ಸೂರ್ಯನ ಬೆಳಕು, ಸಾತ್ವಿಕ ಆಹಾರ –ಎಲುಬು ಮತ್ತು ನರಗಳ ಸಮಸ್ಯೆಯನ್ನು ದೂರ ಮಾಡುತ್ತವೆ.

ಸೂರ್ಯನ ಬೆಳಕು, ಸಾತ್ವಿಕ ಆಹಾರ –ಎಲುಬು ಮತ್ತು ನರಗಳ ಸಮಸ್ಯೆಯನ್ನು ದೂರ ಮಾಡುತ್ತವೆ.

ಸೂರ್ಯನ ಬೆಳಕು ಇದರಲ್ಲಿ ಇರುವ ಶಕ್ತಿ ಇನ್ಯಾವುದರಲ್ಲೂ ಇಲ್ಲ. ಹಳ್ಳಿಯಲ್ಲಿ ಕೆಲವು ಕೆಲಸಗಾರರು  ಕೂಲಿಗೆ ಹೋಗುವ ಮುಂಚೆ ಒಂದು   ಮೋರಿಯ ದಂಡೆಯಲ್ಲಿ ಕುಳಿತು ಕತ್ತಿ ಮಸೆಯುತ್ತಾ ಸ್ವಲ್ಪ ಹೊತ್ತು ತಮ್ಮ ದೇಹದ ಒಂದು ಮಗ್ಗುಲು ಮತ್ತೆ ಸ್ವಲ್ಪ ಮತ್ತೊಂದು ಮಗ್ಗುಲನ್ನೂ  ಬೆಳಕಿಗೆ ಒಡ್ಡುವ ದೃಷ್ಯವನ್ನು ಕಂಡಿರಬಹುದು ( ಈಗ ಅಪರೂಪ) ಅವರ ದೈಹಿಕ ಶಕ್ತಿಯ ಗುಟ್ಟು ಇದೇ ಆಗಿರುತ್ತದೆ. ಒಂದು ಕಾಲದಲ್ಲಿ ರೈತರ ದೇಹ ಶಕ್ತಿಯ, ಸಹನೆಯ ಮತ್ತು ದೀರ್ಘಾಯುಷ್ಯದ ಗುಟ್ಟು ಇದೇ ಆಗಿತ್ತು. ಅವರು ಬೆಳಗ್ಗೆಯಿಂದ ಸಂಜೆವರೆಗೆ ಹೊಲಗಳಲ್ಲಿ ದುಡಿದು, ತಾವು ಬೆಳೆದ ಆಹಾರವೇ ಸೇವಿಸಿ, 80–90 ವರ್ಷಗಳವರೆಗೆ ಆರೋಗ್ಯದಿಂದ ಬದುಕುತ್ತಿದ್ದರು. ಆದರೆ ಇಂದು ಅಲ್ಪ ವಯಸ್ಸಿನಲ್ಲಿಯೇ ಅನೇಕ ರೈತರು ಗಂಟು ನೋವು, ಮೊಣಕಾಲು ನೋವು, ಡಿಸ್ಕ್ ಸಮಸ್ಯೆ, ನರ ಬಲಹೀನತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಹಿಂದಿನ ಪ್ರಮುಖ ಕಾರಣಗಳು ಸೂರ್ಯನ ಬೆಳಕಿನ ಕೊರತೆ, ಅಸಮತೋಲಿತ ಆಹಾರ ಪದ್ಧತಿ, ಓಡಾಟದ ಕೊರತೆ ಹಾಗೂ ಮಾನಸಿಕ ಒತ್ತಡ.

ಈ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಸರಳವಾಗಿ ನೋಡೋಣ

ಸೂರ್ಯನ ಬೆಳಕು – ದೇಹಕ್ಕೆ ಉಚಿತ ಶಕ್ತಿ

ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ D ಸೂರ್ಯನ ಬೆಳಕಿನಿಂದಲೇ ಸಿಗುತ್ತದೆ. ಈ ವಿಟಮಿನ್ ನಮ್ಮ ಎಲುಬುಗಳನ್ನು ಬಲಪಡಿಸಿ, ನರಗಳ ಕಾರ್ಯಕ್ಷಮತೆ ಮತ್ತು ಶಕ್ತಿಯನ್ನು ಕಾಪಾಡುತ್ತದೆ.
ವಿಟಮಿನ್ D ಕೊರತೆಯಿಂದ ಕ್ಯಾಲ್ಸಿಯಂ ಶೋಷಣೆಯಲ್ಲಿ ವ್ಯತ್ಯಯ ಉಂಟಾಗಿ, ಎಲುಬುಗಳು ದುರ್ಬಲವಾಗುತ್ತವೆ, ಸ್ನಾಯುಗಳಲ್ಲಿ ನೋವು, ಡಿಸ್ಕ್ ಹಾಗೂ ಮೊಣಕಾಲು ನೋವು ಉಂಟಾಗುತ್ತದೆ. ಹೊರ ಮೂಲದ ಯಾವುದೇ ಇಂತಹ ವಿಟಮಿನ್ ಮಾತ್ರೆ ಸೇವಿಸಿದರೂ ಅದರ ಕ್ಷಮತೆ ಸರಿಯಾಗಿರಬೇಕಾದರೆ ಸೂರ್ಯನ ಬೆಳಕು ಮೈಗೆ ಬೀಳಲೇ ಬೇಕು.

ಹಿಂದಿನ ಕಾಲದಲ್ಲಿ ರೈತರು ದಿನವಿಡೀ ಹೊಲಗಳಲ್ಲಿ ದುಡಿದರಿಂದ ಸಾಕಷ್ಟು ಸೂರ್ಯನ ಬೆಳಕು ಸಿಗುತ್ತಿತ್ತು. ಈಗ ಯಂತ್ರೋಪಕರಣಗಳು, ಮುಖಮುಚ್ಚು ಬಟ್ಟೆಗಳು, ಅಥವಾ ಒಳಾಂಗಣ ಕೆಲಸದಿಂದ ಬೆಳಕಿನ ಸಂಪರ್ಕ ಕಡಿಮೆಯಾಗಿದೆ.
ಬೆಳಗ್ಗೆ 6:30 ರಿಂದ 9:00 ಗಂಟೆಯವರೆಗೆ ಸೂರ್ಯನ ಮೃದುವಾದ ಬೆಳಕು ದೇಹಕ್ಕೆ ಅತ್ಯುತ್ತಮ.
ಪ್ರತಿದಿನ 20–30 ನಿಮಿಷಗಳಷ್ಟು ಬೆಳಕಿನಲ್ಲಿ ಇರೋದರಿಂದ ದೇಹದಲ್ಲಿ ವಿಟಮಿನ್ D ಸಹಜವಾಗಿ ಉತ್ಪತ್ತಿಯಾಗುತ್ತದೆ.

ಬೆಳಗಿನ ಹೊತ್ತಿನಲ್ಲಿ ಸ್ವಲ್ಪ ಹೊತ್ತು ಕೈ, ಕಾಲು ತೆರೆದಂತೆ ಹೊಲದಲ್ಲಿ ಕೆಲಸ ಮಾಡಿದರೆ ಅಥವಾ ವ್ಯಾಯಾಮ ಮಾಡಿದರೆ ಸಾಕು.

ಸಾಂಪ್ರದಾಯಿಕ ಆಹಾರವೇ ನಿಜವಾದ ಔಷಧಿ

ಹಳೆಯ ಕಾಲದ ರೈತರು ತಾವು ಬೆಳೆದ ರಾಗಿ, ಜೋಳ, ಬೇಳೆ, ಹಸಿರು ತರಕಾರಿ, ಹಾಲು, ಮೊಸರು ಮುಂತಾದ ಆಹಾರಗಳನ್ನು ಸೇವಿಸುತ್ತಿದ್ದರು.
ಇಂದಿನ ಅನೇಕರು ಪಾಲಿಶ್ ಮಾಡಿದ ಅಕ್ಕಿ, ಬಿಸ್ಕತ್, ಚಹಾ, ಎಣ್ಣೆಯ  ಕರಿದ ತಿನಿಸುಗಳು ಮುಂತಾದ ಖಾಲಿ ಕ್ಯಾಲೊರಿಯ ಆಹಾರಗಳಿಗೆ ಒಲವು ತೋರಿದ್ದಾರೆ. ಇವು ಹೊಟ್ಟೆ ತುಂಬಿಸುತ್ತವೆ, ಆದರೆ ಶಕ್ತಿ ಕೊಡವುದು ಕಡಿಮೆ.

ಎಲುಬು ಮತ್ತು ನರ ಬಲಕ್ಕಾಗಿ ದಿನನಿತ್ಯ ಆಹಾರದಲ್ಲಿ ಸೇರಿಸಬೇಕಾದವು:

  • ರಾಗಿ (ಫಿಂಗರ್ ಮಿಲ್ಲೆಟ್) – ಕ್ಯಾಲ್ಸಿಯಂ ಮತ್ತು ಲೋಹದಿಂದ ಸಮೃದ್ಧ.
  • ಎಳ್ಳು – ಮೊಣಕಾಲು ಮತ್ತು ಎಲುಬು ಬಲಪಡಿಸುತ್ತದೆ.
  • ಹಸಿರು ತರಕಾರಿ – ಖನಿಜಾಂಶದ ಮೂಲ.
  • ಹಾಲು ಮತ್ತು ಮೊಸರು – ಕ್ಯಾಲ್ಸಿಯಂ ಮಟ್ಟ ಕಾಯ್ದುಕೊಳ್ಳುತ್ತದೆ.
  • ಹಣ್ಣುಗಳು (ಬಾಳೆಹಣ್ಣು, ಪಪಾಯಿ, ಪೇರಳೆ) – ನರ ಮತ್ತು ಸ್ನಾಯು ಶಕ್ತಿ ಹೆಚ್ಚಿಸುತ್ತವೆ.

ಬಟರ್ ಮಿಲ್ಕ್, ತೆಂಗಿನ ಕಾಯಿ ನೀರು, ಎಳನೀರು, ಅಥವಾ ಶುದ್ಧ ನೀರು ಸೇವನೆ ಉತ್ತಮ. ಶೀತಪಾನೀಯಗಳು ಅಥವಾ ಹೆಚ್ಚಾಗಿ ಚಹಾ ಕುಡಿಯುವುದು ತಪ್ಪು.

 ಬೆಳಗ್ಗೆಯಿಂದ ಸಂಜೆವರೆಗೆ ಹೊಲಗಳಲ್ಲಿ ದುಡಿದು, ತಾವು ಬೆಳೆದ ಆಹಾರವೇ ಸೇವಿಸಿ, 80–90 ವರ್ಷಗಳವರೆಗೆ ಆರೋಗ್ಯದಿಂದ ಬದುಕುತ್ತಿದ್ದರು
ಬೆಳಗ್ಗೆಯಿಂದ ಸಂಜೆವರೆಗೆ ಹೊಲಗಳಲ್ಲಿ ದುಡಿದು, ತಾವು ಬೆಳೆದ ಆಹಾರವೇ ಸೇವಿಸಿ, 80–90 ವರ್ಷಗಳವರೆಗೆ ಆರೋಗ್ಯದಿಂದ ಬದುಕುತ್ತಿದ್ದರು

ಚಲನೆ ಮತ್ತು ಸರಿಯಾದ ಶರೀರ ಭಂಗಿ

ಇಂದಿನ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಟ್ರಾಕ್ಟರ್ ಅಥವಾ ವಾಹನಗಳಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಮೂಳೆ ಹಾಗೂ ಡಿಸ್ಕ್ ಸಮಸ್ಯೆ ಉಂಟಾಗುತ್ತದೆ.
ಪ್ರತಿ ಗಂಟೆಗೊಮ್ಮೆ ಸ್ವಲ್ಪ ಕಾಲ ಎದ್ದು ನಡೆಯುವುದು, ಎಳೆದಾಡುವ ವ್ಯಾಯಾಮ ಮಾಡುವುದು ಉತ್ತಮ. ಭಾರ ಎತ್ತುವ ಮುನ್ನ ಸರಳ ಸ್ಟ್ರೆಚಿಂಗ್ ಅಥವಾ ಯೋಗಾಸನಗಳು ಮಾಡುವುದು ಬೆನ್ನಿನ ಸ್ನಾಯುಗಳಿಗೆ ರಕ್ಷಣೆಯಂತೆ ಕೆಲಸ ಮಾಡುತ್ತದೆ.

ಪ್ರಾಣಾಯಾಮ ಮತ್ತು ಯೋಗ ಪ್ರತಿದಿನ ಬೆಳಿಗ್ಗೆ ಕೆಲ ನಿಮಿಷ ಮಾಡಿದರೆ ದೇಹ ಲವಲವಿಕೆಯಾಗಿ, ರಕ್ತಪ್ರವಾಹ ಸುಧಾರಿಸುತ್ತದೆ.

ಬೆವರು ಮತ್ತು ಖನಿಜ ಸಮತೋಲನ

ಸೂರ್ಯನ ಕೆಳಗೆ ದುಡಿದಾಗ ಬೆವರು ಮೂಲಕ ದೇಹದಿಂದ ಕೆಲವು ಲವಣ ಮತ್ತು ಖನಿಜಗಳು ಹೊರಹೋಗುತ್ತವೆ. ಇದನ್ನು ಪೂರೈಸದಿದ್ದರೆ ಮಸಲ್ ಕ್ರ್ಯಾಂಪ್, ನರ ಬಲಹೀನತೆ ಉಂಟಾಗುತ್ತದೆ. ಶರೀರ ಚೆನ್ನಾಗಿ ಬೆವರಿದರೆ ಮನುಷ್ಯನ ಆರೋಗ್ಯ ಸರಿಯಾಗಿದೆ ಎಂದು ತಿಳಿಯಬಹುದು. ಬೆವರಿದರೆ ದೇಹ ಶುದ್ಧಿಯಾಗುತ್ತದೆ.
ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಮಜ್ಜಿಗೆಗೆ ಸ್ವಲ್ಪ ಉಪ್ಪು ಅಥವಾ ನಿಂಬೆರಸ ಸೇರಿಸಿ ಕುಡಿಯುವುದು ಉತ್ತಮ. ಹಣ್ಣುಗಳ ಸೇವನೆಯೂ ಅಗತ್ಯ.

ಮಾನಸಿಕ ಒತ್ತಡ ಕಡಿಮೆ ಮಾಡೋಣ

ಬೆಳೆ ಬೆಲೆ, ಹವಾಮಾನ, ಸಾಲ ಮುಂತಾದ ಒತ್ತಡಗಳಿಂದ ಮನಸ್ಸು ಕಂಗೆಡುವುದು ಸಾಮಾನ್ಯ. ಆದರೆ ನಿರಂತರ ಒತ್ತಡದಿಂದ ಸ್ನಾಯು ಬಿಗಿತ, ನಿದ್ರೆ ಸಮಸ್ಯೆ, ನರ ದೌರ್ಬಲ್ಯ ಉಂಟಾಗುತ್ತದೆ.
ಕುಟುಂಬದವರ ಜೊತೆ ಸಮಯ ಕಳೆಯುವುದು, ಸ್ನೇಹಿತರ ಜೊತೆ ಮಾತನಾಡುವುದು, ಚಿಕ್ಕ ವಿರಾಮ ತೆಗೆದುಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಸಹಾಯಕ.

 ದೇಹ ಪರೀಕ್ಷೆ – ಮಣ್ಣಿನ ಪರೀಕ್ಷೆಯಂತೆ ಅಗತ್ಯ

ಹೆಚ್ಚು ಫಲಕ್ಕಾಗಿ ಹೇಗೆ ರೈತರು ಮಣ್ಣಿನ ಪರೀಕ್ಷೆ ಮಾಡುತ್ತಾರೆ, ಹಾಗೆಯೇ ತಮ್ಮ ದೇಹದ ಪರೀಕ್ಷೆಯೂ ಮಾಡಬೇಕು.
ಪ್ರತಿ ವರ್ಷ ಕನಿಷ್ಠ ಒಂದುವೇಳೆ ಪರೀಕ್ಷಿಸಬೇಕಾದವು:

  • ವಿಟಮಿನ್ D ಮತ್ತು ಕ್ಯಾಲ್ಸಿಯಂ ಮಟ್ಟ
  • ಬಿಪಿ, ಸಕ್ಕರೆ, ಕೊಲೆಸ್ಟ್ರಾಲ್
  • ಜಂಟು ಅಥವಾ ಬೆನ್ನಿನ ನೋವಿನ ಲಕ್ಷಣಗಳು

ಗ್ರಾಮೀಣ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆರೋಗ್ಯ ಶಿಬಿರಗಳಲ್ಲಿ ಉಚಿತ ಪರೀಕ್ಷೆಗಳು ಲಭ್ಯ.

ಎಲುಬು ಮತ್ತು ನರ ಆರೋಗ್ಯ ಕಾಪಾಡುವ ನೈಸರ್ಗಿಕ ಮಾರ್ಗಗಳು

  • ಪ್ರತಿದಿನ 20–30 ನಿಮಿಷ ಬೆಳಗಿನ ಸೂರ್ಯನ ಬೆಳಕು ಪಡೆಯಿರಿ.
  • ಕ್ಯಾಲ್ಸಿಯಂ ಸಮೃದ್ಧ, ತಾಜಾ ಆಹಾರ ಸೇವಿಸಿರಿ.
  • ಸರಳ ಯೋಗ ಮತ್ತು ವ್ಯಾಯಾಮ ಮಾಡಿರಿ.
  • ಶುದ್ಧ ನೀರು ಮತ್ತು ಹಣ್ಣುಗಳು ಸೇವಿಸಿರಿ.
  • ಮದ್ಯ, ತಂಬಾಕು ಮತ್ತು ಮಾನಸಿಕ ಒತ್ತಡದಿಂದ ದೂರವಿರಿ.

ಆರೋಗ್ಯಕರ ರೈತನೇ ಬಲಿಷ್ಠ ರಾಷ್ಟ್ರ

ರೈತರ ದೇಹವೇ ಅವರ ಪ್ರಮುಖ ಸಾಧನ. ದೇಹ ಆರೋಗ್ಯವಾಗಿದ್ದರೆ ಯಾವುದೇ ಹೊಲದ ಕೆಲಸ ಸುಲಭ.
ಬಹುತೇಕ ಮೊಣಕಾಲು, ಡಿಸ್ಕ್ ಮತ್ತು ನರ ಸಮಸ್ಯೆಗಳನ್ನು ಸರಳ ಜೀವನಶೈಲಿ ಬದಲಾವಣೆಗಳ ಮೂಲಕ ತಡೆಗಟ್ಟಬಹುದು. ರೈತ ಎಂದರೆ ಅವನು ಶ್ರೀಮಂತನಲ್ಲ. ಹೂರಜಗತ್ತಿಗೆ ಮಾತ್ರ ಅವನು ಶ್ರೀಮಂತನಂತೆ ಕಾಣಿಸುತ್ತಾನೆ. ಅವನ ದಿನದ  ಕನಿಷ್ಟ ಮಜೂರಿ ರೂ.1000 ವನ್ನು ಅವನು ಲೆಕ್ಕಾಚಾರ ಹಾಕಿದರೆ ಅವನ ವೃತ್ತಿಯಲ್ಲಿ ಲಾಭವಿಲ್ಲ. ರೈತನ ಆದಾಯ ಮೂಲದಲ್ಲಿ ಈಗಿನ ಆಸ್ಪತ್ರೆ ಖರ್ಚು ಇತ್ಯಾದಿಗಳನ್ನು ನಿಭಾಯಿಸುವುದು ಬಹಳ ಕಷ್ಟಕರ. ಹಾಗಿರುವಾಗ ಆನಾರೋಗ್ಯ ಸಮಸ್ಯೆ ಬಾರದಂತೆ ತಮ್ಮ ಜೀವನ ಶೈಲಿಯನ್ನು ಮುನ್ನಡೆಸುವುದು ಅತೀ ಪ್ರಾಮುಖ್ಯ.

ಸೂರ್ಯನ ಬೆಳಕು, ಶುದ್ಧ ಆಹಾರ, ಸರಿಯಾದ ವಿಶ್ರಾಂತಿ ಮತ್ತು ಶಾಂತ ಮನಸ್ಸು – ಇವುಗಳೇ ಪ್ರಕೃತಿಯ ನಿಜವಾದ ಔಷಧಿ.

Leave a Reply

Your email address will not be published. Required fields are marked *

error: Content is protected !!