ಅಡಿಕೆ ಕಾಯಿಗಳಿಗೆ ಕೊಳೆ ಬಂದು ತೋಟದಲ್ಲಿ ವಾಸನೆ ಬರುವ ಸ್ಥಿತಿ ಉಂಟಾಗಿದೆ. ಇನ್ನೂ ಮಳೆಯ ಮುನಿಸು ಶಾಂತವಾಗಿಲ್ಲ. ಮುಂದಿನ ವರ್ಷ ಅಡಿಕೆ ಬೆಳೆಗಾರರು ಖರ್ಚಿಗೇನು ಮಾಡುವುದೋ ತಿಳಿಯದಾಗಿದೆ.ಇಂತಹಸ್ಥಿತಿ ಈ ತನಕ ಬಂದಂತಿಲ್ಲ. ಯಾವ ತೋಟಗಾರನನ್ನೂ ಬಿಡದೆ ಕಾಡಿದ ಈ ಕೊಳೆ ರೋಗ ಯಾಕೆ ಈ ರೀತಿ ರೌದ್ರ ರೂಪ ತಾಳಿತು? ಕೊಳೆ ಔಷಧಿ ಸರಿಯಾಗಲಿಲ್ಲವೇ? ಮೈಲುತುತ್ತೆ ಸರಿಯಿಲ್ಲವೇ? ಔಷಧಿ ಸಿಂಪಡಿಸಿದ್ದು ಸರಿಯಾಗಲಿಲ್ಲವೇ ? ಇದು ನಮ್ಮೆಲ್ಲರ ಸಂಶಯದ ಊಹನೆಗಳು. ಆದರೆ ವಾಸ್ತವವೇ ಬೇರೆ. ಆ ವಿಷಯವನ್ನು ನಾವು ಯಾರೂ ಗಮನಿಸಿರಲಿಕ್ಕಿಲ್ಲ. ಆದರೆ ಸತ್ಯ.
ಸ್ವಲ್ಪ ಕೊಳೆ ರೋಗ ಬಂತೆಂದರೆ ಅಡಿಕೆ ಬೆಳೆಗಾರರು ಸ್ವಲ್ಪ ಡಲ್ ಆಗುವುದು ಸಾಮಾನ್ಯ. ಆದರೆ ಈ ವರ್ಷ ಬಹುಪಾಲು ಬೆಳೆಗೆ ಕೊಳೆಬಂದಿದೆ. ಸ್ಥಿತಿ ಹೇಗಿರಬಹುದು ಯೋಚಿಸಿ. ಈಗ ಹೆಚ್ಚಿನವರು ಯೋಚಿಸುವುದು ನಾವು ಬಳಸಿದ ಮೈಲುತುತ್ತೆ ಸರಿಯಾಗಿಲ್ಲ ಆ ಕಾರಣ ರೋಗ ನಿಯಂತ್ರಣಕ್ಕೆ ಬರಲಿಲ್ಲ ಎಂಬುದಾಗಿ.ಇನ್ನು ಕೆಲವರು ಆ ಹಾಳಾದ ಔಷಧಿಹೊಡೆಯುವವರು ಉದಾಸೀನ ಮಾಡಿ ಅರ್ಧಂಬರ್ಧ ಸಿಂಪಡಿಸಿದ ಕಾರಣ ರೋಗ ತಗಲಿದೆ, ಹರಡಿದೆ ಎಂಬುದಾಗಿ. ಇನ್ನು ಕೆಲವರು ಬೇರೆಯವರ ತೋಟದಲ್ಲಿ ಕೊಳೆ ಇಲ್ಲ, ಕಾರಣ ಆರು ಹೆಚ್ಚು ತುತ್ತೆ, ಹೆಚ್ಚು ಸುಣ್ಣ ಹಾಕಿ ಸ್ಟ್ರಾಂಗ್ ಮಾಡಿ ಸಿಂಪಡಿದ್ದಾರೆಂತೆ. ನಾವು ಈ ವಿಜ್ಞಾನಿಗಳ ಉಪದೇಶ ಕೇಳಿ ಕೆಟ್ಟೆವು ಎಂದೂ ಯೋಚಿಸುವವರಿದ್ದಾರೆ. ಬಹುತೇಕ ಬೆಳೆಗಾರರು 3 ಸಲ ಔಷಧಿ ಸಿಂಪಡಿಸಿದ್ದಾಗಿದೆ. ನಾಲ್ಕನೇ ಸಿಂಪರಣೆಗೆ ಸಜ್ಜಾಗಿದ್ದಾರೆ.ಆದರೆ ಹವಾಮಾನ ಅನುಕೂಲಮಾಡಿಕೊಡುತ್ತಿಲ್ಲ.
ಕೊಳೆ ರೋಗ ಯಾಕೆ ಹೆಚ್ಚಾಯಿತು?
ಹವಾಮಾನ ಅನುಕೂಲಕರವಾಗಿಲ್ಲದೆ ಇರುವುದೇ ರೋಗ ಉಲ್ಬಣವಾಗಲು ಪ್ರಮುಖ ಕಾರಣ. ಇಲ್ಲಿ ಮೈಲುತುತ್ತೆಯ ಪಾತ್ರವೂ ಇಲ್ಲ. ಸುಣ್ಣದ ಪಾತ್ರವೂ ಇಲ್ಲ. ಸಿಂಪಡಿಸುವವನನ್ನು ಬಲಿಪಶು ಮಾಡಿದರೂ ಪ್ರಯೋಜನ ಇಲ್ಲ. ಒಂದು ವೇಳೆ ಸಿಂಪರಣೆ ಮಾಡದೆ ಇದ್ದರೆ ಅಥವಾ ಮೊಂಡು ದೈರ್ಯದಲ್ಲಿ ನಾಳೆ ನಾಳೆ ಎಂದು ಮುಂದೂಡಿ ತುಂಬಾ ತಡವಾಗಿ ಸಿಂಪರಣೆ ಮಾಡಿದ್ದರೆ ಅದು ಬೆಳೆಗಾರರ ತಪ್ಪಾಗುತ್ತದೆ.ಹವಾಮಾನದ ಮುಂದೆ ಯಾವ ಔಷಧಿಯೂ ಕೆಲಸ ಮಾಡುವುದಿಲ್ಲ. ಎಲ್ಲವೂ ಕೆಲವು ಇತಿಮಿತಿಗಳಿಗೆ ಒಳಪಟ್ಟವುಗಳು. ಅನಾರೋಗ್ಯ ಉಂಟಾಗಲು ಹೇಗೆ ಕೆಲವು ಕಾರಣಗಳಿವೆಯೋ ಹಾಗೆಯೇ ಉಪಶಮನವಾಗಲಿಕ್ಕೂ ಕೆಲವು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಇದನ್ನು ಸ್ಥಳೀಯ ಬಾಷೆಯಲ್ಲಿ ಪಥ್ಯ ಎನ್ನುತ್ತಾರೆ.

ರೋಗ ಯಾಕೆ ಹೆಚ್ಚಾಯಿತು ಎಂದರೆ, ಸರಳವಾಗಿ ಹೇಳಬೇಕೆಂದರೆ ಕಳೆದ ಮೂರು ತಿಂಗಳಿಂದ ಹವಾಮಾನ ಅಡಿಕೆ ಬೆಳೆಗಾರರ ಪರವಾಗಿ ಇಲ್ಲದೇ ಇರುವುದು. ತಾಪಮಾನ 20 ಡಿಗ್ರಿಗಿಂತ ಕಡಿಮೆಯಾಗಿದೆ. ಯಾವಾಗಲೂ ಮಳೆಯೇ ಬರುತ್ತಿದೆ. ಶೀತ ವಾತಾವರಣ. ಸೂರ್ಯನು ಮುಖ ದರ್ಶನ ಮಾಡದೆ ಮೂರು ತಿಂಗಳಿಗೂ ಹೆಚ್ಚಿನ ಸಮಯವಾಯಿತು ಹಾಗಾದರೆ ಪರಿಸ್ಥಿತಿ ಹೇಗಾಗಬಹುದು ಯೋಚಿಸಿ!. ಬರೇ ಬೆಳೆನಷ್ಟವಲ್ಲ. ಇನ್ನು ಮುಂದಿನ ಹಂತ ಮರಗಳ ಸಾಯುವಿಕೆ. ಈಗಾಗಲೇ ಕೆಲವು ಕಡೆ ಮರಗಳು ಹಳದಿಯಾಗಲಾರಂಭಿಸಿದೆ!
ಮೈಲುತುತ್ತೆ- ಸುಣ್ಣ – ಸಿಂಪರಣೆ ಇವುಗಳ ಸಮಸ್ಯೆ ಅಲ್ಲ:
ಇದನ್ನು ಯಾಕೆ ಇಲ್ಲಿ ಹೇಳುತ್ತೇವೆಂದರೆ ಇಂತಹ ಹವಾಮಾನ ವೈಪರೀತ್ಯದ ಸಮಯದಲ್ಲೂ ಈ ತನಕ ಅಲ್ಪ ಸ್ವಲ್ಪವಾದರೂ ಬೆಳೆ ಉಳಿದಿರುವುದು ಇವುಗಳಿಂದಲೇ. ತುತ್ತೆ, ಸುಣ್ಣ ಇವುಗಳಿಗೂ ಒಂದು ಇತಿ ಮಿತಿಗಳಿವೆ. ಅದರ ಇತಿಮಿತಿಯೊಳಗೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಆದರೆ ನೆಗಡಿ, ಜ್ವರ ಬಂದವನು ಅಶುದ್ಧ ನೀರು ಕುಡಿದಂತೆ ಇಲ್ಲಿ ಪರಿಸ್ಥಿತಿ ಉಂಟಾಗಿದೆ. ವೈದ್ಯರ ಔಷಧಿಯಲ್ಲಿ ಮಿತಿ ಮೀರದೆ ಅತ್ತ ಗುಣಮುಖವೂ ಆಗದೆ ಉಳಿದಿದೆ ಅಷ್ಟೇ. ಮೈಲುತುತ್ತೆ ಮತ್ತು ಸುಣ್ಣದ ಮಿಶ್ರಣವಾದ ಬೋರ್ಡೋ ದ್ರಾವಣ ಎಂಬುದು ಒಂದು ಮುನ್ನೆಚ್ಚರಿಕಾ ಔಷಧಿ ಮಾತ್ರ. ಇದು ಶಿಲೀಂದ್ರದ ಬೀಜಾಣುಗಳನ್ನು ( ಇರುವ) ಮೊಳಕೆ ಒಡೆಯದಂತೆ ತಡೆಯುತ್ತದೆ. ಹಾಗೆಯೇ ಅದರ ರಕ್ಷಣಾತ್ಮಕ ಶಕ್ತಿಯೂ ಸಹ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇಂತಹ ವಾತಾವಾಣದಲ್ಲಿ 20 ದಿನಕ್ಕಿಂತ ಹೆಚ್ಚು ಅದು ಪರಿಣಾಮಕಾರಿಯಾಗಿರಲಾರದು. ಶಿಲೀಂದ್ರ ಬೀಜಾಣು ವಾತಾವರಣದಲ್ಲಿ ಇರುವಂತದ್ದು. ಯಾವಾಗಲೂ ಅದು ಅಡಿಕೆಗೆ ತಗಲಬಹುದು. ಆ ಸಮಯದಲ್ಲಿ ರಕ್ಷಣೆ ಇಲ್ಲವಾದರೆ ಅದು ಮೊಳಕೆ ಒಡೆದು ಹಾನಿ ಮಾಡುತ್ತದೆ. ಇಲ್ಲಿ ನಿಜವಾದ ಕಾರಣ ವಾತಾವರಣವೇ ಹೊರತು ಔಷಧಿ ಅಲ್ಲ.
ವಾತಾವರಣ ಹೇಗೆ ಕಾರಣವಾಗುತ್ತದೆ?
ಸದಾ ತಂಪಾಗಿರುವ ವಾತಾವರಣ ಯಾವಾಗಲೂ ಕೀಟ – ರೋಗ ಬಾಧೆ ಹೆಚ್ಚಳಕ್ಕೆ ಅನುಕೂಲಕರ. ನಿರಂತರ ಶೀತಗಾಳಿ, ಮಳೆ ಬರುತ್ತಿದ್ದರೆ ಸಹಜವಾಗಿ ಮಣ್ಣಿನಲ್ಲಿ ನೀರು ಬಸಿದು ಹೋಗುವುದಿಲ್ಲ. ಆಗ ಅಲ್ಲಲ್ಲಿ ಜೌಗು ಸ್ಥಿತಿ (Water logging) ಉಂಟಾಗುತ್ತದೆ. ಜೌಗು ಎಂದರೆ ಹಳಸಲಾದ ಮಣ್ಣು ಮತ್ತು ನೀರಿನ ಸಂಗ್ರಹ. ಮಣ್ಣು ಸಹ ಹಳಸಿರುತ್ತದೆ. ನೀರು ಸಹ ಹಳಸಿರುತ್ತದೆ. ಮಣ್ಣು ನೀರು ಕುಡಿದಷ್ಟೂ ಅದರ ಕಣಾಂತರಗಳು ನೀರಿನಿಂದ ಆವರಿಸಲ್ಪಡುತ್ತದೆ. ಅಲ್ಲಿ ಇದ್ದ ಗಾಳಿ ಹೊರ ಹೋಗುತ್ತದೆ. ಈ ಸನ್ನಿವೇಶದಲ್ಲಿ ಮಣ್ಣಿನ ಜೈವಿಕ ಗುಣ ವ್ಯತ್ಯಾಸವಾಗುತ್ತದೆ. ಮೇಲ್ಮಣ್ಣು ಸಾಕಷ್ಟು ಸಾವಯವ ಅಂಶಗಳು ಒಳಗೊಂಡ ಸಂಪಧ್ಭರಿತ ಮಣ್ಣು. ಇದರಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಈ ಜೀವಾಣುಗಳು ಮಣ್ಣಿನ ರಕ್ಷಕಗಳಲ್ಲದೆ ಮಣ್ಣಿನ ಸಹಕಾರದಿಂದ ಬೆಳೆಯುವ ಸಸ್ಯಗಳಿಗೆ ಸಹ ರಕ್ಷಕವಾಗಿ ಕೆಲಸ ಮಾಡುತ್ತವೆ. ಮಣ್ಣಿನಲ್ಲಿ ಗಾಳಿ ಸಂಚಾರ ಸಮರ್ಪಕವಾಗಿದ್ದರೆ, ನಿಯಮಿತ ತೇವಾಂಶ ಇದ್ದಾಗ ಮಾತ್ರ ಅವು ಕ್ರಿಯಾತ್ಮಕವಾಗಿರುತ್ತದೆ ಅಥವಾ ಚಟುವಟಿಕೆಯಲ್ಲಿರುತ್ತವೆ. ಆದರೆ ಕೆಲವು ನಮೂನೆಯ ಅಂದರೆ ಹಾನಿಕಾರಕ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು ಗಾಳಿ ಇಲ್ಲದ ಮಣ್ಣಿನ ಸ್ಥಿತಿಯಲ್ಲಿ, ನೀರು ಮತ್ತು ಮಣ್ಣು ಹಳಸಲಾದ ಸ್ಥಿತಿಯಲ್ಲಿ ಹೆಚ್ಚು ಚಟುವಟಿಕೆಯಲ್ಲಿರುತ್ತದೆ. ಈ ವರ್ಷದ ಹವಾಮಾನ ವೈಪರೀತ್ಯದಲ್ಲಿ ಮಣ್ಣು ಅಧಿಕ ನೀರು ಕುಡಿದು ಹಾಳಾಗಿದೆ. ಮಣ್ಣಿನಲ್ಲಿ ಇರಬೇಕಾದ ಉಪಕಾರಿ ರಕ್ಷಕ (Defence) ಜೀವಾಣುಗಳು ನಾಶವಾಗುವ ಸ್ಥಿತಿ ಉಂಟಾಗಿದೆ. ಹಾಗಾಗಿ ರೋಗಕಾರಕ ಶಿಲಿಂದ್ರಗಳಿಗೆ ಅನುಕೂಲವಾಗಿದೆ. ಪ್ರಾಕೃತಿಕ ರಕ್ಷಣೆ ಎಲ್ಲದಕ್ಕಿಂತ ಪ್ರಭಲಾದದ್ದು. ನಮ್ಮ ಕೃತಕ ರಕ್ಷಣೆ ಎಷ್ಟಾದರೂ ಅಷ್ಟೇ.
ಸೂರ್ಯನನ್ನು ನೋಡದೆ 3 ತಿಂಗಳಾಗಿದೆ:
ಸೂರ್ಯನಿಗೂ ಕೊಳೆ ರೋಗಕ್ಕೂ ಏನು ಸಂಬಂಧ? ಇದು ಎಲ್ಲರ ಪ್ರಶ್ಣೆ. ಆದರೆ ವಾಸ್ತವಾಂಶ ಇಲ್ಲೇ ಇರುವುದು. ಸೂರ್ಯನ ಬೆಳಕು (Sun light) ಇದ್ದರೆ ಮಾತ್ರ ಸರ್ವಸ್ವವೂ.ಮನುಷ್ಯನ ಮೈಗೆ ಸೂರ್ಯನ ಬೆಳಕು ಬಿದ್ದರೆ ಎಲುಬು ಗಟ್ಟಿಯಾಗುತ್ತದೆ. ಶಕ್ತಿ ಸಿಗುತ್ತದೆ ಎಂಬುದು ನಮಗೆಲ್ಲಾ ಗೊತ್ತು. ಆದೇ ರೀತಿ ಸಸ್ಯಗಳಿಗೆ ನಮಗಿಂತಲೂ ಹೆಚ್ಚು ಅಗತ್ಯ ಸೂರ್ಯನ ಬೆಳಕು.ಸೂರ್ಯನ ಬೆಳಕಿನಿಂದ ಸಸ್ಯಗಳು ಉಸಿರಾಡುತ್ತವೆ. ಪತ್ರಹರಿತ್ತಿನ ಉತ್ಪಾದನೆ ಆಗುತ್ತದೆ. ಕಾಂಡಕ್ಕೆ ಶಕ್ತಿ ಮತ್ತು ಎಲೆಗಳು ಹಸುರಾಗುತ್ತವೆ. ಇದನ್ನು ನಾವು ತಿಳಿದಿದ್ದೇವೆ ಜೊತೆಗೆ ಗಮನಿಸಿದ್ದೇವೆ.
ಇವಿಷ್ಟೇ ಅಲ್ಲ. ಸೂರ್ಯನ ಬೆಳಕು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿಯನ್ನೂ ಕೊಡುತ್ತವೆ. ಸಸ್ಯಗಳ ಕೊಶ ಗೋಡೆಗಳನ್ನು (Cell wall) ಗಟ್ಟಿ ಮಾಡುತ್ತದೆ. ಬೆಳಕು ಸಸ್ಯಕ್ಕೆ ಅಗತ್ಯವಾದ ಸಕ್ಕರೆ ಅಂಶವನ್ನು ಉತ್ಪಾದಿಸಲು ನೆರವಾಗುತ್ತದೆ. ಅದರಿಂದ ಕೋಶ ಗೋಡೆಗಳು ಸಧೃಢವಾಗುತ್ತದೆ. ಇದು ರೋಗ ಕೀಟಾಣುಗಳ ಪ್ರವೇಶವನ್ನು ನಿರ್ಭಂಧಿಸುತ್ತದೆ.
ಸೂರ್ಯನ ಬೆಳಕು ಇದ್ದರೆ ಎಲೆ, ಕಾಯಿ ನೆಲ ಒಣಗುತ್ತದೆ. ಒಣಗಿದ ಸ್ಥಿತಿಯಲ್ಲಿ ಯಾವ ರೋಗಕಾರಕಗಳೂ ಬದುಕುವುದಿಲ್ಲ. ಸೂರ್ಯನ ಬೆಳಕು ಸಸ್ಯಗಳಿಗೆ ಸಮರ್ಪಕವಾಗಿ ಹಂಚಿಕೆಯಾಗಲು ನೆರಳು ಇರಬಾರದು.ಗಾಳಿ ಸಂಚಾರಕ್ಕೆ ಅನುಕೂಲ ಇರಬೇಕು. ಅದಕ್ಕಾಗಿಯೇ ಮಳೆಗಾಲಕ್ಕೆ ಮುಂಚೆ ಮರಗಳ ಗೆಲ್ಲು ಸವರಿ ಗಾಳಿ ಆಡಲು ಅನುವು ಮಾಡಿಕೊಡುವ ಪದ್ದತಿ.
ಸೂರ್ಯನ ಬೆಳಕಿನ ನೆರವಿನಿಂದ ಸಸ್ಯಗಳಲ್ಲಿ ಒಂದು ರೀತಿಯ ಹಾರ್ಮೋನು ಉತ್ಪಾದನೆಯಾಗುತ್ತದೆ. ಸಾಲಿಸಿಲಿಕ್ ಅಸಿಡ್ salicylic acid ಮತ್ತು ಜಾಸ್ಮೋನಿಕ್ ಅಸಿಡ್ jasmonic acid ಎಂಬ ಹಾರ್ಮೋನು ರೋಗಕಾರಕಗಳ ಪ್ರವೇಶವನ್ನು ತಡೆಯುತ್ತದೆ.
ಸೂರ್ಯನ ಬೆಳಕು ಕಡಿಮೆಯಾದರೆ (ಮಳೆ ಮತ್ತು ಮೋಡ ಕವಿದ ವಾತಾವರಣ) ಸಸ್ಯಯಗಳು ಪೋಷಕಾಂಶಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ನಿರಂತರ 2-3 ತಿಂಗಳ ಕಾಲ ಬಿಸಿಲೇ ಸಿಗದಿದ್ದರೆ ಸಸ್ಯಗಳು ಅದರಲ್ಲೂ ಏಕದಳ ಸಸ್ಯಗಳು ಫೋಷಕಾಂಶಗಳ ಕೊರತೆಯಿಂದ ಸೊರಗುತ್ತದೆ.ಈ ಸ್ಥಿತಿ ರೋಗಗಳನ್ನು ಆಮಂತ್ರಣ ಕೊಟ್ಟು ಆಹ್ವಾನಿಸುತ್ತವೆ.
ಅಡಿಕೆ ಇರಲಿ, ಇನ್ಯಾವುದೇ ಬೆಳೆ ಇರಲಿ, ಅದಕ್ಕೆ 90% ದಷ್ಟು ರೋಗ ರಕ್ಷಣೆ ಪ್ರಾಕೃತಿಕವಾಗಿ ಸಿಗಬೇಕು. ಉಳಿದ 10% ನಮ್ಮದು. ಇದು ಪ್ರಕೃತಿ ನಿಯಮ. ಈ ವರ್ಷ ಪ್ರಕೃತಿಯ ಮುನಿಸು ಬೆಳೆಗಾರರಿಗೆ ತೊಂದರೆಯನ್ನು ಉಂಟು ಮಾಡಿದೆ.
