ನಾವು ಬೆಳೆಯುವ ಬೆಳೆಗಳು ಸಮರ್ಪಕವಾಗಿ ಪೋಷಕಾಂಶ ಬಳಕೆ ಮಾಡಿಕೊಳ್ಳಲು ಸೂಕ್ತ ವಾತಾವರಣ ಪ್ರಾಮುಖ್ಯ. ಆರೋಗ್ಯವಂತ ವ್ಯಕ್ತಿಗೆ ತಿಂದ ಆಹಾರ ಮೈಗೆ ಹೇಗೆ ತೆಗೆದುಕೊಳ್ಳುತ್ತದೆಯೋ ಹಾಗೆಯೇ ಸಸ್ಯಗಳಿಗೂ ಸಹ. ಆದ ಕಾರಣ ಗೊಬ್ಬರ ಒಂದನ್ನೇ ಕೊಟ್ಟು ಬೆಳೆ ತೆಗೆಯುತ್ತೇವೆ ಎಂದರೆ ಅದು ಅಸಾಧ್ಯ. ಗೊಬ್ಬರಗಳನ್ನು ಸಸ್ಯಗಳು ಬಳಸಿಕೊಳ್ಳಲು ವಾತಾವರಣದ ಅನುಕೂಲ ಸ್ಥಿತಿ ಪ್ರಾಮುಖ್ಯ.
ಒಳ್ಳೆಯ ಬೆಳೆಯ ಉತ್ಪಾದನೆಗೆ ಕೇವಲ ರಾಸಾಯನಿಕ ಗೊಬ್ಬರ ಸಾಕಾಗುವುದಿಲ್ಲ. ಮಣ್ಣಿನ ಗುಣ, ತೇವಾಂಶ, ಗಾಳಿಯ ಸಂಚಾರ, ತಾಪಮಾನ ಮತ್ತು ಮಣ್ಣಿನ ಸ್ಥಿತಿಗುಣ (pH) ಹೀಗೆ ಹಲವಾರು ಪರಿಸರದ ಅಂಶಗಳು ಪೋಷಕಗಳ ಜೀರ್ಣಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇವುಗಳನ್ನು ಅರಿತುಕೊಂಡರೆ ರೈತರು ಗೊಬ್ಬರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
ಮಣ್ಣಿನ ಗುಣಲಕ್ಷಣಗಳು ಮತ್ತು ಪೋಷಕಗಳ ಲಭ್ಯತೆ:
ಮಣ್ಣು ಸಸ್ಯ ಪೋಷಣೆಯ ಮೂಲಾಧಾರ. ಇದನ್ನು ಪೋಷಕಾಂಶಗಳನ್ನು ಸಸ್ಯಗಳಿಗೆ ದೊರಕಿಸಿಕೊಡುವ ಮಧ್ಯವರ್ತಿ ಎಂದೂ ಹೇಳಬಹುದು. ಅದರ ಸಂಯೋಜನೆ ಅಥವಾ ರೂಪ (ಮರಳು, ಕೊಚ್ಚೆ , ಮೆಕ್ಕಲು ಮಣ್ಣು), ಅದರ ಜೊತೆಗೆ ಸೇರಿರುವ ಸಾವಯವ ಪದಾರ್ಥಗಳ ಪ್ರಮಾಣವು ಪೋಷಕಗಳ ಸಂಗ್ರಹ ಹಾಗೂ ಪೂರೈಕೆಯನ್ನು ನಿರ್ಧರಿಸುತ್ತದೆ.
- ಕೊಜೆ ಮಣ್ಣು ಅಥವಾ ಇಟ್ಟಿಗೆಗೆ ಬಾಸುವ ಮಣ್ಣು (Clay soil) – ಹೆಚ್ಚು ಪೋಷಕಗಳನ್ನು ಹಿಡಿದುಕೊಳ್ಳುತ್ತದೆ. ನೀರನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಅಂತಹ ಮಣ್ಣಿನಲ್ಲಿ ಬೇರು ಚಲನೆ ಕಡಿಮೆ.
- ಮರಳು ಮಣ್ಣು – ಬೇಗನೆ ನೀರು ಬೇರು ವಲಯದ ಕೆಳಗೆ ಇಳಿದು ಹೋಗುತ್ತದೆ. ಪೋಷಕಗಳ ಜಾರಿ ಹೋಗುವ ಸಾಧ್ಯತೆ ಹೆಚ್ಚು.
- ಮರಳು ಮಿಶ್ರ ಮಣ್ಣು – (loamy soil) ಸಮತೋಲನವಾಗಿದ್ದು ಪೋಷಕಾಂಶ, ತೇವಾಂಶ ಹಾಗೂ ಗಾಳಿಯನ್ನು ಚೆನ್ನಾಗಿ ಹಿಡಿದುಕೊಳ್ಳುತ್ತದೆ.
ಸಾವಯವ ಪದಾರ್ಥ (ಹುಮ್ಮಸ್) ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಪೋಷಕಗಳನ್ನು ನಿಧಾನವಾಗಿ ಸಸಿಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಮಣ್ಣಿನಲ್ಲಿ ಮರಳು ಹರಳು ಕಲ್ಲುಗಳ ಪ್ರಮಾಣ ಹೆಚ್ಚು ಇದ್ದರೆ ಸಾವಯವ ಅಂಶ ಸೇರ್ಪಡೆಯಾದಾಗ ಅದು ಸಮಸ್ಥಿತಿಗೆ ಬರುತ್ತದೆ.

ಮಣ್ಣಿನ ತೇವಾಂಶ ಮತ್ತು ಪೋಷಕಾಂಶ ಲಭ್ಯತೆ:
ನೀರು ಪೋಷಕಾಂಶಗಳ ವಾಹಕ. ಬೇರುಗಳು ಪೋಷಕಗಳನ್ನು ನೀರಿನಲ್ಲಿ ಕರಗಿದ ರೂಪದಲ್ಲಿ ಹೀರಿಕೊಳ್ಳುತ್ತವೆ. ಮಣ್ಣಿನಲ್ಲಿ ನೀರು ಎಂಬುದು ತೇವಾಂಶ ರೂಪದಲ್ಲಿ ಇರಬೇಕು. ಅಂದರೆ 60 -70% ದಷ್ಟು ತೇವಾಂಶ ಇದ್ದರೆ ಸಾಕು. 80-90 % ತೇವಾಂಶ ಇದ್ದರೆ ಬೇರಿಗೆ ತೊಂದರೆ ಉಂಟಾಗುತ್ತದೆ. ಹಾಗಾಗಿ ಮಣ್ಣಿನಲ್ಲಿ ತೇವಾಂಶವನ್ನು ಬೇಕಾದಷ್ಟೇ ಕಾಪಾಡಿಕೊಳ್ಳುವುದು ಪೊಷಕಾಂಶ ಸರಿಯಾಗಿ ಲಭ್ಯವಾಗುವ ದೃಷ್ಟಿಯಿಂದ ಅತ್ಯವಶ್ಯಕ.
- ಸರಿಯಾದ ತೇವಾಂಶ ಇದ್ದಾಗ – ಪೋಷಕಗಳು ಬೇರುಗಳಿಗೆ ಸುಲಭವಾಗಿ ತಲುಪುತ್ತವೆ.
- ಹೆಚ್ಚಿನ ನೀರು (ಜಲಾವೃತ) – ಆಮ್ಲಜನಕ ಕೊರತೆ ಉಂಟಾಗಿ ನೈಟ್ರೋಜನ್ ಮುಂತಾದವು ಜಾರಿ ಹೋಗುತ್ತವೆ.
- ಕಡಿಮೆ ತೇವಾಂಶ – ಪೋಷಕಗಳ ಚಲನೆ ನಿಧಾನವಾಗಿ, ಕೊರತೆ ಲಕ್ಷಣಗಳು ಗೋಚರಿಸುತ್ತವೆ.
ಅದಕ್ಕಾಗಿ ನೀರಾವರಿ ನಿರ್ವಹಣೆ ಅತ್ಯಗತ್ಯ.
ಮಣ್ಣಿನ ಗಾಳಿಯ ಸಂಚಾರ:
ಬೇರುಗಳು ಉಸಿರಾಡಲು ಆಮ್ಲಜನಕ ಬೇಕು. ಮಣ್ಣು ಗಟ್ಟಿಯಾದರೆ ಅಥವಾ ನೀರು ತುಂಬಿದರೆ, ಬೇರು ಉಸಿರಾಟ ಕುಂಠಿತವಾಗುತ್ತದೆ, ಇದರಿಂದ ಪೋಷಕಾಂಶ ಬಳಕೆ ಕಡಿಮೆಯಾಗುತ್ತದೆ.
- ಗಾಳಿಯ ಸಂಚಾರ ಉತ್ತಮವಾದರೆ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಗಿ ನೈಟ್ರೋಜನ್, ಫಾಸ್ಫರಸ್, ಗಂಧಕ ಮುಂತಾದವು ಬಿಡುಗಡೆ ಆಗುತ್ತವೆ.
- ಗಾಳಿ ಕೊರತೆಯಿಂದ ಬೇರು ಘಾಸಿಯಾಗುವುದು, ಪೋಷಕಾಂಶ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಕೊಡಮಾಡಲ್ಪಟ್ಟ ಪೊಷಕಾಶಗಳು ಸರಿಯಾಗಿ ಲಭ್ಯವಾಗದೆ ನಷ್ಟವಾಗುತ್ತದೆ.
ಮಣ್ಣಿನ ತಾಪಮಾನ:
ಮಣ್ಣಿನ ತಾಪಮಾನ ಅಥವಾ ಬಿಸಿ, ಶಾಖ ಬೇರುಗಳ ಚಟುವಟಿಕೆ ಮತ್ತು ಪೋಷಕಗಳ ಲಭ್ಯತೆಗೆ ನೇರ ಪರಿಣಾಮ ಬೀರುತ್ತದೆ.
- ಬಿಸಿ ಮಣ್ಣು – ಬೇರು ಬೆಳವಣಿಗೆ ವೇಗವಾಗಿ, ನೈಟ್ರೋಜನ್ ಮತ್ತು ಪೊಟಾಶಿಯಂ ಹೆಚ್ಚು ಲಭ್ಯ. ಹಾಗಾಗಿ ಬೇಸಿಗೆಯ ಸಮಯದಲ್ಲಿ ಸಸ್ಯಗಳ ಬೆಳವಣಿಗೆ ಹೆಚ್ಚು. ಆಹಾರ ಅವಶ್ಯಕತೆಯೂ ಹೆಚ್ಚು.
- ತಣ್ಣನೆಯ ಮಣ್ಣು – ಬೇರು ಚಟುವಟಿಕೆ ನಿಧಾನ, ವಿಶೇಷವಾಗಿ ಫಾಸ್ಫರಸ್ ಲಭ್ಯತೆ ಕಡಿಮೆ. ಮಳೆಗಾಲದಲ್ಲಿ ಈ ಸನ್ನಿವೇಶ ಉಂಟಾಗುತ್ತದೆ. ಹಾಗಾಗಿ ಸಸ್ಯಗಳಲ್ಲಿ ಬೆಳವಣಿಗೆ ಕಡಿಮೆಯಾಗಿ ರೋಗ ರುಜಿನಗಳಿಗೆ ತುತ್ತಾಗುವುದೂ ಇರುತ್ತದೆ.
ಮಲ್ಚಿಂಗ್, ಬಸಿಗಾಲುವೆ ಮುಂತಾದ ವ್ಯವಸ್ಥೆಗಳಿಂದ ಸ್ವಲ್ಪಮಟ್ಟಿಗೆ ಮಣ್ಣಿನ ತಾಪಮಾನ ಸಮತೋಲನಕ್ಕೆ ತರಬಹುದು..
ಮಣ್ಣಿನ ರಸಸಾರ ಅಥವಾ ಸ್ಥಿತಿಗುಣ (pH):
ಮಣ್ಣಿನ ಆಮ್ಲತ್ವ ಅಥವಾ ಕ್ಷಾರತ್ವವು ಪೋಷಕಾಂಶ ಲಭ್ಯತೆಯನ್ನು ನಿರ್ಧರಿಸುತ್ತದೆ.
- ಆಮ್ಲ ಮಣ್ಣು (ಕಡಿಮೆ pH) – ಫಾಸ್ಫರಸ್, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಕಡಿಮೆ ಲಭ್ಯ.
- ಕ್ಷಾರ ಮಣ್ಣು (ಹೆಚ್ಚು pH) – ಕಬ್ಬಿಣ, ಜಿಂಕ್, ಮ್ಯಾಂಗನೀಸ್ ಮುಂತಾದವು ಸಸಿಗಳಿಗೆ ತಲುಪುವುದಿಲ್ಲ.
- ತಟಸ್ಥ ಮಣ್ಣು (6–7 pH) – ಬಹುತೇಕ ಪೋಷಕಾಂಶಗಳು ಕರಗುವ ರೂಪದಲ್ಲಿ ಲಭ್ಯ.
ಅಮ್ಲತ್ವ ಕಡಿಮೆ ಮಾಡಲು ಲೈಮ್, ಕ್ಷಾರತ್ವ ಕಡಿಮೆ ಮಾಡಲು ಜಿಪ್ಸಂ ಅಥವಾ ಗಂಧಕ ಉಪಯುಕ್ತ. ಮಣ್ಣಿನಲ್ಲಿ ಕಣ್ಣಿಗೆ ಕಾಣುವ ಜೀವಾಣುಗಳಾದ ಎರೆ ಹುಳ, ಸಹಸ್ರಪದಿ, ಗಂಗೆ ಹುಳ ಮುಂತಾದವುಗಳು ಹಾಗೆಯೇ ಇರುವೆಗಳು ಇದ್ದರೆ ಸಸ್ಯಗಳ ಅಗತ್ಯಕ್ಕೆ ತಕ್ಕಂತೆ ರಸ ಸಾರ ಇದೆ ಎಂದು ತಿಳಿಯಬಹುದು. ಇವು ಆಮ್ಲೀಯ ಮಣ್ಣಿನಲ್ಲಿ ಕಡಿಮೆ ಇರುತ್ತವೆ.
ಮಣ್ಣಿನಲ್ಲಿನ ಪೋಷಕಾಂಶಗಳ ಬಂಧನ:
ಪೋಷಕಾಂಶಗಳು ಮಣ್ಣಿನಲ್ಲಿ ವಿಭಿನ್ನ ರೂಪದಲ್ಲಿ ಇರುತ್ತವೆ. ಕೆಲವು ಲಭ್ಯಸ್ಥಿತಿಯಲ್ಲೂ ಇನ್ನು ಕೆಲವು ಅಲಭ್ಯ ಸ್ಥಿತಿ ಅಥವಾ ಬಂಧಿತ ಸ್ಥಿತಿಯಲ್ಲಿಯೂ ಇರುತ್ತದೆ.
- ಪೋಷಕಗಳಾದ (ಪೊಟ್ಯಾಶ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಇವು – ಮಣ್ಣಿನ ಕಣಗಳಿಗೆ ಅಂಟಿಕೊಂಡು ಬೇರುಗಳೊಂದಿಗೆ ವಿನಿಮಯಗೊಳ್ಳುತ್ತವೆ.
- ನೈಟ್ರೇಟುಗಳು ಮತ್ತು ಗಂಧಕ ನೀರಿನೊಂದಿಗೆ ಸುಲಭವಾಗಿ ಚಲಿಸುತ್ತವೆ ಆದರೆ ಬೇಗನೆ ಜಾರಿ ಹೋಗುತ್ತವೆ.
- ಜೈವಿಕ ಅಥವಾ ಸಾವಯವ ಪದಾರ್ಥ ಮತ್ತು ಮಣ್ಣಿನ ಕಣಗಳು ಪೋಷಕಗಳನ್ನು ಸಡಿಲವಾಗಿ ಹಿಡಿದು ಬೇರುಗಳಿಂದ ಬೇಡಿಕೆಯಾದಾಗ ಬಿಡುಗಡೆ ಮಾಡುತ್ತವೆ.
ಸೂಕ್ತ ಮಣ್ಣು ಮತ್ತು ವಾತಾವರಣ ಸನ್ನಿವೇಶ:
ಪೋಷಕಾಂಶಗಳ ಗರಿಷ್ಠ ಬಳಕೆಗಾಗಿ ಕೆಳಗಿನ ಅಂಶಗಳು ಅಗತ್ಯ.
- ಮಣ್ಣು – ಮರಳು ಮಿಶ್ರ ಮೆಕ್ಕಲು ಮಣ್ಣು, ಜೈವ ಪದಾರ್ಥ ಸಮೃದ್ಧ.
- ತೇವಾಂಶ – ಸಾಕಷ್ಟು ಆದರೆ ಜಲಾವೃತವಿಲ್ಲದಂತೆ ನೀರಾವರಿ ಮಾಡಬೇಕು.
- ಗಾಳಿಯ ಸಂಚಾರ – ಮಣ್ಣು ಸಡಿಲವಾಗಿದ್ದಾಗ ಉತ್ತಮ ನೀರು ಇಳಿಕೆ, ಬೇರುಗಳಿಗೆ ಆಮ್ಲಜನಕ ಲಭ್ಯ.
- ತಾಪಮಾನ – ಬೇರು ಬೆಳವಣಿಗೆಗೆ ಸೂಕ್ತವಾದ ಮಧ್ಯಮ ಬಿಸಿ.
- pH – 6–7 ನಡುವೆ.
- ಸಮತೋಲನ ಗೊಬ್ಬರ – ಸರಿಯಾದ ಗೊಬ್ಬರ, ಸರಿಯಾದ ಸಮಯ, ಸರಿಯಾದ ವಿಧಾನ.
ಸಸ್ಯಗಳು ಗೊಬ್ಬರದಿಂದ ಮಾತ್ರ ಬೆಳೆವುದಿಲ್ಲ; ಮಣ್ಣಿನ ಗುಣಲಕ್ಷಣ ಮತ್ತು ಪರಿಸರದ ಸ್ಥಿತಿಗಳು ಪೋಷಕಾಂಶ ಶೋಷಣೆಗೆ ಅವಶ್ಯಕ. ಮಣ್ಣಿನ ಆರೋಗ್ಯ, ತೇವಾಂಶ, ಗಾಳಿಯ ಸಂಚಾರ, ತಾಪಮಾನ ಮತ್ತು pH ನಿರ್ವಹಣೆ ಮಾಡಿದರೆ ಸಸ್ಯಗಳು ಆರೋಗ್ಯವಾಗಿ ಬೆಳೆಯುತ್ತವೆ, ರೋಗಗಳಿಗೆ ಪ್ರತಿರೋಧ ಹೊಂದುತ್ತವೆ ಹಾಗೂ ಹೆಚ್ಚಿನ ಉತ್ಪಾದನೆ ನೀಡುತ್ತವೆ. ಇದಕ್ಕೆ ಹೇಳುವುದು ಮಣ್ಣಿಗೆ ಜೀವ ಇದೆ. ಅದರ ಜೀರ್ಣ ಶಕ್ತಿಗೆ ಅನುಕೂಲಕರ ಸ್ಥಿತಿ ನಿರ್ಮಿಸಿ, ಅಲ್ಲಿ ಉತ್ಪಾದನೆ ಪಡೆಯಬೇಕು.
