ರೈತರು ತಮ್ಮ ಧ್ವನಿ  ಬದಲಾಯಿಸಬೇಕಾಗಿದೆ..

ರೈತರು ತಮ್ಮ ದ್ವನಿ ಬದಲಾಯಿಸಬೇಕಾಗಿದೆ.

ರೈತರ ಧ್ವನಿ ಸ್ವಲ್ಪ ಕಡಿಮೆ. ಅದಕ್ಕಾಗಿ ಅವರ ಶೋಷಣೆ ಅವ್ಯಾಹತವಾಗಿ ನಡೆಯುತ್ತಾ ಇದೆ. ಮಾತಾಡುವವರೇ ಇಲ್ಲ. ಮಾತಾಡಿದರೂ ಅದಕ್ಕೆ ಬೆಲೆ ಇಲ್ಲ. ಇದು ಯಾಕಾಗಿ ಆಗುತ್ತದೆ ಎಂದರೆ ನಮ್ಮಲ್ಲಿ ಒಗ್ಗಟ್ಟಿಲ್ಲ.  ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ತಗ್ಗಿ ಬಗ್ಗಿ ಇರಬೇಕಾಗಿಲ್ಲ. ಬಗ್ಗಿದರೆ  ಈಗ ಒಂದು ಗುದ್ದು ಹೆಚ್ಚು.

ಹೆಚ್ಚಿನ ರೈತರು ಬ್ಯಾಂಕು, ಸೊಸೈಟಿ, ಹಾಗೆಯೇ ಇನ್ನಿತರ ಸರಕಾರೀ ಕಚೇರಿಗಳಿಗೆ ಹೋಗುವಾಗ ತಮ್ಮ ಚಪ್ಪಲಿ  ತೆಗೆದು ಹೊರಗಿಟ್ಟು , ದೈನ್ಯದಿಂದ ಒಳಗೆ ಹೋಗುತ್ತಾರೆ. ಇವರನ್ನು ಮಾತಾಡಿಸುವವರೇ ಇಲ್ಲ. ಅದೇ  ಕೃಷಿಕಲ್ಲದವರು ಟಿಪ್ ಟಾಪ್ ವಸ್ತ್ರ ಧರಿಸಿ ನೇರವಾಗಿ ಸಂಬಂಧಿಸಿದವರ ಬಳಿಗೆ ಹೋಗುತ್ತಾನೆ. ಅವರ ಕೆಲಸ ತ್ವರಿತವಾಗಿ ಸರಾಗವಾಗಿ ನಡೆಯುತ್ತದೆ. ರೈತ ಯಾವುದೇ  ಸರಕಾರೀ  ಕಚೇರಿಗೆ ಹೋದರೆ ಅವನನ್ನು ಕುಳಿತುಕೊಳ್ಳಿ ಎನ್ನುವವರಿಲ್ಲ. ಆದರೆ  ಬೇರೆಯವರಿಗೆ ಹಾಗಿಲ್ಲ.  ಕೃಷಿಕರೇ ಯಾವುದೇ ಸರಕಾರೀ ಕಚೇರಿಗೆ ಹೋಗುವಾಗ ಯಾವುದೇ ಅಳುಕು ಬೇಡ. ಅಲ್ಲಿ ಇಟ್ಟಿರುವ ಆಸನಗಳು ಅತಿಥಿಗಳಿಗೆ. ಅದರಲ್ಲಿ ಕುಳಿತುಕೊಳ್ಳಲು ಹಿಂಜರಿಯಬೇಡಿ. ಅಗತ್ಯ ಇಲ್ಲದಲ್ಲಿ ಚಪ್ಪಲಿ ತೆಗೆದು ದೈನ್ಯತೆ ತೋರಬೇಡಿ.ಈಗ ಕಾಲ ಬದಲಾಗಿದೆ. ಹೆಚ್ಚಿನವರ ಮನೋಸ್ಥಿತಿ ಹೇಗಿದೆ ಎಂದರೆ “ದೈನ್ಯತೆ ಅವನ ಅಸಹಾಯಕತೆ” ಎಂಬುದು. ಅದಲ್ಲ ಎಂಬುದನ್ನು ನೀವು ಒಳಗೆ ಪ್ರವೇಶವಾಗುವಾಗಲೇ ತೋರಿಸಬೇಕು. ರೈತರು ನಾವು ಮೊದಲ ದರ್ಜೆಯ ನಾಗರೀಕರು.

  • ರೈತರ ಒಗ್ಗಟ್ಟಾದರೆ ಕಷ್ಟ ಎಂಬುದು ಸುಮಾರು 50 ವರ್ಷಗಳ ಹಿಂದೆಯೇ ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವರಿಕೆಯಾಗಿದೆ.
  • ಅದಕ್ಕೇ  ರೈತರನ್ನು ಒಡೆಯಲು ರಾಜಕೀಯ ಪಕ್ಷ  ಪ್ರೇರಿತ ರೈತ ಸಂಘಟನೆಗಳನ್ನು ಹುಟ್ಟು ಹಾಕಲಾಗಿದೆ.
  • ಯಾವುದು  ಆಡಳಿತ ನಡೆಸುವ ಪಕ್ಷ  ಇರುತ್ತದೆಯೋ ಆ ಪಕ್ಷ  ಪ್ರಾಯೋಜಿತ ರೈತ ಸಂಘಟನೆಗೆ ಆಗ ಹೆಚ್ಚು ಧ್ವನಿ ಇರುತ್ತದೆ.
  • ಅವರು ರೈತಪರ ಹೋರಾಟದ ಮುಂದಾಳತ್ವ ವಹಿಸುತ್ತಾರೆ.
  • ಇದು ಕಣ್ಣೊರೆಸುವ ಅಥವಾ ಕಾಟಾಚಾರದ ತಂತ್ರ ಅಷ್ಟೇ.
  • ರೈತ ಸಂಘಟನೆಗಳಿಗೆ ರಾಜಕೀಯ ಬಣ್ಣ ಬಳಿದು ಅವರನ್ನು ಒಡೆಯಲಾಗುತ್ತದೆ.
ಹೀಗೊಂದು ಉದಾಹರಣೆ:  
  • ಒಬ್ಬ ಲೈನ್ ಮ್ಯಾನ್  ಹೇಳುತ್ತಾನೆ “ ಕೃಷಿಕರಿಗೆ  ಎಲ್ಲವೂ ಉಚಿತವಾಗಿ ಕೊಡಬೇಕು, ಹೀಗೆ ಕರೆಂಟ್ ಕೊಟ್ಟರೆ  ಉಳಿದೀತೇ ಎಂದು
  •  ತಕ್ಷಣ ನನು ಕೇಳಿದೆ, ನಿನಗೆ ಅನ್ನ ಕೊಡುವವರು ಯಾರು ಎಂದು.
  • ಅವನಿಗೆ ಅರ್ಥ ಆಯಿತೋ ಆಗದವನಂತೆ ನಟಿಸಿದನೋ ಗೊತ್ತಾಗಲಿಲ್ಲ.
  • ಅನ್ನ ಕೊಡುವವರು ಬೇಸಾಯ ಮಾಡುವವರು.
  • ಅವರು  ಬೇಸಿಗೆಯಲ್ಲಿ ಸಾಗುವಳಿ ಮಾಡುವುದಿಲ್ಲ. ಎಂದು ಉತ್ತರಿಸಿದ.
  • ನಾನು ಕೇಳಿದೆ, ಅನ್ನ ಕೊಡುವವರು ಎಂದರೆ ನಿನ್ನ  ತಿಳುವಳಿಕೆ ಇಷ್ಟೇ ಯೇನೋ.
  • ನೋಡು ಕೃಷಿಕರೆಲ್ಲರೂ ಅನ್ನ ಕೊಡುವವರೇ .
  • ಒಬ್ಬ 1 ಎಕ್ರೆ ಹೊಲ ಉಳ್ಳವ ವರ್ಷಕ್ಕೆ ಏನಿಲ್ಲವೆಂದರೂ 100 ಮಾನವ ದಿನಗಳ ಉದ್ಯೋಗ ಕೊಡುತ್ತಾನೆ.
  • ಅವನು ಯಾರದ್ದೋ ಹಣವನ್ನು ಕೊಡುವುದಲ್ಲ.
  • ಅವನು ಎಲ್ಲಾ ರಿಸ್ಕ್ ಗಳನ್ನೂ ಎದುರಿಸಿ ನಷ್ಟ ಆದರೂ ಅದನ್ನು ತನ್ನ ಪಾಲಿಗೆ ಇಟ್ಟುಕೊಂಡು  ಕೆಲಸದವರಿಗೆ ಉದ್ಯೋಗ ಕೊಟ್ಟು ಸಂಬಳ ಕೊಡುತ್ತಾನೆ.
  • ಈಗ ಹೇಳು ನಿಮ್ಮ ಸರಕಾರ ಕೊಡುವ  ಉದ್ಯೋಗಕ್ಕಿಂತ  ನಮ್ಮ ರೈತ ಕೊಡುವ ಉದ್ಯೋಗ ಅವಕಾಶ ಹಿರಿದೋ ಕಿರಿದೋ? ಅವನಿಗೆ ಎಷ್ಟು ತೃಪ್ತಿ ಮನವರಿಕೆ ಆಯಿತೋ ಗೊತ್ತಿಲ್ಲ ನನಗೆ ಬೇಸರ ಬೇಡ ಎಂದು ಸರಿ ಸರಿ ಎಂದು ಅಲ್ಲಿಂದ  ಹೋದ.

ರೈತರೇ ನೀವೂ ಮಾತಾಡಿ:

  • ಮೇಲೆ ಹೇಳಲಾದ ಸಂಗತಿಯಂತಹ ವಿಚಾರಗಳನ್ನು ದಿನಾ ಎಲ್ಲಾ ರೈತರೂ ಎದುರಿಸುತ್ತಾರೆ. ಆದರೆ ಯಾರೂ ಬಾಯಿ ಬಿಡುವುದೇ ಇಲ್ಲ.  ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದೂ ಇಲ್ಲ.
  • ರೈತರ ಸಾಲ ಮನ್ನಾ ಮಾಡಬೇಕು ಎಂದು  ಕೆಲವರು ಹೇಳಿದರೆ ರೈತರೇ ಹೇಳುತ್ತಾರೆ, ಇದೆಲ್ಲಾ ಬೇಕೇ, ಸರಕಾರದ ಖಜಾನೆ ಬರಿದಾಗಲಾರದೇ? ಈ ರೀತಿ ಸಂಭಾವ್ಯತನ ಮೆರೆಯುತ್ತಾರೆ. ಇದೇ ನಾವು ಮಾಡುವ ತಪ್ಪು.
  • ರೈತರ ಸಾಲ ಮನ್ನಾ ಮಾಡಿದಾಕ್ಷಣ  ದೇಶ  ಖಂಡಿತವಾಗಿಯೂ  ದಿವಾಳಿಯಾಗಲಾರದು.  ಸಾಲಮನ್ನಾ ಮಾಡಬೇಕು ಎಂಬು ಕೇಳುವುದು ಅದಕ್ಕಾಗಿ ಒತ್ತಾಯಿಸುವುದು ರೈತರ ಹಕ್ಕು.
  • ರೈತರು ಲೆಕ್ಕಾಚಾರ ಹಾಕಿ ಕೃಷಿ ಮಾಡಿದ್ದೇ ಆದರೆ ಅವನಿಗೆ ಆ ಕೃಷಿಯಲ್ಲಿ ಅವನ ಮಜೂರಿಯೂ ಹುಟ್ಟುವುದಿಲ್ಲ ಎಂಬುದು ವಾಸ್ತವ.
  • ಯಾರೇ ಕೃಷಿಕರ ಬಗ್ಗೆ ಹೀನವಾಗಿ ಮಾತಾಡಿದರೂ ವಿರೋಧಿಸುವ ಮಟ್ಟಕ್ಕೆ ಕೃಷಿಕ ಬರಬೇಕು.

ದೇಶದ ಆರ್ಥಿಕ ಸುಬಧ್ರತೆಗೆ  ಕೃಷಿ ಕ್ಷೇತ್ರದ ಕೊಡುಗೆ ದೊಡ್ದದು. ಒಟ್ಟು ದೇಶದ 32,87263 ಚದರ ಕಿಲೋ ಮೀಟರು ವಿಸ್ತೀರ್ಣದಲ್ಲಿ 21,69593 ಚದರ ಕಿಲೋ ಮೀಟರು ಭೂಮಿಯಲ್ಲಿ ಕೃಷಿ ಇದೆ.

  • ಈ ಸ್ಥಳಾವಕಾಶಕ್ಕೆ ಎಷ್ಟು ಕೆಲಸದ ಆಳುಗಳು ಬೇಕಾಗುತ್ತದೆ, ಎಷ್ಟು ಜನರಿಗೆ  ಉದ್ಯೋಗ ಲಭ್ಯ ಎಂಬುದರ ಬಗ್ಗೆ ಸರಕಾರದಲ್ಲಿ ಲೆಕ್ಕಾಚಾರ ಇದ್ದಂತಿಲ್ಲ. ಆದರೂ ರೈತರಿಗೆ ಗೊತ್ತು.
  • ಭಾರತದಂತಹ ಸಣ್ಣ ಹಿಡುವಳಿಯ ದೇಶದಲ್ಲಿ  ಎಲ್ಲಾ ಕೃಷಿಗೂ ಮಾನವ ಕೆಲಸಗಾರರ ಅಗತ್ಯ ಹೆಚ್ಚು.
  • ಒಂದು ಚದರ ಕಿಲೋ ಮೀಟರು ಅಂದರೆ  ಸುಮಾರು 600 ಎಕ್ರೆ. ಇದಕ್ಕೆ  ಕನಿಷ್ಟ 250 ಜನರಿಗೆ 365 ದಿನವೂ ಕೆಲಸ ಇದೆ.

ದೇಶದ ಕೃಷಿಗೆ ಒಳಪಟ್ಟ ಭೂಮಿಯಲ್ಲಿ ದುಡಿಯುವವರಿಗೆ, ಸರಕಾರ, ಕಾರ್ಪೋರೇಟ್ ಕ್ಷೇತ್ರ  ಮುಂತಾದ ಎಲ್ಲಾ ಕ್ಷೇತ್ರಗಳೂ  ಕೊಡುವ ಉದ್ಯೋಗಕ್ಕಿಂತ 10 ಪಟ್ಟಿಗೂ ಹೆಚ್ಚಿನ ಉದ್ಯೋಗವನ್ನು ಕೃಷಿಕರು ಕೂಲಿ ಕಾರ್ಮಿಕರಿಗೆ ಕೊಡುತ್ತಿದ್ದಾರೆ.

  • ದೇಶದ ಆರ್ಥಿಕತೆಗೆ ಇಷ್ಟೊಂದು ಕೊಡುಗೆ ನೀಡುವ ರೈತನಿಗೆ ನಮ್ಮ ಆಡಳಿತ ಯಾವ ಜೀವನ ಬಧ್ರತೆಯನ್ನೂ ಕೊಟ್ಟಿಲ್ಲ.

ಪುಡಿಕಾಸು ಸಾಲಮನ್ನ ಮಾಡುವುದಕ್ಕೂ ಹಿಂದೇಟು ಹಾಕುತ್ತದೆ. ಕೃಷಿಕ ಬಳಸುವ ಪ್ರತೀಯೊಂದು  ಒಳಸುರಿಗಳ ಮೇಲೆ ಕರ ಹಾಕಿ ಅವನನ್ನು ದೋಚುತ್ತದೆ.

ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ:

  • ನಾವು ಎಲ್ಲರಂತಲ್ಲ. ನಮ್ಮ ದುಡಿಮೆಯ ಹಣದಲ್ಲಿ ನಾವು ಬದುಕುವವರು  ಎಂಬುದನ್ನು ಎಲ್ಲಾ ಕೃಷಿಕರೂ  ಅರ್ಥಮಾಡಿಕೊಳ್ಳಬೇಕಾಗಿದೆ.
  • ಯಾವುದೇ ಸರಕಾರೀ ಕಚೇರಿಗೆ ಹೋಗುವಾಗಲೂ ತಗ್ಗಿ ಬಗ್ಗಿ ನಡೆದು ವಿನಯ ತೋರಿಸಿ, ಬಗ್ಗಿದವನಿಗೆ ಗುದ್ದು, ಅದನ್ನು ತಿನ್ನಬೇಡಿ.

ಸಮಾಜದ ಹಣದಲ್ಲಿ ಬದುಕುವವರಿಗಿಂತ ನಾವು ಶ್ರೇಷ್ಟರು  ಎಂಬುದು ಪ್ರತೀಯೊಬ್ಬ ಕೃಷಿಕನಿಗೂ ತಿಳಿದಿರಲಿ. ರೈತರ ಸಂಘಟನೆಯನ್ನು ಬೆಳೆಸಿ.
 
 

Leave a Reply

Your email address will not be published. Required fields are marked *

error: Content is protected !!