ಕಳೆದ ವರ್ಷದ ಅಡಿಕೆ ಬೆಳೆಯ ಸ್ಥಿತಿ ನೋಡಿದರೆ ದರ ಇನ್ನೂ ಏರಿಕೆಯಾಗಬೇಕಿತ್ತು. ವ್ಯಾಪಾರಿಗಳು, ಅಡಿಕೆಯ ಸಿದ್ದ ಉತ್ಪನ್ನ ತಯಾರಿಕ ಉದ್ದಿಮೆಗಳು ದರ ಎಷ್ಟಾದರೂ ಆಗಲಿ, ನಮಗೆ ಅಡಿಕೆ ಬೇಕಾಗಿದೆ. ಕಳುಹಿಸಿ ಎಂಬ ಸೂಚನೆ ಕೊಡಬೇಕಿತ್ತು. ಆದರೆ ಅಂತಹ ಬೇಡಿಕೆಯೂ ಇಲ್ಲ. ದರ ಏರಿಕೆಯೂ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲವಾದರೂ ಬೆಳೆ ಲೆಕ್ಕಾಚಾರ ನೋಡಿದರೆ ಬೇಡಿಕೆಯೋ ಬೇಡಿಕೆ ಆಗಬೇಕಿತ್ತು. ಕಾರಣ ಏನಿರಬಹುದು?
ಕಳೆದ ವರ್ಷ 50%ದಷ್ಟು ಬೆಳೆ ನಷ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅರ್ಧದಷ್ಟೂ ಇಲ್ಲ. ಇರುವುದರಲ್ಲೇ ಈ ವರ್ಷದ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು ಎನ್ನುತ್ತಾರೆ ಬಹುತೇಕ ಬೆಳೆಗಾರರು. ವಾಸ್ತವವೂ ಹೌದು. ಎಳೆ ಕಾಯಿ ಉದುರಿದ್ದೂ ಅಲ್ಲದೆ ವಿಪರೀತ ಮಳೆಯ ಕಾರಣ ಕೊಳೆ ರೋಗವೂ ಬಂದಿತ್ತು. ಕರಿಮೆಣಸು ಸ್ವಲ್ಪ ಚೆನ್ನಾಗಿತ್ತು ಎನ್ನುವವರಿದ್ದರೆ, ಅಡಿಕೆ ಎಲ್ಲೆಲ್ಲಿಯೂ ಇದೇ ಕಥೆ. ಬರೇ ದಕ್ಷಿಣ ಕನ್ನಡ ಮಾತ್ರವಲ್ಲ ಮಲೆನಾಡಿನಲ್ಲೂ ಇದೇ ಕಥೆ. ಆದರೆ ಎಲ್ಲಿಯೂ ಬೆಲೆ ಏರಿಕೆಯಾಗಿಲ್ಲ. ವರ್ತಕರಿಂದ ಅಂತಹ ಬೇಡಿಕೆಯೂ ಇಲ್ಲ. ಈ ಪರಿಸ್ಥಿತಿ ಯಾಕೆ ಬಂತು? ಆಮದು ಹೆಚ್ಚಾಗಿಯೋ ಅಥವಾ ಬೇರೇನು ಕಾರಣ ಇರಬಹುದು ಎಂಬುದನ್ನು ಸ್ವಲ್ಪ ತಿಳಿಯೋಣ.
ಉತ್ತರ ಭಾರತದಿಂದ ಬೇಡಿಕೆ ಆಷ್ಟಕ್ಕಷ್ಟೇ:
ಯಾವಾಗಲೂ ಅಡಿಕೆಗೆ ಬೆಲೆ ಬರುವುದು ದೊಡ್ಡ ವ್ಯಾಪಾರಸ್ಥರು ಅಂದರೆ ಉತ್ತರ ಭಾರತದ ಕೆಲವು ವ್ಯಾಪಾರಿಗಳು ಅಡಿಕೆ ಬೇಕು ಎಂಬ ಬೇಡಿಕೆ ವ್ಯಕ್ತಪಡಿಸುವಾಗ. ಮೂರು ತಿಂಗಳ ಹಿಂದೊಮ್ಮೆ ಈ ಸ್ಥಿತಿ ಉಂಟಾಗಿತ್ತು. ಮಾರ್ಚ್ 25 2025 ರ ನಂತರ 400೦೦ ದಲ್ಲಿದ್ದ ಹೊಸ ಅಡಿಕೆ, ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗಲು ಪ್ರಾರಂಭವಾಯಿತು. ದಿನಕ್ಕೆ ರೂ.5-10 ಈ ರೀತಿ ಬೆಲೆ ಏರುತ್ತಾ ಎಪ್ರೀಲ್ 12 ಕ್ಕೆ ಹೊಸತು 44000, ಹಳತು 50000 ಡಬ್ಬಲ್ 51000 ಕ್ಕೆ ಏರಿತು. ಮೇ 26 ಕ್ಕೆ 49000 ಹಳತು 52000, ಆಯಿತು. ಆ ನಂತರ ಜೂನ್ ಗೆ ಮತ್ತೆ ಬೇಡಿಕೆ ಕಡಿಮೆಯಾಗಿ 47500 ಕ್ಕೆ ಇಳಿಯಿತು. ಮತ್ತೆ ಜೂನ್ 25 ಕ್ಕೆ ಸ್ವಲ್ಪ ಏರಿಕೆಯಾಗಿ 48500 ಹಳತು 52500 ಆಯಿತು. ಕೆಂಪಡಿಕೆಯೂ ಇದೇ ರೀತಿಯಲ್ಲಿ ಜೂನ್ ನಲ್ಲಿ ರಾಶಿ 57500 ಕ್ಕೆ ಏರಿ ಸ್ವಲ್ಪ ಚೇತರಿಕೆ ಕಾಣಿಸಿತ್ತು. ಜುಲೈ ನಲ್ಲಿ 56500 ಕ್ಕೆ ಸ್ವಲ್ಪ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆ ಹೇರಳವಾಗಿ ಬರುತ್ತದೆ. ಆದರೆ ದರ ಹಾಕುವವರು ಸ್ವಲ್ಪ ಮಾತ್ರ ಖರೀದಿ ಮಾಡುವ ಸ್ಥಿತಿ ಉಂಟಾಗಿದೆ. ಒಂದೇ ಲಾಟ್ ಅಡಿಕೆಗೆ ಎರಡು ಬಗೆಯ ದರ ಹಾಕುವುದು ಮುಂತಾದ ವರ್ತಮಾನಗಳೂ ಇವೆ. ಇದು ವರ್ತಕರಿಗೆ ಅಡಿಕೆ ಆವಕ ಕಡಿಮೆಯಾಗಿಲ್ಲ ಎಂಬುದರ ಸೂಚನೆಯಾಗಿ ಕಾಣಿಸುತ್ತಿದೆ. ಹಿಂದೆ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಹೆಚ್ಚು ಅವಕ ಇರುತ್ತಿತ್ತು. ಹಾಗೆಯೇ ಕೆಲವು ಹೊಸ ಪ್ರದೇಶಗಳಲ್ಲಿ ತೀರಾ ಕಡಿಮೆ ಇತ್ತು. ಈಗ ಹೊಸ ಪ್ರದೇಶಗಳಲ್ಲಿ ಅವಕ ಜಾಸ್ತಿಯಾಗುತ್ತಿದೆ. ಆಮದು ಬಗ್ಗೆ ಹೇಳುತ್ತಾರೆಯಾದರೂ ನಿರ್ಭಂಧಗಳು ಇದ್ದಾಗ್ಯೂ ರೋಸ್ಟೆಡ್ ಅರೆಕನಟ್ ಹೆಸರಿನಲ್ಲಿ ಈಗಲೂ ಕಿಲೋ 350 ರೂ. ಗಳಿಗೆ ಆಮದಾಗುತ್ತಿವೆ. ಸರಕಾರದ ಅಂಕಿ ಅಂಶಗಳ ಪ್ರಕಾರ ಆಮದು ಅಡಿಕೆಯ ಪ್ರಮಾಣ ದೇಶೀಯ ಉತ್ಪಾದನೆಗೆ ಹೋಲಿಸಿದರೆ ಗರಿಷ್ಟ 10% ದಷ್ಟು. ಹೇಗೆಂದರೆ ಭಾರತದ ಒಟ್ಟು ಅಡಿಕೆ ಉತ್ಪಾದನೆ ಜಾಗತಿಕ ಮಟ್ಟದಲ್ಲಿ 70-75% ಇದೆ. ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಉತ್ಪಾದನೆಯೂ ಹೆಚ್ಚು ಬಳಕೆಯೂ ಹೆಚ್ಚು. ಹಾಗಾಗಿ ದರ ಏರುಗತಿಯಲ್ಲಿ ಇರುತ್ತದೆ. ಕಾನೂನು ಬದ್ಧವಾಗಿ ಆಮದು ಆದಾಗ ದೇಶೀಯ ಮಾರುಕಟ್ಟೆಯಲ್ಲಿ ದೊಡ್ಡ ದರ ಕುಸಿತ ಆಗಲಾರದು. ಕಳ್ಳ ಸಾಗಣೆ ಮೂಲಕ ಬಂದಾಗ ಸ್ವಲ್ಪ ದರ ಕುಸಿತ ಆಗುತ್ತದೆ. ಈಗ ಆಮದು ನಿಯಮಿತವಾಗಿ ಆಗುತ್ತಿದೆ. ಆದರೆ ನಮ್ಮಲ್ಲಿ ಬೆಳೆ ಕಡಿಮೆಯಾದ ಕಾರಣ ಅದು ಲೆಕ್ಕಕ್ಕಿಲ್ಲ. ನಮ್ಮಲ್ಲಿ ದರ ಏರಿಕೆಯಾಗದಿರುವುದಕ್ಕೆ ಕಾರಣ ಒಟ್ಟಾರೆ ದೇಶೀಯ ಉತ್ಪಾದನೆ ಹೆಚ್ಚಾಗಿರುವುದು. ಖಾಸಗಿ ಹಾಗೂ ಸಹಕಾರಿ ಮಾರಾಟ ವ್ಯವಸ್ಥೆಗಳ ಮಾಹಿತಿಯಂತೆ ಉತ್ಪಾದನೆ ಕಡಿಮೆಯಾದರೂ ಅಡಿಕೆಯ ಆವಕ ಕಳೆದ ವರ್ಷಕ್ಕೆ ಸಮನಾಗಿಯೇ ಇದೆಯಂತೆ. ಹಾಗಾದರೆ ಏನಾಗಿರಬಹುದು?

ಬೆಳೆ ಪ್ರದೇಶ ಹೆಚ್ಚಾಗಿದೆ. ಸಾಕಷ್ಟು ಉತ್ಪಾದನೆ ಇದೆ.
ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕದ ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ತಮಿಳುನಾಡಿನಲ್ಲೂ ಉತ್ಪಾದನೆ ಹೆಚ್ಚಳವಾಗುತ್ತಿದೆ. ಅಸಾಂ ನಲ್ಲಿಯೂ ಬೆಳೆ ಹೆಚ್ಚಾಗುತ್ತಿದೆ. ಅಡಿಕೆಗೆ ಉಳಿದ ಬೆಳೆಗಿಂತ ದರ ಉತ್ತಮವಾಗಿರುವುದೇ ಅದರ ಬೆಲೆ ಏರಿಕೆಯಾಗಲು ಅಡ್ಡಿಯಾಗಿದೆ.ಕರ್ನಾಟದಕ ಅರೆ ಮಲೆನಾಡು ಭಾಗ, ಮಂಡ್ಯ ಮೈಸೂರು ಬೆಂಗಳೂರು ಸುತ್ತಮುತ್ತಲಿನಲ್ಲೂ ಅಡಿಕೆ ಬೆಳೆಯುತ್ತಿದೆ.ಪ್ರದೇಶ ವಿಸ್ತರಣೆ ಆಗುತ್ತಿದೆ. ಸಾಂಪ್ರದಾಯಿಕ ಪ್ರದೇಶಗಳ ಇಳುವರಿಗಿಂತ ದುಪ್ಪಟ್ಟು ಇಳುವರಿ ಅಲ್ಲಿದೆ.
ಒಮ್ಮೆ ಹಾಸನ ಮೂಲಕ ಬೆಂಗಳೂರಿಗೆ ಹಗಲು ಹೊತ್ತು ಪ್ರಯಾಣ ಮಾಡಿ. ಭತ್ತ, ಜೋಳ ಬೆಳೆಯುತ್ತಿದ್ದ ಹೊಲಗಳಲ್ಲಿ ಅಡಿಕೆ ಕಾಣಿಸುತ್ತಿದೆ ಇಳುವರಿ ಬಹಳ ಚೆನ್ನಾಗಿದೆ. ಹಾಗೆಯೇ ತುಮಕೂರು ರಸ್ತೆ, ಹೊಸೂರು ರಸ್ತೆಯಲ್ಲಿ ಪ್ರಯಾಣಿಸುವಾಗಲೂ ನಾವು ಅಡಿಕೆ ತೋಟಗಳನ್ನು ಕಾಣಬಹುದು. ಇಲ್ಲಿ ಉತ್ಪಾದನೆಯಾಗುವ ಅಡಿಕೆ ಸಾಂಪ್ರದಾಯಿಕ ಪ್ರದೇಶಗಳ ಉತ್ಪಾದನೆ ಎಲ್ಲಾ ಸೇರಿ ಮಾರುಕಟ್ಟೆಗೆ ಕೊರತೆಯಾಗದಷ್ಟು ಅಡಿಕೆ ಇದೆ. ಅದೇ ಕಾರಣದಿಂದ ಈಗ ದ್ವಿತೀಯ, ತೃತೀಯ ದರ್ಜೆಯ ಅಡಿಕೆಗೆ ಬೆಲೆ ತುಂಬಾ ಕುಸಿದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಬಿಳಿ ಗೊಟು ಅಥವಾ ಸಿಪ್ಪೆ ಅಡಿಕೆ( ಉಳ್ಳೀ) ಕರಿ ಕೋಕಾ ಅಡಿಕೆಗೆ ಬೇಡಿಕೆಯೇ ಇಲ್ಲವಾದರೂ ಅಚ್ಚರಿ ಇಲ್ಲ. ಉತ್ತಮ ಗುಣಮಟ್ಟದ ಅಡಿಕೆ ಸಾಕಷ್ಟು ಸಿಗುವಾಗ ಈ ಕಳಪೆ ಅಡಿಕೆಗೆ ಬೇಡಿಕೆ ಇಲ್ಲದಾಗುತ್ತದೆ.
ಬೆಂಗಳೂರು ಕೆಂಗೇರಿ ಬಳಿಯಲ್ಲಿನ ಸಣ್ಣ ಅಡಿಕೆ ತೋಟ. 5 ನೇ ವರ್ಷಕ್ಕೆ ಇಳುವರಿ ಗಮನಿಸಿ.
ಬೆಲೆ ಏರಿಕೆ ನಿರೀಕ್ಷೆ ಬೇಡ:
ಇನ್ನೂ ಬೆಲೆ ಏರಿಕೆಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಸ್ವಲ್ಪ ದರ ಇಳಿಕೆಯಾಗುವುದೇ ಹೊರತು ಏರಿಕೆ ಸಾಧ್ಯತೆಗಳು ಕಡಿಮೆ. ಒಂದೊಮ್ಮೆ ಸ್ವಲ್ಪ ಎರಿಕೆ ಕಂಡುಬಂದರೂ ಅದು ತಾತ್ಕಾಲಿಕ. ಅದು ವ್ಯಾಪಾರಿಗಳು ತಮ್ಮ ಸ್ಟಾಕು ತೀರುವಳಿಗೆ ಮಾಡುವಂತದ್ದು. ಈ ಸಮಯದಲ್ಲಿ ಮಾರಾಟ ಮಾಡಬೇಕು. ಏರಿಕೆ ಪ್ರಾರಂಭವಯಿತು ಇನ್ನೂ ಇನ್ನೂ ಏರುತ್ತದೆ ಎಂದು ದಾಸ್ತಾನು ಇಟ್ಟರೆ ಕೆಲವೇ ದಿನಗಳಲ್ಲಿ ಧಾರಣೆ ಹಿಂದಿನ ಸ್ಥಿತಿಗೇ ಬರುತ್ತದೆ. ದರ ಇಂತಿಷ್ಟೇ ಎರುತ್ತದೆ. ಇದೇ ತುದಿ. ಇದೇ ಬುಡ ಎಂಬುದನ್ನು ಯಾರಿಗೂ ಊಹೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಎಡೆಯಲ್ಲಿ ಯಾವುದಾದಾರೂ ದರಕ್ಕೆ ಮಾರಾಟ ಮಾಡಿ ಬಿಡಬೇಕು. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಯಿಂದ ನಮಗೆ ಭಾರೀ ಆದಾಯ ಬರಬಹುದು ಎಂಬ ಯಾವುದೇ ಆಶಾ ಭಾವನೆ ಇಲ್ಲ. ಅದಿಕೆ ಬೆಳೆ ಪ್ರದೇಶ ಹೆಚ್ಚಾಗಿದೆ.ಹೆಚ್ಚಾಗುತ್ತಲೇ ಇದೆ. ತಿಂದು ಉಗುಳುವ ಉದ್ದೇಶಕ್ಕೆ ಅಡಿಕೆ ಬಳಕೆಯಾಗುವ ಕಾರಣ ಬೇಡಿಕೆ ಇದ್ದರೆ ಮಾತ್ರ ಬೆಲೆ ಏರುತ್ತದೆ. ಬೇಡಿಕೆ ಸ್ಥಿರವಾಗಿ ಇರಲಾರದು. ಹಾಗಾಗಿ ಸಿಕ್ಕಿದ ದರದಲ್ಲಿ ತೃಪ್ತರಾಗುವುದು ಅಥವಾ ವರ್ಷದ ಎಲ್ಲಾ ಸಮಯದಲ್ಲೂ ಖರ್ಚಿಗೆ ಬೇಕಾದಂತೆ ಮಾರಾಟ ಮಾಡುವುದು ಉತ್ತಮ.
ಅಡಿಕೆ ಮಾರುಕಟ್ಟೆ ಒಂದು ರೀತಿಯಲ್ಲಿ ಶೇರು ಮಾರುಕಟ್ಟೆಯಂತೆ. ಯಾವುದೇ ಗುಟ್ಕಾ ತಯಾರಕರೂ ನೇರವಾಗಿ ಖರೀದಿ ಮಾಡುವುದಿಲ್ಲ. ಅವರಿಗೆ ಸರಬರಾಜು ಮಾಡುವವರಿಂದಲೇ ಖರೀದಿ ನಡೆಯುತ್ತದೆ. ಇಲ್ಲಿನ ಚಿಲ್ಲರೆ ವ್ಯಾಪಾರಿಗಳೆಲ್ಲಾ ಇಂತವರಿಗೇ ಕೊಡುವುದು.ಚಿಲ್ಲರೆ ವ್ಯಾಪಾರಿಗಳೂ ಸ ನೇರಬಹುಶಃ ಈ ವ್ಯಾಪಾರದಲ್ಲಿ ನಗದಿಗೆ ಅಥವಾ ಒಂದೆಡೆ ಮಾಲು ಮತ್ತೊಂದೆಡೆ ಹಣ ಈ ರೀತಿ ವ್ಯವಹಾರ ಆಗುವುದು ಬಹಳ ಕಡಿಮೆ. ಮಾಲು ತಲುಪಿದ ನಂತರ ಹಣ ಬರುವುದು.ಕೆಲವೊಮ್ಮೆ ಬೇಡಿಕೆ ಇದ್ದರೆ ತಕ್ಷಣ ಹಣ ಬರುತ್ತದೆ. ಇಲ್ಲದಾದರೆ ತಡವಾಗುತ್ತದೆ. ಹೆಚ್ಚಾಗಿ ಮೊದಲ ಕನ್ಸೈಮೆಂಟ್ ನ ಹಣ ಎರಡನೇ ಕನ್ಸೈಮೆಂಟ್ ತಲುಪಿದ ನಂತರವೇ ಬರುವುದು. ಪಾವತಿ ತಡವಾದರೆ ದರ ಇಳಿಕೆಯಾಗುತ್ತದೆ. ಸರಾಗವಾಗಿ ಬರುತ್ತಿದ್ದರೆ ತುಸು ಏರಿಕೆಯೂ ಆಗಬಹುದು,ಇಳಿಕೆಯೂ ಆಗಬಹುದು. ವ್ಯಾಪಾರಿಗಳಿಗೂ ಸಾಕಷ್ಟು ರಿಸ್ಕ್ ಇದೆ. ಲಾಭವೂ ಆಗುತ್ತದೆ, ನಷ್ಟವೂ ಆಗುತ್ತದೆ.
