ಮಣ್ಣಿನ ಫಲವತ್ತತೆ ಹೆಚ್ಚಲು ನಿರಂತರವಾಗಿ ಹಸಿಸೊಪ್ಪು, ತರಗೆಲೆ ಮುಂತಾದ ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಒಣ ತರಗೆಲೆಗಿಂತ ಹಸಿ ಸೊಪ್ಪು ಹೆಚ್ಚು ಉತ್ತಮ. ಕೃಷಿ ಮಾಡುವ ಮಣ್ಣು ಒಂದೆಡೆ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಇರುತ್ತದೆ. ಅದನ್ನು ಮರುಪೂರಣ ಮಾಡಲು ಸಾವಯವ ವಸ್ತುಗಳನ್ನು ಸೇರಿಸುತ್ತಾ ಇರಬೇಕು. ಎಲ್ಲದಕ್ಕಿಂತ ಅಗ್ಗದ ಉತ್ತಮ ಸ್ಥೂಲ (Bulk)ಸಾವಯವ ವಸ್ತು ಸೊಪ್ಪು, ತರಗೆಲೆ ಮತ್ತು ಬೆಳೆ ತ್ಯಾಜ್ಯಗಳು.
ಕೃಷಿಕರಾದ ನಾವೆಲ್ಲಾ ಮಣ್ಣು ಹೇಗೆ ರಚನೆಯಾಯಿತು ಎಂಬುದರ ಬಗ್ಗೆ ತಿಳಿಯಬೇಕು. ಗಡಸು, ಮೆದು ಶಿಲೆಗಳು ಬಿಸಿಲು, ಮಳೆ,ಗಾಳಿ ಮುಂತಾದವುಗಳ ಹೊಡೆತಕ್ಕೆ ಸಿಲುಕಿ ಸ್ವಲ್ಪ ಸ್ವಲ್ಪವೇ ಕರಗಿ ಮಣ್ಣಾಗಿದೆ. ಈ ಮಣ್ಣಿನಲ್ಲಿ ಫಲವತ್ತತೆ ಎಂಬುದು ಸಸ್ಯ, ಪ್ರಾಣಿ ಪಾಚಿ ಮುಂತಾದವುಗಳ ಶಿಥಿಲತ್ವದಿಂದ ಆಗಿದೆ. ಕೋಟ್ಯಾಂತರ ವರ್ಷಗಳಿಂದ ಮಣ್ಣು ಆಗುತ್ತಲೇ ಇದೆ. ಪ್ರಕೃತಿಯಲ್ಲಿ ಸಹಜವಾಗಿ ಸತ್ತು ಹೋಗುವ ಮರಮಟ್ಟು, ಹಾವಸೆ, ಪ್ರಾಣಿಗಳಿಂದ ಅದು ಫಲವತ್ತಾಗುತ್ತಾ ಬಂದಿದೆ. ಯಾವುದೇ ಸಾವಯವ ವಸ್ತು ಸೇರದ ಬರೇ ಮಣ್ಣು ಬೇಸಾಯ ಯೋಗ್ಯವಲ್ಲ. ಅದಕ್ಕೆ ಪರವಸ್ತುಗಳು ಸೇರಿ ವಿಲೀನವಾದಾಗ ಅದರಲ್ಲಿ ಫಲವತ್ತತೆ ಸೇರಿಕೊಳ್ಳುತ್ತದೆ. ಅದು ಸಸ್ಯಗಳಿಗೆ ಮತ್ತೆ ಆಹಾರ ಒದಗಿಸಿ ಬೆಳೆಯುವಂತೆ ಮಾಡುತ್ತದೆ. ಭೂಮಿಯಲ್ಲಿ ಸಹಜವಾಗಿ ಬೆಳೆಯುವ ಮರಮಟ್ಟು ಕುರುಚಲು ಗಿಡಗಳು ಇವುಗಳಿಂದ ನಾವು ಯಾವುದೇ ಫಲಾಪೇಕ್ಷೆ ಹೊಂದುವುದಿಲ್ಲವಾದ ಕಾರಣ ಅದಕ್ಕೆ ಪ್ರತ್ಯೇಕ ಸಾವಯವ ವಸ್ತು ಕೊಡಬೇಕಾಗಿಲ್ಲ. ಪ್ರತೀಯೊಂದು ಸಸ್ಯಕ್ಕೂ ಪ್ರಕೃತಿ ಅದರ ತ್ಯಾಜ್ಯಗಳಿಂದಲೇ ಬದುಕುವ ಶಕ್ತಿಯನ್ನು ಕೊಟ್ಟಿರುತ್ತದೆ. ಮಾನವ ಬೆಳೆಯಾಗಿ ಬೆಳೆಸುವಾಗ ಅದರಿಂದ ಹೆಚ್ಚು ಅಪೇಕ್ಷಿಸುತ್ತಾನೆ ಅಥವಾ ಅದರ ಸ್ವಲ್ಪ ಆಂಶವನ್ನು ತಾನು ಕಸಿದುಕೊಂಡು ಅದಕ್ಕೆ ಕೊರತೆ ಉಂಟು ಮಾಡುತ್ತಾನೆ. ಆಗ ಹೊರಗಿನಿಂದ ಪೋಷಕ ಕೊಡಬೇಕಾಗುತ್ತದೆ. ಇಲ್ಲಿ ಬೆಳೆಗಾಗಿ ಕೊಡುವ ಪೋಷಕ ಬೇರೆ. ಮಣ್ಣಿನ ಉಳಿವಿಗಾಗಿ ಕೊಡುವ ಪೋಷಕವೇ ಬೇರೆ ಎನ್ನಬೇಕಾಗುತ್ತದೆ. ಮಣ್ಣಿಗೆ ಮೂರು ಗುಣಧರ್ಮ ಇದೆ. ಒಂದು ರಾಸಾಯನಿಕ ಗುಣಧರ್ಮ. ಬೌತಿಕ ಗುಣಧರ್ಮ ಮತ್ತು ಜೈವಿಕ ಗುಣಧರ್ಮ. ಇದರಲ್ಲಿ ಜೈವಿಕ ಗುಣಧರ್ಮ (Biological structure) ಮತ್ತು ಭೌತಿಕ ಗುಣಧರ್ಮ (Physical structure) ಇವೆರಡನ್ನು ಸರಿಪಡಿಸಲು ಪೂರೈಸಬೇಕಾದದ್ದು ಸಾವಯವ ವಸ್ತುಗಳನ್ನು. ಅದರಲ್ಲೂ ಸ್ಥೂಲ ಸಾವಯವ ವಸ್ತುಗಳನ್ನು ಕೊಡಬೇಕು. ಅದಕ್ಕೆ ಅಗ್ಗದಲ್ಲಿ ಸಿಗುವಂತದ್ದು ಸೊಪ್ಪು ಮತು ತರಗೆಲೆ ಹಾಗೆಯೇ ಬೆಳೆ ಉಳಿಕೆಗಳು. ಇದನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣು ಕಳೆದುಕೊಂಡ ಸತ್ವವನ್ನು ಮತ್ತೆ ಪಡೆಯುತ್ತದೆ. ಜೊತೆಗೆ ಮಣ್ಣಿನ ರಚನೆ ಬದಲಾಗುತ್ತಾ ಉನ್ನತ ಮಟ್ಟಕ್ಕೆ ಏರುತ್ತಿರುತ್ತದೆ.
ಸಾವಯವ ವಸ್ತುವಾಗಿ ಬಳಸುವ ಒಣ ತ್ಯಾಜ್ಯ ( ತರಗೆಲೆ ಇತ್ಯಾದಿ) ಬಳಸುವ ಸಮಯವೇ ಬೇರೆ ಹಸುರು ಸೊಪ್ಪನ್ನು ಬಳಸುವ ಸಮಯವೇ ಬೇರೆ. ಇವೆರಡು ಬೇರೆ ಬೇರೆ ರೀತಿಯಲ್ಲಿ ಮಣ್ಣಿಗೆ ಸೇರ್ಪಡೆಯಾಗುತ್ತದೆ.
ಸೊಪ್ಪು ಯಾಕೆ ಉತ್ತಮ:
- ಹಸುರು ಸೊಪ್ಪಿನ ವಿಶೇಷ ಎಂದರೆ ಅದರಲ್ಲಿ ಸತ್ವಾಂಶಗಳ ಲಭ್ಯತೆ ತ್ವರಿತ ಮತ್ತು ಅಧಿಕ.
- ಹಳದಿಯಾಗಿ ಉದುರುವ ಹಂತಕ್ಕೆ ಬಂದ ಎಲೆಯಲ್ಲಿದ್ದ ಸಾರಜನಕ, ರಂಜಕ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಇತ್ಯಾದಿ ಪೋಷಕಗಳು ಪರಿವರ್ತನೆ ಹೊಂದಿ ಕರಗುವ ರೂಪವನ್ನು ತಾಳಿ ಕಾಂಡದ ಮೂಲಕ ಚಿಗುರುಗಳಿಗೆ ವರ್ಗಾವಣೆ ಆಗಿರುತ್ತದೆ.
- ಹೀಗಾಗಿ ಒಣಗಿದ ಎಲೆಗಳಲ್ಲಿ ನಷ್ಟವಾದ ಪೋಷಕಗಳು ಹಸುರು ಎಲೆಗಳಲ್ಲಿ ಸಂಗ್ರಹವಿರುತ್ತದೆ.
- ಇದು ಸೃಷ್ಟಿಯ ವೈಚಿತ್ರ್ಯ.
- ಹಸುರು ಎಲೆಗಳನ್ನು ಸಸ್ಯದಿಂದ ಪ್ರತ್ಯೇಕಿಸಿ ಒಣಗಲು ಬಿಟ್ಟಾಗ ಎಲೆಯೊಳಗಿನ ಸಾವಯವ ರೂಪದ ಪೋಷಕಗಳು ರೂಪಾಂತರ ಹೊಂದಲು ಆಸ್ಪದವೇ ಸಿಗುವುದಿಲ್ಲ.
- ಅವುಗಳಲ್ಲಿ ಎಲ್ಲೂ ಪೋಷಕಗಳು ಕಡಿಮೆಯಾಗುವುದಿಲ್ಲ.
ಹಸುರು ಸೊಪ್ಪನ್ನು ಬೆಳೆ ಕೊಯಿಲು ಮುಗಿದ ತರುವಾಯ ಇನ್ನೇನು ಮಳೆ ಪ್ರಾರಂಭವಾಗುತ್ತದೆ ಅಥವಾ ಪ್ರಾರಂಭವಾದೊಡನೆ ಹಾಕಬೇಕು. ಅದು ಮಳೆ ಹನಿಗೆ ತೇವಾಂಶದೊಂದಿಗೆ ಬೆರೆತಾಗ ಅಲ್ಲಿಗೆ ಗಂಗೆ ಹುಳ, ಶತಪದಿ, ಸಿಂಬಳದ ಹುಳ ಹಾಗೆಯೇ ಇನ್ನಿತರ ಕೆಲವು ಕಣ್ಣಿಗೆ ಕಾಣುವ ತಿಂದು ಹಿಕ್ಕೆ ಹಾಕುವ ಜೀವಿಗಳು (Decomposers) ಬಂದು ಅದನ್ನು ಬೇಗ ಕರಗಿಸಿಕೊಡುತ್ತವೆ. ಕೊಯಿಲು ಪ್ರಾರಂಭವಾಗುವಾಗ ಅದು ಸ್ವಚ್ಚವಾಗಿರುತ್ತದೆ. ಆ ಸಮಯದಲ್ಲಿ ಅಂದರೆ ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೂ ಪ್ರಯೋಜನವಾಗುತ್ತದೆ. ಮಳೆಗಾಲದಲ್ಲಿ ಮರಮಟ್ಟುಗಳ ಸೊಪ್ಪು ಸದೆ ಕಡಿಯುವುದರಿಂದ ಗಾಳಿ ಬೆಳೆಕಿನ ಲಭ್ಯತೆಗೆ ಅನುಕೂಲವಾಗುತ್ತದೆ. ವಿಶೇಷವಾಗಿ ಬೆಳಕು ಈ ಸಮಯದಲ್ಲಿ ಎಲ್ಲಾ ಬೆಳೆಗಳಿಗೂ ಅಗತ್ಯ. ಆದ ಕಾರಣ ಹೊಲದ ಬದು, ಹಾಗೂ ಸುತ್ತಮುತ್ತ ಬೆಳೆದಿರುವ ಮರಮಟ್ಟುಗಳ ಸೊಪ್ಪು ಸವರಿದರೆ ಆ ಸೊಪ್ಪನ್ನು ಹೊಲಕ್ಕೆ ಹಾಕಿ.

ಒಣ ತ್ಯಾಜ್ಯಗಳು ಮತ್ತು ಅವುಗಳ ಪೋಷಕಾಂಶಗಳು:
- ನಾವೆಲ್ಲಾ ಸಾವಯವ ಮೂಲವಾಗಿ ಕಾಂಪೋಸ್ಟು ಮಾಡಲು, ಹೊಲಕ್ಕೆ, ಬೆಳೆ ಬುಡಕ್ಕೆ ಮುಚ್ಚಿಗೆಯಾಗಿ ಒಣಗಿದ ಬೆಳೆ ತ್ಯಾಜ್ಯಗಳನ್ನು (ದರಕು) ಇತ್ಯಾದಿಗಳನ್ನು ಬಳಸುತ್ತೇವೆ.
- ಆದರೆ ಈ ಒಣ ಅಥವಾ ಬಲಿತ ವಸ್ತುಗಳಲ್ಲಿ ಸತ್ವಗಳು ಹಸಿ ಸೊಪ್ಪಿಗಿಂತ ಕಡಿಮೆ.
- ಬಲಿತ ಎಲೆಗಳಲ್ಲಿ ಲಿಗ್ನಿನ್ ಪ್ರಮಾಣವು ಅಧಿಕವಾಗಿರುತ್ತವೆ.
- ಇಂಗಾಲ ಸಾರಜನಕ ಅನುಪಾತ ಹೆಚ್ಚು ಅಂತರರದಲ್ಲಿ ಇರುತ್ತದೆ.
- ಹೀಗಿದ್ದರೆ ಅದರಲ್ಲಿರುವ ಒಟ್ಟು ಪೋಷಕಗಳ ಪ್ರಮಾಣ ಕುಗ್ಗುತ್ತದೆ.
- ಆದ ಕಾರಣ ಒಣಗಿ ಕೆಳಗೆ ಉದುರಿದ ಎಲೆಗಳನ್ನು ಮಣ್ಣಿಗೆ ಸೇರಿಸಿದಾಗ ಅಥವಾ ಕಾಂಪೋಸ್ಟು ಮಾಡಿದಾಗ ಅವು ನಿಧಾನವಾಗಿ ಕಳಿಯುತ್ತದೆ.
- ಅದರಲ್ಲಿರುವ ಒಟ್ಟು ಪೋಷಕದ ಸ್ವಲ್ಪ ಭಾಗ ಮಾತ್ರ ವಿಮೋಚನೆಗೊಳ್ಳುತ್ತದೆ.
- ಬಹು ಕಾಲದವರೆಗೂ ಅರ್ಧದಷ್ಟು ಪ್ರಮಾಣದ ಪೋಷಕಗಳು ಕಳಿಯದೇ ಉಳಿಯುತ್ತವೆ. ಇದನ್ನು ಲಿಗ್ನೋ ಪ್ರೋಪಿನೇಡ್ ಎನ್ನುತ್ತಾರೆ.
ತರಗೆಲೆ ಇತ್ಯಾದಿಗಳನ್ನು ವಸಂತ ಮಾಸದ ಮಧ್ಯಭಾಗದಲ್ಲಿ ಮರಗಳು ಚಿಗುರುವ ಹಂತದಲ್ಲಿ ಆರಿಸಿ ತೆಗೆದು ಹಾಕಬೇಕು. ಆಗ ಅವು ಮಣ್ಣಿನಲ್ಲಿ ತೇವಾಂಶ ಸಂರಕ್ಷಕವಾಗಿ ಕೆಲಸ ಮಾಡುತ್ತದೆ. ಅದೂ ಸಹ ಮಳೆಗಾಲದಲ್ಲೇ ಕರಗಿ ಮಣ್ಣಾಗುವುದಾಗಿರುತ್ತದೆ. ತರಗೆಲೆಯನ್ನು ಸ್ವಚ್ಚ ಮಾಡುವುದರಿಂದ ಅನವಶ್ಯಕವಾಗಿ ಮಳೆ ನೀರಿಗೆ ಅದು ಕೊಚ್ಚಿ ಹೋಗಿ ನಷ್ಟವಾಗುವುದು ತಪ್ಪುತ್ತದೆ
ಹಣ್ಣು ಎಲೆ ಹಸುರೆಲೆ ವ್ಯತ್ಯಾಸ:
- ಮುದಿಯಾದ ಎಲೆ ಉದುರುವುದಕ್ಕೆ ಮುಂಚೆ, ನಿಧಾನವಾಗಿ ತನ್ನ ಹಸುರುತನವನ್ನು ಕಳೆದುಕೊಳ್ಳುತ್ತಾ ನಿಧಾನ ಹಳದಿಯಾಗುತ್ತಾ ಹೆಚ್ಚು ಹೆಚ್ಚು ಹಳದಿಯಾಗಿ ಎಲೆ ತೊಟ್ಟಿನ ಭಾಗವನ್ನು ನಿಧಾನವಾಗಿ ಗೆಲ್ಲಿನಿಂದ ಬಿಟ್ಟು ಉದುರುತ್ತದೆ.
- ಈ ಸಿದ್ದತೆಯು ಸುಮಾರು ಸಮಯದಿಂದ ನಡೆಯುತ್ತಿರುತ್ತದೆ.
- ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತೀಯೊಬ್ಬರೂ ಗಮನಿಸಬಹುದು.
- ಎಲೆ ಬಲಿತು ಹಣ್ಣಾಗುವ ಸಮಯಕ್ಕೆ ಅದು ತನ್ನ ಬಹುತೇಕ ಸತ್ವಾಂಶಗಳನ್ನು ಮರಕ್ಕೆ ಅಥವಾ ಅದರ ಕಿರಿಯ ಎಲೆಗೆ ಬಿಟ್ಟು ಕೊಡುತ್ತದೆ.
- ನಂತರ ಸರ್ವ ತ್ಯಾಗ ಮಾಡಿ ಉದುರುತ್ತದೆ.
- ಆದ ಕಾರಣ ಗರಿಷ್ಟ ಸತ್ವಾಂಶಗಳು ಹಚ್ಚ ಹಸುರು ಎಲೆಗಳಲ್ಲೇ ಇರುತ್ತದೆ.

ಹಸಿರು ಸೊಪ್ಪು ಮಣ್ಣಿಗೆ ಸೇರುವ ಬಗೆ:
- ಹಸುರಾಗಿರುವ ಹಸಿ ಎಲೆಗಳನ್ನು ಅಥವಾ ಸಣ್ಣ ಸಣ್ಣ ಗೆಲ್ಲುಗಳನ್ನು ಕಾಂಪೋಸ್ಟು ಮಾಡಿದರೆ ಅಥವಾ ಅದನ್ನು ಬೆಳೆಗಳ ಬುಡಕ್ಕೆ ಹಾಕಿದರೆ ಅದು ಬೇಗ ಕರಗುತ್ತದೆ.
- ಇದರಲ್ಲಿ ಇಂಗಾಲ ಮತ್ತು ಸಾರಜನಕದ ಅನುಪಾತವು ಕಡಿಮೆ ಅಂತರದಲ್ಲಿ ಇರುತ್ತವೆ.
- ಸಾರಜನಕ ಮತ್ತು ಇತರ ಪೋಷಕಗಳ ಶೇಕಡಾವಾರು ಪ್ರಮಾಣವು ಅಧಿಕ.
- ಆದ್ದರಿಂದ ಹಸುರು ಸೊಪ್ಪು ಅಥವಾ ಹಸುರೆಲೆ ಸೊಪ್ಪು ಸದೆಗಳನ್ನು ಮಣ್ಣಿಗೆ ಸೇರಿಸಿದಾಗ ಅವು ಅತೀ ಸುಲಭವಾಗಿ ಮತ್ತು ವೇಗವಾಗಿ ಕಳಿತು ಅವುಗಳೊಳಗಿನ ಪೋಷಕಗಳು ವಿಮೋಚನೆಗೊಳ್ಳುತ್ತವೆ.
- ಇದಲ್ಲದೆ ಕಳಿಯದೇ ಉಳಿಯುವ ಸಾವಯವ ವಸ್ತುವಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.
- ಇದು ಮಳೆಗೆ ಸಿಕ್ಕು ಕೊಳೆಯುವಾಗ ಅದರ ರಸ (ಟ್ಯಾನಿನ್) ಮಣ್ಣಿನ ಸಾವಯವ ಇಂಗಾಲವನ್ನು ಹೆಚ್ಚಿಸುತ್ತದೆ.
ಒಂದು ಕಡೆ ಹಸುರು ಸೊಪ್ಪು ಕಡಿದು ರಾಶಿ ಹಾಕಿ. ಮತ್ತೊಂದು ಕಡೆ ಒಣ ದರಕು ಇತ್ಯಾದಿಗಳನ್ನು ರಾಶಿ ಹಾಕಿ. ಎರಡನ್ನೂ ಒಂದು ತಿಂಗಳ ತನಕ ಹಾಗೇ ಬಿಡಿ. ಹಸುರು ಸೊಪ್ಪು ಹಾಕಿದ ರಾಶಿಯಲ್ಲಿ ಬಹುತೇಕ ಕಳಿತು ಕರಗಿರುತ್ತದೆ. ದರಕು ಹೆಚ್ಚಿನವು ಕರಗದೆ ಉಳಿದಿರುತ್ತವೆ. ಇವೆರಡನ್ನೂ ಪ್ರತ್ಯೇಕವಾಗಿ ಬೇರೆ ಬೇರೆ ಬೆಳೆಗಳಿಗೆ ( ಅಲ್ಪಾವಧಿ ತರಕಾರಿ) ಹಾಕಿದಾಗ ಹಸುರು ಸೊಪ್ಪು ಬಳಸಿದ ಕಡೆ ಸಸ್ಯ ಹಚ್ಚ ಹಸುರಾಗಿ ಬೆಳೆಯುತ್ತದೆ. ಒಣ ವಸ್ತು ಹಾಕಿದಲ್ಲಿ ಅಂತಹ ಬೆಳವಣಿಗೆ ಇರುವುದಿಲ್ಲ.
ಮಣ್ಣು ಎಂಬ ಬೆಳೆ ಬೆಳೆಸುವ ಮಾಧ್ಯಮ ಸಾವಯವ ಅಂಶ ಚೆನ್ನಾಗಿದ್ದಾಗ ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳು ಅರಗಿಸಿಕೊಡಬಲ್ಲುದು. ಆದ ಕಾರಣ ಕೃಷಿ ವಿಧಾನ ರಾಸಾಯನಿಕ ಇರಲಿ, ಇನ್ಯಾವುದೇ ಇರಲಿ, ಮಣ್ಣನ್ನು ಮಾತ್ರ ಸಾವಯವ ವಸ್ತುಗಳಿಂದ ಚೇತನದಲ್ಲಿ ಇಡಲೇ ಬೇಕು. ಇದಕ್ಕಾಗಿ ಬೆಳೆ ಉಳಿಕೆ ಅಥವಾ ಸೊಪ್ಪು ತರಗೆಲೆಗಳನ್ನು ಮಣ್ಣಿಗೆ ಸೇರಿಸುತ್ತಾ ಜೈವಿಕವಾಗಿ ಸುಸ್ಥಿತಿಯಲ್ಲಿ ಇಡಬೇಕು.