ರೈತ ಸಮುದಾಯ ಆರೋಗ್ಯ- ಪಾಲಿಸಬೇಕಾದ ಸರಳ ಅಭ್ಯಾಸಗಳು.

ರೈತರು ರಾಷ್ಟ್ರಕ್ಕೆ ಆಹಾರವನ್ನು ಒದಗಿಸುತ್ತಾರೆ, ಆದರೆ ತಮ್ಮದೇ ಆರೋಗ್ಯದ ವಿಚಾರದಲ್ಲಿ ಅವರು ಬಹುಮಟ್ಟಿಗೆ ನಿರ್ಲಕ್ಷಿತರಾಗಿದ್ದಾರೆ. ಅವರ ವೃತ್ತಿ ನಿಜವಾಗಿ ಉಳಿದೆಲ್ಲಾ ವೃತ್ತಿಗಿಂತ ಆರೋಗ್ಯಪೂರ್ಣ ಜೀವನಕ್ಕೆ ಪೂರಕ. ಆದರೆ ತಿಳಿದೋ ತಿಳಿಯದೆಯೋ ನಾವು ಈ ಅವಕಾಶದಿಂದ ವಂಚಿತರಾಗುತ್ತಿದ್ದೇವೆ. ಕೃಷಿ ಎಂದರೆ ಕೇವಲ ಒಂದು ಉದ್ಯೋಗವಲ್ಲ — ಅದು ನಮ್ಮ ಆರೋಗ್ಯ ರಕ್ಷಕ ವೃತ್ತಿ. ಸರ್ಕಾರಿ ನೌಕರರಿಗೆ ಸರ್ಕಾರದ ಆರೋಗ್ಯ ಸೌಲಭ್ಯಗಳು, ವಿಮೆ ಇರುತ್ತದೆ. ಕೂಲಿಕಾರ್ಮಿಕರಿಗೂ ಕೆಲವು ಭದ್ರತೆಗಳು ದೊರೆಯುತ್ತವೆ. ಆದರೆ, ಭೂಮಿಯ ಮಾಲೀಕನಾದ ರೈತ ತನ್ನ ಕೂಲಿಕಾರ್ಮಿಕರ ಆರೋಗ್ಯದ ಭದ್ರತೆಗಾಗಿ ಕಾಳಜಿ ವಹಿಸುತ್ತಾನೆ, ಆದರೆ ತನ್ನದೇ ಆರೋಗ್ಯಕ್ಕಾಗಿ ಯಾವುದೇ ಭದ್ರತೆ ಇರುವುದಿಲ್ಲ.

ಆದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಕೆಲವು ಸರಳ ಆರೋಗ್ಯ ಅಭ್ಯಾಸಗಳನ್ನು ಅನುಸರಿಸುವ ಮೂಲಕ ರೈತರು ಸಹಜವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು — ದುಬಾರಿ ಚಿಕಿತ್ಸೆ ಅಥವಾ ಆಸ್ಪತ್ರೆಗಳ ಅವಲಂಬನೆ ಇಲ್ಲದೇ.

ಹಳೆಯ ದಿನಗಳಲ್ಲಿ: ಕೃಷಿ ಮತ್ತು ದೀರ್ಘ ಆಯುಷ್ಯ

ಹಳೆಯ ಕಾಲದಲ್ಲಿ ನಮ್ಮ ಹಳ್ಳಿಗಳು ಆರೋಗ್ಯ ಮತ್ತು ದೀರ್ಘಾಯುಷ್ಯದ ಮಾದರಿಯಾಗಿದ್ದವು. ರೈತರು ಶ್ರಮಪಟ್ಟು ಕೆಲಸ ಮಾಡುತ್ತಿದ್ದರು, ಆದರೆ ದೀರ್ಘಕಾಲ ಬದುಕುತ್ತಿದ್ದರು — ಬಹುತೆಕ 80–90 ವರ್ಷಗಳವರೆಗೆ. ಅವರು ತಾವೇ ಬೆಳೆದ ಶುದ್ಧ ಆಹಾರ ತಿನ್ನುತ್ತಿದ್ದರು, ಸ್ವಚ್ಛವಾದ ಗಾಳಿ ಉಸಿರಾಡುತ್ತಿದ್ದರು, ಶುದ್ಧ ನೀರು ಕುಡಿಯುತ್ತಿದ್ದರು, ತಲೆನೋವುಗಳಿಲ್ಲದ ಜೀವನ ನಡೆಸುತ್ತಿದ್ದರು. ಅವರು ನಡೆಯುತ್ತಿದ್ದರು, ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದರು, ಮತ್ತು ಶಿಸ್ತುಬದ್ಧ ದಿನಚರಿಯನ್ನು ಅನುಸರಿಸುತ್ತಿದ್ದರು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ರಾಸಾಯನಿಕ ಬಳಕೆ, ಮಾಲಿನ್ಯ, ಅಸ್ವಸ್ಥ ಆಹಾರ ಅಭ್ಯಾಸಗಳು ಮತ್ತು ಒತ್ತಡದಿಂದ ರೈತರ ಆರೋಗ್ಯ ನಿಧಾನವಾಗಿ ಹಾಳಾಗುತ್ತಿದೆ. ಇಂದು ರೈತರ ಸರಾಸರಿ ಆಯುಷ್ಯ ಕೇವಲ 60–65 ವರ್ಷಗಳಷ್ಟೇ ಉಳಿದಿದೆ. ಇದನ್ನು ಸುಧಾರಿಸಲು ದೊಡ್ಡ ಚಿಕಿತ್ಸೆಯ ಅಗತ್ಯವಿಲ್ಲ — ಕೇವಲ ಜಾಗೃತಿ ಮತ್ತು ಜೀವನಶೈಲಿ ಬದಲಾವಣೆ ಸಾಕು.

ಕೃಷಿ ಉತ್ಪನ್ನಗಳಿಂದ ತಯಾರಾದ ತಾಜಾ ಆಹಾರ ಸೇವನೆ

ಆರೋಗ್ಯದ ಪ್ರಾರಂಭ ಅಡುಗೆಮನೆಯಿಂದಲೇ ಆಗುತ್ತದೆ. ರೈತರು ತಮ್ಮ ಹೊಲಗಳಲ್ಲಿ ಸಾಕಷ್ಟು ಪೋಷಕಾಂಶಯುಕ್ತ ಆಹಾರವನ್ನು ಬೆಳೆಯುತ್ತಾರೆ —  ಮಾರುಕಟ್ಟೆಯಿಂದ ತರುವ ತರಕಾರಿಗಳು, ಧಾನ್ಯಗಳು, ಕಾಳುಗಳು, ಹಣ್ಣುಗಳು, ಹಾಲು. ಪ್ಯಾಕೆಟ್ ಆಹಾರ, ಬೇಕರಿ ಪದಾರ್ಥಗಳು ಅಥವಾ ಹೊರಗಿನ ಹೋಟೆಲ್ ಆಹಾರ ಬದಲು, ರೈತರು ತಮ್ಮದೇ ಕೃಷಿಯ ತಾಜಾ ಆಹಾರ ಸೇವಿಸಬೇಕು.

ಆಹಾರದಲ್ಲಿ ಸೇರಿಸಬೇಕಾದವು:

  • ರಾಗಿ, ಜೋಳ ಮತ್ತು ಕಾಳುಗಳು – ಶಕ್ತಿಯ ಮತ್ತು ಪ್ರೋಟೀನ್‌ನ ಮೂಲ
  • ಹಸಿರು ತರಕಾರಿಗಳು – ಬಸಳೆ, ಹರಿವೆ, ಮೆಂತ್ಯೆ, ಕರಿಬೇವು, ಕೆಲವು ಕಾಡು ಸೊಪ್ಪಿನ ಕಿಡಿ ಇತ್ಯಾದಿಗಳು ವಿಟಮಿನ್ ಮತ್ತು ಖನಿಜಗಳಿಗಾಗಿ
  • ಋತುಮಾನ ಹಣ್ಣುಗಳು – ಮಾವು, ಹಲಸು, ಪೇರಳೆ, ಪಪ್ಪಾಯ ಮುಂತಾದ ಅವರವರ ತೋಟದಲ್ಲಿ ಬೆಳೆಯುವ ಹಣ್ಣುಗಳು ರೋಗ ನಿರೋಧಕ ಶಕ್ತಿಗೆ
  • ಮೊಸರು, ಮಜ್ಜಿಗೆ, ಹಾಲು –  (ತಾವೇ ಹಸು- ಎಮ್ಮೆ ಸಾಕಿ ಮೂಲಿಕೆಗಳಿಂದ ಕೂಡಿದ ಹೊಲದ ಹುಲ್ಲು ತಿನ್ನಿಸಿ ಪಡೆಯುವ ಹಾಲು)ಎಲುಬುಗಳಿಗೆ ಕ್ಯಾಲ್ಸಿಯಂ ನೀಡಲು

ಅತಿಯಾದ ಬಿಳಿ ಅಕ್ಕಿ, ಸಕ್ಕರೆ ಮತ್ತು ಪ್ಯಾಕೆಟ್ ಆಹಾರವನ್ನು ತಪ್ಪಿಸಿಕೊಳ್ಳಿ. ನೈಸರ್ಗಿಕ ಆಹಾರ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದ ತೂಕವನ್ನು ನಿಯಂತ್ರಿಸುತ್ತದೆ.

ತಾಜಾ ಗಾಳಿ ಮತ್ತು ಸೂರ್ಯನ ಬೆಳಕು – ನೈಸರ್ಗಿಕ ಔಷಧಿ
ತಾಜಾ ಗಾಳಿ ಮತ್ತು ಸೂರ್ಯನ ಬೆಳಕು – ನೈಸರ್ಗಿಕ ಔಷಧಿ

ತಾಜಾ ಗಾಳಿ ಮತ್ತು ಸೂರ್ಯನ ಬೆಳಕು – ನೈಸರ್ಗಿಕ ಔಷಧಿ

ರೈತರಿಗೆ ಒಂದು ದೊಡ್ಡ ಅನುಕೂಲ — ಅವರು ಪ್ರಕೃತಿಯ ಮಧ್ಯದಲ್ಲೇ ಕೆಲಸ ಮಾಡುತ್ತಾರೆ. ಬೆಳಗಿನ ಸೂರ್ಯನ ಬೆಳಕು ದೇಹಕ್ಕೆ ವಿಟಮಿನ್ D ನೀಡುತ್ತದೆ, ಇದು ಎಲುಬುಗಳ ಬಲ, ನಾಡಿ ಶಕ್ತಿಗೆ ಬಹಳ ಮುಖ್ಯ. ಬೆಳಗಿನ ಕೆಲಸವು ಶಾರೀರಿಕ ವ್ಯಾಯಾಮ ಮತ್ತು ಮನಸ್ಸಿಗೆ ಶಾಂತಿ ಎರಡನ್ನೂ ಒದಗಿಸುತ್ತದೆ.
ಬೆಳಿಗ್ಗೆ 6:30ರಿಂದ 9:00ರವರೆಗೆ ಸೂರ್ಯನ ಬೆಳಕು ಅತ್ಯುತ್ತಮ. ಈ ವೇಳೆಯಲ್ಲಿ 20–30 ನಿಮಿಷಗಳು ಬೆಳಕಿನಲ್ಲಿ ಕೆಲಸ ಮಾಡಿದರೆ ಸಾಕಷ್ಟು ವಿಟಮಿನ್ D ಸಿಗುತ್ತದೆ. ಹೊಲದಲ್ಲಿ ಕೆಲಸಮಾಡುವಾಗ ಅಲ್ಲಿ ಶುದ್ಧ ಆಮ್ಲಜನಕ ಸಿಗುತ್ತದೆ.  ಹಾಗಾಗಿಯೇ ಹೊಲದಲ್ಲಿ ಕೆಲಸಮಾಡುವಾಗ ಆಯಾಸ ಆಗುವುದಿಲ್ಲ.

ಹೆಚ್ಚಿನ ಪ್ರಯೋಜನಕ್ಕಾಗಿ:

  • ಕೈ, ಕಾಲು ಮತ್ತು ಮುಖ ಬೆಳಕಿಗೆ ಬಿಟ್ಟಿರಲಿ
  • ಬೆಳಗಿನ ಹೊತ್ತಿನಲ್ಲಿ ತೆಳ್ಳನೆಯ ಬಟ್ಟೆ ಧರಿಸಿ. ಹೊರಗೆ ಓಡಾಡಿ.
  • ಹೆಚ್ಚು ನೀರು ಕುಡಿಯಿರಿ

ರಾಸಾಯನಿಕ ಬಳಕೆಯನ್ನು ಕಡಿಮೆಮಾಡಿ

ಇಂದಿನ ಕೃಷಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳಲ್ಲಿ ಪ್ರಮುಖವಾದುದು — ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ. ಇವು ಚರ್ಮ, ಉಸಿರಾಟ, ನರಮಂಡಲ ಮತ್ತು ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಸಿಂಪಡಣೆ ಸಮಯದಲ್ಲಿ ಗ್ಲೌವ್ಸ್, ಮಾಸ್ಕ್, ಉದ್ದದ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟೂ ಜೈವಿಕ ಗೊಬ್ಬರ, ನೀಮ್ ಆಧಾರಿತ ಕೀಟನಾಶಕ ಬಳಸಿ. ರಸ ಗೊಬ್ಬರ, ಕೀಟನಾಶಕ, ಶಿಲೀಂದ್ರ ನಾಶಕಗಳನ್ನು  ಬಳಸುವಾಗ ಅದು ಚರ್ಮಕ್ಕೆ ತಗಲದಂತೆ, ಉಸಿರಿನೊಂದಿಗೆ ದೇಹಕ್ಕೆ ಸೇರದಂತೆ ನೋಡಿಕೊಳ್ಳಿ.

ಶಾರೀರಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿ

ಕೃಷಿ ಶ್ರಮಯುತ ಕೆಲಸವಾದರೂ, ನಿಯಮಿತವಾಗಿ ಯೋಗ, ಪ್ರಾಣಾಯಾಮ, ಶ್ವಾಸೋಚ್ವಾಸಕ್ಕೆ ಸಹಾಯಕವಾಗುವ ಶ್ಲೋಕ, ಮಂತ್ರಗಳನ್ನು ಪಠಿಸಿದರೆ  ಬೆನ್ನುನೋವು, ಒತ್ತಡ ತಡೆಯಬಹುದು. ಮಾನಸಿಕ ಶಾಂತಿಯೂ ಅತ್ಯಗತ್ಯ. ಬೆಳೆ ಹಾನಿ ಅಥವಾ ಮಾರುಕಟ್ಟೆ ಬೆಲೆ ಬಗ್ಗೆ ಅತಿಯಾದ ಚಿಂತೆಯನ್ನು ತಪ್ಪಿಸಿ. ಕುಟುಂಬದ ಜೊತೆ ಸಮಯ ಕಳೆಯಿರಿ — ಸಂತೋಷ ಮನಸ್ಸು ದೇಹವನ್ನು ಬಲಪಡಿಸುತ್ತದೆ. ಆತಿಯಾದ ಆಸೆ, ಇನ್ನೊಬ್ಬರ ಜೊತೆಗೆ ನಮ್ಮ ನ್ನು ಹೋಲಿಕೆ ಮಾಡಿಕೊಳ್ಳಬೇಡಿ.

ಶುದ್ಧ ನೀರು ಕುಡಿಯಿರಿ

ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ನೀರು ಬಳಸುವುದು ಈಗೀಗ ಪ್ರಾರಂಭವಾಗಿದೆ. ಇದು ಬೋರ್‌ವೆಲ್ ನೀರಾಗಿದ್ದರೆ ಅದರಲ್ಲಿ ಕೆಲವು ಹಾನಿಕಾರಕ ಲವಣಾಂಶಗಳು ಇರಲೂಬಹುದು. ಹಾಗಾಗಿ ಅಂತಹ ನೀರನ್ನು ಶುದ್ಧೀಕರಿಸಿ ಕುಡಿಯಿರಿ. ಬಾವಿನೀರು ಬಳಸುವವರು ಆ ನೀರು ಕಲುಶಿತವಾಗಿಲ್ಲ ಎಂದು ಖಾತ್ರಿ ಮಾಡಿಕೊಳ್ಳಿ. ಈಗ ಬಹುತೇಕ ಕಡೆ ಟಾಯ್ಲೆಟ್ ಇತ್ಯಾದಿ ಹೆಚ್ಚಾಗಿರುವ ಕಾರಣ ಕೆಲವು ಬಾವಿ ನೀರು ಸಹ ಕಲುಶಿತವಾಗುವ ಸಂಭವ ಇರುತ್ತದೆ. ನೀರನ್ನು ಕುದಿಸಿ ಅಥವಾ ಶೋಧಿಸಿ ಕುಡಿಯುವುದು ಅತ್ಯುತ್ತಮ. ಇದು ಟೈಫಾಯ್ಡ್, ಅತಿಸಾರ, ಕಿಡ್ನಿ ಸಮಸ್ಯೆಗಳನ್ನು ತಡೆಯುತ್ತದೆ.

ಆರೋಗ್ಯ ಪರೀಕ್ಷೆ ಮಾಡಿಸಿ

ಹಾಗೆ ಕೃಷಿಯಲ್ಲಿ ಮಣ್ಣಿನ ಪರೀಕ್ಷೆ ಮಾಡುತ್ತೇವೆ, ಹಾಗೆಯೇ ದೇಹದ ಪರೀಕ್ಷೆಯೂ ಅಗತ್ಯ.

  • ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್
  • ಕಣ್ಣಿನ ಪರೀಕ್ಷೆ
    ಇವುಗಳನ್ನು ವರ್ಷಕ್ಕೆ ಕನಿಷ್ಠ ಒಂದು ಅಥವಾ ಎರಡು ಬಾರಿ ಮಾಡಿಸಬೇಕು. ಸರ್ಕಾರದ ಶಿಬಿರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉಪಯೋಗಿಸಬಹುದು.

ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ

ನಿರಂತರ ಕೆಲಸ ದೇಹವನ್ನು ದುರ್ಬಲಗೊಳಿಸುತ್ತದೆ. ರೈತರು ದಿನಕ್ಕೆ ಕನಿಷ್ಠ 6–8 ಗಂಟೆಗಳ ನಿದ್ರೆ ಪಡೆಯಬೇಕು. ಮಧ್ಯಾಹ್ನ ಒಂದು ಸ್ವಲ್ಪ ವಿಶ್ರಾಂತಿ ಮಾಡಿದರೆ ಶಕ್ತಿಯನ್ನು ಮರುಪಡೆಯಬಹುದು.

ಮದ್ಯ, ತಂಬಾಕು, ಹೆಚ್ಚು ಚಹಾ ತಪ್ಪಿಸಿಕೊಳ್ಳಿ

ಮದ್ಯಪಾನ, ತಂಬಾಕು ಸೇವನೆ ನಿಧಾನ ವಿಷದಂತೆ ಕೆಲಸಮಾಡುತ್ತದೆ. ಇದು ಯಕೃತ್ತು, ಶ್ವಾಸಕೋಶ, ಹೃದಯಕ್ಕೆ ಹಾನಿ ಉಂಟುಮಾಡುತ್ತದೆ. ಬದಲಾಗಿ ಎಳನೀರು, ಮಜ್ಜಿಗೆ, ಹರ್ಬಲ್ ಚಹಾ ಸೇವನೆ ಆರೋಗ್ಯಕರ.

ಸೂರ್ಯನ ಬೆಳಕು – ನೈಸರ್ಗಿಕ ವಿಟಮಿನ್ D ಮೂಲ

ಸೂರ್ಯನ ಬೆಳಕು ಕೇವಲ ಬಿಸಿಗಾಗಿಯೇ ಅಲ್ಲ, ಅದು ನೈಸರ್ಗಿಕ ಔಷಧಿ. ಸೂರ್ಯನ ಕಿರಣ ತ್ವಚೆಗೆ ತಾಗಿದಾಗ ದೇಹದಲ್ಲಿ ವಿಟಮಿನ್ D ತಯಾರಾಗುತ್ತದೆ.  ಬೆಳಗ್ಗೆ – ಸಂಜೆ ಬರಿಮೈಯಲ್ಲಿ ಸೂರ್ಯನ ಬೆಳಕನ್ನು ಸ್ಪರ್ಶಿಸಿದರೆ  ಅದರಷ್ಟು ಒಳ್ಳೆಯದು ಬೇರೊಂದಿಲ್ಲ.

  • ಎಲುಬು ಮತ್ತು ಹಲ್ಲು ಬಲಪಡಿಸಲು
  • ದೇಹಕ್ಕೆ ಕ್ಯಾಲ್ಸಿಯಂ, ಫಾಸ್ಫರಸ್ ದೊರೆಯುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೂರ್ಯನ ಬೆಳಕು ಅಗತ್ಯ.
  • ಮನಸ್ಸಿಗೆ ಸಮತೋಲನ ತರಲು ಸಹ ಇದು ಸಹಾಯಕ.

ಬೆಳಗಿನ 6:30 ರಿಂದ 9:00 ಗಂಟೆಯವರೆಗೆ ಬೆಳಕಿನಲ್ಲಿ 20–30 ನಿಮಿಷಗಳು ಇರಬೇಕು.

ರೈತನ ನಿಜವಾದ ಸಂಪತ್ತು – ಆರೋಗ್ಯ

ರೈತರಿಗೆ ಸರ್ಕಾರದಿಂದ ಆರೋಗ್ಯ ಯೋಜನೆಗಳಿಲ್ಲದಿರಬಹುದು, ಆದರೆ ಅವರಿಗೆ ಅತ್ಯಮೂಲ್ಯವಾದ ದೈವೀ ಉಡುಗೊರೆ ಇದೆ — ನೈಸರ್ಗಿಕ ಆಹಾರ, ಶುದ್ಧ ವಾತಾವರಣ ಮತ್ತು ಚುರುಕು ಜೀವನಶೈಲಿ. ಹಳೆಯ ಸಂಪ್ರದಾಯದ ಸರಳ ಆರೋಗ್ಯ ಅಭ್ಯಾಸಗಳನ್ನು ಅನುಸರಿಸಿದರೆ ರೈತರು ದೀರ್ಘಕಾಲದವರೆಗೆ ಆರೋಗ್ಯವಾಗಿರಬಹುದು.

ಆರೋಗ್ಯವಂತ ರೈತ ಎಂದರೆ ಸಂತೋಷದ ಕುಟುಂಬ, ಬಲಿಷ್ಠ ಹಳ್ಳಿ, ಮತ್ತು ಶಕ್ತಿಯುತ ರಾಷ್ಟ್ರ.

Leave a Reply

Your email address will not be published. Required fields are marked *

error: Content is protected !!