ಇನ್ನೇನು ಆಷಾಢ ಕಳೆದ ತಕ್ಷಣ ಅಡಿಕೆ ಸಸಿ ನೆಡುವವರು ನೆಡಲು ಪ್ರಾರಂಭಿಸುತ್ತಾರೆ. ನೆಡುವಾಗ ಸರಿಯಾಗಿ ನೆಟ್ಟರೆ ಮಾತ್ರ ಪ್ರಾರಂಭಿಕ ಹಂತದಲ್ಲೇ ಯೋಗ್ಯ ಬೆಳವಣಿಗೆಯನ್ನು ಹೊಂದಲು ಸಾಧ್ಯ. ತೆಂಗು ಅಡಿಕೆ ಯಾವುದೇ ಸಸಿ ಇರಲಿ, ಮೊದಲ ವರ್ಷಗಳಲ್ಲಿ (Innitial growth) ತಮ್ಮ ಸಧೃಢ ಬೆಳವಣಿಗೆಯನ್ನು ಹೊಂದಿದರೆ, ಅದು ಮುಂದೆ ಉತ್ತಮ ಫಲ ಕೊಡುತ್ತದೆ. ಹಾಗಾದರೆ ಸಸಿ ಹೇಗೆ ನೆಡಬೇಕು ನೋಡೋಣ.
ಅಡಿಕೆ , ತೆಂಗು, ತಾಳೆ ಇವೆಲ್ಲಾ ಏಕದಳ ಸಸ್ಯಗಳು. ಇವುಗಳ ಬೇರು ಹರಡುವ ಕ್ರಮ ದ್ವಿದಳ ಸಸ್ಯಗಳಿಗಿಂತ ಭಿನ್ನ. ಇವುಗಳಿಗೆ ತಾಯಿ ಬೇರು ಇಲ್ಲ. ಇರುವ ಬೇರುಗಳು ತುಂಬಾ ಕೋಮಲ ವಾಗಿರುತ್ತವೆ. ಬೇರಿನ ಬೆಳವಣಿಗೆಯನ್ನು ಹೊಂದಿ ಸಸ್ಯದ ಮುಂದಿನ ಜೀವಮಾನ ನಿರ್ಧಾರವಾಗುತ್ತದೆ. ಈ ಸಸ್ಯಗಳಿಗೆ ಬೇರು ಬರುವುದು ಅದರ ಕಾಂಡದ ಗಂಟಿನ ಭಾಗದಿಂದ. ನೆಟ್ಟ ಅಡಿಕೆ ಸಸಿಯೊಂದರ ಬೇರು ಮೇಲೆ ಬಂದು ಕಾಣಿಸುತ್ತಿದೆ ಎಂದಾದರೆ ಅಲ್ಲಿ ಏನೋ ಮಣ್ಣಿನಲ್ಲಿ ಸಮಸ್ಯೆ ಇದೆ ಎಂದರ್ಥ. ಈ ಸಮಸ್ಯೆ ಏನು ಎಂಬುದನ್ನು ಕೂಡಲೇ ಗಮನಿಸಿ ಸರಿಪಡಿಸಿದರೆ ಮಾತ್ರ ಆಡಿಕೆ ಸಸಿ ಏಳಿಗೆಯಾಗುತ್ತದೆ. ಕೆಲವು ತೆಂಗಿನ ಮರಗಳು ಆರೋಗ್ಯದಲ್ಲಿ ಅಷ್ಟು ಚೆನ್ನಾಗಿರುವುದಿಲ್ಲ. ಅದರ ಕಾಂದದಲ್ಲಿ ಹೊರಗೆ ಕಾಣುವಂತೆ ಬೇರು ಬಂದಿರುತ್ತದೆ.ಅದು ಮರ ತನ್ನ ಉಳಿವಿಗಾಗಿ ಪ್ರಯತ್ನಗಳನ್ನು ಮಾಡುವುದು. ಬುಡದಲ್ಲಿ ಬೆಳೆದ ಬೇರುಗಳಿಗೆ ಬೆಳೆಯಲು ಅವಕಾಶ ಕಡಿಮೆಯಾದಾಗ,ಅಲ್ಲಿ ಮಣ್ಣು, ನೀರಿನಿಂದ ತೊಂದರೆ ಆದಾಗ ಹಾಗೆಯೇ ಮತ್ತು ಬೇರುಗಳ ಉಸಿರಾಟಕ್ಕೆ ಸಮಸ್ಯೆ ಉಂಟಾದಾಗ ಆ ಭಾಗದಲ್ಲಿ ಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅನುಕೂಲ ಇರುವಲ್ಲಿ ಬೇರೆ ಬೇರು ಬರುತ್ತಾ ಇರುತ್ತದೆ. (ಕಾಂಡಕ್ಕ್ಕೆ ಗಾಯವಾದಾಗಲೂ ಆಲ್ಲಿ ಬೇರು ಬರುತ್ತದೆ)
ಕೆಲವು ಅಡಿಕೆ , ತೆಂಗಿನ ಸಸಿಗಳು ಗೊಬ್ಬರ, ನೀರು ಚೆನ್ನಾಗಿ ಕೊಡುತ್ತಿದ್ದರೂ ಏಳಿಗೆ ಆಗದೆ ಎಲೆ ಹಳದಿಯಾಗಿ ಬುಡ ಸಪುರವಾಗಿಯೇ ಇರುತ್ತದೆ. ವರ್ಷ ಎರಡು ಕಳೆದರೂ ಗಂಟು ಬಿಡದೆ ನೆಲ ಮಟ್ಟದಲ್ಲೇ ಇರುತ್ತದೆ. ಕಾರಣ ಅಲ್ಲಿನ ಮಣ್ಣಿನಲ್ಲಿ ಬೇರಿನ ಬೆಳವಣಿಗೆಗೆ ಅನನುಕೂಲ ಪರಿಸ್ಥಿತಿ ಇರುತ್ತದೆ. ಹಾಗಾಗಿ ಬೇರಿನ ಬೆಳವಣಿಗೆ ಆಗದೆ ಸಸ್ಯ ಬೆಳೆಯಲಾರದು.ಸಸಿ ಕುಳಿತ ಸ್ಥಿತಿಯಲ್ಲ್ಲೇ ಇರುತ್ತದೆ. ಹೆಚ್ಚಾಗಿ ಇದು ಬುಡದಲ್ಲಿ ಜೌಗು ಆಗಿರುವುದು ಮತ್ತು ಬುಡ ಭಾಗಕ್ಕೆ ಗಾಳಿಯಾಡಲು ಅವಕಾಶ ಇಲ್ಲದಿರುದು.
ನೀರು ನಿಲ್ಲುವುದರಿಂದ ಆಗುವ ಸಮಸ್ಯೆ:
- ಹೆಚ್ಚಿನ ರೈತರು ಅದರಲ್ಲೂ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಸಸಿ ನೆಡುವಾಗ ಹೊಂಡ ಮಾಡಿ ನಾಟಿ ಮಾಡುತ್ತಾರೆ.
- ಗುಡ್ಡ ಭೂಮಿ ಅಥವಾ ಮಳೆ ಬಂದರೆ ಮಾತ್ರ ನೀರು ಇರುವ ಖುಷ್ಕಿ ಭೂಮಿ ಎಂಬ ಕಾರಣಕ್ಕೆ ನೀರು ಬಸಿಯಲು ಸರಿಯಾದ ವ್ಯವಸ್ಥೆ ಮಾಡಿರುವುದಿಲ್ಲ.
- ನೆಟ್ಟ ಗಿಡದ ಬುಡಕ್ಕೆ ಮಳೆ ನೀರು ಹರಿದು ಬರುತ್ತದೆ.
- ಮಳೆ ಇರುವಾಗ ಬುಡದಲ್ಲಿ ನೀರು ಇರುತ್ತದೆ.
- ಮಳೆ ನಿಂತಾಗ ಆರಿ ಹೋಗುತ್ತದೆ. ಹಾಗಾಗಿ ನೀರು ನಿಲ್ಲುವ ಪ್ರಮೇಯವೇ ಇಲ್ಲ ಎಂಬ ವಾದ ಅವರದ್ದು.
- ಮಳೆ ನೀರು ಮಾತ್ರ ನಿಲ್ಲುವುದು ಸರಿ.
- ಅದು ಒಂದು ದಿನ ಮಳೆ ಬಂದು ಮರುದಿನ ಮಳೆ ನಿಂತಾಗ ಅರಿ ಹೋದರೆ ಅಂತಹ ಸಮಸ್ಯೆ ಇಲ್ಲ.
- ವಾರ ಕಾಲ ಎಡೆಬಿಡದೆ ಮಳೆ ಸುರಿದರೆ? ನೀರು ವಾರ ಕಾಲವೂ ಅಲ್ಲೇ ಇರುತ್ತದೆ.
- ಅಗಲೇ ಆಗುವುದು ಸಮಸ್ಯೆ. ಮಳೆ ನೀರಿನ ಹನಿಗಳು ಮಾತ್ರ ಬುಡಕ್ಕೆ ಬೀಳುತ್ತಿದ್ದರೆ ಅದರಿಂದ ಅಂತಹ ತೊಂದರೆ ಉಂಟಾಗಲಾರದು.
- ಮಳೆಯ ನೀರಿನ ಜೊತೆಗೆ ಹೊರಗಿನ ನೀರು ಒಟ್ಟು ಸೇರಿದಾಗ ಸಮಸ್ಯೆ ಹೆಚ್ಚಾಗುತ್ತದೆ.
- ಬೇರುಗಳಿಗೆ ಉಸಿರಾಟಕ್ಕೆ ತೊಂದರೆ ಆಗುತ್ತದೆ. ಬೇರು ಬೆಳವಣಿಗೆ ಕುಂಠಿತವಾಗುತ್ತದೆ.
- ಎರಡು ಮೂರು ದಿನ ನೀರು ನಿಂತಾಗ ಅಲ್ಲಿ ನೀರಿನ ಜೊತೆಗೆ ಕೊಚ್ಚಣೆಯಾಗಿ ಬಂದ ಕೆನೆಮಣ್ಣು ತರಹ ನಿಲ್ಲುತ್ತದೆ.
- ಇದು ಬೇರಿಗೆ ಉಸಿರಾಡಲು ಅವಕಾಶ ಮಾಡಿ ಕೊಡುವುದಿಲ್ಲ.
- ಅದನ್ನು ಗಾಳಿಯಾಡದ ಸ್ಥಿತಿ (Anarobic condition)ಎನ್ನುತ್ತಾರೆ.
- ಅಲ್ಲಿ ಉಪಕಾರೀ ಬ್ಯಾಕ್ಟೀರಿಯಾಗಳು (Defence microbes) ಇಲ್ಲದಾಗಿ ಕೊಳೆಯುವಿಕೆಗೆ ಕಾರಣವಾದ ಹಾನಿಕಾರಕ ಶಿಲೀಂದ್ರಗಳು ಹೆಚ್ಚಾಗುತ್ತದೆ.
- ಇದು ಇರುವ ಬೇರನ್ನೂ ಕೊಳೆಯುವಂತೆ ಮಾಡುತ್ತದೆ.
- ಉಸಿರುಗಟ್ಟಿದ ಸ್ಥಿತಿ ಉಂಟಾಗುತ್ತದೆ. ಹೊಸ ಬೇರು ಬರುವುದಕ್ಕೂ ಆಡ್ಡಿ ಮಾಡುತ್ತದೆ.
- ಆಗ ಗಿಡದ ಎಲೆ ಹಳದಿಯಾಗಲಾರಂಭಿಸುತ್ತದೆ.
- ಗರಿಗಳ ಸಂಖ್ಯೆ ಕಡಿಮೆಯಾಗಿ ಎಳೆದರೆ ಬರುವುದೂ ಇದೆ,

ಹೇಗೆ ನೆಡಬೇಕು?
- ಸಸಿ ನೆಡುವಾಗ ಹೊಂಡ ಮಾಡಿಯೇ ನೆಡಿ. ಆದರೆ ಹೊಂಡಕ್ಕಿಂತ ಕನಿಷ್ಟ 4 ಇಂಚು ಆಳಕ್ಕೆ ನೀರು ಬಸಿಯುವ ಕಾಲುವೆ ಇರಲಿ.
- ಹೊಂಡಗಳಲ್ಲಿ ಎಲ್ಲಿಯೂ ನೀರು ನಿಲ್ಲುವ ಸ್ಥಿತಿ ಇರಬಾರದು.
- ನೀರು ಬಸಿಯುತ್ತಲೇ ಇರಬೇಕು. ಹೆಚ್ಚಿನ ರೈತರು ಹೊಂಡ ಮಾಡಿ ಅದರಲ್ಲಿ ಸಸಿ ಕುಳಿತುಕೊಳ್ಳುವಷ್ಟು ಮತ್ತೆ ಹೊಂಡ ಮಾಡಿ ( ಗುಡ ಗುಳಿ) ಮಾಡಿ ನೆಡುತ್ತಾರೆ.
- ಇದು ಸರಿಯಲ್ಲ. ಬೇಕಾದಷ್ಟು ಹೊಂಡ ಮಾಡಿ ಅದರ ಮೇಲೆ ಪಿರಮಿಡ್ ತರಹ ಮೇಲ್ಮಣ್ಣನ್ನು ಏರಿ (Heep) ಹಾಕಿ ಅದರಲ್ಲಿ ಸಸಿಯನ್ನು ನೆಡಬೇಕು.
- ಆಗ ಅಲ್ಲಿನ ಮಣ್ಣು ಫಲವತ್ತಾಗಿರುವುದೂ ಅಲ್ಲದೆ ಸಡಿಲವಾಗಿರುತ್ತದೆ.
- ಅದರಲ್ಲಿ ಗಾಳಿ ಸಂಚಾರಕ್ಕೆ ಅನುಕೂಲ ಇರುತ್ತದೆ.ದಿಣ್ಣೆಯನ್ನು ಸ್ವಲ್ಪ ಒತ್ತಿದರೂ ಸಹ ಸಮಸ್ಯೆ ಆಗುವುದಿಲ್ಲ.
- ಅದರಲ್ಲಿ ಹೊಸ ಬೇರು ಬರಲು ಉತ್ತಮ ಅನುಕೂಲ ಇರುತ್ತದೆ.
- ಎಷ್ಟೇ ನೀರು ನಿಂತರೂ ಬಸಿಯುವಿಕೆಗೆ ತೊಂದರೆ ಉಂಟಾಗುವುದಿಲ್ಲ.
- ಮಣ್ಣಿನಲ್ಲಿ ಗಾಳಿ ಸಂಚಾರ ಇದ್ದಾಗ ಅದರಲ್ಲಿ ಜೀವಾಣುಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತದೆ.
- ಬೇರು ಚೆನ್ನಾಗಿ ಬೆಳೆಯುತ್ತದೆ. ಹಿತಮಿತವಾದ ತೇವಾಂಶ ಇದ್ದಾಗ ಎಲ್ಲವೂ ಅನುಕೂಲಕರವಾಗಿ ಇರುತ್ತದೆ.
- ನೀರು ಹೆಚ್ಚಾದಾದ ಗಾಳಿಯ ಅವಕಾಶವನ್ನು ನೀರು ಆಕ್ರಮಿಸಿ ಉಸಿರಾಟಕ್ಕೆ ಸಮಸ್ಯೆ ಉಂಟುಮಾಡುತ್ತದೆ.
- ಒಮ್ಮೆ ನೀರು ನಿಂತು ತಕ್ಷಣ ಬಸಿಯುತ್ತಾ ಇರಬೇಕು.
- ಅದಕ್ಕಾಗಿ ನೆಡುವಾಗ ಸಡಿಲ ಮಣ್ಣಿನಲ್ಲಿ ನೆಡಬೇಕು.
- ನೆಟ್ಟ ನಂತರ ಹೊಂಡದ ಸುತ್ತ ನೀರು ನುಗ್ಗದಂತೆ ಮಣ್ಣಿನಿಂದ ದಂಡೆ ತರಹ ಮಾಡಬೇಕು.
- ಆಗ ಹೆಚ್ಚು ನೀರು ಹೊಂಡಕ್ಕೆ ಸೇರುವುದಿಲ್ಲ. ಮಣ್ಣು ಕೆನೆಕಟ್ಟುವುದೂ ಇಲ್ಲ.
- ಮಣ್ಣು ಅಂಟು ಅಂದರೆ ನೆಡುವ ಭಾಗದಲ್ಲಿನ ಮಣ್ಣು ಕಲಸಿದ ಮಣ್ಣಿನ ತರಹ ಇರಬಾರದು. ಹುಡಿ ಮಣ್ಣು ಆಗಿರಬೇಕು.

ನೆಟ್ಟ ನಂತರ ಏನು ಮಾಡಬೇಕು?
- ಸಸಿ ನೆಟ್ಟು ತಕ್ಷಣ ಅದರ ಬುಡಕ್ಕೆ ಹಸಿ ಸೊಪ್ಪನ್ನು ಅಥವಾ ಒಣ ತರಗೆಲೆಯನ್ನು ಹಾಕಬೇಕು.
- ಇದು ಮಳೆ ಹನಿಗಳು ನೆಲಕ್ಕೆ ಬೀಳುವಾಗ ಮಣ್ಣು ಸಿಡಿದು ಎಲೆಯ ಅಡಿ ಭಾಗಕ್ಕೆ ತಾಗುವುದನ್ನು ತಡೆಯುತ್ತದೆ.
- ಮಣ್ಣಿನ ಮೇಲೆ ಮಳೆ ನೀರಿನ ನೇರ ಹೊಡೆತ ಉಂಟಾದರೆ ಎಲೆಗೆ ಸುಳಿ ಭಾಗಕ್ಕೆ ಮಣ್ಣು ಸಿಡಿಯುತ್ತದೆ.
- ಇದನ್ನು ತಪ್ಪಿಸಿ ಗಿಡದ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ.
- ನೆಡುವಾಗ ಅರ್ಧ ಕಲಿತ ( ಹಟ್ಟಿಯಿಂದ ತೆಗೆದ ಗೊಬ್ಬರ) ಸಾವಯವ ಗೊಬ್ಬರ ಹಾಕಬಾರದು.
- ಚೆನ್ನಾಗಿ ಕಳಿತ ಗೊಬ್ಬರ ಹಾಕಬೇಕು.
- ಅರ್ಧ ಕಳಿತ ಗೊಬ್ಬರ ಹಾಕಿದಾಗ ಅದು ಕೊಳೆತು ಕಾಂಪೋಸ್ಟು ಆಗುವಾಗ ಉತ್ಪಾದನೆಯಾಗುವ ಅನಿಲ ಹಾಗೂ ಬಿಸಿಯು ಸಸ್ಯದ ಬೇರುಗಳಿಗೆ ತೊಂದರೆ ಉಂಟುಮಾಡುತ್ತದೆ.
- ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ.
ಅಡಿಕೆ ಸಸಿ, ತೆಂಗಿನ ಸಸಿ ಇವುಗಳನ್ನು ಮೊದಲ ವರ್ಷಗಳಲ್ಲಿ ಯಾವುದೇ ಕಾರಣಕ್ಕೂ ಸೊರಗಲು ಬಿಡಬಾರದು. ಅದು ಅದರ ಭವಿಷ್ಯವನ್ನೇ ಹಾಳು ಮಾಡುತ್ತದೆ. ಒಂದರ ನಂತರ ಒಂದು ಸಧೃಢ ಎಲೆ ಮೂಡುತ್ತಾ ಬೆಳವಣಿಗೆ ಆಗುತ್ತಿರಬೇಕು. ಆಗಲೇ ಅದು ಆಯಾ ಹಂತಕ್ಕೆ ಎಷ್ಟು ಬೆಳವಣಿಗೆ ಆಗಬೇಕೋ ಆ ದೇ ರೀತಿ ಆಗುತ್ತಿರುತ್ತದೆ.