ನಮ್ಮ ಹೊಲದ 6 ಇಂಚು ಮಣ್ಣು ಇದರಲ್ಲೇ ಕೃಷಿಯ ಸರ್ವಸ್ವವೂ ಅಡಗಿರುವುದು. ಮಣ್ಣಿಗೆ ಜೀವ ಇದೆ. ಅದು ಉಸಿರಾಡುತ್ತದೆ. ಅದು ಸಂವೇದನಾಶೀಲ. ಅದನ್ನು ಕೊಲ್ಲಬಹುದು, ಬದುಕಿಸಬಹುದು ಎಲ್ಲವೂ ನಮ್ಮ ಕೈಯಲ್ಲಿದೆ. ಒಟ್ಟಿನ್ಬಲ್ಲಿ 6 ಇಂಚು ಮಣ್ಣು ಕೃಷಿ ಭೂಮಿಯ ಜೀವ. ಇದನ್ನು 6 ರಿಂದ 7 ಹೀಗೆ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು.
ಭೂಮಿ ಅಥವಾ ಮಣ್ಣು ಪಂಚಭೂತಗಳಲ್ಲಿ ಒಂದು . ಇದು ಮಾನವನ ಉಳಿವು ಅಳಿವುಗಳಿಗೆ ಆಧಾರ. ಇದನ್ನು ತಾಯಿಗೆ ಸಮಾನ ಎಂದೂ ಪರಿಗಣಿಸಲಾಗುತ್ತದೆ. ಇದು ಫೂಜನೀಯ. ಇದನ್ನು ಎಷ್ಟು ಅಕ್ಕರೆಯಿಂದ ಬಳಸಿದರೆ ಅಷ್ಟು ಪ್ರತಿಫಲ ಬರುತ್ತದೆ ಎನ್ನುವ ಅರಿವು ಪ್ರತೀಯೊಬ್ಬನಲ್ಲೂ ಇರಬೇಕು. ಕೃಷಿ ಮಾಡುವವರು ಮೊದಲಾಗಿ ತಿಳಿಯಬೇಕಾದದ್ದು ಮಣ್ಣಿನ ಜೀವಶಾಸ್ತ್ರ. ಇದನ್ನು ಸ್ವಲ್ಪವಾದರೂ ತಿಳಿಯದಿದ್ದರೆ ಅವರು ಕೃಷಿ ಮಾಡುವುದು ವ್ಯರ್ಥ ಎಂದೇ ಹೇಳಬಹುದು. ಮಣ್ಣು ವಿಜ್ಞಾನ ಅಥವಾ Soil science ಎಂಬುದು ಕೃಷಿಕನ ಪ್ರಾಥಮಿಕ ಶಿಕ್ಷಣವಾಗಿರಬೇಕು. ಮಣ್ಣು ಹೇಗೆ ಆಯಿತು. ಅದಕ್ಕೆ ಸಾರ ಹೇಗೆ ಸೇರಿಕೊಂಡಿತು, ಅದನ್ನು ಹೇಗೆ ಸಂರಕ್ಷಿಸಬೇಕು, ಪುನರುಜ್ಜೀವನಗೊಳಿಸಬಹುದು, ಎಂಬುದು ಮಣ್ಣು ವಿಜ್ಞಾನದ ಮೂಲಭೂತ ಸಂಗತಿಗಳು. ಬೆಳೆ ಬೆಳೆಯುವ ಹೊಲದ ಮೇಲಿನ 6 ಇಂಚು ಮಣ್ಣು ಎಂದರೆ ಅದು ಬಂಗಾರ. ಅಲ್ಲಿಯೇ ಅದರ 90% ಜೀವ ಇರುತ್ತದೆ. ಮಣ್ಣಿನಲ್ಲಿ ಇರಬೇಕಾದ ಬಹುತೇಕ ಜೀವಾಣು ಕ್ರಿಯೆಗಳೂ ಇಲ್ಲಿಯೇ ಜಾಸ್ತಿ. ಗಾಳಿಯಾಡುವ ಸ್ಥಿತಿಯಲ್ಲಿರುವ ಈ ಮಣ್ಣಿನಲ್ಲಿ ಬ್ಯಾಕ್ಟೀರಿಯಾಗಳು, ಶಿಲೀಂದ್ರಗಳು, ಈಸ್ಟ್ ಗಳು, ಪ್ರೋಟೋಜೋವಾಗಳು, ಜಂತು ಹುಳಗಳು ಎಲ್ಲವೂ ಇರುತ್ತವೆ. ಈ ಮಣ್ಣು ರಚನೆಯಾಗಲು ನೂರಾರು ವರ್ಷಗಳು ಬೇಕು. ಆದರೆ ನಾಶವಾಗಲು ಒಂದೆರಡು ಮಳೆಗೆ ಕರಗಲು ಬಿಟ್ಟರೆ ಸಾಕು. ಇದನ್ನು ನಾವು ಮೇಲ್ಮಣ್ಣು Top soil ಎನ್ನುತ್ತೇವೆ. ಇದು ಹೋದರೆ ಕೃಷಿ ಲಾಭದಾಯಕವಲ್ಲ.

ಮೇಲ್ಮಣ್ಣು ಹೇಗೆ ರಚನೆಯಾಗುತ್ತದೆ?
- ಮಣ್ಣು ಎಂಬುದು ಶಿಲೆಗಳು ಕರಗಿ ಉತ್ಪಾದನೆಯಾದದ್ದಾರೆ ಅದಕ್ಕೆ ಜೀವ ಕೊಟ್ಟದ್ದು, ಅದರ ಮೇಲೆ ಬೆಳೆಯುವ ಜೀವಗಳು.
- ಮೊದಲಾಗಿ ಹಾವಸೆ (bryophytes and ferns ಪಾಮಚಿ ಸಸ್ಯಗಳು ಮತ್ತು ಜರಿ ಗಿಡಗಳು) ಸಸ್ಯಗಳು,
- ನಂತರ ಕುರುಚಲು ಸಸ್ಯಗಳು, ಮರಗಳು ಬೆಳೆದವು ಅದರ ಜೊತೆಗೆ ಇತರ ಜೀವಿಗಳಾದ ಪಕ್ಷಿ ಪ್ರಾಣಿಗಳು ಬದುಕಿದವು.
- ಇವುಗಳಿಗೆಲ್ಲಾ ಒಂದು ಆಯುಸ್ಸು ಎಂಬುದಿದೆ.
- ಅದರ ನಂತರ ಸತ್ತು ಹೋಗಿ ಅವು ಮಣ್ಣಿನಲ್ಲಿ ವಿಲೀನವಾಗಿ ಮಣ್ಣಿಗೆ ಸಾರವನ್ನು ಕೊಟ್ಟದ್ದಾಗಿದೆ.
- ಇವೆಲ್ಲಾ ಸಾರಗಳೂ ಮಣ್ಣಿನ ಮೇಲ್ಭಾಗದಲ್ಲೇ ಇರುವಂತವುಗಳು.
- ಒಂದು ಗಿಡ , ಮರ, ಗೆಲ್ಲು ಬಿದ್ದರೂ ಹಾಗೆಯೇ ಇಲಿ ಸತ್ತರೂ, ಪಕ್ಷಿ ಸತ್ತರೂ ದೈತ್ಯ ಆನೆ ಸತ್ತರೂ, ಮನುಷ್ಯ ಸತ್ತರೂ ಅದು ಮಣ್ಣಿನ ಮೇಲು ಭಾಗದಲ್ಲೇ 6 ಇಂಚು ಅಷ್ಟರಲ್ಲೇ ಇರುವ ಕಾರಣ ಅದು ಮೇಲಿನ ಮಣ್ಣನ್ನು ಸಾರ ಸಂಪನ್ನವಾಗಿಸುತ್ತದೆ.
- ಕೊಟ್ಯಾಂತರ ವರ್ಷಗಳಿಂದ ಈ ಕ್ರಿಯೆ ನಡೆಯುತ್ತಾ ಬಂದಿದೆ.
- ಆದರೆ ಮೇಲು ಮಣ್ಣು ಹೆಚ್ಚು ಆಗಿಲ್ಲ ಕಾರಣ ಇಷ್ಟೇ ಮಣ್ಣು ವರ್ಷ ವರ್ಷವೂ ಮಳೆ, ಗಾಳಿ ಮುಂತಾದ ಪ್ರಾಕೃತಿಕ ನಡೆಗೆ ಕೊಚ್ಚಣೆಯಾಗುತ್ತಲೇ ಇರುತ್ತದೆ.
- ಕೆಲವೊಂದು ಕಡೆಗಳಲ್ಲಿ ಮೇಲು ಮಣ್ಣು ಅಧಿಕ ಪ್ರಮಾಣದಲ್ಲಿ ಇರುವುದೂ ಇದೆ.
- ಸಿಂಧೂ ನದಿಯ ಮೆಕ್ಕಲು ಮಣ್ಣು, ಕೃಷ್ಣಾ, ಗೋದಾವರಿ, ಕಾವೇರಿ ನದಿಗಳ ಮೆಕ್ಕಲು ಮಣ್ಣು ಇವೆಲ್ಲಾ ಭಾರೀ ಫಲವತ್ತಾದ ಮಣ್ಣು.
- ಜ್ವಾಲಾಮುಖಿ ಉಂಟಾಗುವ ಕಡೆಗಳಲ್ಲಿ ಮಣ್ಣು ಫಲವತ್ತಾಗಿರುತ್ತದೆ.
- ಆದರೆ ಸಾಮಾನ್ಯ ಸಾವಯವ ವಸ್ತುಗಳು ಕಳಿತು ( ಜೀವಾಣುಗಳಿಗೆ ಆಹಾರವಾಗಿ ಕಳಿತಂತಹ) ರಚನೆಯಾದ ಮಣಿನಲ್ಲಿ ಮಾತ್ರ ಬಹುತೇಕ ಎಲ್ಲಾ ಸಾರಾಂಶಗಳೂ ಒಳಗೊಂಡಿರುತ್ತವೆ.
- ಮಣ್ಣು ಎಂಬುದು ಘನ ಪದರ್ಥ. ಅದು ದ್ರವ ಆಗಬೇಕಾದರೆ ಅದನ್ನು ಕರಗಿಸಬೇಕು.
- ಅದಕ್ಕೆ ಗಾಳಿ ಸಂಚಾರ (Co2) ಬೇಕು. ಅದು ಇರುವಲ್ಲಿ ಮಣ್ಣು ಫಲವತ್ತಾಗಿರುತ್ತದೆ.
- ಇದರ ವ್ಯಾಖಾನ ಹೀಗಿದೆ.ವಿವಿಧ ಪ್ರಮಾಣದ ಶಿಥಿಲವಾದ ಖನಿಜ ಮತ್ತು ನಶಿಸುತ್ತಿರುವ ಸಾವಯವ ವಸ್ತುಗಳಿಂದ ಪದರ ರೂಪದಲ್ಲಿ ಸಂಘಟನೆಯಾದ ನೈಸರ್ಗಿಕ ಸಾವಯವ ವಸ್ತು.
- ಇದು ಭೂಮಿಯ ಮೇಲೆ ತೆಳುವಾದ ಪದರದಂತಿದ್ದು, ಹದವಾದ ಮಟ್ತದ ನೀರು, ಗಾಳಿ,ಇದ್ದಾಗ ಸಸ್ಯದ ನಿಲುವಿಗೆ ಅಧಾರವಾಗುವ್ದರ ಜೊತೆಗೆ ಅದಕ್ಕೆಪೋಷಣೆಯನ್ನೂ ಕೊಡುತ್ತದೆ.

ಮೇಲ್ಮಣ್ಣಿನ ಗುಣ ವಿಷೇಷತೆಗಳು:
- ಬೆಳೆ ಪೋಷಣೆಯಲ್ಲಿ ಮೇಲ್ಮಣ್ಣಿನ ಪಾತ್ರ ಮಹತ್ತರವಾದುದು,ಮೇಲ್ಮಣ್ಣಿನಲ್ಲಿ ಇರುವಷ್ಟು ಜೀವಾಣುಗಳು ಬೇರೆ ಎಲ್ಲೂ ಇರುವುದಿಲ್ಲ.
- ಎಲ್ಲಾ ರೀತಿಯ ಬೆಳೆ ಪೋಷಕಗಳು ಖನಿಜಗಳು ಇಲ್ಲಿ ಇರುತ್ತವೆ.
- ಇದು ನೀರನ್ನು ಹಿಡಿದುಟ್ಟುಕೊಳ್ಳುವ ಗುಣವನ್ನು ಪಡೆದಿರುತ್ತದೆ.
- ಮೇಲ್ಮಣ್ಣು ಹೇಗೆ ಆಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಅದರ ಮಹತ್ವ ಗೊತ್ತಾಗುತ್ತದೆ.
- ಒಂದು ತರಗೆಲೆ ಕರಗಿ ರೂಪಾಂತರ ಹೊಂದಿ ಮಣ್ಣಾದರೆ ಅದು ಕೇವಲ 1-2 ಗ್ರಾಂ ನಷ್ಟು ಮಾತ್ರ.
- ಒಂದು ಚದರ ಅಡಿಯ ಮಣ್ಣು ಮೇಲ್ಮಣ್ಣು ಆಗಿ ಪರಿವರ್ತನೆ ಆಗಬೇಕಾದರೆ ಕ್ವಿಂಟಾಲು ಗಟ್ಟಲೆ ಸಾವಯವ ವಸ್ತು ಬೇಕಾಗುತ್ತದೆ.
- ಮಣ್ಣಿನ ಮೇಲೆ ಬಿದ್ದ ತರಗೆಲೆ, ಸೊಪ್ಪು ಇತ್ಯಾದಿಗಳನ್ನು ಕಣ್ಣಿಗೆ ಕಾಣುವ ಜೀವಾಣುಗಳು , ಕಾಣದ ಜೀವಾಣುಗಳು ಬಳಸಿಕೊಂಡು ರೂಪಾಂತರ ಮಾಡಿಕೊಡುತ್ತವೆ.
- 6 ಇಂಚು ಮಣ್ಣು ಮೃದುವಾಗಿ ಕೋಮಲವಾಗಿರುತ್ತದೆ. ಹಾಗಾಗಿ ಕೊಚ್ಚಣೆಗೆ ಬೇಗ ಸ್ಪಂದಿಸುತ್ತದೆ.
- ಕೃಷಿಕರು ಮೇಲ್ಮಣ್ಣನ್ನು ಸ್ವಲ್ಪವೂ ನಷ್ಟವಾಗದಂತೆ ನೋಡಿಕೊಂಡರೆ ಬೆಳೆ ಪೊಷಣೆಗೆ ಕೊಡುವ ಗೊಬ್ಬರಗಳನ್ನೂ ಕಡಿಮೆ ಮಾಡಬಹುದು.
- ವಿಷೇಷವಾಗಿ ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಈ ಮಣ್ಣು ಕೊಚ್ಚಣೆಗೆ ಒಳಪಡುವುದು ಹೆಚ್ಚು.
ಸಂರಕ್ಷಣೆ ಹೇಗೆ ಮತ್ತು ಯಾಕೆ:?
- ಕೃಷಿಕರಾದವರು ನಮ್ಮ ಕೃಷಿ ಭೂಮಿ ಅಥವಾ ನಾವು ಬದುಕಿದ ಭೂಮಿಯನ್ನು ಯಥಾಸ್ಥಿತಿಯಲ್ಲಿ ಅಥವಾ ಸ್ವಲ್ಪವಾದರು ಮೇಲ್ದರ್ಜೆಗೇರಿಸಿ ನಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು.
- ಜಮೀನನ್ನು ಅದರ ಸಾಮರ್ಥ್ಯ ಅಥವ ಯೋಗ್ಯತೆ ಅಂದರೆ ಅದರ ಬೆಳೆ ಧಾರಣಾ ಶಕ್ತಿಗನುಗುಣವಾಗಿ ಬೇಸಾಯ ಮಾಡಬೇಕು.
- ಯಾವುದೇ ರೀತಿಯಲ್ಲಾಗಲೀ ಮೇಲ್ಮಣ್ಣು ಕ್ಷೀಣಿಸುವುದನ್ನು ತಡೆಗಟ್ಟಬೇಕು
- ಕೊಚ್ಚಣೆಯಿಂದ ಹಾಳಾದ ಮಣ್ಣನ್ನು ಪುನರ್ ಸ್ಥಾಪಿಸಬೇಕು.
- ಮಣ್ಣಿನ ತೇವನನ್ನು ಸಸ್ಯದ ಉಪಯೋಗಕ್ಕಾಗಿ ಉಳಿಸಿಕೊಳ್ಳಬೇಕು.ನೆಲ ಜೌಗು ಆಗದಂತೆ ನೀರು ಬಸಿಯುವ ವ್ಯವಸ್ಥೆ ಮಾಡಿಕೊಳ್ಳಬೇಕು.
- ಭೂಮಿಯಲ್ಲಿ ಹುಲ್ಲು ಕಳೆ ಬೆಳೆಯುವಂತೆ ಆಸ್ಪದಕೊಡಬೇಕು. ಆಗ ಅದರಲ್ಲಿ- ಗಾಳಿ ಸಂಚಾರ ಚೆನ್ನಾಗಿರುತ್ತದೆ
- ಯಾವುದೇ ರೀತಿಯಲ್ಲಿ ಮೇಲ್ಮಣ್ಣನ್ನು ಅಡಿಭಾಗಕ್ಕೆ ಹಾಕಿ ಫಲವತ್ತತೆ ಇಲ್ಲದ ಮಣ್ಣನ್ನು ಮೇಲೆ ಹಾಕುವುದು ಮಾಡದೆ ಭೂಮಿ ಹೇಗೆ ಇದೆಯೋ ಅದೇ ಪ್ರಕಾರ ಕೃಷಿ ಮಾಡಬೇಕು.
- ಏರು ತಗ್ಗಿನ ಭೂಮಿಯನ್ನು ಅರ್ಧ ಚಂದ್ರಾಕಾರದಲ್ಲಿ ಅಥವಾ ಟೇರೆಸಿಂಗ್ ಮಾದರಿಯಲ್ಲಿ ರಚನೆಮಾಡಿ, ಕೃಷಿ ಮಾಡಿದರೆ ಅಲ್ಪ ಸ್ವಲ್ಪ ಕೊಚ್ಚಣೆಯಾದ ಮಣ್ಣು ಸಹ ಅಲ್ಲಲ್ಲಿ ಬಂಧಿಯಾಗಿ ನಷ್ಟವಾಗದೆ ಉಳಿಯುತ್ತದೆ.
ನಮ್ಮ ಕೃಷಿ ಕ್ರಮ ಮತ್ತು ಮೇಲ್ಮಣ್ಣಿನ ನಷ್ಟ:
ನಾವು ಕೃಷಿಮಾಡುವಾಗ ಹೆಚ್ಚಾಗಿ ಮೇಲ್ಮಣ್ಣನ್ನು ನಷ್ಟಮಾಡಿಕೊಳ್ಳುತ್ತಿದ್ದೇವೆ. ಅದು ಹೇಗೆಂದರೆ ಸಮತಟ್ಟು ಮಾಡುವಿಕೆ. ಸಮತಟ್ಟು ಮಾಡುವುದಿದ್ದರೂ ಮೇಲ್ಮಣ್ಣನ್ನು ಸುಮಾರು 1 ಅಡಿ ತನಕದ ಮಣ್ಣನ್ನು ಮೊದಲು ಒಂದೆಡೆ ಸಂಗ್ರಹಿಸಿ ನಂತರ ಅದರ ಕೆಳಗಿನ ಮಣ್ಣನ್ನು ಅಗೆದು ಬೇಕಾದಂತೆ ಸಮತಟ್ಟು ಮಾಡಿ ಅದರ ಮೇಲೆ ಮೇಲ್ಮಣ್ಣನ್ನು ಮತ್ತೆ ತೆಳುವಾಗಿ ಸುರಿಯಬೇಕು. ಆಗ ಆ ಮಣ್ಣಿಗೆ ಜೀವ ಕಳೆ ಬರುತ್ತದೆ. ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಅದಕ್ಕೆ ನಿರಂತರ ಜೀವಕಳೆ ಇರುತ್ತದೆ. ಕೃಷಿ ಜೊತೆಗೆ ಮರಮಟ್ಟುಗಳ ಬೆಳವಣಿಗೆಗೂ ಅವಕಾಶ ನೀಡುತ್ತಾ ಬಂದರೆ ಸುಸ್ಥಿರತೆ ಅಥವಾ ಸಮತೋಲನ ಇರುತ್ತದೆ.
ಎಲ್ಲದಕ್ಖೂ ಮಣ್ಣೇ ಪ್ರಧಾನ. ಉತ್ತಮ ಮಣ್ಣು ಇದ್ದಲ್ಲಿ ಕೃಷಿ ಮಾಡಿದರೆ ಫಲ ಸಿಗುತ್ತದೆ. ಸಾವಯವ ವಸ್ತುಗಳಿಲ್ಲದ ಮಣ್ಣು ಜೀವ ಇಲ್ಲದ ಮಣ್ಣು. ಸಾವಯವ ವಸ್ತುಗಳನ್ನು ಸೇರಿಸದೆ ಅದರಿಂದ ಅಪೇಕ್ಷೆ ಪಡುವುದು ಅದರ ಕೊಲೆ.ಮಾನವ ಮಣ್ಣು ಹಾಳುಮಾಡುವ ಜೀವಿ ( ಕೃಷಿ-ಬೇಸಾಯ) ಮಾನವ ಹೊರತಾಗಿ ಯಾವ ಜೀವಿಯೂ ಅದರ ರಚನೆಯ ಮಾರ್ಪಾಡಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದ ಕಾರಣ ಅವನೇ ಅದರ ಪುನರುಜ್ಜೀವನವನ್ನೂ ಮಾಡಬೇಕು.