ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಳೆಯ ಎಲೆಗೆ ಬರುವ ಎರಡು ಪ್ರಮುಖ ರೋಗಗಳೆಂದರೆ ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ ಒಂದು ಶಿಲೀಂದ್ರ ಕಾರಣ.(sigatoka leaf spot disease)ಎರಡನೆಯ ರೋಗ ನಂಜಾಣು (banana bunchy top virus) ರೋಗವಾಗಿದ್ದು, ಇದಕ್ಕೆ ಯಾವ ಚಿಕಿತ್ಸೆಯೂ ಇಲ್ಲ. ಶಿಲೀಂದ್ರ ರೋಗಗಳು ಹೆಚ್ಚಾಗಿ ವಾತಾವರಣದ ಕಾರಣದಿಂದ ಬರುತ್ತದೆ. ವೈರಾಣುಗಳಿಗೆ ಮೂಲ ಸಸ್ಯದಲ್ಲಿ ಇದ್ದ ರೋಗ ಅಥವಾ ರಸ ಸ್ಪರ್ಶದಿಂದ ಪ್ರಸಾರವಾಗುವುದು ಕಾರಣ.
ಯಾವಾಗಲೂ ಶಿಲೀಂದ್ರಗಳು ವಾತಾವರಣದ ವ್ಯತ್ಯಯದಿಂದ ಬರುತ್ತದೆ. ಅಡಿಕೆ ಬೆಳೆಗೆ ಬರುವ ಶಿಲೀಂದ್ರ ರೋಗ ( ಕೊಳೆ ರೋಗ) ಸಹ ಅಧಿಕ ಮಳೆಗೆ ಬರುವುದಕ್ಕಿಂತ ಹೆಚ್ಚು ಮಳೆ ಮತ್ತು ಬಿಸಿಲು ಇರುವ ಸನ್ನಿವೇಶಗಳಲ್ಲಿ ಜಾಸ್ತಿ. ಮನುಷ್ಯರಿಗೂ, ಪ್ರಾಣಿಗಳಿಗೂ ಸಹ ಇಂತಹ ವಾತಾವರಣದಲ್ಲಿ ರೋಗ ರುಜಿನಗಳು ಹೆಚ್ಚು.ವಾತಾವರಣದಲ್ಲಿ ಆರ್ಧ್ರತೆ ಹೆಚ್ಚಾದಾಗ ರೋಗಗಳು ಹೆಚ್ಚಾಗುತ್ತದೆ. ಬಾಳೆಯ ಸಿಗಟೋಕಾ ಎಲೆ ಚುಕ್ಕೆ ರೋಗಕ್ಕೆ ತಾಪಮಾನ 30 ಡಿಗ್ರಿಗಿಂತ ಹೆಚ್ಚು ಮತ್ತು ಆರ್ಧ್ರತೆ 90% ಕ್ಕಿಂತ ಹೆಚ್ಚಾದಾಗ ಜಾಸ್ತಿ. ಇಂತಹ ವಾತಾವರಣದಲ್ಲಿ ಗಾಳಿಯ ಮೂಲಕ ಸಸ್ಯದಿಂದ ಸಸ್ಯಕ್ಕೆ ರೋಗ ಹರಡುವುದೂ ಸಹ ಹೆಚ್ಚು. ಈ ರೋಗಕ್ಕೆ ಕಾರಣವಾದ ಶಿಲೀಂದ್ರ Mycosphaerella musicola. ಜಗತ್ತಿನಾದ್ಯಂತ ಬಾಳೆ ಬೆಳೆಗೆ ಅತೀ ದೊಡ್ದ ತೊಂದರೆ ಮಾಡುವ ರೋಗ.
ಯಾವ ಸಮಯದಲ್ಲಿ ಜಾಸ್ತಿ.
ಮಧ್ಯ ಮಳೆಗಾಲದಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಮಳೆಗಾಲ ಮುಗಿಯುವ ಸಪ್ಟೆಂಬರ್ ತಿಂಗಳಲ್ಲಿ ನಮಗೆ ಇದು ಗೋಚರವಾಗುತ್ತದೆ.
- ಅದು ಮಳೆಗಾಲ ಮುಗಿಯುವ ಸಮಯದಲ್ಲಿ ಬಾಧಿಸಿದರೆ ಮುಂದಿನ ಚಳಿಗಾಲ ಪ್ರಾರಂಭವಾಗುವಾಗ ನಮ್ಮ ಗಮನಕ್ಕೆ ಬರುತ್ತದೆ.
- ಕೆಲವೊಮ್ಮೆ ಚಳಿಗಾಲದಲ್ಲಿ ಅಧಿಕ ಇಬ್ಬನಿ ಬೀಳುವ ಸಮಯದಲ್ಲೂ ಬರುತ್ತದೆ.
- ಬಾಳೆಗೆ ಬರುವ ರೋಗಗಳಲ್ಲಿ ಬಂಚೀ ಟಾಪ್ ಒಂದನ್ನು ಹೊರತು ಪಡಿಸಿ ಉಳಿದ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ನಿಯಂತ್ರಣ ಮಾಡುವುದು ಸುಲಭ.

ಯಾವ ಬಾಳೆಗೆ ಹೆಚ್ಚು:
ವಾಣಿಜ್ಯ ಬಾಳೆ ತಳಿಗಳಾದ ಕ್ಯಾವೆಂಡೀಶ್ ತಳಿಗಳು, ಪುಟ್ಟು ಬಾಳೆ, ನೇಂದ್ರ , ಸಕ್ಕರೆ ಬಾಳೆ( ಕರ್ಪೂರವಳ್ಳಿ) ಮತ್ತು ಸುಗಂಧಿ ( ಮೈಸೂರು) ಅಡುಗೆಗೆ ಬಳಸಲ್ಪಡುವ (monthan) ಹಾಗೂ ರಸ ಬಾಳೆ ತಳಿಗಳಿಗೆ ಈ ರೋಗ ಬರುವುದು ಜಾಸ್ತಿ. ಮೊದಲು ಕೆಲ ಭಾಗದ ಎಲೆಗಳಿಗೆ ಬಾಧಿಸುತ್ತದೆ. ಎಲೆಗಳಲ್ಲಿ ಸಣ್ಣ ಸಣ್ಣ ಹಳದಿ ಚುಕ್ಕೆಗಳ ಮೂಲಕ ಇದು ಪ್ರಾರಂಭವಾಗುತ್ತದೆ.
ರೋಗ ಚಿನ್ಹೆ:
- ಈ ರೋಗ ಬಂದಾಗ ಎಲೆಗಳ ಮೇಲೆ ಪ್ರಾರಂಭಿಕ ಹಂತದಲ್ಲಿ ಕಂದು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
- ನಂತರ ಈ ಚುಕ್ಕೆಗಳು ಅಗಲವಾಗುತ್ತಾ ಹೋಗುತ್ತದೆ.
- ಇದು ಕೆಳಭಾಗದ ಮೂರು –ನಾಲ್ಕು ಎಲೆಗಳಲ್ಲಿ ಕಂಡು ಬರುತ್ತದೆ..
- ಎಲೆಗಳ ಅಲಗು ಚುರುಟಿಕೊಂಡು, ಎಲೆಯ ಮೇಲೆಲ್ಲಾ ಚಿತ್ರ ಬಿಡಿಸಿದಂತೆ ಕಲೆಗಳು ಉಂಟಾಗುತ್ತವೆ.
- ಕೆಲವೊಮ್ಮೆ ಇಡೀ ಎಲೆಯಲ್ಲಿ ಈ ಚಿನ್ಹೆ ಕಾಣಿಸದೆ, ಎಲೆಯಲ್ಲಿ ಅಲ್ಲಲ್ಲಿ ಒಣ ಪ್ಯಾಚ್ ಗಳು ಕಾಣಿಸಬಹುದು.
- ಹೆಚ್ಚಾದಂತೆ ಅದು ಮೇಲ್ಭಾಗದ ಎಲೆಗಳಿಗೆ ವ್ಯಾಪಿಸುತ್ತದೆ.
- ಕೊನೆಗೆ ಸುಳಿಯ ತನಕವೂ ವಿಸ್ತಾರವಾಗುತ್ತದೆ.
- ಬಾಳೆ ಸಸ್ಯದ ದ್ಯುತಿ ಸಂಸ್ಲೇಷಣ ಕ್ರಿಯೆಗೆ ತೀವ್ರವಾಗಿ ತೊಂದರೆಯಾಗಿ ಗೊನೆ ಇದ್ದರೆ ಕಾಯಿ ಸಣಕಲಾಗುತ್ತದೆ.
- ಗೊನೆ ಹಾಕದ ಬಾಳೆಯಾದರೆ ಅದರ ಆಶೆ ಬಿಡಬೇಕು.
- ಇದಕ್ಕೆ ಕಾರಣ Pseudocercospora musicola (formerly Mycosphaerella musicola) ಶಿಲೀಂದ್ರ .
- ಇದರಲ್ಲಿ ಹಳದಿ ಸಿಗಟೋಕಾ ಮತ್ತು ಕಪ್ಪು ಸಿಗಟೋಕಾ ಎಂಬ ಎರಡು ವಿಧಗಳಿವೆ.
- ಪ್ರಪಂಚದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಕಾಣಬಹುದು.
ಹಳದಿ ಸಿಗಟೋಕಾದಲ್ಲಿ ಮೊದಲು ಹಳದಿ ಬಣ್ಣದ ಪ್ಯಾಚ್ ಗಳು ಆದರೆ ಕಪ್ಪು ಸಿಗಟೋಕಾದಲ್ಲಿ ಕಡು ಬೂದು ಬಣ್ಣದ ಪ್ಯಾಚ್ ಗಳಾಗುತ್ತವೆ. ಹೆಚ್ಚಾಗಿ ಮಳೆಗಾಲದಲ್ಲಿ ನೆಟ್ಟ ಸ್ಥಳದಲ್ಲಿ ನೀರು ನಿಂತರೆ ಅಥವಾ ಮಣ್ಣು ಕೊಚ್ಚಣೆಯಾಗಿ ಬುದ ಭಾಗದಲ್ಲಿ ಅಂಟು ಮಣ್ಣು ಸಂಗ್ರಹವಾದರೆ ಅಲ್ಲಿ ರೋಗ ಸಾಧ್ಯತೆ ಹೆಚ್ಚು. ನೆಲದಲ್ಲಿ ನೀರು ನಿಂತು ಅಲ್ಲಿ ಮಣ್ಣು ಹಳಸಿದ ಸ್ಥಿತಿ ಉಂಟಾಗಬಾರದು.ಶುಷ್ಕ ವಾತಾವರಣ ಸ್ಥಿತಿ ಏರ್ಪಡುವ ಚಳಿಗಾಲದಲ್ಲಿ ಹಿಮ ಬೀಳುವಾಗ ಉಲ್ಬಣವಾಗುತ್ತದೆ.
ನಿಯಂತ್ರಣ:
- ಮಳೆಗಾಲದಲ್ಲಿ ರೋಗ ಇರಲಿ, ಇಲ್ಲದಿರಲಿ,ಬಾಳೆ ಎಲೆಯ ಅಡಿ ಭಾಗಕ್ಕೆ ಕಾಪರ್ ಆಕ್ಸೀ ಕ್ಲೋರೈಡ್ ( 3 ಗ್ರಾಂ/ಲೀ) ಪ್ರಮಾಣದಲ್ಲಿ ಸಿಂಪರಣೆ ಮಾಡಿದರೆ ರೋಗ ಬರದಂತೆ ತಡೆಯಬಹುದು.
- ಬೋರ್ಡೋ ದ್ರಾವಣವೂ ಆಗುತ್ತದೆ. ಬಾವಿಸ್ಟಿನ್ ಸಹ ಆಗುತ್ತದೆ.
- ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವವರು “ಟಿಲ್ಟ್” ಸಿಂಪರಣೆ ಮಾಡುತ್ತಾರೆ. “ಸೆಕ್ಟಿನ್” ಸಹ ಆಗುತ್ತದೆ.
- ಎಲೆಯಲ್ಲಿ ಈ ಚಿನ್ಹೆ ಕಂಡು ಬಂದ ತಕ್ಷಣ ಕೆಳ ಭಾಗದ ಎಲೆಗಳನ್ನು ತೆಗೆದು ಅದನ್ನು ಸುಡಬೇಕು.
- ಇಲ್ಲವೇ ಪ್ರಖರ ಬಿಸಿಲಿಗೆ ಹಾಕಬೇಕು .ಬುಡದಲ್ಲಿ ಹಾಕಬಾರದು. ಇದು ರೋಗ ಹೆಚ್ಚಾಗಲು ಕಾರಣವಾಗುತ್ತದೆ.
- ಉಳಿದ ಎಲೆಗಳಿಗೆ ಗಮ್ ಸೇರಿಸಿ ಮ್ಯಾಂಕೋಜೆಬ್ ಅಥವಾ ಬಾವಿಸ್ಟಿನ್ ಶಿಲೀಂದ್ರ ನಾಶಕವನ್ನು ಸಿಂಪಡಿಸಬೇಕು.
ಮುಂಜಾಗ್ರತೆ:
- ತೋಟದಲ್ಲಿ ಕಳೆಗಳು ಇರದಂತೆ ನೋಡಿಕೊಳ್ಳಬೇಕು.
- ಮಳೆ ಬರುವ ಮುಂಚೆ ಬುಡ ಭಾಗದಲ್ಲಿ ನೀರು ನಿಲ್ಲದಂತೆ ಏರಿಕೆ ಮಾಡಬೇಕು. ಬಸಿ ಗಾಲುವೆ ಮಾಡುವುದು ಅಗತ್ಯ.
- ಈ ರೋಗ ಬರಲು ಪ್ರಮುಖ ಕಾರಣ , ಬಾಳೆಯ ಸಾಂದ್ರತೆ (Density) ಹೆಚ್ಚು ಇರುವುದು. ಅಧಿಕ ಸಾಂದ್ರ ಬೇಸಾಯದಲ್ಲಿ ಉಂಟಾಗುವ ಸೂಕ್ಷ್ಮ ವಾತಾವರಣ Micro climate ರೋಗಕ್ಕೆ ಕಾರಣವಾಗುತ್ತದೆ.
- ಗಾಳಿ ಬೆಳಕು ಹೆಚ್ಚು ಆಡದೇ ಇರುವುದು.
- ಇಂತಹ ಸಂದರ್ಭಗಳಲ್ಲಿ ಕೆಳ ಭಾಗದ ಮೂರು ನಾಲ್ಕು ಎಲೆಯನ್ನು ತೆಗೆದು, ಸಸ್ಯಕ್ಕೆ ಪೊಷಕಾಂಶದ ಕೊರತೆ ಆಗದಂತೆ ಪತ್ರ ಸಿಂಚನದ ಮೂಲಕ ಗೊಬ್ಬರವನ್ನು ಕೊಡಬೇಕು.
- ಸಾರಜನಕ ಗೊಬ್ಬರವನ್ನು ಮಳೆಗಾಲದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಡಬೇಕು. ನೀರು ನಿಲ್ಲಬಾರದು.
- ಬೇರುಗಳು ಹಾನಿಗಾದಂತೆ ನೋಡಿಕೊಳ್ಳಬೇಕು.
- ಮಳೆ ಮುಗಿಯುವುದರ ಒಳಗೆ ಬುಡ ಭಾಗಕ್ಕೆ ಮಣ್ಣು ಹಾಕಿ, ಗೊಬ್ಬರ ಕೊಟ್ಟು ಹೊಸ ಬೇರು ಬೆಳೆಯಲು ಅನುಕೂಲ ಮಾಡಿಕೊಡಬೇಕು.
- ಮಳೆಗಾಲದಲ್ಲಿ ರಂಜಕ ಮತ್ತು ಪೊಟ್ಯಾಶಿಯಂ ಉಳ್ಳ ಗೊಬ್ಬರ ಕೊಡುವುದರಿಂದ ರೋಗ ಸಾಧ್ಯತೆ ಕಡಿಮೆಯಾಗುತ್ತದೆ.
ಎಲೆಗಳ ಸಂಖ್ಯೆಗೆ ಅನುಗುಣವಾಗಿ ಬಾಳೆ ಗೊನೆ ಪುಷ್ಟಿಯಾಗುತ್ತದೆ. ಎಲೆಗಳಿಗೆ ಹೀಗೆ ರೋಗ ಸೋಕು ತಗಲಿದಾಗ ಅದಕ್ಕೆ ಔಷದೋಪಚಾರ ಮಾಡಿ, ಜೊತೆಗೆ ಬಾಳೆ ಗೊನೆಗೆಗೆ ಪೋಷಕಾಂಶಗಳನ್ನು ಸಿಂಪರಣೆ ಮೂಲಕ ಕೊಡಬೇಕು.