ನಾವೆಲ್ಲಾ ಬೆಳೆಸುವ ಅಡಿಕೆ – ತೆಂಗು ಬೆಳೆಗಳಿಗೆ ವರ್ಷಕ್ಕೆ ನಾಲ್ಕು ಸಲ ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಸಲು ಪಡೆಯಬಹುದು. ಶಿಫಾರಸಿಗಿಂತ 50% ಹೆಚ್ಚು ಕೊಡುವುದರಿಂದ ಮುಂದಿನ ವರ್ಷದ ಫಸಲು ಸಹ ಚೆನ್ನಾಗಿರುತ್ತದೆ ಆಗುವುದಿಲ್ಲ.ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ ಹಸಿವಿಗೆ ಅನುಗುಣವಾಗಿ ಕೊಡುವುದು ತುಂಬಾ ಪರಿಣಾಮಕಾರಿ.
ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು. ಅಡಿಕೆಗೆ ಶಿಫಾರಿತ ಪ್ರಮಾಣವಾದ 100:40:120 ಅನ್ನು ಸರಿಯಾಗಿ ಎರಡು ಭಾಗ ಮಾಡಿ ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೊಟ್ಟು ಮುಗಿಸಬೇಕು ಎನ್ನುತ್ತಾರೆ.
ಮೇಲಿನ ಶಿಫಾರಸು ಪ್ರಮಾಣ ಸಾಧಾರಣ ಇಳುವರಿಗೆ ಸಾಕಾಗುತ್ತದೆಯಾದರೂ ಅಧಿಕ ಇಳುವರಿಗೆ ಸಾಕಾಗುವುದಿಲ್ಲ. ಇದಕ್ಕೆ 50% ಹೆಚ್ಚುವರಿಯಾಗಿ ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡುವ ಕಡೆ ಉತ್ತಮ ಇಳುವರಿ ಬರುವುದನ್ನು ಕಾಣಬಹುದು. ಜೂನ್, ಅಕ್ಟೋಬರ್ ತಿಂಗಳಲ್ಲಿ ಶಿಫಾರಿತ ಪ್ರಮಾಣ ಮತ್ತು ನಂತರ ಜನವರಿ, ಮತ್ತು ಎಪ್ರೀಲ್ ಮೊದಲ ವಾರದಲ್ಲಿ ಸಸ್ಯಗಳು ತೀವ್ರ ಹಸಿವಿನಲ್ಲಿರುವಾಗ ಹಿಂದೆ ಕೊಟ್ಟ ಪ್ರಮಾಣದ ಕಾಲು (1/4 )ಭಾಗವನ್ನಾದರೂ ಕೊಡಬೇಕು. ಅದು ಇಳುವರಿಯ ಮೇಲೆ ಉತ್ತಮ ಫಲಿತಾಂಶವನ್ನು ಕೊಡುತ್ತದೆ.
ಯಾವ ಗೊಬ್ಬರ ಕೊಡಬೇಕು:
ಮಳೆಗಾಲದ ಮೊದಲ ಕಂತು ಗೊಬ್ಬರದಲ್ಲಿ ಸಾರಜನಕ ಪ್ರಮಾಣ ಕಡಿಮೆಯೂ ರಂಜಕ ಮತ್ತು ಪೊಟ್ಯಾಶ್ ಶಿಫಾರಸಿನ ಅರ್ಧದಷ್ಟು ಕೊಡಬಹುದು. ಮಳೆ ಬರುವಾಗ ವಾತಾವಾರಣದ ಸಾರಜನಕ ಸಸ್ಯಗಳಿಗೆ ಸಿಗುವ ಕಾರಣ ಸಾರಜನಕ ¼ ಭಾಗ ಮಾತ್ರ ಕೊಡಿ. ಮಳೆಗೆ ಕೊಚ್ಚಿ ಹೋಗುವ ಸ್ಥಿತಿ ಇಲ್ಲದಲ್ಲಿ ಪೂರ್ತಿ ಕೊಡಬಹುದು.ಯಾವುದೇ ಗೊಬ್ಬರ ಕೊಡುವುದಿದ್ದರೂ ಸಮತೋಲನದಲ್ಲಿ ಕೊಡಿ.
15:15:15 ಕೊಡುವುದಿದ್ದರೆ :
- ಪ್ರತೀ ಫಲ ಕೊಡುವ ಅಡಿಕೆ ಮರಕ್ಕೆ ಈ ಗೊಬ್ಬರ ಕೊಡುವುದಾದರೆ ಗರಿಷ್ಟ 200 ಗ್ರಾಂ ಮುಂಗಾರು ಕಂತಿಗೆ ಕೊಡಬಹುದು.
- ಮುಂದೆ ಸಪ್ಟೆಂಬರ್ ನಲ್ಲಿ ಇದನ್ನು ಕೇವಲ 100 ಗ್ರಾಂ ಕೊಟ್ಟು ಯೂರಿಯಾ 100 ಗ್ರಾಂ ಮತ್ತು ಮ್ಯುರೇಟ್ ಆಪ್ ಪೊಟ್ಯಾಶ್ 100.ಕೊಡಬಹುದು.
- ಜನವರಿಯಲ್ಲಿ ಯೂರಿಯಾ ಮತ್ತು ಪೋಟ್ಯಾಶ್ (MOP) ತಲಾ 75 ಗ್ರಾಂ ಪ್ರಕಾರ ಕೊಡಬಹುದು.
- ಎಪ್ರೀಲ್ ತಿಂಗಳಲ್ಲಿ ಮತ್ತೆ ತಲಾ 75 ಕೊಡಬಹುದು.
- ಒಟ್ಟಾರೆಯಾಗಿ ಸಾರಜನಕ (N)160 ಗ್ರಾಂ ಕೊಟ್ಟಂತಾಗುತ್ತದೆ. ರಂಜಕ (P) 45 ಗ್ರಾಂ ಕೊಟ್ಟಂತಾಗುತ್ತದೆ. ಪೊಟ್ಯಾಶ್ (K) 195 ಗ್ರಾಂ ಕೊಟ್ಟಂತಾಗುತ್ತದೆ.

ಯೂರಿಯಾ+ರಾಕ್ ಫೋಸ್ಪೇಟ್+MOP ಕೊಡುವವರು:
- ಸಾಮಾನ್ಯವಾಗಿ ಈ ಗೊಬ್ಬರ ಹಾಕುವವರು 1 ಚೀಲ ಯೂರಿಯಾ, 2 ಚೀಲ ರಾಕ್ ಫೋಸ್ಫೇಟ್ ಮತ್ತು 2 ಚೀಲ MOP ಹೀಗೆಲ್ಲಾ ಮಿಶ್ರಣ ಮಾಡಿ ಹಾಕುತ್ತಾರೆ.
- ಇದರಲ್ಲಿ ಎಲ್ಲವೂ ಸಮರ್ಪಕವಾಗಿ ಮಿಶ್ರಣವಾಗುವುದಿಲ್ಲ.
- ಅದಕ್ಕಾಗಿ ಮೂರು ಜನರಲ್ಲಿ ಮೂರು ಬಗೆಯ ಗೊಬ್ಬರ ಕೊಟ್ಟು ಪ್ರತ್ಯೇಕವಾಗಿ ಹಾಕಿಸುವುದು ಸೂಕ್ತ.
- ಯೂರಿಯಾ 48% N, ರಾಕ್ ಫೋಸ್ಫೇಟ್ 18 % P ಮತ್ತು MOP 60% K ಪ್ರಮಾಣ ಇರುತ್ತದೆ.
- ಮುಂಗಾರು ಕಂತಿನ ಗೊಬ್ಬರ ಒಂದು ಫಲಕೊಡುವ ಅಡಿಕೆ ಮರಕ್ಕೆ ಯೂರಿಯಾ 100 ಗ್ರಾಂ, ರಾಕ್ 150 ಗ್ರಾಂ ಮತ್ತು ಮ್ಯೂರೇಟ್ ಆಫ್ ಪೊಟ್ಯಾಶ್ 100 ಗ್ರಾಂ ಕೊಡಬಹುದು.
- ಎರಡನೇ ಕಂತು ಸಪ್ಟೆಂಬರ್ ನಲ್ಲಿ ಮತ್ತೆ 100 ಗ್ರಾಂ ಯೂರಿಯಾ 100 , ರಾಕ್ 100 ಗ್ರಾಂ ಮತ್ತುMOP 100 ಗ್ರಾಂ ನಂತೆ ಕೊಡಬಹುದು.
- ಮುಂದೆ ಜನವರಿ ಮೊದಲ ವಾರದಲ್ಲಿ ತಲಾ 50 ಗ್ರಾಂ ಯೂರಿಯಾ ಮತ್ತು ಪೊಟ್ಯಾಶ್ ಮಾತ್ರ ಕೊಡಿ
- ಎಪ್ರೀಲ್ ತಿಂಗಳಲ್ಲಿ ತಲಾ 50 ಗ್ರಾಂ ನಂತೆ ಯೂರಿಯಾ ಮತ್ತು MOP ಕೊಡಿ.
- ಆಗ ಒಟ್ಟಾರೆ ಸಾರಜನಕ 138 ಗ್ರಾಂ, ರಂಜಕ 45 ಗ್ರಾಂ ಮತ್ತು ಪೊಟ್ಯಾಶ್ 180 ಗ್ರಾಂ ಕೊಟ್ಟಂತಾಗುತ್ತದೆ.ಇದು ಶಿಫಾರಸಿಗಿಂತ ಹೆಚ್ಚಾಗಿರುತ್ತದೆ.
10:26:26 ಗೊಬ್ಬರ ಕೊಡುವುದಾದರೆ:
- ಸಾಮಾನ್ಯವಾಗಿ ಹೆಚ್ಚಿನ ಕೃಷಿಕರು ಈ ಗೊಬ್ಬರವನ್ನು ಕೊಡುವುದು ವಾಡಿಕೆ.
- ಫಲಕೊಡುವ ಅಡಿಕೆ ಮರವೊಂದಕ್ಕೆ ಮುಂಗಾರು ಕಂತಿಗೆ ಈ ಗೊಬ್ಬರವನ್ನು 100 ಗ್ರಾಂ ಕೊಡಿ.
- ಜೊತೆಗೆ 50 ಗ್ರಾಂ ಯೂರಿಯಾ, ಮತ್ತು 50 ಗ್ರಾಂ MOP ಸೇರಿಸಬೇಕು.
- ಸಪ್ಟೆಂಬರ್ ನಲ್ಲಿ ಮತ್ತೆ 100 ಗ್ರಾಂ ಹಾಗೂ ಯೂರಿಯಾ 75 ಗ್ರಾಂ MOP 50 ಗ್ರಾಂ ಕೊಡಿ.
- ಜನವರಿ ತಿಂಗಳಲ್ಲಿ ಯೂರಿಯಾ ಮತ್ತು ಪೊಟ್ಯಾಶ್ ತಲಾ 50 ಗ್ರಾಂ ಎಪ್ರೀಲ್ ತಿಂಗಳಲ್ಲಿ ಮತ್ತೆ ತಲಾ 50 ಗ್ರಾಂ ಯೂರಿಯಾ ಮತ್ತು ಪೊಟ್ಯಾಶ್ ಕೊಡಿ.
- ಆಗ ಒಟ್ಟಾರೆಯಾಗಿ NPK ಪ್ರಮಾಣದಲ್ಲಿ ಕೊಟ್ಟಿದ್ದರೆ, ಈಗ ಕೊಡುವ ಗೊಬ್ಬರದಲ್ಲಿ ರಂಜಕ (P) ಬೇಡ. ಬರೇ N K ಮಾತ್ರ ಕೊಡಿ.
- ರಂಜಕ ಶಿಫಾರಿಸಿಗಿಂತಲೂ ಹೆಚ್ಚಾಗಿ ಬಳಕೆ ಆಗಿರುತ್ತದೆ.
- NPK ಪ್ರಮಾಣ 124:52:172 ಗ್ರಾಂ ಆಗುತ್ತದೆ.
ಇತರ ಸಂಯುಕ್ತ ಗೊಬ್ಬರ ಕೊಡುವುದಿದ್ದರೆ ಚೀಲದಲ್ಲಿ ನಮೂದಿಸಿದ NPK ಪ್ರಮಾಣವನ್ನು ನೋಡಿ ಅದರಲ್ಲಿ ಕೊರತೆ ಇರುವಂತದನ್ನು ಮಾತ್ರ ಕೊಡಿ. ಅನವಶ್ಯಕ ಹೆಚ್ಚುವರಿ ಗೊಬ್ಬರ ಕೊಡಬೇಡಿ. ಇದರಿಂದ ಖರ್ಚೂ ಹೆಚ್ಚಾಗುತ್ತದೆ. ದುಶ್ಪರಿಣಾಮ ಸಹ ಉಂಟಾಗುತ್ತದೆ. ವಿಷೇಷವಾಗಿ ರಂಜಕ ಹೆಚ್ಚಾಗಬಾರದು.
DAP ಕೊಟ್ಟವರು ಹೇಗೆ ಮಾಡಬೇಕು:
- DAP ಗೊಬ್ಬರ ಕೊಟ್ಟವರು ಜೊತೆಗೆ MOP ಸೇರಿಸಬೇಕು. ಅದರಲ್ಲಿ ಪೊಟ್ಯಾಶ್ ಇಲ್ಲ.
- ಮುಂಗಾರು ಕಂತಿಗೆ 50 ಗ್ರಾಂ DAP ಮತ್ತು 50 ಗ್ರಾಂ ಯೂರಿಯಾ ಮತ್ತು 100 ಗ್ರಾಂ MOP ಕೊಡಿ.
- ಸಪ್ಟೆಂಬರ್ ನಲ್ಲಿ DAP, 50 ಗ್ರಾಂ ಯೂರಿಯಾ 100 ಗ್ರಾಂ ಮತ್ತು MOP-100 ಗ್ರಾಂ ಕೊಡಿ.
- ಜನವರಿ ತಿಂಗಳಿಗೆ ಯೂರಿಯಾ ಮತ್ತು MOP ತಲಾ 50 ಗ್ರಾಂ. ಕೊಡಿ.
- ಎಪ್ರೀಲ್ ತಿಂಗಳಲ್ಲಿ ಮತೆ ತಲಾ 50 ಗ್ರಾಂ ಯೂರಿಯಾ ಮತ್ತು ಪೊಟ್ಯಾಶ್ ಕೊಡಿ.
- ಒಟ್ಟು NPK ಪ್ರಮಾಣ 133 :48: 180 ಗ್ರಾಂ ಆಗುತ್ತದೆ.
ಅಧಿಕ ಮಳೆಯಾಗುವ ಕಡೆ ಪೊಟ್ಯಾಶ್ ಇಳಿದು ಹೋಗಿ ನಷ್ಟವಾಗುವ ಕಾರಣ ಇಷ್ಟು ಕೊಡಬಹುದು. ಉಳಿದೆಡೆ ಸ್ವಲ್ಪ ಕಡಿಮೆ ಮಾಡಬಹುದು. ಯಥೇಚ್ಚ ಕೋಳಿ ಗೊಬ್ಬರ, ಕುರಿ ಗೊಬ್ಬರ, ಸಗಣಿ ಗೊಬ್ಬರ ಕೊಡುವವರು ಯೂರಿಯಾ ಪ್ರಮಾಣ 50% ಕಡಿಮೆ ಮಾಡಬಹುದು.
ಹೇಗೆ ಗೊಬ್ಬರ ಕೊಡಬೇಕು?
- ಸಾರಜನಕ ಗೊಬ್ಬರವನ್ನು ಮಣ್ಣಿನ ಕೆಳಗೆ ಇರುವಂತೆ ಹಾಕಬೇಕು.
- ಉಳಿದ ರಂಜಕ – ಪೊಟ್ಯಾಶ್ ಅನ್ನು ಸಹ ಹೀಗೆ ಹಾಕಿದರೆ ಒಳ್ಳೆಯದು.
- ಕೆಲಸದವರ ಸಮಸ್ಯೆಗಾಗಿ ಇದನ್ನು ಸುತ್ತಲೂ ಏಕ ಪ್ರಕಾರವಾಗಿ ಬೀಳುವಂತೆ ಚೆಲ್ಲಿದರೂ ತೊಂದರೆ ಇಲ್ಲ.
- ರಂಜಕ ಮತ್ತು ಪೊಟ್ಯಾಶ್ ಇದು ಆವಿ ಆಗುವುದಿಲ್ಲ.
- ರಂಜಕ ಬೇರಿನ ಸನಿಹಕ್ಕೆ ಸಿಕ್ಕಿದರೆ ಒಳ್ಳೆಯದು. ಪೊಟ್ಯಾಶ್ ಕರಗಿ ಇಳಿಯುತ್ತದೆ.
- ಯೂರಿಯಾ ವನ್ನು ಹಾಕಿ ಕನಿಷ್ಟ ಗರಿಯನ್ನಾದರೂ ಮುಚ್ಚುವುದು ಅಗತ್ಯ.
- DAP ಮತ್ತು 10:26:26 ಹಾಗೆಯೇ 20:20:0:13 ಸಹ ಸಾರಜನಕ ಇರುವ ಕಾರಣ ಮುಚ್ಚಿಗೆ ಮಾಡಬೇಕು.
ಜನವರಿ ಮತ್ತು ಎಪ್ರೀಲ್ ನಲ್ಲಿ ಗೊಬ್ಬರ ಯಾಕೆ?
- ಈ ಸಮಯದಲ್ಲಿ ಬಿಸಿಲು ಚೆನ್ನಾಗಿ ಇರುತ್ತದೆ.
- ಸಸ್ಯಗಳು ಹೆಚ್ಚು ಆಹಾರ ಬಳಸಿಕೊಳ್ಳುತ್ತವೆ.
- ಜೊತೆಗೆ ಬೆಳೆಯುವ ಫಸಲು ಹೊಸ ಫಸಲು ಎರಡೂ ಇರುತ್ತದೆ.
- ಹಾಗಾಗಿ ಪೋಷಕದ ಅವಶ್ಯಕತೆ ಹೆಚ್ಚು ಇರುತ್ತದೆ.
- ಆಗ ಗೊಬ್ಬರದ ಕೊಟ್ಟರೆ ಅನುಕೂಲವಾಗುತ್ತದೆ.
- ಹಾಗೆ ನೋಡಿದರೆ ಹಂಚಿಕೆ ಮಾಡಿ ತಿಂಗಳು ತಿಂಗಳು ಅಥವಾ 15 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪವೇ ಕೊಟ್ಟರೆ ಒಳ್ಳೆಯದು.
- ಇದರಿಂದ ಗೊಬ್ಬರ ತರುವ ಖರ್ಚು ಸಹ ಉಳಿತಾಯವಾಗುತ್ತದೆ.
- ರಸ ಗೊಬ್ಬರಗಳು ಹೆಚ್ಚು ಸಮಯ ಪೋಷಕವನ್ನು ಮಣ್ಣಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಕೊರತೆ ಉಂಟಾಗುತ್ತದೆ.
- ಒಂದು ಎರಡು ಕಂತಿನಲ್ಲಿ ಕೊಟ್ಟರೆ ಕೆಲವು ನಷ್ಟಗಳು ಉಂಟಾಗುತ್ತದೆ.
- ಸಾರಜನಕ ಅವಿಯಾಗಿ ನಷ್ಟವಾಗುತ್ತದೆ. ರಂಜಕ ಲಭ್ಯವಾಗದೆ ನಷ್ಟವಾಗುತ್ತದೆ.
- ಪೊಟ್ಯಾಶ್ ಅಧಿಕ ನೀರಾವರಿಯಲ್ಲಿ ಬೇರಿನ ಸನಿಹದಿಂದ ಕೆಳಕ್ಕೆ ಹೋಗಿ ನಷ್ಟವಾಗುತ್ತದೆ. ಹಾಗಾಗಿ ಕೊರತೆ ಉಂಟಾಗುತ್ತದೆ.
ಉತ್ತಮ ಇಳುವರಿ ಪಡೆಯಲು ಸಾಕಷ್ಟು ಗೊಬ್ಬರವನ್ನು ಕೊಡಬೇಕು. ಹಾಗೆಯೇ ವರ್ಷ ವರ್ಷವೂ ಏಕಪ್ರಕಾರವಾಗಿ ಇಳುವರಿ ಬರುತ್ತಿರಲೂ ಸಹ ಚೆನ್ನಾಗಿ ಗೊಬ್ಬರ ಕೊಡಬೇಕು. ನಿರಂತರ ಪ್ರತೀ ತಿಂಗಳೂ ಕಂತು ಕಂತುಗಳಲ್ಲಿ ಗೊಬ್ಬರಗಳನ್ನು ಕೊಡುತ್ತಾ ಇದ್ದರೆ ಪ್ರತೀ ಹೂ ಗೊಂಚಲಿಗೂ ಆಹಾರ ದೊರೆತು ಕಾಯಿ ಕಚ್ಚುವಿಕೆ ಚೆನ್ನಾಗಿ ನಡೆದು ಫಸಲು ಹೆಚ್ಚಳವಾಗುತ್ತದೆ. ಹಾಲೀ ಫಸಲು ಎಷ್ಟೇ ಇರಲಿ, ಮುಂದಿನ ವರ್ಷದ ಫಸಲು ಕ್ಷೀಣವಾಗದೆ ಇರಲು ಪೊಷಕಾಂಶಗಳ ನಿರಂತರ ಪೂರೈಕೆ ಇರಬೇಕು.