ಸುಣ್ಣ ಬಳಕೆ ಮಾಡದೆ ಮಣ್ಣಿನ ಆರೋಗ್ಯ ಕಾಪಾಡಿ – ನೈಸರ್ಗಿಕವಾಗಿ ಮಣ್ಣಿನ ಸಮತೋಲನ ಕಾಪಾಡುವ ಮಾರ್ಗ

Keep Your Soil Healthy Without Lime – The Natural Way to Maintain Neutral Soil

ನೈಸರ್ಗಿಕ ರೀತಿಯಲ್ಲಿ ಮಣ್ಣಿನ  ರಸಸಾರದ ಸಮತೋಲನದಿಂದ (ನ್ಯೂಟ್ರಲ್) ಆರೋಗ್ಯವನ್ನು ಕಾಯ್ದುಕೊಳ್ಳುವುದು ಯಾವಾಗಲೂ ಲಾಭದಾಯಕ. ಮಣ್ಣಿನ ಸ್ಥಿತಿ ತಿಳಿಯದೇ ಸುಣ್ಣವನ್ನು, ಅಸಮತೋಲನ ರಸಗೊಬ್ಬರಗಳನ್ನು ಅಥವಾ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ರೈತರ ಕಷ್ಟಪಟ್ಟು ಗಳಿಸಿದ ಹಣ ವ್ಯರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಅಡಿಕೆ ರೈತರು ಪೋಷಕಾಂಶ ನಿರ್ವಹಣೆಯ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ ಹಲವರು ಮಣ್ಣಿನ ಆರೋಗ್ಯ, ಸಸ್ಯಶಾಸ್ತ್ರ ಅಥವಾ ಪೋಷಕಾಂಶಗಳ ಪಾತ್ರ ತಿಳಿಯದೇ, ಇತರರನ್ನು ಅನುಸರಿಸುತ್ತಿದ್ದಾರೆ. ಈ ಅಜ್ಞಾನವನ್ನು ಕೆಲವು ಉತ್ಪನ್ನ ಮಾರಾಟಗಾರರು ದುರುಪಯೋಗಪಡಿಸಿಕೊಂಡಿದ್ದಾರೆ.

ಮಣ್ಣಿನ pH ಅರ್ಥ ಮಾಡಿಕೊಳ್ಳುವುದು

ಮಣ್ಣಿನ pH ಎನ್ನುವುದು ಮಣ್ಣು ಆಮ್ಲೀಯ (acidic), ಸಮತೋಲನ (neutral) ಅಥವಾ ಕ್ಷಾರೀಯ (alkaline) ಆಗಿದೆಯೆ ಎಂಬುದನ್ನು ಸೂಚಿಸುತ್ತದೆ. ಇದನ್ನು ರಸ ಸಾರ ಎನ್ನುತ್ತಾರೆ.

  • 6.0 ಕ್ಕಿಂತ ಕಡಿಮೆ – ಆಮ್ಲೀಯ ಮಣ್ಣು
  • 6.0 – 7.0 – ಸಮತೋಲನ ಅಥವಾ ಸ್ವಲ್ಪ ಆಮ್ಲೀಯ (ಉತ್ತಮ ಮಟ್ಟ)
  • 7.0 ಕ್ಕಿಂತ ಹೆಚ್ಚು – ಕ್ಷಾರೀಯ ಮಣ್ಣು

ಮಣ್ಣು ತುಂಬಾ ಆಮ್ಲೀಯವಾಗಿದರೆ, ಹೆಚ್ಚಿನ ಉಪಯುಕ್ತ ಸೂಕ್ಷ್ಮಜೀವಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹಾನಿಕಾರಕ ಜೀವಾಣುಗಳು ಹೆಚ್ಚಾಗುತ್ತವೆ. ಹೊಲದ ಮಣ್ಣಿನಲ್ಲಿ  ಹೆಚ್ಚು ಸಮಯದ ತನಕ ನೀರು ತುಂಬಿಕೊಂಡಾಗ ಅಥವಾ ಹೆಚ್ಚು ನೀರು ಕುಡಿದಾಗ  ಅದು ಹಳಸಲು ಅಗಿ ಆಮ್ಲೀಯವಾಗುತ್ತದೆ.  ಬೇರುಗಳು ಉಸಿರಾಡಲು ಸಾಧ್ಯವಾಗದೆ ಬೆಳವಣಿಗೆ ದುರ್ಬಲವಾಗುತ್ತದೆ. ಪೊಷಕಾಂಶಗಳು ಸಮರ್ಪಕವಾಗಿ ಲಬ್ಯವಾಗದೆ ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ.ಉತ್ಪಾದನೆ ಕಡಿಮೆಯಾಗುತ್ತದೆ. ರೋಗ ರುಜಿನಗಳು ಹೆಚ್ಚಾಗುತ್ತದೆ.

ಸಾವಯವ ಪದಾರ್ಥ – ನೈಸರ್ಗಿಕ ಸಮತೋಲನಕಾರಕ

ಮಣ್ಣಿನ ಸಮತೋಲನ ಕಾಯ್ದುಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಸಾವಯವ ಪದಾರ್ಥಗಳ ನಿರಂತರ ಬಳಕೆ. ಇದೇ ಮಣ್ಣಿನ ಆರೋಗ್ಯ.
ಮಣ್ಣಿನ ಸಮತೋಲನ ಕಾಯ್ದುಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಸಾವಯವ ಪದಾರ್ಥಗಳ ನಿರಂತರ ಬಳಕೆ. ಇದೇ ಮಣ್ಣಿನ ಆರೋಗ್ಯ.

ಮಣ್ಣಿನ ಸಮತೋಲನ ಕಾಯ್ದುಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಸಾವಯವ ಪದಾರ್ಥಗಳ ನಿರಂತರ ಬಳಕೆ. ಸಾವಯವ ಪದಾರ್ಥಗಳು ನೈಸರ್ಗಿಕ pH ನಿಯಂತ್ರಕ ಮತ್ತು ಪೋಷಕಾಂಶ ಭಂಡಾರವಾಗಿವೆ. ಯಾವಾಗಲೂ ಸಾವಯವ ಗೊಬ್ಬರ ಸ್ಥೂಲ (Bulk quantity) ಆಗಿರಬೇಕು.
ಉತ್ತಮ ಸಾವಯವ ಮೂಲಗಳು:

  • ಚೆನ್ನಾಗಿ ಹುಡಿಯಾದ ಹಟ್ಟಿ ಗೊಬ್ಬರ (FYM)
  • ಬೆಳೆ ಅವಶೇಷಗಳು (Crop residues)ಮತ್ತು ಹಸಿರು ತ್ಯಾಜ್ಯದಿಂದ ತಯಾರಿಸಿದ ಕಂಪೋಸ್ಟ್
  • ಗ್ಲೆರಿಸೀಡಿಯಾ ಸೊಪ್ಪು, ಕಾಡು ಗುಡ್ಡದ ಹಸುರುಸೊಪ್ಪು , ಸುನಹೆಂಪ್, ಧೈಂಚಾ, ಹುರಳಿ ಮುಂತಾದ ಹಸಿರು ಗೊಬ್ಬರ ಬೆಳೆಗಳು
  • ಎರೆಹುಳುಗೊಬ್ಬರ (Vermicompost) ಮತ್ತು ಹಸುರು ಎಲೆಗಳ ಹುಡಿ ಗೊಬ್ಬರ.

ಈ ಪದಾರ್ಥಗಳಲ್ಲಿ ನೈಸರ್ಗಿಕ ಕಾರ್ಬನ್ ಸಂಯೋಗಗಳು ಮತ್ತು ಸಣ್ಣ ಆಮ್ಲಗಳು ಇರುತ್ತವೆ. ಅವು ಹುಡಿ ಆದಾಗ ಅಥವಾ ಕಳಿಯಲ್ಪಟ್ಟಾಗ ಸಮತೋಲನ ಪೋಷಕಾಂಶಗಳನ್ನು ಬಿಡುಗಡೆಮಾಡಿ, ಹ್ಯೂಮಸ್ ರೂಪಗೊಳ್ಳುತ್ತದೆ. ಇದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯನ್ನು ನಿಧಾನವಾಗಿ ಮತ್ತು ಸುರಕ್ಷಿತವಾಗಿ ಸಮತೋಲನಗೊಳಿಸುತ್ತದೆ.

ಪ್ರತಿ ವರ್ಷ ಕನಿಷ್ಠ ಪ್ರತಿ ಎಕರೆಗೆ 5–10 ಟನ್ ಸಾವಯವ ಪದಾರ್ಥ ಸೇರಿಸುವುದು ಮಣ್ಣನ್ನು ಸಡಿಲಗೊಳಿಸಿ, ಗಾಳಿ ಹಾದು ಹೋಗಲು ಅನುಕೂಲ ಮಾಡುತ್ತದೆ ಮತ್ತು ಉಪಯುಕ್ತ ಜೀವಾಣುಗಳ ಬದುಕನ್ನು ಪ್ರೋತ್ಸಾಹಿಸುತ್ತದೆ.

ಭೂಹುಳುಗಳು ಮತ್ತು ಸೂಕ್ಷ್ಮಜೀವಿಗಳು – ಆರೋಗ್ಯಕರ ಮಣ್ಣಿನ ಸೂಚಕಗಳು

ಮಣ್ಣಿನಲ್ಲಿ ಜೀವಗಳ ಹಾಜರಾತಿ ನೋಡಿದರೆ ಅದರ pH ಮತ್ತು ಸ್ಥಿತಿ ಗೊತ್ತಾಗುತ್ತದೆ.ಮಣ್ಣು ಆರೋಗ್ಯವಾಗಿದ್ದರೆ ಮಾತ್ರ ಅದರಲ್ಲಿ ಈ ಎಲ್ಲಾ ಹುಳಗಳು ಬದುಕುತ್ತಾ ಇರುತ್ತವೆ.

  • ಭೂಹುಳುಗಳು,
  • ಗೆದ್ದಳು,ಇರುವೆ,ಸಹಸ್ರಪದಿ, ಗಂಗೆ ಹುಳ
  • ಹುಳು ಲಾರ್ವಾಗಳು,
  • ಹಾಗೂ ಇತರ ಚಿಕ್ಕ ಸಾವಯವ ವಸ್ತು ಭಕ್ಷಕಗಳು.

ಈ ಜೀವಿಗಳು ಸಮತೋಲನ ಮತ್ತು ಗಾಳಿಯುಳ್ಳ ಮಣ್ಣಿನಲ್ಲಿ ಮಾತ್ರ ಸಕ್ರೀಯವಾಗಿರುತ್ತವೆ. ಮಣ್ಣನ್ನು ಕೆರೆದು ನೋಡಿದಾಗ  ಇಂಥಹ ಹುಳುಗಳು ಕಂಡುಬಂದರೆ, ಅದು ನಿಮ್ಮ ಮಣ್ಣು ಉತ್ತಮ ಸಾವಯವಾಂಶ ಮತ್ತು ಸಮತೋಲನ pH ಹೊಂದಿದೆ ಎಂಬುದಕ್ಕೆ ನಿದರ್ಶನ. ಆದರೆ ಮಣ್ಣು ನೀರಿನಿಂದ ತುಂಬಿಕೊಂಡು ಅಥವಾ ಕಠಿಣವಾಗಿ ಜೀವವಿಲ್ಲದ ಸ್ಥಿತಿಯಲ್ಲಿ ಇದ್ದರೆ, ಅದು ಆಮ್ಲೀಯ ಮತ್ತು ಆಮ್ಲಜನಕ ಕೊರತೆಗೊಂಡಿದೆ ಎಂಬುದಕ್ಕೆ ಸಂಕೇತ.

ನೀರು ಬಸಿಯುವ ವ್ಯವಸ್ಥೆಯ ಮಹತ್ವ:

ಅತ್ಯುತ್ತಮ ಮಣ್ಣು ಕೂಡ ಹೆಚ್ಚು ದಿನಗಳ ಕಾಲ ನೀರು ನಿಂತಿದ್ದರೆ ಆಮ್ಲೀಯವಾಗುತ್ತದೆ. ಮಣ್ಣಿನ ರಂಧ್ರಗಳಲ್ಲಿ ಗಾಳಿ ಪ್ರವೇಶಿಸದಿದ್ದರೆ ಆಮ್ಲಜನಕ ಕೊರತೆ ಉಂಟಾಗಿ ಅನರೋಬಿಕ್ ಬ್ಯಾಕ್ಟೀರಿಯಾಗಳು ಕ್ರಿಯಾಶೀಲವಾಗುತ್ತವೆ. ಇವು ಆಮ್ಲಗಳು ಮತ್ತು ಹಾನಿಕಾರಕ ಅನಿಲಗಳನ್ನು (ಹೈಡ್ರೋಜನ್ ಸಲ್ಫೈಡ್ ಮುಂತಾದವು) ಉತ್ಪಾದಿಸುತ್ತವೆ. ಇದರಿಂದ ಉಪಯುಕ್ತ ಜೀವಾಣುಗಳು ಸತ್ತುಹೋಗುತ್ತವೆ.ನೀರು ಇದ್ದರೂ ಅದು ಸರಾಗವಾಗಿ ಹರಿದು ಹೋಗುತ್ತಾ  ಇರಬೇಕು. ನಿಂತಲ್ಲಿ ನಿಲ್ಲಬಾರದು.

ಇದನ್ನು ತಪ್ಪಿಸಲು:

  • ಹೊಲಗಳಲ್ಲಿ ಸರಿ ನೀರು ಹರಿಯುವ ಕಾಲುವೆಗಳು ಇರಲಿ.
  • ಭಾರಿ ಮಳೆ ಅಥವಾ ನೀರಾವರಿ ನಂತರ 2–3 ದಿನಕ್ಕಿಂತ ಹೆಚ್ಚು ನೀರು ನಿಂತಿರಬಾರದು.
  • ನೀರು ನಿಲ್ಲುವ ಪ್ರದೇಶಗಳಲ್ಲಿ ಬೆಳೆಗಳನ್ನು ಸ್ವಲ್ಪ ಎತ್ತರದ ಬೆಡ್ಗಳಲ್ಲಿ ಬೆಳೆಸಿರಿ.

ನೀರಿನಿಂದ ತುಂಬದ ಆದರೆ ತೇವಾಂಶ ಉಳಿಯುವ ಮಣ್ಣು ಬೇರುಗಳ ಪ್ರದೇಶವನ್ನು ಗಾಳಿಯುಳ್ಳ ಮತ್ತು ಸೂಕ್ಷ್ಮಜೀವಿಗಳಿಂದ ಸಕ್ರೀಯವಾಗಿರಿಸುತ್ತದೆ. ಇದರಿಂದ ಮಣ್ಣಿನ pH ಸ್ವಾಭಾವಿಕವಾಗಿ ಸಮತೋಲನದಲ್ಲಿರುತ್ತದೆ.

ಸುಣ್ಣವನ್ನು  ಹಾಕಿದಾಗ ಏನಾಗುತ್ತದೆ

ಮಣ್ಣು ತುಂಬಾ ಆಮ್ಲೀಯವಾದಾಗ, ರೈತರು ಸಾಮಾನ್ಯವಾಗಿ ಸುಣ್ಣವನ್ನು (ಕ್ಯಾಲ್ಸಿಯಂ ಕಾರ್ಬೋನೇಟ್) ಹಾಕುತ್ತಾರೆ. ಇದು ಆಮ್ಲೀಯ ಅಂಶಗಳೊಂದಿಗೆ ಪ್ರತಿಕ್ರಿಯಿಸಿ ಅವುಗಳನ್ನು ನ್ಯೂಟ್ರಲ್ ಲವಣಗಳಾಗಿ ಪರಿವರ್ತಿಸುತ್ತದೆ.

ಪ್ರತಿ ಚದರ ಮೀಟರ್ ಪ್ರದೇಶಕ್ಕೆ 1 ಕೆಜಿ ಸುಣ್ಣವನ್ನು ಹಾಕಿದರೆ ಸುಮಾರು 2 ರಿಂದ 3 ಇಂಚು ಮೇಲಿನ ಮಣ್ಣಿನ ಪದರ ಸಮತೋಲನಗೊಳ್ಳುತ್ತದೆ. ಆದರೆ ಸುಣ್ಣ ನಿಧಾನವಾಗಿ ಕೆಳಗಿನ ಮಣ್ಣಿಗೆ ಚಲಿಸುತ್ತದೆ. ಆದ್ದರಿಂದ ಅದನ್ನು ಚೆನ್ನಾಗಿ ಮಿಶ್ರಣ ಮಾಡದಿದ್ದರೆ ಕೆಳಗಿನ ಭಾಗ ಆಮ್ಲೀಯವಾಗಿಯೇ ಉಳಿಯುತ್ತದೆ.

ಹೆಚ್ಚು ಸುಣ್ಣ ಹಾಕಿದರೆ ಏನಾಗುತ್ತದೆ

ಅತಿಯಾಗಿ ಸುಣ್ಣ ಬಳಸುವುದರಿಂದ ಕೆಲವು ಹಾನಿಗಳು ಉಂಟಾಗುತ್ತವೆ:

  • ಸೂಕ್ಷ್ಮ ಪೋಷಕಾಂಶ ಕೊರತೆ – ಜಿಂಕ್, ಕಬ್ಬಿಣ ಮತ್ತು ಮ್ಯಾಂಗನೀಸ್ ಲಭ್ಯವಾಗುವುದಿಲ್ಲ.
  • ಸಾವಯವ ವಸ್ತು ಕರಗುವ ಚಟುವಟಿಕೆ ಕಡಿಮೆ – ಸ್ವಲ್ಪ ಆಮ್ಲೀಯತೆ ಇಷ್ಟಪಡುವ ಉಪಯುಕ್ತ ಜೀವಾಣುಗಳು ನಿಷ್ಕ್ರಿಯವಾಗುತ್ತವೆ.
  • ಮಣ್ಣು ಕಠಿಣಗೊಳ್ಳುವುದು – ಸಾವಯವ ಪದಾರ್ಥಗಳಿಲ್ಲದೆ ನಿರಂತರ ಸುಣ್ಣ ಬಳಕೆ ಮಣ್ಣಿನ ರಚನೆ ಹಾಳುಮಾಡುತ್ತದೆ.

ಆದ್ದರಿಂದ ಸುಣ್ಣ ಬಳಸುವುದಕ್ಕೆ ಮುಂಚೆ ಮಣ್ಣಿನ pH ಪರೀಕ್ಷೆ ಮಾಡಬೇಕು ಮತ್ತು ಅದನ್ನು ಸಾವಯವ ಗೊಬ್ಬರಗಳ ಜೊತೆ ಮಾತ್ರ ಸೇರಿಸಬೇಕು.

ರೈತರಿಗೆ ಮುಖ್ಯ ಸಲಹೆಗಳು

  1. ಸಾವಯವ ಪದಾರ್ಥ ಪುನರುಪಯೋಗದ ಮೂಲಕ ಮಣ್ಣಿನ pH ಕಾಪಾಡಿ – ಕಂಪೋಸ್ಟ್, FYM, ಹಸಿರು ಗೊಬ್ಬರ ಬೆಳೆಗಳು.
  2. ಭೂಹುಳು ಮತ್ತು ಸೂಕ್ಷ್ಮಜೀವಿಗಳ ಚಟುವಟಿಕೆ ನೋಡಿ ಮಣ್ಣಿನ ಆರೋಗ್ಯ ಅಂದಾಜಿಸಿ.
  3. ಸರಿಯಾದ ನೀರು ಹರಿಯುವ ವ್ಯವಸ್ಥೆ ಇರಲಿ, ನೀರು ನಿಲ್ಲದಂತೆ ಗಮನಿಸಿ.
  4. ಸುಣ್ಣ ಅಗತ್ಯವಿದ್ದಾಗ ಮಾತ್ರ ಬಳಸಿ, ಹೆಚ್ಚಾಗಿ ಹಾಕಬೇಡಿ.
  5. ಸುಣ್ಣದ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸಿ – ಇದು ಸಮತೋಲನ ಮತ್ತು ಶಾಶ್ವತ ಫಲಿತಾಂಶ ನೀಡುತ್ತದೆ.

ಈ ನೈಸರ್ಗಿಕ ಹಾಗೂ ಸಮತೋಲನ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಮಣ್ಣು pH 6.0 ರಿಂದ 6.5 ನಡುವೆಯೇ ಉಳಿದುಕೊಂಡು, ಬಲವಾದ ಬೇರುಗಳು, ಸಕ್ರೀಯ ಜೀವಾಣುಗಳು ಹಾಗೂ ಹೆಚ್ಚಿದ ಬೆಳೆಯ ಉತ್ಪಾದನೆ ನೀಡುತ್ತದೆ – ಪ್ರತಿ ಹಂಗಾಮಿನಲ್ಲೂ ರಾಸಾಯನಿಕ ಸುಣ್ಣ ಅವಲಂಬನೆಯ ಅಗತ್ಯವಿಲ್ಲ. ಒಂದೊಮ್ಮೆ ಮಳೆಗಾಲದಲ್ಲಿ ಮಣ್ಣು ಸ್ವಲ್ಪ ಆಮ್ಲೀಯದಾರೂ ಬಿಸಿಲಿಗೆ ಒಡ್ಡಿದಾಗ ಅದು ತಟಸ್ತಕ್ಕೆ ಹತ್ತಿರ ಬರುತ್ತದೆ.

Leave a Reply

Your email address will not be published. Required fields are marked *

error: Content is protected !!