ್ರದೇಶ ವಿಸ್ತರಣೆ ನಡೆಯುತ್ತಿದೆ. ಸಾಗರ ಶಿವಮೊಗ್ಗ, ದ ಕೆಲವು ನರ್ಸರಿಗಳು ಹತ್ತಾರು ಲೋಡು ಮೆಣಸಿನ ಸಸಿಯನ್ನು ಮಹಾರಾಷ್ಟ್ರ, ಗುಜರಾತ್ ಕಡೆಗೆ ಕಳುಹಿಸುತ್ತಿವೆ.

ಬ್ರೆಜಿಲ್ ನಲ್ಲಿ ಭಾರೀ ಬೆಳೆ ವಿಸ್ತರಣೆ ಆಗುತ್ತಿದೆ. ಭಾರತ ಉತ್ಪಾದನೆಯನ್ನು ಹಿಂದಿಕ್ಕುವ ಹಠದಲ್ಲಿ ವಿಸ್ತರಣೆ ನಡೆಯುತ್ತಿದೆ ಎಂಬ ವರದಿ ಇದೆ. ಹಾಗೆಯೇ ವಿಯೆಟ್ನಾಂ ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆ. ಕಾಂಬೋಡಿಯಾ, ಚೈನಾ ನೈಜೀರಿಯಾ ಇಲ್ಲಿಯೂ ಬೆಳೆ ಪ್ರದೇಶ ಹೆಚ್ಚುತ್ತಿದೆ. ಚೀನಾ ತನ್ನ ದೇಶಕ್ಕೆ ಬೇಕಾಗುವಷ್ಟು ಉತ್ಪಾದನೆ ಮಾಡುವುದಕ್ಕಾಗಿ ರಕ್ಷಿತ ವ್ಯವಸಾಯ ಪ್ರಾರಂಭಿಸಿದೆ. ಮಡಗಾಸ್ಕರ್ , ಗ್ವಾಟೆಮಾಲ, ತಾಂಜೇನಿಯಾಗಳಲ್ಲೂ ಬೆಳೆ ವಿಸ್ತರಣೆ ಪ್ರಾರಂಭವಾಗಿದೆ,. ಎಲ್ಲೆಲ್ಲಿ ಬೆಳೆ ವಿಸ್ರರಣೆ ಅಗುತ್ತಿದೆಯೋ ಅವೆಲ್ಲಾ ಬಡ ರಾಷ್ಟ್ರಗಳು. ಇಲ್ಲಿಯ ಮಣ್ಣು ತುಂಬಾ ಫಲವತ್ತತೆಯಿಂದ ಕೂಡಿದೆ. ಇಲ್ಲಿನ ಕರೆನ್ಸಿ ಬೆಲೆ ತುಂಬಾ ಕಡಿಮೆ ಇದ್ದ ಕಾರಣ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಉತ್ಪನ್ನ ಒದಗಿಸಲು ಅವರು ಸಿದ್ದರಿರುತ್ತಾರೆ. ಮಣ್ಣಿನ ಫಲವತ್ತತೆ ಮತ್ತು ಹವಾಮಾನದ ಅನುಕೂಲಗಳಿಂದಾಗಿ ಇಲ್ಲಿ ಕಷ್ಟವಿಲ್ಲದೆ ಅಧಿಕ ಉತ್ಪಾದನೆ ಆಗುತ್ತದೆ. ಬಡ ರಾಷ್ಟ್ರಗಳಾದ ಕಾರಣ ಆ ಪ್ರದೇಶದ ಉತ್ಪನ್ನಕ್ಕೆ ವ್ಯಾಪಾರಿಗಳು ಹೆಚ್ಚು ಗಮನ ಹರಿಸುತ್ತಾರೆ.
ಹೆಚ್ಚು ವಿಸ್ತರಣೆ ರಿಸ್ಕ್- ಇರುವ ಬೆಳೆ ಪೋಷಣೆ ಸೂಕ್ತ:
ನಮ್ಮ ದೇಶದಲ್ಲಿ , (ಇತರ ದೇಶಗಳಲ್ಲೂ ಹೀಗೆ ಇರಬಹುದು) ಬೇಡಿಕೆ ಆಧಾರಿತ ಉತ್ಪಾದನೆ ಎಂಬುದು ಇಲ್ಲ. ಕೃಷಿಕರು ಎಷ್ಟು ಪ್ರಮಾಣದಲ್ಲಿ ಯಾವುದೇ ಬೆಳೆಯನ್ನೂ ಬೆಳೆಯಬಹುದು. ಬೆಳೆಯುವಾಗ ಬೆಲೆ ಚೆನ್ನಾಗಿರಬಹುದು, ಫಲ ಬರುವಾಗ ಬೆಲೆ ಕುಸಿತವಾಗಲೂ ಬಹುದು. ಇದಕ್ಕೆಲಾ ಬೆಳೆಗಾರರೇ ಹೊಣೆ. ಒಬ್ಬ ಬೆಳೆದ ಎಂದರೆ ಮತ್ತೊಬ್ಬ ಅದಕ್ಕಿಂತ ಹೆಚ್ಚು ಬೆಳೆಯುವವ. ಸಮರ್ಪಕ ಲೆಕ್ಕಾಚಾರಗಳಿಲ್ಲ. ಇರುವ ಲೆಕ್ಕಾಚಾರಗಳನ್ನೆಲ್ಲಾ ನಿಖರ ಎಂದು ನಂಬುವಂತಿಲ್ಲ. ಸರಕಾರದ ವ್ಯವಸ್ಥೆಯು ಯಾವ ಲೆಕ್ಕಾಚಾರ ಕೇಳಿದರೂ ಜನ ಖರಾರುವಕ್ಕಾದ ಮಾಹಿತಿ ಕೊಡುವುದಿಲ್ಲ. ಕಾರಣ ಸರಕಾರದ ಮೇಲೆ ಜನತೆಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಯಾವಾಗಲೂ ಕೃಷಿ ಉತ್ಪನ್ನಕ್ಕೆ ಬೆಲೆ ಕುಸಿತವಾಗುವುದು ಅಧಿಕ ಉತ್ಪಾದನೆಯಿಂದಲೇ. ಈ ಸಾಂಬಾರ ವಸ್ತುವನ್ನು ಬಳಕೆ ಮಾಡುವುದಕ್ಕೂ ಇತಿ ಮಿತಿ ಇದೆ. ಪಪ್ಪಾಯ ಹಣ್ಣು ಆದರೆ ನಾಲ್ಕು ಪೀಸ್ ಹೆಚ್ಚು ತಿನ್ನಬಹುದು. ಖಾರದ ಕರಿಮೆಣಸನ್ನು ಹೊಟ್ಟೆ ತುಂಬಾ ತಿನ್ನಲಿಕ್ಕಾಗುವುದಿಲ್ಲ. ಹಾಗಾಗಿ ಬಳಕೆ ಕ್ಷೇತ್ರವೂ ವಿಶೇಷವಾಗಿ ಬೆಳೆಯುವುದಿಲ್ಲ್ಲ.
ರೈತರು ವಿವಿಧ ಪ್ರಯೋಗಗಳಾದ ಕಾಂಕ್ರೀಟ್ ಕಂಬ, ಇನ್ಯಾವುದೋ ಮರಮಟ್ಟು, ಪಿ ವಿ ಸಿ ಪೈಪು, ಇವೆಲ್ಲಾ ಪ್ರಯೋಗಗಳಿಗೆ ಬಂಡವಾಳ ಹೂಡಿ ಇರುವ ಉಳಿತಾಯವನ್ನು ವ್ಯಯ ಮಾಡಿಕೊಳ್ಳಬೇಡಿ. ಇರುವ ಬೆಳೆಯನ್ನು ವ್ಯವಸ್ಥಿತವಾಗಿ ಸಾಕಿ. ಸತ್ತಕಡೆ ಮತ್ತೆ ನೆಡಿ. ಅಧಿಕ ಸಾರ ಕೊಟ್ಟು ಬೆಳೆಗೆ ಆರೋಗ್ಯ ಕೊಡಿ. ಇದರಿಂದ ಉತ್ಪಾದನೆ 20-30% ತನಕ ಹೆಚ್ಚಿಸಬಹುದು.

ಉಚ್ಛ್ರಾಯ ಸ್ಥಿತಿ – ಬೆಲೆ ಕುಸಿತದ ಸೂಚನೆ:
ವನಿಲ್ಲಾ ಬೆಲೆ ಕುಸಿತವಾದದ್ದೂ ಉತ್ಪಾದನೆ ಹೆಚ್ಚಳದಿಂದ. ಕರಿಮೆಣಸಿನ ಬೆಲೆ ಕುಸಿತವಾಗುವುದೂ ಉತ್ಪಾದನೆ ಹೆಚ್ಚಳದಿಂದ. ಆಮದು ನಮ್ಮ ಮಾರುಕಟ್ಟೆಯನ್ನು ಹಾಳು ಮಾಡಿತು ಎಂಬ ಮಾತು ಒಂದು ಸಮಜಾಯಿಶಿ ಅಷ್ಟೇ. ಆಮದು ವಿಶ್ವ ಮಟ್ಟದಲ್ಲಿ ವ್ಯವಹರಿಸುವಾಗ ಇರುವಂತದ್ದೇ. ಇಲ್ಲಿ ಸ್ಪರ್ಧೆ ಮುಖ್ಯ. ಆ ಸ್ಪರ್ಧೆಗೆ ನಾವು ಸಿದ್ಧರಿದ್ದರೆ ಬೆಳೆಯಬಹುದು. ಮುಂದೊಂದು ದಿನ ಮೆಣಸಿಗೆ ಕಿಲೋ.250-300 ಆಯಿತೆಂದಾದರೆ ನಮಗೆ ಅದರ ಕೊಯಿಲಿನ ಖರ್ಚು ಸಹ ಹುಟ್ಟುವುದಿಲ್ಲ. ಒಂದು ವಿಚಾರ ನೆನಪಿರಲಿ. ಕೆಲವೇ ವರ್ಷಗಳಲ್ಲಿ ಕೃಷಿ ಕೂಲಿ ಕಾರ್ಮಿಕರ ಭಾರೀ ಕೊರತೆ ಉಂಟಾಗುವ ಮುನ್ಸೂಚನೆ ಕಾಣಿಸುತ್ತಿದೆ. ಹಾಗಾಗಿ ಕೆಲಸಗಾರರ ಅವಲಂಭನೆ ಇರುವ ಬೆಳೆಗಳನ್ನು ಹೆಚ್ಚು ಹೆಚ್ಚು ಮಾಡಬೇಡಿ.
ಜನ ಕರಿಮೆಣಸಿಗೆ ಭಾರೀ ಭವಿಷ್ಯವಿದೆ ಎನ್ನುತ್ತಾರೆ. ತಜ್ಞರೂ ಅದನ್ನೇ ಹೇಳುತ್ತಾರೆ. ಯಾರೂ ಮುಂದಿನ ದಿನಗಳಲ್ಲಿ ಏನಾಗಬಹುದು ಈ ಬಗ್ಗೆ ಯೋಚನೆ ಮಾಡುವುದಿಲ್ಲ. ಗಿಡ ಮಾಡುವವರಿಗೆ ವ್ಯವಹಾರವಾಗುತ್ತದೆ. ಪ್ರಮೋಷನ್ ಮಾಡುವವರಿಗೆ ಅದರಲ್ಲೂ ಒಂದಷ್ಟು ಹೊಟ್ಟೆ ಪಾಡು ಆಗುತ್ತದೆ. ಬೆಳೆಯುತ್ತಿರುವ ಮಾದರಿ ರೈತರಿಗೆ ಪ್ರಚಾರದ ಗೀಳು ಬಂದು ಬಿಡುತ್ತದೆ. ಮಾಧ್ಯಮಗಳಿಗೆ ವೀಕ್ಷಕರ ಆಕರ್ಷಣೆ ಮುಖ್ಯವಾಗುತ್ತದೆ. ಇದರಲ್ಲಿ ಕೊನೆಯ ವ್ಯಕ್ತಿ ಅಂದರೆ ಈಗ ಬೆಳೆ ಬೆಳೆಯಲು ಮುಂದಾಗುವವನು ಬಲಿಪಶುವಾಗುತ್ತಾನೆ.