ಪೊಟ್ಯಾಶಿಯಂ ಹ್ಯೂಮೇಟ್ ಎಂಬ ಕಪ್ಪು ಬಣ್ಣದ ನೈಸರ್ಗಿಕ ವಸ್ತುವೊಂದು ಆಧುನಿಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಚಮತ್ಕಾರೀ ಕೆಲಸವನ್ನು ಮಾಡಬಲ್ಲದು. ಇದು ಒಂದು ಜೈವಿಕ ಉತ್ತೇಜಕ (Bio-stimulant) ಮತ್ತು ಮಣ್ಣು ರಚನೆ ಸುಧಾರಕವಾಗಿರುತ್ತದೆ. (Soil Conditioner). ಲಿಯೋನಾರ್ಡೈಟ್ ಅಥವಾ ಲಿಗ್ನೈಟ್‌ನಿಂದ ದೊರೆಯುವ ನೈಸರ್ಗಿಕ ಹ್ಯೂಮಿಕ್ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಹ್ಯೂಮಿಕ್ ಮತ್ತು ಫುಲ್ವಿಕ್ ಆಮ್ಲಗಳು ಜೊತೆಗೆ ಪೋಟಾಶಿಯಂ ಸೇರಿಕೊಂಡಿರುತ್ತವೆ.
ಹೆಚ್ಚಿನವರು ಹ್ಯೂಮಿಕ್ ಅಸಿಡ್ ಬಗ್ಗೆ ಕೇಳಿರಬಹುದು. ಕೆಲವರು ಬಳಸಿರಬಹುದು. ಇದನ್ನು ಯಾಕೆ ಬಳಸಬೇಕು, ಏನು ಪ್ರಯೋಜನ ಎಂಬುದನ್ನು ಮುಂಚಿತವಾಗಿ ತಿಳಿದುಕೊಂಡು ಬಳಸಿದರೆ ಉತ್ತಮ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಸಸ್ಯದ ಬೆಳವಣಿಗೆಗೆ ಉತ್ತೇಜನ ನೀಡುವುದು. ಪೋಷಕಾಂಶ ಬಳಕೆಯ ಸಾಮರ್ಥ್ಯ ಹೆಚ್ಚಿಸುವುದು. ಬೆಳೆಗಳ ರೋಗನಿರೋಧಕ ಶಕ್ತಿಯನ್ನು ಗಟ್ಟಿಗೊಳಿಸುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಣ್ಣು ಮತ್ತು ತರಕಾರಿಗಳ ಬೆಳೆಗಾರರಿಗೆ, ಉತ್ತಮ ಬೆಳೆಯ ಪ್ರತಿಫಲ, ಗುಣಮಟ್ಟ ಮತ್ತು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಪೋಟಾಶಿಯಂ ಹ್ಯೂಮೇಟ್ ಪ್ರಮುಖ ಪಾತ್ರ ವಹಿಸುತ್ತಿದೆ.
ಬೇರುಗಳ ಬೆಳವಣಿಗೆ ಮತ್ತು ಮಣ್ಣಿನ ಶೋಧನೆ
- ಪೊಟ್ಯಾಶಿಯಂ ಹ್ಯೂಮೇಟ್ ನ ಪ್ರಮುಖ ಪ್ರಯೋಜನವೆಂದರೆ ಇದು ಹೆಚ್ಚಿನ ಬೇರುಗಳ ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ.
- ಮಣ್ಣಿನ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
- ಗಾಳಿಯಾಡುವಿಕೆ (ಮಣ್ಣಿನ ಗಾಳಿಚಲನೆ) ಮತ್ತು ನೀರಿನ ಹಿಡಿತ ಸಾಮರ್ಥ್ಯ ಹೆಚ್ಚಿಸುವ ಮೂಲಕ ಮಣ್ಣು ರಚನೆ ಉತ್ತಮಗೊಳಿಸುತ್ತದೆ.
- ಅಧಿಕ ಮತ್ತು ಗಟ್ಟಿಯಾದ ಬೇರು ವ್ಯವಸ್ಥೆ ರೂಪುಗೊಂಡು ಪೋಷಕಾಂಶ ಮತ್ತು ನೀರಿಗಾಗಿ ಮಣ್ಣಿನಲ್ಲಿ ಹೆಚ್ಚು ಅನ್ವೇಷಿಸಲು ಸಾಧ್ಯವಾಗುತ್ತದೆ.
- ಹಣ್ಣಿನ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ತರಕಾರಿ ಬೆಳೆಗಳಾದ ಟೊಮೇಟೋ, ಬದನೆ, ಹೀಗೆ ಹಲವಾರು ತರಹದ ಬೆಳೆಗಳಲ್ಲಿ, ಉತ್ತಮ ಬೇರುಗಳು ಬೆಳೆದು ಬೇಗನೆ ಬೆಳೆಯುತ್ತದೆ.
- ಹವಾಮಾನ ಮತ್ತು ಇನ್ನಿತರ ಪ್ರಾಕೃತಿಕ ವೈಪರೀತ್ಯಗಳ ವಿರುದ್ಧ ಸಸ್ಯಗಳಿಗೆ ಸಹನಶೀಲತೆಯನ್ನು ಹೊಂದಲು ಸಹಾಯಮಾಡುತ್ತವೆ
- ಮಣ್ಣಿನಲ್ಲಿ ಲಭ್ಯವಾಗದೆ ಬಂಧಿಯಾಗಿರುವ (Hidden or Bonded) ಪೋಷಕಾಂಶಗಳನ್ನು ಬಿಡುಗಡೆ ಮಾಡಲು ಸಹಕರಿಸುತ್ತದೆ.
- ಸೂಕ್ಷ್ಮ ಪೋಷಕಾಂಶಗಳನ್ನು ಸಾಂದ್ರಗೊಳಿಸುವ (Chelating) ಮೂಲಕ ಬಳಸಿಕೊಳ್ಳುವಂತೆ ಮಾಡುತ್ತದೆ.
- ಪೋಟಾಶಿಯಂ ಹ್ಯೂಮೇಟ್ ಎಂಬುದು ಸಸ್ಯಕ್ಕೆ ಯಾವುದೆಲ್ಲಾ ಅಗತ್ಯವಿದೆಯೋ ಆ ಅಂಶಗಳನ್ನು ಮಣ್ಣು ಬಿಡುಗಡೆಗೊಳಿಸಲು ಸಹಕಾರ ನೀಡುತ್ತದೆ.
ಅಡಿಕೆ- ತೆಂಗು ಮುಂತಾದ ಬೆಳೆಗಳಲ್ಲಿ:
- ಪೊಟ್ಯಾಶಿಂ ಹ್ಯೂಮೇಟ್ ಅನ್ನು ಅಡಿಕೆ,ತೆಂಗು, ಕರಿಮೆಣಸು ಮುಂತಾದ ಬೆಳೆಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.
- ಇದರಿಂದ ಹೊಸ ಬಿಳಿ ಬೇರುಗಳ ಉತ್ಪಾದನೆ ಹೆಚ್ಚಾಗುತ್ತದೆ.
- ಹೆಚ್ಚು ಹೂ ಬಿಡುತ್ತದೆ. ಪೊಟ್ಯಾಶಿಯಂ ಅಂಶ ಹೇರಳವಾಗಿರುವ ಕಾರಣ ಕಾಯಿ ಕಚ್ಚುವಿಕೆ ಮತ್ತು ಗುಣಮಟ್ಟದ ಫಸಲಿಗೆ ಸಹಕಾರಿಯಾಗುತ್ತದೆ.
- ಬೇರು ಚೆನ್ನಾಗಿ ಬೆಳೆದರೆ ಸಸ್ಯಕ್ಕೆ ಹೆಚ್ಚು ಆಹಾರ ದೊರೆಯುತ್ತದೆ. ಶಕ್ತಿ ಹೆಚ್ಚುತ್ತದೆ.
- ರೋಗ ನಿರೋಧಕ ಶಕ್ತಿಯೂ ಬರುತ್ತದೆ.

ಪೋಷಕಾಂಶ ಬಳಕೆ ಹೆಚ್ಚಿಸುತ್ತದೆ ಮತ್ತು ರಸಗೊಬ್ಬರದ ಪರಿಣಾಮಕಾರಿತ್ವ:
- ಪೋಟಾಶಿಯಂ ಹ್ಯೂಮೇಟ್ ಒಂದು ನೈಸರ್ಗಿಕ ಚೀಲೇಟರ್ (Chelator) ಆಗಿ ಕಾರ್ಯನಿರ್ವಹಿಸುತ್ತದೆ.
- ಇದು ನೈಟ್ರೋಜನ್, ಫಾಸ್ಫರಸ್, ಫ಼ೆರಸ್ (ಕಬ್ಬಿಣಾಂಶ), ಜಿಂಕ್ ಮುಂತಾದ ಪೋಷಕಾಂಶಗಳೊಂದಿಗೆ ಸೇರಿಕೊಂಡು ಸಸ್ಯಗಳಿಗೆ ಅವುಗಳನ್ನು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ.
- ಇದರಿಂದ ರಸಗೊಬ್ಬರದ ಉಪಯೋಗಿತ್ವ ಹೆಚ್ಚುತ್ತದೆ, ಹಾಗೂ ಬೆಳೆಗಾರರು ಖರ್ಚು ಕಡಿಮೆಮಾಡಿಕೊಂಡು ಉತ್ತಮ ಪಸಲು ಪಡೆಯಬಹುದು.
- NPK ಗೊಬ್ಬರದ ಜೊತೆಗೆ ಫರ್ಟಿಗೇಶನ್ ಅಥವಾ ಪತ್ರ ಸಿಂಚನದ (Folier spray)ಮೂಲಕ ನೀಡಿದರೆ, ಸಸ್ಯಗಳು ಪೋಷಕಾಂಶಗಳನ್ನು ಹೆಚ್ಚು ಬಳಕೆ ಮಾಡಿಕೊಂಡು, ಪತ್ರ ಹರಿತ್ತು ಉತ್ಪತ್ತಿಗೆ ಪ್ರೇರೇಪಿಸುತ್ತದೆ.
- ಈ ಪರಿಣಾಮವಾಗಿ ಬೆಳೆಯ ವೇಗ ಹೆಚ್ಚುತ್ತದೆ. ಗಟ್ಟಿ ಸ್ಥೂಲ ಗೆಲ್ಲು (Shoots) ರಚನೆ, ಹೆಚ್ಚು ಹೂ ಬಿಡುವಿಕೆ ಮತ್ತು ಫಸಲು ಜಾಸ್ತಿ ಆಗುತ್ತದೆ.
- ಇದನ್ನು ದಾಳಿಂಬೆ, ಬಾಳೆಹಣ್ಣು, ಪಪ್ಪಾಯಿ, ಡಬ್ಬಿ ಮೆಣಸಿನಕಾಯಿ ಮುಂತಾದ ಬೆಳೆಗಳಲ್ಲಿ ವಿಶಿಷ್ಟವಾಗಿ ನೋಡಬಹುದು.
ಹೂ ಬಿಡುವಿಕೆ ಮತ್ತು ಫಲದ ಉತ್ಕೃಷ್ಟತೆ
- ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ, ಹೂ ಬಿಡುವಿಕೆ ಮತ್ತು ಫಲ ಕಚ್ಚುವಿಕೆಯ ಹಂತಗಳು ಬಹುಮುಖ್ಯವಾದವು.
- ಇವು ಬೆಳೆಯ ಉತ್ಪಾದನೆ ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತವೆ.
- ಪೋಟಾಶಿಯಂ (ಪೋಟಾಶಿಯಂ ಹ್ಯೂಮೇಟ್‌ನಲ್ಲಿ ಪ್ರಮುಖ ಅಂಶ) ಹೂ ಮೊಗ್ಗುಗಳ ಆರಂಭ, ಪರಾಗರೇಣುಗಳ ಸಜೀವತೆ ಮತ್ತು ಫಲ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
- ಹ್ಯೂಮಿಕ್ ಪದಾರ್ಥಗಳು ಸಸ್ಯಗಳಲ್ಲಿ ಆಸಿನ್ ಮತ್ತು ಸೈಟೋಕೈನಿನ್ ಮುಂತಾದ ಹಾರ್ಮೋನು ಚಟುವಟಿಕೆಯನ್ನು ಉತ್ತೇಜಿಸುತ್ತವೆ.
- ಫಲಿತಾಂಶವೆಂದರೆ ಅಧಿಕ ಹೂ ಬಿಡುವಿಕೆ, ಹೆಚ್ಚು ಫಲ ಮತ್ತು ತೀವ್ರ ಉಷ್ಣತೆ ಅಥವಾ ತೇವಾಂಶದ ಅಸ್ಥಿರತೆಯಂತಹ ಒತ್ತಡ ಪರಿಸ್ಥಿತಿಗಳಲ್ಲೂ ಉತ್ತಮ ಫಲಿತಾಂಶ ಕೊಡುತ್ತದೆ.

ಒತ್ತಡ ತಡೆ ಮತ್ತು ರೋಗ ನಿರೋಧಕ ಶಕ್ತಿ
- ಹವಾಮಾನದ ಕಾರಣದಿಂದಾಗುವ ಕೆಲವು ಬೆಳವಣಿಗೆ ಒತ್ತಡಗಳು (Stress), ಒಣಗುವುದು ಅಥವಾ ಕೀಟನಾಶಕ, ರೋಗನಾಶಕಗಳ ಅಧಿಕ ಬಳಕೆ ಮುಂತಾದ ಪರಿಸ್ಥಿತಿಗಳು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತವೆ.
- ಇದು ಸಸ್ಯಗಳ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಗಟ್ಟಿಗೊಳಿಸಿ, ಕಣಗಳಲ್ಲಿ (Cells)ತೇವಾಂಶವನ್ನು ನಿಯಂತ್ರಿಸಿ ಆಂಟಿಆಕ್ಸಿಡೆಂಟ್ ಕ್ರಿಯೆಗಳನ್ನು ಹೆಚ್ಚಿಸುವ ಮೂಲಕ ಒತ್ತಡ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ಕೊಡುತ್ತದೆ.
ಇದರ ಜೊತೆಗೆ ಹ್ಯೂಮೇಟ್ ಬಳಕೆ ಸಸ್ಯಗಳನ್ನು ಶಕ್ತಿಶಾಲಿ ಮತ್ತು ರೋಗನಿರೋಧಕವಾಗಿಸಿ ಶಿಲೀಂದ್ರ, ಬ್ಯಾಕ್ಟೀರಿಯಾ ಅಥವಾ ವೈರಲ್ ರೋಗಗಳಿಂದ ರಕ್ಷಿಸುತ್ತದೆ. ಇದು ವಿಶೇಷವಾಗಿ ಮಾವು, ಸೀಬೆ, ಕಿತ್ತಳೆ ಮುಂತಾದ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಅನೇಕ ಕಾಲ ಅವಧಿಗೆ ಆರೋಗ್ಯ ಕಾಪಾಡಲು ಉಪಯುಕ್ತ.
ಮಣ್ಣಿನ ಪುನರ್ ಉತ್ಥಾನ ಮತ್ತು ಸುಸ್ಥಿರತೆ:
- ರಸಗೊಬ್ಬರಗಳನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಿದಾಗ ಮಣ್ಣಿನ ಶಕ್ತಿ ಕುಗ್ಗುತ್ತದೆ.
- ಪೋಷಕಾಂಶಗಳ ಬಂಧನ ಸ್ಥಿತಿ (Bonding) ಸೃಷ್ಟಿಸುತ್ತವೆ.
- ಪೋಟಾಶಿಯಂ ಹ್ಯೂಮೇಟ್ ಮಣ್ಣಿನ ಜೀವ ಚಟುವಟಿಕೆಯನ್ನು ಪುನರ್ಜೀವನಗೊಳಿಸಿ, ಸಸ್ಯಾವಶೇಷ ಹಾಗೂ ಸಾವಯವ ಇಂಗಾಲದ ಅಂಶ ಹೆಚ್ಚಿಸುವ ಮೂಲಕ ಮಣ್ಣಿನ ಶಕ್ತಿಯ ಹೆಚ್ಚಳಕ್ಕೆ ಸಹಾಯಮಾಡುತ್ತದೆ.
ಇದು ಪರಿಸರ ಸ್ನೇಹಿ, ಜೈವಿಕ ಕೃಷಿಗೆ ಅನುಗುಣವಾದದ್ದಾಗಿದ್ದು, ಶಾಶ್ವತ ತೋಟಗಾರಿಕೆ ಪದ್ಧತಿಗೆ ಅತ್ಯುತ್ತಮವಾಗಿದೆ. ಇದರಿಂದ ಪೋಷಕಾಂಶ ನಶ್ಟ (leaching) ಕಡಿಮೆಯಾಗುತ್ತದೆ, ಪರಿಸರ ಮಾಲಿನ್ಯ ತಗ್ಗುತ್ತದೆ ಮತ್ತು ಜೀವಂತ ಮಣ್ಣು ನಿರ್ಮಾಣವಾಗುತ್ತದೆ.
ಪೊಟ್ಯಾಶಿಯಂ ಹ್ಯೂಮೇಟ್ ಹರಳು ರೂಪದಲ್ಲಿ, ಕ್ರಿಸ್ಟಲ್ ರೂಪದಲ್ಲಿ, ದ್ರವ ರೂಪದಲ್ಲಿ ಲಭ್ಯ. ಕ್ರಿಸ್ಟಲ್ (Flake) ರೂಪದ ಮೂಲವಸ್ತುವಿನಲ್ಲಿ 12-18% ಪೊಟ್ಯಾಶ್ ಮತ್ತು ದ್ರವ ರೂಪದಲ್ಲಿ 1-3% ಪೊಟ್ಯಾಶ್ ಇರುತ್ತದೆ. ಈಗ ಇದು ಸೂಪರ್ ಪೊಟ್ಯಾಶಿಯಂ ಹ್ಯೂಮೇಟ್ ಎಂದು ಕರೆಯಲ್ಪಡುತ್ತದೆ.
ಪೋಟಾಶಿಯಂ ಹ್ಯೂಮೇಟ್ ಒಂದು ಪೊಷಕಾಂಶ ಮಾತ್ರವಲ್ಲ, ಇದು ಆಧುನಿಕ ತೋಟಗಾರಿಕೆಯ ಪರಿಕಲ್ಪನೆಯ ಪ್ರಮುಖ ಭಾಗವಾಗಿದೆ. ಬೇರು ಬೆಳವಣಿಗೆ, ಪೋಷಕಾಂಶ ಲಭ್ಯತೆ, ಹೂ ಪ್ರೇರಣೆ, ಫಲ ಹೆಚ್ಚಳ ಮತ್ತು ಒತ್ತಡದ ವಿರುದ್ಧ ರಕ್ಷಣೆ ಕೊಡುವಲ್ಲಿಯೂ ಸಹಾಯಮಾಡುತ್ತದೆ. ಈ ಪದಾರ್ಥವು ಹೆಚ್ಚಿನ ಲಾಭದಾಯಕತೆ ಮತ್ತು ಶಾಶ್ವತತೆಗೆ ಸಹಕಾರಿಯಾಗುತ್ತದೆ. ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಸಂಪತ್ತು ಸಂರಕ್ಷಣೆಯ ಪ್ರಾಮುಖ್ಯತೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಪೋಟಾಶಿಯಂ ಹ್ಯೂಮೇಟ್ ಮುಂದಿನ ತಲೆಮಾರಿನ ತೋಟಗಾರಿಕೆಗಳಿಗೆ ಪ್ರಮುಖ ಪರಿಹಾರವಾಗಿ ಹೊರಹೊಮ್ಮುತ್ತಿದೆ.

ಎಲ್ಲಿ ಸಿಗುತ್ತೆ ಅಂತ ತಿಳಿಸುವಿರಾ?
contact 9373303708 karthik he is the rep of one supplier company. only 20 kg bag available.