ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ

ಸರಳವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಬೋರ್ಡೋ ದ್ರಾವಣ  ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ.

ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ ಎಂಬುದು ಆಮ್ಲೀಯ ವಸ್ತು ಇದರ pH  ರಸಸಾರ 3-3.5 ತನಕ ಇರುತ್ತದೆ. ಇದನ್ನು 7 ಕ್ಕೆ ಹೆಚ್ಚಿಸಲು ಬೇಕಾದಷ್ಟು ಸುಣ್ಣದ ದ್ರಾವಣವನ್ನು ಸೇರಿಸಬೇಕಾಗುತ್ತದೆ. ಇಲ್ಲಿ ಮೈಲುತುತ್ತೆಯೇ ಪ್ರಧಾನ ಶಿಲೀಂದ್ರ ನಿಯಂತ್ರಕ,ಸುಣ್ಣ ಅಲ್ಲ. ಸುಣ್ಣವನ್ನು ರಸ ಸಾರ ಕಡಿಮೆ ಮಾಡಲು ಮತ್ತು ಅಂಟಿ ಕೊಳ್ಳಲು  ಅನುಕೂಲವಾಗುವಂತೆ  ಬಳಕೆ ಮಾಡಲಾಗುತ್ತದೆ. ಸುಣ್ಣ ಅಂಟು ಗುಣದಲ್ಲಿ ಶ್ರೇಷ್ಟ.  ನಮ್ಮ ಮೈಗೆ ಸುಣ್ಣ  ಆಂಟಿ ಒಣಗಿದರೆ  ಅದನ್ನು ತೆಗೆಯಲು ಹೆಚ್ಚು ತಿಕ್ಕಿ ತೊಳೆಯಬೇಕು.  ಇದನ್ನು ವೇಗವಾಗಿ ತೊಳೆಯುವ ವಸ್ತು ಆಮ್ಲೀಯ  ಹುಳಿ. ಲಿಂಬೆ ಹುಳಿ ದ್ರಾವಣ ಸುಲಭವಾಗಿ ಕಲೆ ತೆಗೆಯುತ್ತದೆ. ಮೈಲುತುತ್ತೆಯನ್ನು ಸುಣ್ಣದ ಜೊತೆ ಮಿಶ್ರಣ ಮಾಡಿ 0.5% ,1% ,10%  ಹೀಗೆಲ್ಲಾ ದ್ರಾವಣ ತಯಾರಿಸಬಹುದು. ಅಡಿಕೆ, ಕರಿಮೆಣಸು, ಏಲಕ್ಕಿ, ಕಾಫೀ, ರಬ್ಬರ್, ದಾಳಿಂಬೆ  ದ್ರಾಕ್ಷಿ ಮುಂತಾದ ಬೆಳೆಗಳಿಗೆ ಎಲೆಗೆ ಕಾಯಿಗೆ ಸಿಂಪಡಿಸಲು ಶೇ.1 ರ ದ್ರಾವಣ ಯಥೇಚ್ಚ ಸಾಕು. ಇನ್ನು  ಕೆಲವು ಕತ್ತರಿಸಿದ ಗಾಯಗಳಿಗೆ, ಲೇಪನಕ್ಕೆ ಬಳಸಲು ಶೇ.10 ರ ದ್ರಾವಣ ಅಥವ ಪೇಸ್ಟ್ ಮಾಡಲಾಗುತ್ತದೆ. ತಯಾರಿಸುವಾಗ ಹೆಚ್ಚು ಮೈಲುತುತ್ತೆ ಬಳಸುವುದು ಸುಣ್ಣ ಬಳಸುವುದು ಅಗತ್ಯವಿಲ್ಲದ್ದು.

ಮೈಲುತುತ್ತೆಗೆ ಅದರಲ್ಲಿ ತಾಮ್ರದ ಅಂಶ ಇರುವ ಕಾರಣ ಶಿಲೀಂದ್ರ ನಿಯಂತ್ರಕ ಗುಣ ಇರುತ್ತದೆ. ಬರೇ ಶಿಲೀಂದ್ರವಲ್ಲದೆ ಬ್ಯಾಕ್ಟೀರಿಯಾ ನಾಶಕವೂ.  ಜಗತ್ತಿನಾಧ್ಯಂತ ಬೇರೆ ಬೇರೆ ಬೆಳೆಗಳಿಗೆ ಈ ದ್ರಾವಣವನ್ನು ಬಳಸುತ್ತಾರೆ.  ಮಳೆ ಬರುವ ಪ್ರದೇಶಕ್ಕೆ ಈ ತಯಾರಿಕೆ ಸೂಕ್ತ. ಯಾಕೆಂದರೆ ಅದು ತೊಳೆದು ಹೋಗದೆ ಹೆಚ್ಚು ದಿನಗಳ ತನಕ ಲೇಪನ ಉಳಿದುಕೊಂಡಿರುತ್ತದೆ.

ಹೇಗೆ ಬೋರ್ಡೋ ದ್ರಾವಣ ತಯಾರಿಸಬೇಕು:

  • ಸುಣ್ಣವನ್ನು ಅದು ಚಿಪ್ಪು ಸುಣ್ಣವಾಗಿದ್ದರೆ ಅದನ್ನು ಮೊದಲು ಬೆಚ್ಚಗಿನ ನೀರು ಹಾಕಿ ಕರಗಿಸಿಕೊಳ್ಳಬೇಕು.
  • ಜೊತೆಗೆ ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ  ಮೈಲುತುತ್ತೆಯನ್ನೂ ಕರಗಿಸಬೇಕು.
  • ಹರಳು ತುತ್ತೆಯಾಗಿದ್ದರೆ ಅದನ್ನು ಬಟ್ಟೆಯಲ್ಲಿ ಕಟ್ಟಿ ಉಂಡೆ ಮಾಡಿ ಉಂಡೆಯ ತುದಿ ಭಾಗ ಮಾತ್ರ ನೀರಿಗೆ ತಾಗುವಂತೆ ಜೋತು ಹಾಕಬೇಕು.
  • ಹೀಗೆ ಮಾಡಿದರೆ ಬೇಗನೆ ಕರಗುತ್ತದೆ.
  • ಸಾಮಾನ್ಯವಾಗಿ ಹೆಚ್ಚಿನವರು 200 ಲೀ. ಹಿಡಿಯುವ ಬ್ಯಾರಲ್ ನಲ್ಲಿ ದ್ರಾವಣವನ್ನು ತಯಾರಿಸುತ್ತಾರೆ.
  • ಇದರಲ್ಲಿ 2 ಇಂಚು ಕಡಿಮೆ ಮಾಡಿದರೆ 200 ಲೀ. ಆಗುತ್ತದೆ.
  • ಬ್ಯಾರಲ್ ಭರ್ತಿ ಮಾಡಿ ಅದಕ್ಕೆ 2.5 ಕಿಲೋ ತುತ್ತೆ ಹಾಕುವುದು ಮಾಡುವವರಿದ್ದಾರೆ.
  • ಸುಣ್ಣವನ್ನು  ಬೇಯಿಸಿ ಅಥವಾ ಹುಡಿ ಸುಣ್ಣವಾದರೆ ಅದನ್ನು  ಚೆನಾಗಿ 10-15 ಲೀ. ನೀರಿನಲ್ಲಿ ಮೊದಲು ಕರಗಿಸಿಕೊಳ್ಳಬೇಕು.
  • ಬ್ಯಾರಲ್ ನಲ್ಲಿ ಕೇವಲ 100 ಲೀ. ನಷ್ಟು ಮಾತ್ರ ನೀರನ್ನು  ಹಾಕಿಕೊಳ್ಳಿ.
  • ಅದಕ್ಕೆ  ದ್ರವೀಕರಿಸಿದ ಸುಣ್ಣದ ದ್ರಾವಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ.
  • ಬೇಯಿಸಿದ ಚಿಪ್ಪು ಸುಣ್ಣವಾದರೆ ಅದು ಬಿಸಿ ಇರುವ ಕಾರಣ  ಮಗ್ ನಲ್ಲಿ ತೆಗೆದು ಗಾಳಿಸಿ ನೀರಿಗೆ ಹಾಕಿ.
  • ಅಡಿಯಲ್ಲಿ ದಪ್ಪ ಉಳಿಯುತ್ತದೆ.
  • ಅದಕ್ಕೆ ಮತ್ತೆ ನೀರು ಹಾಕಿ ದ್ರವೀಕರಿಸಿ ಮತ್ತೊಮ್ಮೆ ಬಟ್ಟೆಯಲ್ಲಿ ಸೋಸಿ ನೀರನ್ನು ಬ್ಯಾರಲ್ ನ ನೀರಿಗೆ ಸೇರಿಸಿ. 
  • ಎಲ್ಲವೂ ಮುಗಿದಾಗ ಬ್ಯಾರಲ್ ನಲ್ಲಿ 150 ಲೀ. ತನಕ ಸುಣ್ಣದ ದ್ರಾವಣ ತಯಾರಾಗುತ್ತದೆ. 
  • ಅದಕ್ಕೆ ತುತ್ತೆ ಕರಗಿಸಿದ ನೀರಿನ ಪ್ರಮಾಣದಷ್ಟು ಬಿಟ್ಟು ಉಳಿದ ಪ್ರಮಾಣದ ನೀರನ್ನು ಸೇರಿಸಿ ಚೆನ್ನಾಗಿ ಕಲಕಿರಿ. 
  • ಬಿಳಿಯಾದ ದ್ರಾವಣ  ತಯಾರಾಗುತ್ತದೆ.
  • ಅದಕ್ಕೆ  ಒಂದೊಂದು ಮಗ್ ನಲ್ಲಿ ತುತ್ತೆ ದ್ರಾವಣವನ್ನು ಹಾಕುತ್ತಾ  ಜೊತೆಗೆ ಕಲಕುತ್ತಾ ಇರಿ.
  • ಪೂರ್ತಿ ಮುಗಿಯುವ ತನಕವೂ ಕಲಕುತ್ತಾ ಇರಬೇಕು.
  • ಎಲ್ಲಾ ತುತ್ತೆ ದ್ರಾವಣ ಹಾಕಿದ ನಂತರವೂ ಮೂರು ನಾಲ್ಕು ಬಾರಿ ಕೆಳಗಿನಿಂದ ಮೇಲೆ ತನಕ ಕಲಕಿರಿ. ಆಗ ದ್ರಾವಣ ಸಿದ್ದವಾಗುತ್ತದೆ.
  • ದ್ರಾವಣದ ಬಣ್ಣ ಆಕಾಶ ನೀಲಿ ಬಣ್ಣಕ್ಕೆ ಬರಬೇಕು.
  • ಸಿದ್ದವಾದ ಈ ದ್ರಾವಣ ತಳ ತಂಗುವುದನ್ನು ಸುಮಾರು 5-10 ನಿಮಿಷಗಳ ಕಾಲ  ಗಮನಿಸಿ.
  • ಹೆಚ್ಚೆಂದರೆ ಕೇವಲ 1 ಇಂಚಿನಷ್ಟು ತಂಗಿದರೆ ಪಾಕ ಸರಿಯಾಗಿದೆ ಎಂದರ್ಥ.
  • ಈ ರೀತಿ ಮಾಡಿದಾಗ ತಳ ತಂಗುವಿಕೆ ಬಹಳ ಕಡಿಮೆ  ಇರುತ್ತದೆ.
  • ಸರಿಯಾಗಿ ತಯಾರಿಸಿದ ದ್ರಾವಣವು ಪಂಪುನ ಹೀರಿಕೊಳ್ಳುವ ಭಾಗದ ಫಿಲ್ಟರ್ ಗೆ ಅಂಟಿಕೊಳ್ಳುವುದಿಲ್ಲ.

ಯಾವ ಯಾವ ತಪ್ಪು ಮಾಡುತ್ತೇವೆ:

  • ಕೆಲವು ಕಡೆ ತೋಟದ ಮಾಲಿಕರು ಕೆಲಸದವರಲ್ಲಿ ದ್ರಾವಣ ತಯಾರಿಸಲು ಬಿಡುತ್ತಾರೆ.
  • ಅವರಿಗೆ  ಹೀಗೆ ಮಾಡಿ ಎಂದು ಹೇಳಿರುವುದಿಲ್ಲ.
  • ಅವರು ಮಾಡುವ ಕೆಲವು ತಪ್ಪುಗಳಿಂದ ದ್ರಾವಣದ ಪಾಕ  ತಪ್ಪುತ್ತದೆ.
  • ಕೆಲವರು ಸುಣ್ಣದ ದ್ರಾವಣವನ್ನು ಖಾಲಿ ಬ್ಯಾರಲ್ ಗೆ ಸುರಿಯುತ್ತಾರೆ.
  • ಅದಕ್ಕೆ ನೀರು ಹಾಕದೆ ತುತ್ತೆಯ ದ್ರಾವಣವನ್ನು ಸಹ ಸೇರಿಸುತ್ತಾರೆ.
  • ನಂತರ 200 ಲೀ/. ಬರ್ತಿ ಮಾಡಲು ನೀರನ್ನು ಹಾಕುತ್ತಾರೆ.
  • ಹೀಗೆ ಮಾಡಿದಾಗ ತಳ ತಂಗುವಿಕೆ  ಹೆಚ್ಚು ಇರುತ್ತದೆ.
  • ಈ ಮಿಶ್ರಣವು  ಪಂಪಿನ ಸೋಸು ಭಾಗದಲ್ಲಿ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ.
  • ಇದರಿಂದ ಸಿಂಪರಣೆಗೆ ಕಷ್ಟವಾಗುತ್ತದೆ. ಇದು ಸರಿಯಾದ ಪಾಕ ಆಗುವುದಿಲ್ಲ.
ಮೊದಲು ಸುಣ್ಣದ ದ್ರಾವಣ ತಯಾರಿಸಿಕೊಳ್ಳಬೇಕು.
ಮೊದಲು ಸುಣ್ಣದ ದ್ರಾವಣ ತಯಾರಿಸಿಕೊಳ್ಳಬೇಕು.

ಕೆಲವರು ತುತ್ತೆಯ ದ್ರಾವಣಕ್ಕೆ ಸುಣ್ಣದ ದ್ರಾವಣವನ್ನು ಸೇರಿಸುತ್ತಾರೆ. ಇದೂ ಸಹ ಸರಿಯಾದ ಕ್ರಮ ಅಲ್ಲ. ಯಾವಾಗಲೂ ಸುಣ್ಣದ ದ್ರಾವಣಕ್ಕೆ ತುತ್ತೆಯ ದ್ರಾವಣವನ್ನು ಸೇರಿಸಬೇಕಾದ್ದು ಬೋರ್ಡೋ ದ್ರಾವಣ ತಯಾರಿಕಾ ಕ್ರಮ.ಮೈಲುತುತ್ತೆ  ಆಮ್ಲೀಯ (ಹುಳಿ) ಅದಕ್ಕೆ ಕ್ಷಾರವನ್ನು ಸೇರಿಸಿದರೆ ಮೊಸರಿನಂತಾಗುತ್ತದೆ.ದ್ರವೀಕರಿಸದ ದ್ರಾವಣವಾದರೂ ಮೊಸರು ಆಗುತ್ತದೆ. ಸ್ವಲ್ಪ ಸ್ವಲ್ಪವೇ ಕ್ಷಾರ ದ್ರಾವಣಕ್ಕೆ ಆಮ್ಲೀಯ ದ್ರಾವಣವನ್ನು ಸೇರಿಸಿದರೆ ಅದು  ಹದವಾಗಿ ಪಾಕವಾಗುತ್ತದೆ.

ದ್ರಾವಣ ಯಾವಾಗಲೂ ಈ ರೀತಿ ಆಕಾಶ ನೀಲಿ ಬರಬೇಕು.
ದ್ರಾವಣ ಯಾವಾಗಲೂ ಈ ರೀತಿ ಆಕಾಶ ನೀಲಿ ಬರಬೇಕು.

ಯಾವುದೇ ಕಾರಣಕ್ಕೆ ಕೀಟನಾಶಕ ಸೇರಿಸಬೇಡಿ:

  • ಬಹುತೇಕ ಕೀಟನಾಶಕಗಳ ರಸಸಾರ pH ತಟಸ್ಥವಾಗಿರುತ್ತದೆ.
  • ಹಾಗಿದ್ದರೂ ಬೋರ್ಡೋ ದ್ರಾವಣದ ಜೊತೆ ಅದು ಹೊಂದಾಣಿಕೆ ಆಗುವುದಿಲ್ಲ.
  • ಶಿಲೀಂದ್ರ್ತ ನಾಶಕದ ಜೊತೆಗೆ ಕೀಟನಾಶಕದ ಹೊಂದಾಣಿಕೆ ಇರುವುದಿಲ್ಲ.
  • ಆದಾಗ್ಯೂ ಸಿಂಪರಣಾ ಖರ್ಚು ಉಳಿಸಲು  ಇದನ್ನು ಕೆಲವರು ಮಾಡುತ್ತಾರೆ. 
  • ಬೋರ್ಡೋ ದ್ರಾವಣದ ಜೊತೆಗೆ ಕೀಟನಾಶಕ ಸೇರಿಸಿದಾಗ ಅದರ ಪಾಕ ಕೆಡುತ್ತದೆ.
  • ಅದನ್ನು ಪಂಪಿನ ಹೀರುವ ಭಾಗದ ಜಾಲರಿಯಲ್ಲಿ ಅಂಟಿಕೊಳ್ಳುವುದನ್ನು ನೋಡಿ ಗಮನಿಸಬಹುದು.
  • ಶಿಲೀಂದ್ರ ನಾಶಕದ ಜೊತೆಗೆ ಕೀಟನಾಶಕ  ಸೇರಿಸಿದಾಗ ಎರಡರಲ್ಲಿ ಒಂದು ಗೌಣವಾಗುತ್ತದೆ.
  • ಹಾಗಾಗಿ ಏನನ್ನೂ ಸೇರಿಸಬೇಡಿ. ದ್ರಾವಣದ ಹರಡುವಿಕೆ  ಚೆನ್ನಾಗಿರಲು ಪ್ರಸರಕವನ್ನು ಸೇರಿಸಬಹುದು.
  • ಅಂಟು ಎಂಬುದು ಇಲ್ಲ. ಲೇಪನವನ್ನು ತೆಳೆ ಮಾಡಿಕೊಡುವ ಕೆಲಸವನ್ನು ಪ್ರಸರಕ ಮಾಡುತ್ತದೆ.
  • ತೆಳು ಆದಾಗ ಒಣಗುವಿಕೆ ಬೇಗ ಆಗುತ್ತದೆ.
  • ಹಾಗೆ ನೋಡಿದರೆ ಅಡಿಕೆ ಕಾಯಿಯ ಮೇಲೆ ಲೇಪನದ ತರಹ ಬೋರ್ಡೋ ದ್ರಾವಣ ಅಂಟಿಕೊಳ್ಳುತ್ತದೆ.
  • ಆದರ ಮೇಲೆ ಬಹುತೇಕ ಯಾವುದೇ ಕೀಟ ಸುಳಿಯುವುದಿಲ್ಲ. ಉದಾ: ಧೂಳು ಅಂಟಿದ ಗೇರು ಮಾವಿನ ಹೂವಿಗೆ ಮಿಡಿಗೆ ಕೀಟ ಸೋಂಕು ಕಡಿಮೆ.
  • ಕೀಟಗಳು ಯಾವುದೇ ಪರವಸ್ತು ಅಂಟಿಕೊಂದಾಗ ಅದರ ಸನಿಹಕ್ಕೆ ಹೊಗುವುದಿಲ್ಲ.
  • ಮೈಲುತುತ್ತೆ ಎಂಬುದು ಕೆಲವು ಕೀಟಗಳನ್ನು ದೂರಮಾಡುತ್ತದೆ.
  • ಮರವನ್ನು ಕೊರೆಯುವ ದುಂಬಿ (ಮರ ಸುರಿ ಬೀಳುವಿಕೆ) ನಿಯಂತ್ರಣಕ್ಕೆ ಬಳಸುವ ಪ್ರಮುಖ ಔಷಧಿ ಮೈಲುತುತ್ತೆ.
  • ಹಾಗಾಗಿ ವೃಥಾ ಕೀಟನಾಶಕ ಬಳಸಬೇಡಿ.

ಔಷಧಿ ಉಳಿದರೆ ಏನು ಮಾಡಬೇಕು:

  • 10-15 ಲೀ.ನಷ್ಟು ಉಳಿದರೆ ಅದನ್ನು ಕರಿಮೆಣಸಿನ ಬಳ್ಳಿ ಬುಡಕ್ಕೆ 3-5 ಲೀ. ನಂತೆ ಎರೆಯಿರಿ ಉಳಿಸಬೇಡಿ.
  • ಹೆಚ್ಚು ಉಳಿದರೆ ಮರುದಿನ ಬಳಕೆ ಮಾಡುವುದಿದ್ದರೆ ಅದಕ್ಕೆ 100 ಲೀ. 100 ಗ್ರಾಂ  ಬೆಲ್ಲ ಹಾಕಿ ಮೊದಲು ಸಿಂಪಡಿಸಿ.
  • ಸಾಧ್ಯವಾದಷ್ಟು ತಾಜಾ ಇರುವಾಗಲೇ ಸಿಂಪಡಿಸುವುದು ಉತ್ತಮ.
  • ಬೆಳೆಗಾರರು ದ್ರಾವಣದ pH ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
  • 100 ಲೀ.ಗೆ 1 ಕಿಲೋ ಗಿಂತ ಹೆಚ್ಚು ಸುಣ್ಣವನ್ನು ಹಾಕಲೇಬೇಡಿ.750 ಗ್ರಾಂ ಸಾಕಾಗುತ್ತದೆ.

ಬೊರ್ಡೋ ದ್ರಾವಣ ಹಾಗಾಗುತ್ತದೆ, ಹೀಗಾಗುತ್ತದೆ, ಬೇರೆ ಯಾವುದನ್ನು ಬಳಸಬಹುದು ಎಂಬುದರ ಬಗ್ಗೆ ಹೆಚ್ಚಿನವರು ಚರ್ಚೆ ಮಾಡುವುದಿದೆ. ಸಿದ್ದ ರೂಪದ ಬೊರ್ಡೋ ಮಿಕ್ಸ್ ಸಹ ಬಳಸಬಹುದು. ಆದರೆ ತಾಮ್ರ ಆಧಾರಿತ ಅದರಲ್ಲೂ ಸುಣ್ಣ ಸೇರಿಸಿ ಮಾಡುವ ದ್ರಾವಣ ಎಲ್ಲಾ ದೃಷ್ಟಿಯಿಂದ ಉತ್ತಮ. ಸರಿಯಾದ ಪ್ರಮಾಣ, ಸರಿಯಾದ ಪಾಕ ಮಾಡಿ ಸಮರ್ಪಕವಾಗಿ ಸಿಂಪಡಿಸಬೇಕು.

Leave a Reply

Your email address will not be published. Required fields are marked *

error: Content is protected !!