ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ಪೋಷಕಾಂಶಗಳ ಶಿಫಾರಸು ಮತ್ತು ಇಳುವರಿ.

ರೈತರಿಗೆ ಅನುಕೂಲವಾಗುವಂತೆ  ಬೇರೆ ಬೇರೆ ಬೆಳೆಗಳಿಗೆ ಇಂತಿಷ್ಟು ಪೋಷಕಾಂಶಗಳನ್ನು ಕೊಡಬೇಕು ಎಂಬುದಾಗಿ ತಜ್ಞರು ಶಿಫಾರಸು ಮಾಡಿರುತ್ತಾರೆ. ಆ ಪ್ರಕಾರ ಕೊಟ್ಟು  ಉತ್ತಮ ಇಳುವರಿ ಪಡೆದವರಿದ್ದಾರೆ. ನಿರೀಕ್ಷೆಯ ಇಳುವರಿ ಪಡೆಯದವರೂ ಇದ್ದಾರೆ. ಶಿಫ್ಹಾರಸಿಗಿಂತ ಅಧಿಕ ಕೊಟ್ಟು ಚೆನ್ನಾಗಿ ಇಳುವರಿ ಪಡೆಯುವವರೂ ಇದ್ದಾರೆ. ಈ ಎಲ್ಲಾ ಶಿಫಾರಸನ್ನು ಪಾಲಿಸದೆ ನನಗೆ ತೋಚಿದ ರೀತಿ ಬೆಳೆ ಬೆಳೆಯುವರೂ ಇದ್ದಾರೆ. ಹಾಗಾದರೆ  ಗೊಬ್ಬರಗಳ ಶಿಫಾರಸು ಎಂದರೇನು,? ಅದು ಹೇಗೆ ಕೆಲಸ ಮಾಡುತ್ತದೆ?

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ  ಪಂಚವಾರ್ಷಿಕ ಯೋಜನೆಗಳು  ಪ್ರಾರಂಭವಾದವು. ಹಾಗೆಯೇ ಆಹಾರೋತ್ಪಾದನೆ ಹೆಚ್ಚಳಕ್ಕಾಗಿ  ಹಸಿರು ಕ್ರಾಂತಿಯನ್ನೂ  ಮಾಡಲಾಯಿತು. ಅ ಸಮಯದಲ್ಲಿ ವಿದೇಶದಲ್ಲಿ ಚಾಲ್ತಿಯಲ್ಲಿದ್ದ ರಸ ಗೊಬ್ಬರಗಳನ್ನು ಇಲ್ಲಿಗೂ ಪರಿಚಯಿಸಲಾಯಿತು.  ಅವುಗಳೇ  ಸಾರಜನಕ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಒಳಗೊಂಡ ಅಧಿಕ ಸಾರದ ಗೊಬ್ಬರಗಳು.  ಆವುಗಳಲ್ಲಿ ನಾವು ಬಳಸುತ್ತಿದ್ದ ಕೊಟ್ಟಿಗೆ ಗೊಬ್ಬರ  ಮುಂತಾದವುಗಳಿಗಿಂತ ಅಧಿಕ ಸಾರ ಇರುವ ಕಾರಣ ಅದಕ್ಕೆ ರಸಗೊಬ್ಬರ ಎಂಬ ಹೆಸರನ್ನು ನೀಡಲಾಯಿತು. ಕೊಟ್ಟಿಗೆ ಗೊಬ್ಬರ, ಅಥವಾ ಇನ್ಯಾವುದೇ ಸಾಂಪ್ರದಾಯಿಕ ಗೊಬ್ಬರಗಳನ್ನು  ಲಭ್ಯವಿದ್ಧಷ್ಟನ್ನೂ ಬಳಸಬಹುದು.  ಬೆಳೆಗಳು ತಮಗೆ ಬೇಕಾದಷ್ಟನ್ನು ಬಳಸಿಕೊಂಡು ಉಳಿದವುಗಳು ಮಣ್ಣಿಗೆ ಸೇರಿ ಮಣ್ಣಿನ ತರಗತಿ ಮೇಲ್ದರ್ಜೆಗೇರುತ್ತಾ ಇರುತ್ತದೆ. ರಸಗೊಬ್ಬರ ಎಂಬ ಹೊಸ ವಿಷಯವನ್ನು ಪರಿಚಯಿಸುವಾಗ  ಹಾಗೆಲ್ಲಾ ಬಳಸಲು ಆಗುವುದಿಲ್ಲ. ಅದಕ್ಕಾಗಿ ಯಾವ ಬೆಳೆಗೆ ಎಷ್ಟು ಬಳಸಬೇಕು ಎಂಬುದನ್ನು ಅಧ್ಯಯನಗಳ ಮೂಲಕ ತಿಳಿದುಕೊಳ್ಳಲಾಯಿತು.  ಅದುವೇ ರಸ ಗೊಬ್ಬರಗಳ ವೈಜ್ಞಾನಿಕ ಶಿಫಾರಸು. ಬೆಳೆಗೆ ಯಾವ ಯಾವ ಸಾರ ಎಷ್ಟೆಷ್ಟು ಬೇಕು ಎಂಬುದನ್ನು ಈ ಶಿಫಾಸರಿನ ಮೂಲಕ ತಿಳಿಸಿಕೊಡಲಾಯಿತು. ಈಗ ನಾವು ಅನುಸರಿಸುತ್ತಿರುವ  ರಸ ಗೊಬ್ಬರ ಬಳಕೆಯ ಪ್ರಮಾಣ ಅದರಂತೆ ಇರುತ್ತದೆ.

ಮಣ್ಣಿನ ಗುಣದ ಮೇಲೆ ಪೋಷಕಗಳ  ಅವಷ್ಯಕತೆ:

ಕೆಲವರು ಹೇಳುವುದುಂಟು. ನಾವು ರಸಗೊಬ್ಬರ ಕೊಡುವ ಕ್ರಮವೇ ಇಲ್ಲ. ಇರುವ  ಕೊಟ್ಟಿಗೆ ಗೊಬ್ಬರ ಹಂಚಿ ಕೊಡುತ್ತೇವೆ.  ಸಾಧಾರಣ ಇಳುವರಿ ಬರುತ್ತದೆಎಂದು. ಇನ್ನು ಕೆಲವರು ರಸ ಗೊಬ್ಬರ ಬಳಸುತ್ತಾರೆ. ಸಾಂಪ್ರದಾಯಿಕ ಗೊಬ್ಬರಗಳನ್ನೂ ಬಳಸುತ್ತಾರೆ.   ಉತ್ತಮ ಇಳುವರಿಯನ್ನೂ ಪಡೆಯುತ್ತಾರೆ. ಇದೆಲ್ಲವೂ ಮಣ್ಣಿನ ಗುಣದ ಮೇಲೆ ಅವಲಂಭಿತವಾಗಿರುತ್ತದೆ. ನಾವು ಕೊಡುವ ರಸ ಗೊಬ್ಬರಗಳು ಚೆನ್ನಾಗಿ ಕೆಲಸ ಮಾಡಬೇಕಾದರೆ ಮಣ್ಣು  ಉತ್ತಮವಾಗಿರಬೇಕು. ಫಲವತ್ತಾದ ಮಣ್ಣಿಗೆ ಸ್ವಲ್ಪ ಪ್ರಮಾಣದಲ್ಲಿ ಪೋಷಕಾಂಶಗಳು ಸಾಕಾಗುತ್ತದೆ. ಮಧ್ಯಮ ಫಲವತ್ತತೆ ಹೊಂದಿದ ಮಣ್ಣಿಗೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ. ಕಡಿಮೆ ಫಲವತ್ತತೆ ಹೊಂದಿರುವ ಮಣ್ಣಾದರೆ  ಹೆಚ್ಚು ಬೇಕಾಗುತ್ತದೆ. ರಸ ಗೊಬ್ಬರ ಕೊಡುವುದೊಂದೇ ಮಾಡಿದರೆ ಮಣ್ಣಿನ ಜೈವಿಕ, ಮತ್ತು ಭೌತಿಕ ಗುಣ ವೃದ್ದಿಯಾಗುವುದಿಲ್ಲ. ಅದಕ್ಕಾಗಿ ಕೊಟ್ಟಿಗೆ ಗೊಬ್ಬರ ಅಥವಾ ಸ್ಥೂಲ ಸಾವಯವ ಗೊಬ್ಬರವನ್ನು ಕೊಡಬೇಕು. ಆಗ ರಸಗೊಬ್ಬರವನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುತ್ತಾ ಬರಲಿಕ್ಕೆ ಆಗುತ್ತದೆ. ತಜ್ಞರು ಅಧ್ಯಯನ ಮಾಡಿ ರಸ ಗೊಬ್ಬರ ಶಿಪಾರಸು ಮಾಡಿದ್ದಾರೇನೋ ನಿಜ . ಅದರ  ಜೊತೆಗೆ ಕೆಲವು ಮಾರ್ಪಾಡುಗಳನ್ನು  ಮಣ್ಣಿನ ಗುಣದ ಮೇಲೆ ಮಾಡಬೇಕು ಎಂಬುದಾಗಿಯೂ ಹೇಳಿರುತ್ತಾರೆ.

ಮಣ್ಣನ್ನು ಗಮನಿಸಿ ರಸ ಗೊಬ್ಬರ ಕೊಡಬೇಕು:

ನಿಮ್ಮ ಹೊಲದ ಮಣ್ಣು ಸಾಗುವಳಿಗೆ  ಒಳಪಟ್ಟ ಭೂಮಿಯಾಗಿದ್ದರೆ, ಬಹಳ ಹಿಂದಿನಿಂದಲೂ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದರೆ ಅಂತಹ ಮಣ್ಣಿನಲ್ಲಿ ಸಾವಯವ ಅಂಶ ಉತ್ತಮವಾಗಿರುತ್ತದೆ. ಅಲ್ಲಿ ನಾವು ಕೊಡುವ ಪೋಷಕಾಂಶಗಳು ನಷ್ಟವಾಗದೆ ಬೆಳೆಗಳಿಗೆ  ಲಭ್ಯವಾಗುತ್ತದೆ. ಹಾಗಾಗಿ ಉತ್ತಮ ಇಳುವರಿ ಬರುತ್ತದೆ. ಹೊಸ ಮಣ್ಣು ಆಗಿದ್ದರೆ ಅದರಲ್ಲಿ ಸಾವಯವ ಅಂಶ ತುಂಬಾ ಕಡಿಮೆ ಇರುತ್ತದೆ. ಅಂತಹ ಮಣ್ಣಿಗೆ ರಸ ಗೊಬ್ಬರ ಹೆಚ್ಚು ಬೇಕಾಗುತ್ತದೆ. ಇಲ್ಲವಾದರೆ ಇಳುವರಿ ಕಡಿಮೆ ಬರುತ್ತದೆ. ಜೊತೆಗೆ ಮಣ್ಣಿನ ಗುಣಮಟ್ಟವನ್ನು  ಹೆಚ್ಚಿಸಲು ಅಗತ್ಯವಾಗಿ ಸಾವಯವ ಸ್ಥೂಲ ಗೊಬ್ಬರವನ್ನು ಕೊಡಬೇಕಾಗುತ್ತದೆ. ತೀರಾ ಫಲವತ್ತತೆ ಕಡಿಮೆ ಇರುವ ಮಣ್ಣು ಆಗಿದ್ದಲ್ಲಿ  ಮಣ್ಣು ಪರೀಕ್ಷೆಯ ಆಧಾರದಲ್ಲಿ ರಸ ಗೊಬ್ಬರ ಹೆಚ್ಚು ಮಾಡಬೇಕಾಗುತ್ತದೆ. ಸುಧೀರ್ಘ ಕಾಲದಿಂದ ಸಾಗುವಳಿಗೆ ಒಳಪಟ್ಟ ಹೊಲದ ಮಣ್ಣಿನಲ್ಲಿ ಸಾವಯವ ಇಂಗಾಲ  ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಕಾಡು ಮಣ್ಣಿನಲ್ಲೂ  ಚೆನ್ನಾಗಿಯೇ ಇರುತ್ತದೆ. ಬರಡು ಭೂಮಿಯ ಮಣ್ಣಿನಲ್ಲಿ  ತೀರಾ ಕಡಿಮೆ ಇರುತ್ತದೆ. ಸಾವಯವ ಇಂಗಾಲ ಎಂದರೆ ಮಣ್ಣು ಸಾವಯವ ವಸ್ತುಗಳನ್ನು ಜೀರ್ಣಿಸಿಕೊಂಡು ಆದದ್ದಾಗಿರುತ್ತದೆ. ಕಡಿಮೆ ಸಾವಯವ ಇಂಗಾಲ ಎಂದರೆ 0.5 , ಮಧ್ಯಮ ಫಲವತ್ತತೆ  ಇರುವಲ್ಲಿ 0.5-0.75  ತನಕ ಇರುತ್ತದೆ. ಉತ್ತಮ ಸಾವಯವ ಇಂಗಾಲ ಇರುವಲ್ಲಿ ಅದು 0.75 ಕ್ಕಿಂತ ಹೆಚ್ಚು ಇರುತ್ತದೆ. ರಸಗೊಬ್ಬರಗಳ ಎಲ್ಲಾ ಶಿಫಾರಸುಗಳು ಕೆಲಸ ಮಾಡುವುದು ಉತ್ತಮ ಸಾವಯ ಇಂಗಾಲ ಇರುವ ಮಣ್ಣಿನಲ್ಲಿ ಮಾತ್ರ. ಉಳಿದ ಮಣ್ಣಿಗೆ ಸಾವಯವ ಇಂಗಾಲ ಹೆಚ್ಚಳ ಮಾಡುವುದರ ಜೊತೆಗೆ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕಾಗುತ್ತದೆ.

ಹೆಚ್ಚು ಗೊಬ್ಬರ ಕೊಟ್ಟರೆ  ಏನಾಗುತ್ತದೆ:

ಮಣ್ಣಿನ ಗುಣಕ್ಕನುಗುಣವಾಗಿ ಸಾರಜನಕ ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಕೊಡದೆ ಮನಬಂದಂತೆ ಕೊಡುವುದರಿಂದ ಸಸ್ಯ ಬೆಳವಣಿಗೆಯಲ್ಲಿ ಇಳುವರಿಯಲ್ಲಿ ವ್ಯತ್ಯಯವಾಗುತ್ತದೆ. ಫಲವತ್ತಾದ ಮಣ್ಣಿಗೆ ಅಧಿಕ ರಸ ಗೊಬ್ಬರ ಕೊಡುವುದರಿಂದ ಆರ್ಥಿಕವಾಗಿ ನಷ್ಟ.ಇಲ್ಲಿ ರಸ ಗೊಬ್ಬರವನ್ನು ಕಡಿಮೆ ಮಾಡುವುದು ಸರಿಯಾದ ಕ್ರಮ. ಹಾಗೆಂದು ಸಾವಯವ ಗೊಬ್ಬರವನ್ನು ಕೊಡುವುದನ್ನು ಮುಂದುವರಿಸುತ್ತಲೇ ಇರಬೇಕಾಗುತ್ತದೆ.

ಕಡಿಮೆ ಗೊಬ್ಬರ ಕೊಟ್ಟರೆ ಏನಾಗುತ್ತದೆ?

ಸಾವಯವ ಗೊಬ್ಬರ ಸಾಕಷ್ಟು ಲಭ್ಯವಿಲ್ಲ. ಇರುವುದನ್ನು ಹಂಚಿ ಹಾಕುವುದು. ರಸ ಗೊಬ್ಬರ ನಮಗೆ ವರ್ಜ್ಯ. ಇಂತಹ ಮನೋಸ್ಥಿತಿಯವರು ಬೆಳೆಗಳಿಗೆ ಪೂರೈಕೆ ಮಾಡುವ ಗೊಬ್ಬರದಲ್ಲಿ ಕೊರತೆ ಉಂಟುಮಾಡುತ್ತಾರೆ. ಅಂತಹ ಕಡೆ ಸಸ್ಯಗಳಿಗೆ ಪೋಷಕದ ಕೊರತೆ ಉಂಟಾಗಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ಹಾಗೆ ಮುಂದುವರಿದರೆ ಲಘು ಪೊಷಕಾಂಶಗಳ ಕೊತರೆಯೂ ಉಂಟಾಗುತ್ತದೆ, ರೋಗ – ಕೀಟ ಬಾಧೆಗಳೂ ಹೆಚ್ಚಾಗುತ್ತದೆ. ಹಾಗಾಗಿ ಕಡಿಮೆ ಪೋಷಕವನ್ನೂ ಕೊಡುವುದು ಸೂಕ್ತವಲ್ಲ.

ಬೆಳೆಗಳಿಗೆ ಶಿಫಾರಸಿನ ಪ್ರಮಾಣದ ಗೊಬ್ಬರ ಕೊಡುತ್ತಿದ್ದೇನೆ. ಇಳುವರಿ ಹೆಚ್ಚಳ ಇಲ್ಲ ಎಂಬ ಕೂಗು ಅನೇಕರದ್ದು. ಅಲ್ಲಿ  ಬೇರೆ ಬೇರೆ ಅಂಶಗಳು ಗಣನೆಗೆ ಬರುತ್ತದೆ. ಕೆಲವೊಮ್ಮೆ ನೀರಿನ ಅಭಾವದಿಂದಲೂ ಆಗುವುದಿದೆ. ಮಣ್ಣಿನ ಗುಣ ತಿಳಿದು ಅದಕ್ಕೆ ಹೆಚ್ಚು ಬೇಕಿದ್ದರೆ ಅದನ್ನು ಪೂರೈಸಿ  ಅಧಿಕ ಇಳುವರಿ ಪಡೆಯಬಹುದು.  ಒಂದು ಸ್ಥಳದ ಎಲ್ಲಾ ಭಾಗದ ಮಣ್ಣು ಏಕ ಪ್ರಕಾರವಾಗಿ ಇರುವುದಿಲ್ಲ. ವ್ಯತ್ಯಾಸಗಳಿರುತ್ತದೆ. ಆದುದರಿಂದ ಮಣ್ಣನ್ನು ಗಮನಿಸಿ ಪೋಷಕಾಂಶಗಳನ್ನು ಕೊಡಬೇಕು.

ಮಣ್ಣಿಗೆ ರಾಸಾಯನಿಕ, ಭೌತಿಕ ಮತ್ತು ಜೈವಿಕ ಗುಣಧರ್ಮಗಳಿವೆ. ಇವುಗಳಲ್ಲಿ ಒಂದು  ಅಥವಾ ಎರಡು ಅವನತಿಯಾದರೂ  ಮಣ್ಣು ಹಾಳಾಗುತ್ತದೆ. ಆಗ ಅದರಲ್ಲಿ ಉತ್ಪಾದನೆ ಕಡಿಮೆಯಾಗುತ್ತದೆ. ರಸ ಗೊಬ್ಬರಗಳಿಂದ ಮಣ್ಣು ತನ್ನ ಗುಣಧರ್ಮವನ್ನು  ಕಳೆದುಕೊಳ್ಳುವುದಿಲ್ಲ. ಬದಲಿಗೆ ಅಗತ್ಯವಾಗಿ ಅಲ್ಲಿಗೆ ಕೊಡಬೇಕಾದ ಸಾವಯವ  ಗೊಬ್ಬರಗಳನ್ನು ಕೊಡದೆ ಮಣ್ಣು ಹಾಳಾಗುತ್ತದೆ. ಇನ್ನು ಅಸಮತೋಲನ ಗೊಬ್ಬರ ಕೊಡುವುದು ಎಲ್ಲದಕ್ಕಿಂತ ಹಾಳು. ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಇವುಗಳನ್ನು ಸೂಕ್ತ ಪ್ರಮಾಣದಲ್ಲಿ ಕೊಟ್ಟರೆ  ಮಾತ್ರ ಅದರಿಂದ ಫಲ. ಒಂದು ವ್ಯತ್ಯಾಸವಾದರೂ  ಅಡ್ದ ಪರಿಣಾಮ ಉಂಟಾಗುತ್ತದೆ.

ಬೆಳೆಗಾರರು ಶಿಫಾರಿತ ಪ್ರಮಾಣ ಎಂದು ಅದನ್ನೇ ಅನುಸರಿಸುವುದಲ್ಲ. ತಮ್ಮ ಹೊಲದ ಮಣ್ಣಿನ ತರಗತಿಗನುಗುಣವಾಗಿ ಹೆಚ್ಚು ಕಡಿಮೆ ಮಾಡಬಹುದು. ಇಳುವರಿ ಕುಗ್ಗಿದೆ ಎಂದು ರಸ ಗೊಬ್ಬರವನ್ನು ದೂಷಿಸುವುದಲ್ಲ. ಯಥೇಚ್ಹ ಪ್ರಮಾಣದಲ್ಲಿ ಸಾವಯವ ಗೊಬ್ಬರ ಕೊಟ್ಟರೆ ಮಣ್ಣು ಅದನ್ನೆಲ್ಲಾ ಜೀರ್ಣ ಮಾಡಿಕೊಳುತ್ತದೆ.     

Leave a Reply

Your email address will not be published. Required fields are marked *

error: Content is protected !!