ಅಡುಗೆ ಮಾಡಿದ ಪದಾರ್ಥ ಹಳಸಲು ಆಗುವುದು ಗೊತ್ತು. ಇನ್ನು ಮಣ್ಣು ಹಳಸುವುದು ಇದು ಯಾವುದಪ್ಪಾ ಹೊಸ ವಿಷಯ? ಇದೇನೂ ಹೊಸ ವಿಷಯವಲ್ಲ. ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ನಮಗೆ ಮಾತ್ರ ಇದು ಗೊತ್ತಿಲ್ಲ. ಹಳಸುಮಣ್ಣು ಒಂದು ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ವಿಷ ಎಂತಲೇ ಹೇಳಬಹುದು. ಬಹುತೇಕ ಜನ ಇಂತಹ ಹಾಕಿ ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಬಹಳಷ್ಟು ಜನ ರೈತರು ಹೀಗೆ ಮಾಡಿಕೊಂಡು ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಏನಿದು ಮಣ್ಣು ಹಳಸುವುದು ನೋಡೋಣ.
ಮಣ್ಣು ಯಾವಾಗಲೂ ಹಿತಮಿತ ತೇವಾಂಶದಿಂದ ಕೂಡಿದ್ದರೆ ಅದು ಫಲವತ್ತತೆಯನ್ನು ವೃದ್ದಿಸಿಕೊಳ್ಳುತ್ತಾ ಇರುತ್ತದೆ. ತೇವಾಂಶ ಎಂದರೆ ಅದು 50% ಕ್ಕಿಂತ ಹೆಚ್ಚು ಇರಬಾರದು.ವರ್ಷದ ಎಲ್ಲಾ ಋತುಮಾನಗಳನ್ನು ಮಣ್ಣು ಅನುಭವಿಸಬೇಕು. ಆಗ ಅದರ ಫಲವತ್ತತೆ ಹೆಚ್ಚಾಗಿ ಬಳೆಗಳಿಗೆ ಅಥವಾ ನೆಲದ ಮೇಲೆ ಬೆಳೆಯುವ ಎಲ್ಲಾ ಹಸುರು ಸಸ್ಯಗಳಿಗೆ ಅನುಕೂಲವಾಗುತ್ತದೆ. ಮಳೆಗಾಲ ಎಂಬುದು ಮಣ್ಣಿಗೆ ತಂಪು ಮಾಡುವ ಕಾಲ. ಮಣ್ಣು ನೆನೆಯಬೇಕು. ಮಣ್ಣಿನ ಮೇಲೆ ಬೇಸಿಗೆಯಲ್ಲಿ ಬಿದ್ದ ತರಗೆಲೆ, ಮತ್ತು ಸಾವಯವ ವಸ್ತುಗಳು ಕಳಿತು ಮಣ್ಣಿನೊಂದಿಗೆ ವಿಲೀನವಾಗಬೇಕು. ಅದು ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಬೇಕು. ಮಳೆಗಾಲದಲ್ಲಿ ಮಣ್ಣಿನ ಬಹುತೇಕ ಸೂಕ್ಷ್ಮಾಣು ಜೀವಿಗಳು ಚಟುವಟಿಕೆಯಲ್ಲಿ ಇರುವ ಕಾಲ. ಈ ಋತುಮಾನದಲ್ಲಿ ಅವು ಬದುಕಲು ಬೇಕಾದ ಎಲ್ಲಾ ಅನುಕೂಲಕರ ವಾತಾವರಣ ಇರುತ್ತದೆ. ಮಣ್ಣಿನಲ್ಲಿ ಹೊಸ ಸಸ್ಯಗಳು ಅದರಲ್ಲೂ ಹುಲ್ಲು ಜಾತಿಯ ಸಸ್ಯಗಳು ಹುಟ್ಟಿ ಮುಂದಿನ ಫಲವತ್ತತೆ ಚಕ್ರವು ಸೃಷ್ಟಿಯಗಬೇಕು. ಇದು ಪ್ರಕೃತಿ ನಿಯಮ. ಹಾಗೆಯೇ ಚಳಿಗಾಲ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಿಗೂ ವಿಶ್ರಾಂತಿಯ ಕಾಲ ಎಂದು ಹೇಳಬಹುದು. ಈ ಸಮಯದಲ್ಲಿ ಬೇರುಗಳು ಹೆಚ್ಚು ಚಟುವಟಿಕೆಯಲ್ಲಿ ಇರುವುದಿಲ್ಲ. ಬೇಸಿಗೆ ಕಾಲದಲ್ಲಿ ಮಣ್ಣು ಸೂರ್ಯನ ಬೆಳಕಿಗೆ ತೆರೆದುಕೊಂಡು ಒಣಗುತ್ತದೆ. ಈ ಒಣಗುವಿಕೆಯಿಂದಾಗಿ ಇದರ ಮೇಲೆ ಇರುವ ಕೆಲವು ಉಪದ್ರವಿ (ರೋಗಕಾರಕ) ಸೂಕ್ಷ್ಮಾಣು ಜೀವಿಗಳು ಸತ್ತು ಹೋಗುತ್ತದೆ. ಮಣ್ಣಿನಲ್ಲಿ ಮಳೆಗಾಲದಲ್ಲಿ ಬೆಳೆದ ಹುಲ್ಲು ಸಸ್ಯಗಳು ಅದರ ಬೇರು ಇಳಿದಿರುವಷ್ಟು ಆಳದ ತನಕ ಒಣಗಿ ಹೋಗುತ್ತದೆ. ಅಷ್ಟು ಆಳದ ತನಕ ರಂದ್ರಗಳು ಉಂಟಾಗುತ್ತದೆ. ಕೆಲವು ಸಸ್ಯಗಳು, ಮರಗಳು ಚಳಿಗಾಲದಲ್ಲಿ ಎಲೆ ಉದುರಿಸುತ್ತವೆ, ಕೆಲವು ಬೇಸಿಗೆಯಲ್ಲಿ ಉದುರಿಸುತ್ತವೆ. ಬಲಿತ ರೋಗ ಪೀಡಿತ ಗೆಲ್ಲುಗಳು ಒಣಗಿ ಉದುರುತ್ತದೆ. ಇವೆಲ್ಲಾ ನೆಲದ ಮೇಲೆ ಬಿದ್ದು ಅಲ್ಲೇ ಇರುತ್ತದೆ. ಅದನ್ನೆಲ್ಲಾ ಮಳೆಗಾಲದ ತೇವಾಂಶ ಮಣ್ಣಿನಲ್ಲಿ ವಿಲೀನಮಾಡುವ ಕೆಲಸವನ್ನು ಮಾಡುತ್ತದೆ.
ಮಳೆಗಾಲದಲ್ಲಿ ತೇವಾಂಶ ಎಷ್ಟು ಇರಬೇಕು:
- ಮಳೆಗಾಲದಲ್ಲಿ ವಿಪರೀತ ಮಳೆ ಇರುತ್ತದೆ. ಮಣ್ಣಿನ ಇಂಚಿಂಚೂ ತೇವಾಂಶ ಹೀರಿಕೊಂಡಿರುತ್ತದೆ.
- ತಳಕ್ಕೆ ಇಂಗಲ್ಪಟ್ಟ ನೀರು ಮತ್ತೆ ಒರತೆ ರೂಪದಲ್ಲಿ ಮಣ್ಣಿನ ಮೇಲ್ಭಾಗದಲ್ಲಿ ಹರಿಯುವ ಸ್ಥಿತಿ ಉಂಟಾಗುತ್ತದೆ.
- ಹೀಗಿರುವಾಗ ನೀರಿನ ನಿರ್ವಹಣೆಯ ಅಗತ್ಯ ಬೀಳುತ್ತದೆ.
- ನೀರು ಎಷ್ಟು ಇದ್ದರೂ ಬೆಳೆಗಳಿಗೆ ಅದರಿಂದ ಹಾನಿ ಉಂಟಾಗಬಾರದು.
- ಅದನ್ನೇ ನೀರಿನ ನಿರ್ವಹಣೆ ಎನ್ನುವುದು. ಸಸ್ಯಗಳಿಗೆ ಬೇಕಾಗುವುದು ನೀರು ಅಲ್ಲ.
- ತೇವಾಂಶ ಮಾತ್ರ. ಆದಾಗ್ಯೂ ಬೆಳೆಗಳ ಬುಡದಲ್ಲಿ ನೀರು ಬಸಿದು ಹೋಗುತ್ತಿದ್ದರೆ water percolation ಅಂತಹ ಸಮಸ್ಯೆ ಉಂಟಾಗುವುದಿಲ್ಲ.
- ನೀರು ಬಸಿಯದೆ ನಿಂತಿತೆಂದಾದರೆ ಅಲ್ಲಿ ಮಣ್ಣು ಹಳಸಲಾಗುತ್ತದೆ.
- ಮರಳು ಹೊರತಾಗಿ ಹೆಚ್ಚಿನ ಫಲವತ್ತತೆ ಇರುವ ಮಣ್ಣಿನಲ್ಲಿ ನೀರು ತಕ್ಷಣ ಬಸಿದು ಹೋಗುವುದಿಲ್ಲ.
- ನಿರಂತರ ಮಳೆ ಬರುತ್ತಿದ್ದರೆ ಮಣ್ಣು ನೀರು ಕುಡಿದು ಕುಡಿದು ವಾಕರಿಕೆ ಮಾಡುವ ಸ್ಥಿತಿಯಲ್ಲಿ ಇರುತ್ತದೆ.
- ಮಳೆಯ ನೀರಿನ ಜೊತೆಗೆ ಮಣ್ಣು ಸಹ ಕೊಚ್ಚಣೆಯಾಗುತ್ತದೆ. ಇವೆಲ್ಲಾ ತಗ್ಗಿನ ಸ್ಥಳದಲ್ಲಿ ಶೇಖರಣೆ ಆಗುತ್ತದೆ.
- ಅಲ್ಲಿ ನೀರು ಬಸಿಯಲು ಅಸಾಧ್ಯವಾದ ಸ್ಥಿತಿ ಉಂಟು ಮಾಡುತ್ತದೆ.
- ಅಲ್ಲಿ ಮಣ್ಣು ಹೆಪ್ಪುಗಟ್ಟಿದ ತರಹ ಇರುತ್ತದೆ. ಈ ಸ್ಥಿತಿಯಲ್ಲಿ ಮಣ್ಣು ಹಳಸಲು ಪ್ರಾರಂಭವಾಗುತ್ತದೆ.
- ಹಳಸಲು ಕಾರಣ ಅಲ್ಲಿ ಉಪಕಾರೀ ಜೀವಾಣುಗಳು ನಾಶವಾಗಿ ಹಾನಿಕಾರಕ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗುವುದು.
- ಮಳೆಗಾಲದಲ್ಲಿ ಅದರಲ್ಲೂ ಮಳೆ ಹೆಚ್ಚು ಇರುವ ಕಡೆ ಬೆಳೆ ಇರುವಲ್ಲಿ ನೀರು ಎಲ್ಲಿಯೂ ನಿಲ್ಲುವಂತೆ ಹೊಂಡಗಳನ್ನು ಮಾಡಬಾರದು.
- ಕೊಚ್ಚಣೆಯಾಗುವ ಮಣ್ಣನ್ನು ತಡೆಯಲು ಬೆಳೆ ಇಲ್ಲದ ಜಾಗದಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
- ಬೆಳೆಗಳ ಬುಡದಲ್ಲಿ ಒರತೆಯ ಸ್ಥಿತಿಯೇ ಇರಲಿ, ಆದರೆ ಅದು ಸರಾಗವಾಗಿ ಹರಿದು ಹೋಗುತ್ತಿರಬೇಕು.

ಹರಿದು ಹೋಗುವ ನೀರಿನಲ್ಲಿ ದಿನ ಪೂರ್ತಿ ಕೆಲ್ಸ ಮಾಡಿ. ಕಾಲಿಗೆ ಯಾವ ತೊಂದರೆಯ್ತೂ ಆಗುವುದಿಲ್ಲ. ಆದರೆ ಜೌಗು ಅಥವಾ ನೀರು ನಿಂತ ಸ್ಥಳದಲ್ಲಿ (ಕೊಚ್ಚೆ ತರಹ ಜಾಗದಲ್ಲಿ) ಸ್ವಲ್ಪ ಓಡಾಡಿದರೂ ಕಾಲಿಗೆ ಶಿಲೀಂದ್ರ ಸೋಂಕು ( ಹುಳ ತಿನ್ನುವುದು) ಉಂಟಾಗುತ್ತದೆ. ಕಾರಣ ಅಲ್ಲಿ ಹಾನಿಕಾರಕ ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಾಗಳೇ ಇರುತ್ತವೆ. ಅಂತಹ ಸ್ಥಿತಿ ಹೆಚ್ಚಿನ ಕಡೆ ಕಾಣಿಸುತ್ತದೆ. ಅದೇ ಹಳಸಲು ಮಣ್ಣು.
ಮಣ್ಣು ಹಳಸದಂತೆ ಏನು ಮಾಡಬೇಕು:
- ನೀರು ತಳಕ್ಕೆ ಇಂಗದ ಸ್ಥಿತಿ ಉಂಟಾಗಿ ಎರಡು ಮೂರು ದಿನ ವಾರಗಟ್ಟಲೆ ನೀರು ನಿಂತು ಉಸಿರುಗಟ್ಟಿದ ಸ್ಥಿತಿ ನಿರ್ಮಾಣವಾದಾಗ ಅಲ್ಲಿನ ಮಣ್ಣು ಹಳಸುತ್ತದೆ.
- ಈ ಸ್ಥಿತಿ ಉಂಟಾಗದಂತೆ ಮಾಡಬೇಕಾದರೆ ಬೆಳೆ ಇರುವಲ್ಲಿ ಸಮರ್ಪಕ ನೀರು ಬಸಿಯುವ ಅಥವಾ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಮಾಡಬೇಕು.
- ನೀರು ನಿಲ್ಲಲು ಅನುಕೂಲವಾಗುವ ಹೊಂಡದಂತಹ ಪ್ರದೇಶಗಳನ್ನು ಮುಚ್ಚಿ ಸಮತಟ್ಟು ಮಾಡಬೇಕು.
- ಸಾವಯವ ವಸ್ತುಗಳನ್ನು ಮಳೆಗೆ ಮುಂಚೆಯೇ ಬೆಳೆಗಳ ಬುಡಕ್ಕೆ ಹಾಕಬೇಕು.
- ಹೊಂಡದಲ್ಲಿ ಅಡಿಕೆ ಸಸಿ ನೆಡುವಾಗ ಬಸಿಗಾಲುವೆ ಬೇಕು.
- ಇಲ್ಲದಾದರೆ ಹೊಂಡದ ಸುತ್ತಲೂ ಹೊರಗಿನ ಮಣ್ಣು ಸೇರದಂತೆ ತಡೆ ಮಾಡಬೇಕು.
- ಬುಡಕ್ಕೆ ಸೊಪ್ಪು ಇತ್ಯಾದಿ ಹಾಕಿ ಮಳೆಗೆ ಮಣ್ಣು ಸಿಡಿಯದಂತೆ ರಕ್ಷಣೆ ಕೊಡಬೇಕು.
- ಕರಿಮೆಣಸು ಮುಂತಾದ ಬೆಳೆಗಳ ಬುಡದಲ್ಲಿ ಇಂತಹ ಸ್ಥಿತಿ ಆಗಲೇಬಾರದು.
ಮಣ್ಣು ಹಳಸಲು ಆದರೆ ಏನಾಗುತ್ತದೆ?
- ಈ ಸ್ಥಿತಿಯಲ್ಲಿ ಬೇರಿಗೆ ಉಸಿರುಕಟ್ಟಿದ ಸ್ಥಿತಿ ಉಂಟಾಗುತ್ತದೆ.
- ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಎಲೆಗಳು ಹಳದಿಯಾಗುತ್ತದೆ.
- ಕರಿಮೆಣಸಿನಂತಹ ಬಳ್ಳಿಯ ಬೇರು ಕೊಳೆಯಲು ಪ್ರಾರಂಭವಾಗುತ್ತದೆ.
- ಭತ್ತದ ಬೆಳೆಗೂ ನೀರು ಹರಿದು ಹೋಗದೆ ಇದ್ದರೆ ಎಲೆ ಹಳದಿಯಾಗುವ ಸ್ಥಿತಿ ಉಂಟಾಗುತ್ತದೆ.
- ಯಾವುದೇ ಬೆಳೆಯಾದರೂ ಮಣ್ಣು ಹಳಸಿದ ಸ್ಥಿತಿ ಉಂಟಾದರೆ ಅದು ಒಳ್ಳೆಯದಲ್ಲ.
- ಕೆಲವು ಸಸ್ಯಗಳು ಸ್ವಲ್ಪ ತಡೆದುಕೊಳ್ಳಬಹುದು.
- ಸಣ್ಣ ಬೇರುಗಳು, ತಾಯಿ ಬೇರು ಇಲ್ಲದ ಸಸ್ಯಗಳು ಬೇಗನೆ ಹಾನಿಯಾಗುತ್ತದೆ.
- ಶಿಲೀಂದ್ರ ರೋಗಗಳಾದ ಬೇರು ಕೊಳೆಯುವಿಕೆ ಮುಂತಾದವುಗಳು ಈ ರೀತಿಯ ಸ್ಥಿತಿಯಲ್ಲಿ ಉಂಟಾಗುತ್ತದೆ.
ಹಳಸಲು ಆದ ಮಣ್ಣನ್ನು ಉಪಚರಿಸಿ ಬಳಸಬೇಕು:
- ಯಾವಾಗಲೂ ಮಳೆಗಾಲದಲ್ಲಿ ತಗ್ಗಿನ ಜಾಗದಲ್ಲಿ ತಂಗಿದ ಮಣ್ಣನ್ನು ಬೆಳೆಗಳಿಗೆ ನೇರವಾಗಿ ಹಾಕಬೇಡಿ.
- ಚೆನ್ನಾಗಿ ಬಿಸಿಲಿಗೆ ಒಣಗಿದ ತರುವಾಯ ಹಾಕಬಹುದು. ಆದರೂ ಅದನ್ನು ಸ್ವಲ್ಪ ಬಿಸಿ ಮಾಡಿ (ಸುಡುಮಣ್ಣು) ಬಳಕೆ ಬಳಸುವುದು ಉತ್ತಮ.
- ಸುಡುಮಣ್ಣು ಮಾಡಿದರೆ ಈ ಮಣ್ಣು ಬೆಳೆಗಳಿಗೆ ಉತ್ತಮ.
- ಹಸಿ ಇರುವಾಗ ಬಳಸಿದರೆ ಅದರಲ್ಲಿ ಇರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಂದ ಬೆಳೆಗಳಿಗೆ ತೊಂದರೆ ಆಗಬಹುದು.
- ಇದನ್ನು ತಿಳಿದೋ ತಿಳಿಯದೆಯೋ ನಮ್ಮ ಹಿರಿಯರು ಇಂತಹ ಮಣ್ಣು ಇದ್ದರೆ ಅದನ್ನು ಸುಡುಮಣ್ಣು ಮಾಡಿಯೇ ಬಳಕೆ ಮಾಡುತ್ತಿದ್ದರು.
ಅಧಿಕ ಮಳೆಯಾಗುವಲ್ಲಿ ಮಣ್ಣು ಹಳಸಲಾಗುದು ಸಾಮಾನ್ಯ. ಇಲ್ಲಿನ ಮಣ್ಣಿನಲ್ಲಿ ಮರಳು ಮತ್ತು ನೊರಜು ಕಲ್ಲುಗಳ ಪ್ರಮಾಣ ಹೆಚ್ಚು ಇರುವ ಕಾರಣ ಹೆಚ್ಚಿನ ಮಟ್ಟಿಗೆ ಈ ಸ್ಥಿತಿ ಕಡಿಮೆಯಾಗುತ್ತದೆ. ನೀರಿನ ಜೊತೆಗೆ ಸೇರಿಕೊಂಡು ಬರುವ ಮಣ್ಣು ಸಂಗ್ರಹವಾದಲ್ಲಿ ಅದು ಹೆಪ್ಪುಗಟ್ಟಿ ಆ ಮಣ್ಣು ಹಳಸಲಾಗುತ್ತದೆ. ಬಯಲು ಸೀಮೆಯ ಅಂಟು ಮಣ್ಣಿನ ಭೂಮಿಯಲ್ಲಿ ಮಳೆ ಕಡಿಮೆ. ಇಲ್ಲಿ ಕರಾವಳಿ ಮಲೆನಾಡಿನಂತೆ ಮಳೆ ಬಂದರೆ ತುಂಬಾ ದಿನಗಳ ತನಕ ನೀರು ಇಂಗದೆ ಹಳಸಲು ಸ್ಥಿತಿ ಉಂಟಾಗುತ್ತದೆ. ಆಗ ಬೆಳೆಗಳ ಬೇರು ಕೊಳೆತು ಹಳದಿಯಾಗಲು ಪ್ರಾರಂಭವಾಗುತ್ತದೆ.