ಬೀಜ ಬಿತ್ತುವಾಗ , ಸಸಿ ನೆಡುವಾಗ ಅದಕ್ಕೆ ತಕ್ಷಣ ಮತ್ತು ಅದರ ಜೀವಮಾನದುದ್ದಕ್ಕೂ ಅಂತರ್ಗತ ಶಕ್ತಿ ತುಂಬಲು ಬೇಕಾಗುವುದು ಮೂಲಗೊಬ್ಬರ. ನಮ್ಮ ಹಿರಿಯರು ಬೀಜ ಬಿತ್ತುವ ಸಮಯದಲ್ಲಿ ಬರೇ ಮಣ್ಣಿಗೆ ಬೀಜ ಹಾಕುತ್ತಿರಲಿಲ್ಲ. ಬದಲಿಗೆ ಹುಡಿಯಾದ ಕೊಟ್ಟಿಗೆ ಗೊಬ್ಬರ ಹಾಕಿ ಅದರ ಮೇಲೆ ಬೀಜ ಬಿತ್ತುತ್ತಿದ್ದರು. ಅದು ಆ ಸಸ್ಯಕ್ಕೆ ಪ್ರಾರಂಭದಲ್ಲಿ ಬೆಳವಣಿಗೆಯ ಶಕ್ತಿ ತುಂಬುವುದಕ್ಕಾಗಿ. ಹೀಗೆ ಬಿತ್ತನೆ ಮಾಡಿದ ಸಸಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮೊಳಕೆಯಿಂದಲೇ ಸಧೃಢವಾಗಿ ಬೆಳೆಯಲಾರಂಭಿಸುತ್ತದೆ.
ಹಸು ಮೇವಿನ ಜೊತೆಯಲ್ಲಿ ತಿಂದ ಹುಲ್ಲಿನ ಬೀಜಗಳು ಸಗಣಿಯೊಂದಿಗೆ ಹೊರ ಬರುತ್ತದೆ.ಆ ಸಗಣಿಯನ್ನು ಎಲ್ಲಿಯಾದರೂ ಹಾಕಿದರೆ ಅದರಲ್ಲಿ ಹುಟ್ಟಿದ ಹುಲ್ಲಿನ ಬೀಜಗಳು ಎಷ್ಟೊಂದು ಶಕ್ತಿಶಾಲಿಯಾಗಿ ಬೆಳೆಯುತ್ತದೆ! ಹಾಗೆಯೇ ಸಗಣಿಯ ಉಂಡೆಯೊಂದನ್ನು ಮಾಡಿ ಅದರ ಒಳಗೆ ಯಾವುದಾದರೂ ತರಕಾರಿ ಬೀಜವನ್ನು ಹಾಕಿದರೆ ಎಷ್ಟು ಚೆನ್ನಾಗಿ ಮೊಳಕೆ ಒಡೆಯುತ್ತದೆ, ಹಾಗೆಯೇ ಬೆಳವಣಿಗೆಯನ್ನು ಹೊಂದುತ್ತದೆ! ಹಕ್ಕಿಗಳು ತಿಂದ ಯಾವುದಾದರೂ ಬೀಜ ನೆಲಕ್ಕೆ ಬಿದ್ದ ಮೇಲೆ ಯಾವ ಕಷ್ಟವೂ ಇಲ್ಲದೆ ಬೆಳೆಯುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆಲ್ಲಾ ಕಾರಣ ಆ ಬೀಜಕ್ಕೆ ಮೊಳೆಯುವ ಹಂತದಲ್ಲಿ ಶಕ್ತಿಕೊಡುವ ಮೂಲಗೊಬ್ಬರ.
ಒಂದೊಂದು ಬೆಳೆಗೆ ಮೂಲದಲ್ಲೇ ಬಲವಾದ ನೆಲೆಯ ಅಗತ್ಯವಿರುತ್ತದೆ. ಬೀಜ ಬಿತ್ತುವಾಗ ಸಸಿ ನೆಡುವಾಗ ಮೂಲ ಗೊಬ್ಬರ ಬೆಳೆಗಾಗಿ ಬಲವಾದ ಅಡಿಪಾಯವನ್ನು ನಿರ್ಮಿಸುವ ಪ್ರಮುಖ ಹಂತವಾಗಿದೆ. ಬೀಜ ಬಿತ್ತುವ ಅಥವಾ ನಾಟಿ ಮಾಡುವ ಮುನ್ನ ಮಣ್ಣಿಗೆ ನೀಡುವ ಗೊಬ್ಬರವನ್ನು ಮೂಲ ಗೊಬ್ಬರ ಎಂದು ಕರೆಯಲಾಗುತ್ತದೆ. ಇದು ಸಸ್ಯದ ಆರಂಭಿಕ ಬೆಳವಣಿಗೆಗೆ ಅವಶ್ಯಕವಾಗಿರುವ ಪೋಷಕಾಂಶಗಳನ್ನು ಒದಗಿಸಿ, ಬೆಳವಣಿಗೆಯುದ್ದಕ್ಕೂ ವಿಷೇಶ ಶಕ್ತಿ ಕೊಡುತ್ತದೆ.
ಮೂಲಗೊಬ್ಬರ (ಬೇಸಲ್ ಡೊಸ್ ಮೆನ್ಯೂರ್)ಎಂದರೇನು?
ಬೆಸಲ್ ಡೋಸ್ ಎಂದರೆ ಮಣ್ಣಿಗೆ ಬೆಳೆ ಬಿತ್ತುವ ಮುನ್ನ ನೀಡಲಾಗುವ ಗೊಬ್ಬರದ ಪ್ರಮಾಣ. ಇದರಲ್ಲಿ ಸಾಮಾನ್ಯವಾಗಿ ಚೆನ್ನಾಗಿ ಹುಡಿಯಾದ ಅಥವಾ ಕಾಂಪೋಸ್ಟ್ ಆದ ಕೊಟ್ಟಿಗೆ ಗೊಬ್ಬರ (FYM), ಕಾಂಪೋಸ್ಟ್, ವರ್ಮಿ ಕಾಂಪೋಸ್ಟ್ ಅಥವಾ ಶಿಫಾರಸಿತ ರಾಸಾಯನಿಕ ಗೊಬ್ಬರಗಳು ಸೇರಿರುತ್ತವೆ. ಈ ಗೊಬ್ಬರವು ಮಣ್ಣಿನ ಪೋಷಕ ಶಕ್ತಿಯನ್ನು ಹೆಚ್ಚಿಸಿ, ಚಿಗುರೆ ಸಸಿಗಳಿಗೆ ಉತ್ತಮ ಆಧಾರ ಒದಗಿಸುತ್ತದೆ. ಬೀಜ ಅಥವಾ ಸಸ್ಯವೊಂದು ಶಕ್ತಿಶಾಲಿಯಾಲಿಯಾಗಿ ಮೊಳಕೆಬರಲು ಕೆಲವು ಸಾರಾಂಶಗಳು ಅಗತ್ಯವಾಗಿ ಬೇಕು. ಹೆಚ್ಚಿನ ಬೀಜಗಳು ಮೊದಲು ಬೇರು ಹೊರ ಹಾಕಿ ನಂತರ ಎಲೆ ಮೊಳಕೆ ಹೊರ ಹಾಕುತ್ತವೆ. ಆ ಬೇರುಗಳಿಗೆ ತಕ್ಷಣ ಬೇಕಾಗುವುದು ಸೌಮ್ಯ ಸ್ವಭಾವದ ಉತ್ತಮ ಗೊಬ್ಬರ. ಇದುವೇ ಮೂಲಗೊಬ್ಬರ.
ಬೆಸಲ್ ಡೋಸ್ ಯಾಕೆ ಅಗತ್ಯ?
ಚಿಗುರೆ ಸಸ್ಯಗಳ ಬಲವಾದ ಸ್ಥಾಪನೆ
ಆರಂಭಿಕ ಹಂತದಲ್ಲಿ ಸಸ್ಯಗಳಿಗೆ ಪೋಷಕಾಂಶಗಳ ಅವಶ್ಯಕತೆ ಹೆಚ್ಚು. ಬೆಸಲ್ ಡೋಸ್ ಗೊಬ್ಬರ ಇದನ್ನು ಪೂರೈಸಿ, ಬೀಜಗಳ ಉತ್ತಮ ಮೊಳಕೆಯೊಂದಿಗೆ ಸಸ್ಯ ಸ್ಥಿರವಾಗಿ ಬೆಳೆಯಲು ನೆರವಾಗುತ್ತದೆ.
ಮಣ್ಣಿನ ರಚನೆ ಮತ್ತು ನೀರು ಹಿಡಿದಿಡುವ ಸಾಮರ್ಥ್ಯ ಸುಧಾರಣೆ
ಸಾವಯವ ಗೊಬ್ಬರವು ಮಣ್ಣಿನ ಸಡಿಲತೆಯನ್ನು ಹೆಚ್ಚಿಸುತ್ತದೆ. ನೀರು ಹಿಡಿದಿಡುವ ಸಾಮರ್ಥ್ಯ ಹಾಗೂ ಅದರಲ್ಲಿರುವ ಕಿಣ್ವಗಳು ಮೊಳಕೆ ಚೆನ್ನಾಗಿ ಬರಿಸುವ ಗುಣಗಳನ್ನು ಹೊಂದಿರುತ್ತದೆ. ಇದರಿಂದ ಬೇರುಗಳು ಹಾಗಿ ಪ್ರಾರಂಭಿಕ ಎಲೆಗಳ ಬೆಳವಣಿಗೆ ಉತ್ತಮವಾಗಿ ನಡೆಯುತ್ತದೆ.
ಬೆಳೆಯ ಆರಂಭಿಕ ಹಂತಕ್ಕೆ ಸಮರ್ಪಕ ಪೋಷಕಾಂಶಗಳು
ಸಸ್ಯದ ಆರಂಭಿಕ ಹಂತದಲ್ಲಿ ಬೇರುಗಳ ವ್ಯಾಪ್ತಿ ಕಡಿಮೆ ಇರುವುದರಿಂದ, ಹತ್ತಿರದಲ್ಲೇ ಪೋಷಕಾಂಶ ಲಭ್ಯವಾಗಬೇಕು. ಬೆಸಲ್ ಡೋಸ್ ಗೊಬ್ಬರವು ಈ ಅಗತ್ಯವನ್ನು ಪೂರೈಸುತ್ತದೆ.
ಮಣ್ಣಿನ ಜೈವಿಕ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ
ಕಾಂಪೋಸ್ಟ್ ಅಥವಾ ವರ್ಮಿ ಕಾಂಪೋಸ್ಟ್, ಜೈವಾಣುಗಳ ಚಟುವಟಿಕೆಯನ್ನು ಹೆಚ್ಚಿಸಿ, ಮಣ್ಣಿನ ಪೋಷಕಾಂಶ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಣ್ಣು ಹೆಚ್ಚು ಫಲವತ್ತಾಗುತ್ತದೆ.
ಬೆಸಲ್ ಡೋಸ್ನಲ್ಲಿ ಅತ್ಯಾವಶ್ಯಕ ಪೋಷಕಾಂಶ ಯಾವುದು?
ಬೆಸಲ್ ಡೋಸ್ನಲ್ಲಿ ಸಾಮಾನ್ಯವಾಗಿ ನೈಟ್ರೋಜನ್ (N), ಫಾಸ್ಫರಸ್ (P), ಮತ್ತು ಪೊಟ್ಯಾಶಿಯಂ (K) ಇರುವ ಗೊಬ್ಬರಗಳನ್ನು ಬಳಸಲಾಗುತ್ತದೆ.
ಆದರೆ, ರಂಜಕ ಅಥವಾ ಫಾಸ್ಫರಸ್ (P) ಅತ್ಯಂತ ಪ್ರಮುಖ ಪೋಷಕಾಂಶ.
ಫಾಸ್ಫರಸ್ ಮುಖ್ಯವಾಗಿರುವ ಕಾರಣ:
- ಇದು ಮಣ್ಣಿನಲ್ಲಿ ತುಂಬಾ ಕಡಿಮೆ ಚಲಿಸುತ್ತದೆ, ಅಂದರೆ ಹಾಕಿದ ಸ್ಥಳದಲ್ಲೇ ಉಳಿಯುತ್ತದೆ.
- ಬೇರುಗಳ ಬೆಳವಣಿಗೆಗೆ ಇದು ಅತ್ಯಂತ ಅಗತ್ಯ.
- ಚಿಗುರುವ ಸಸಿಗಳಿಗೆ ಶಕ್ತಿ (Energy transfer) ಒದಗಿಸುತ್ತದೆ.
- ಪ್ರಾರಂಭಿಕ ಬೆಳವಣಿಗೆಯನ್ನು ಬಲಿಷ್ಠಗೊಳಿಸುತ್ತದೆ.
ಅದೆ ಕಾರಣಕ್ಕೆ ಬೆಸಲ್ ಡೋಸ್ನಲ್ಲಿ ಫಾಸ್ಫರಸ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಸಾಮಾನ್ಯವಾಗಿ ಗಿಡ ನೆಡುವಾಗ ಶಿಲಾ ರಂಜಕವನ್ನು ಸಸ್ಯದ ಬೇರಿಗೆ ತಾಗುವಂತೆ ಹಾಕಲಾಗುತ್ತದೆ. ಅದು ಬೇರು ಹೆಚ್ಚು ಬೆಳವಣಿಗೆ ಹೊಂದುವಂತೆ ಪ್ರೇರೇಪಿಸುತ್ತದೆ. ಇತರ ರಂಜಕ ಗೊಬ್ಬರವಾದ ಸಿಂಗಲ್ ಸೂಪರ್ ಫೋಸ್ಫೇಟ್ ಅಥವಾ DAP ಇವುಗಳನ್ನೂ ಸಹ ಬಳಸುತ್ತಾರೆ. ಶಿಲಾ ರಂಜಕ ಹೊರತಾಗಿ ಬೇರೆ ರಸ ಗೊಬ್ಬರವನ್ನು ಬಳಸುವ ವಿಧಾನ ಭಿನ್ನವಾಗಿರುತ್ತದೆ.
ಮೂಲಗೊಬ್ಬರವನ್ನು ಎಲ್ಲಿ ಹಾಕಬೇಕು—ಬೀಜದ ಹತ್ತಿರವೇ ಅಥವಾ ದೂರವೋ?
ಸಾವಯವ ಗೊಬ್ಬರ (FYM/ಕಾಂಪೋಸ್ಟ್):
ಬಿತ್ತುವ 1–2 ವಾರಗಳ ಮೊದಲು ಮಣ್ಣಿನಲ್ಲೇ ಚೆನ್ನಾಗಿ ಬೆರೆಸಿ ಹಾಕಬೇಕು. ಇದು ಮಣ್ಣಿನೊಂದಿಗೆ ಸಮರ್ಪಕವಾಗಿ ಮಿಶ್ರಣವಾಗಲು ಸಹಾಯಕ. ಸಾವಯವ ಗೊಬ್ಬರ ಬಳಸುವಾಗ ಅದರ ಜೊತೆಗೆ ಬೀಜೋಪಚಾರಕ್ಕಾಗಿ ಜೈವಿಕ ಗೊಬ್ಬರಗಳನ್ನೂ ಸೇರಿಸಿದರೆ ತುಂಬಾ ಪ್ರಯೋಜನ ಇದೆ.
ರಾಸಾಯನಿಕ ಗೊಬ್ಬರ:

- ರಾಸಾಯನಿಕ ಗೊಬ್ಬರವನ್ನು ಬೀಜಕ್ಕೆ ನೇರವಾಗಿ ತಗುಲಬಾರದು.
- ಸಾಮಾನ್ಯವಾಗಿ 3–5 ಸೆಂ.ಮೀ ಆಳದಲ್ಲಿ ಮತ್ತು 3–5 ಸೆಂ.ಮೀ ದೂರದಲ್ಲಿ ಹಾಕುವುದು ಉತ್ತಮ.
- ತರಕಾರಿ ಅಥವಾ ಹಣ್ಣು ಕುಳಿಗಳಲ್ಲಿ ನಾಟಿ ಮಾಡುವಾಗ ಗೊಬ್ಬರವನ್ನು ಕುಳಿ ಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.
ನೇರ ಸಂಪರ್ಕದಿಂದ ಬೀಜ ಸುಡುವ ಅಪಾಯವಿರುವುದರಿಂದ ಸ್ವಲ್ಪ ದೂರದಲ್ಲಿ ಹಾಕುವುದು ಸರಿಯಾದ ಕ್ರಮ.
ಮೂಲಗೊಬ್ಬರ ಹಾಕದಿದ್ದರೆ ಏನು ಪರಿಣಾಮ?
ಅಸಮರ್ಪಕ ಮೊಳಕೆ ಮತ್ತು ದುರ್ಬಲ ಚಿಗುರುಗಳು
ಆರಂಭಿಕ ಪೋಷಕಾಂಶ ಕೊರತೆಯಿಂದ ಮೊಳಕೆ ದುರ್ಬಲವಾಗುತ್ತದೆ. ಮೊಳಕೆ ದುರ್ಬಲವಾದರೆ ಬೆಳೆ ಫೈಲ್ ಎಂದೇ ಹೇಳಬಹುದು.
ಬೇರುಗಳ ಶಕ್ತಿಹೀನ ಬೆಳವಣಿಗೆ
ಫಾಸ್ಫರಸ್ ಕೊರತೆಯಿಂದ ಬೇರುಗಳು ಆಳವಾಗಿ ಬೆಳೆಯುವುದಿಲ್ಲ, ಇದರಿಂದ ಮುಂದಿನ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಬರುವ ಸಧೃಢ ಬೇರುಗಳು ಸಸಿಯ ಜೀವನಾನದ ಬೆಳೆವಣಿಗೆಯನ್ನು ನಿರ್ಧರಿಸುತ್ತದೆ.
ಉತ್ಪಾದನೆ ಕುಂಠಿತವಾಗುವುದು
ಆರಂಭಿಕ ಹಂತದಲ್ಲಿ ಪೋಷಕಾಂಶದ ಕೊರತೆಯಿಂದ ಸಸ್ಯದ ಬೆಳವಣಿಗೆ ಹಿಂದುಳಿಯುತ್ತದೆ. ನಂತರ ಗೊಬ್ಬರ ಹಾಕಿದರೂ ಸಂಪೂರ್ಣವಾಗಿ ಪುನಃಸ್ಥಾಪನೆ ಆಗುವುದಿಲ್ಲ.
ರೋಗಗಳು ಮತ್ತು ಕೀಟಗಳಿಗೆ ಹೆಚ್ಚಿನ ಅವಕಾಶ:
ಪೋಷಕಾಂಶ ಕೊರತೆಯ ಸಸ್ಯಗಳು ಹೆಚ್ಚು ರೋಗಗ್ರಸ್ತವಾಗುವ ಸಾಧ್ಯತೆ ಇರುತ್ತದೆ. ಬೇರು ವ್ಯವಸ್ಥೆ ಸಧೃಢವಾಗಿದ್ದರೆ ಸಸ್ಯ ಬಲಿಷ್ಟವಾಗಿ ರೋಗ/ ಕೀಟಗಳಿಗೆ ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿ ಹೊಂದಿರುತ್ತದೆ.
ಬೆಸಲ್ ಡೋಸ್ ಗೊಬ್ಬರವು ಬೆಳೆ ಬೆಳವಣಿಗೆಯ ಅಡಿಪಾಯ. ಇದು ಮಣ್ಣಿನ ಫಲವತ್ತತೆ, ಚಿಗುರೆ ಸಸ್ಯಗಳ ಬಲ, ಬೇರುಗಳ ಬೆಳವಣಿಗೆ ಹಾಗೂ ಒಟ್ಟು ಉತ್ಪಾದನೆಗೆ ನೇರ ಪರಿಣಾಮ ಬೀರುತ್ತದೆ. ಕೃಷಿಯಲ್ಲಿ ಉತ್ತಮ ಫಲಿತಾಂಶ ಬಯಸುವ ಪ್ರತಿಯೊಬ್ಬ ಕೃಷಿಕನೂ ಬೆಸಲ್ ಡೋಸ್ ಅನ್ನು ತಪ್ಪದೇ ಅನುಸರಿಸಬೇಕು. ಕರಾವಳಿ / ಮಲೆನಾಡಿನಲ್ಲಿ ಹಿಂದೆ ಭತ್ತದ ಬೇಸಾಯ ಮಾಡುವವರು ಬೀಜದ ಉಂಡೆಯಂತೆ (ಉಂಡೆ ಬೀಜ ಅಥವಾ ಪುಂಡಿ ಬಿತ್ತು) ಮಾಡಿ ಬಿತ್ತನೆ ಮಾಡುವುದಿತ್ತು. ಈ ವಿಧಾನ ಸ್ವಲ್ಪ ಶ್ರಮದಾಯಕ ಆಗಿದ್ದರೂ ಬೆಳೆ ಚೆನ್ನಾಗಿ ಬಂದು ಇಳುವರಿಯೂ ಗಣನೀಯಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು.
ಬಲವಾದ ನೆಲೆಗಟ್ಟು, ಉತ್ತಮ ಬೆಳೆ—ಇದು ಬೆಸಲ್ ಡೋಸ್ನ ನಿಜವಾದ ಶಕ್ತಿ.
