ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣಿನಲ್ಲಿ  ಎಷ್ಟೆಲ್ಲಾ ಸೂಕ್ಷ್ಮ ಜೀವಿಗಳಿವೆ- ಅವು  ಹೇಗೆ ಬದುಕುತ್ತವೆ.

ಮಣ್ಣು ಎಂಬುದು ಸೂಕ್ಷ್ಮ ಜೀವಿಗಳ  ಮನೆ ಎಂದೇ ಹೇಳಬಹುದು. ಇಲ್ಲಿ ಬಹುತೇಕ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ವಾಸವಾಗಿರುತ್ತವೆ. ಕೆಲವು ಕಣ್ಣಿಗೆ ಕಾಣಿಸಿದರೆ ಮತ್ತೆ ಕೆಲವು ಕಾಣಿಸುವುದಿಲ್ಲ.  ಇವೆಲ್ಲಾ ಮಣ್ಣಿನ ಆಸರೆಯಲ್ಲಿ ಬೆಳೆದು ಅದೇ ಮಣ್ಣಿಗೆ, ಅಲ್ಲಿನ ಸಸ್ಯ ಜೀವಿಗಳಿಗೆ ಪ್ರಯೋಜನವನ್ನೂ  ಹಾಗೆಯೇ ಕೆಲವೇ ಕೆಲವು ತೊಂದರೆಯನ್ನೂ ಉಂಟುಮಾಡುತ್ತವೆ. ಪ್ರಕೃತಿ ಅಥವಾ ಸೃಷ್ಟಿ ಉಪಕಾರೀ ಜೀವಿಗಳಿಗೆ ಪ್ರಾಬಲ್ಯವನ್ನು ಕೊಟ್ಟಿದೆ. ಪ್ರತಿಕೂಲ ವಾತಾರಣದಲ್ಲಿ ಮಾತ್ರ ಅವು ದುರ್ಬಲವಾಗುತ್ತದೆ.  ಇಲ್ಲಿ ನಾವು  ವಿವಿಧ ಜೀವಾಣುಗಳ ಬಗ್ಗೆ ತಿಳಿಯೋಣ.

ಖನಿಜ ವಸ್ತು, ಸಾವಯವ ವಸ್ತು, ನೀರು ಮತ್ತು ಗಾಳಿ ಈ ಎಲ್ಲಾ ಪ್ರಾಕೃತಿಕ ಘಟಕಗಳ ಜೊತೆಗೆ ಅಸಂಖ್ಯಾತ ಜೀವಿಗಳೂ ಮಣ್ಣಿನ ಒಂದು ಘಟಕವೇ.ಇವುಗಳ ಪಾತ್ರವೇ ಮಣ್ಣಿನ ಕ್ರಿಯಾ ಶಕ್ತಿಗೆ ಕಾರಣ. ಇಲಿ, ಹೆಗ್ಗಣ, ಗೆದ್ದಳು, ಇರುವೆ, ಎರೆಹುಳ, ಶತಪದಿ, ಹುಳು ಹುಪ್ಪಟೆ ಕೀಟಗಳು ಮುಂತಾದ ನಮ್ಮ ಕಣ್ಣಿಗೆ ಕಾಣಿಸುವವು, ಇದಲ್ಲದೆ ಅಸಂಖ್ಯಾತ ಕಣ್ಣಿಗೆ ಕಾಣಿಸದ ಸೂಕ್ಷ್ಮಾಣು ಜೀವಿಗಳಿಗೆ ಮಣ್ಣು ಮಡಿಲು ಎನ್ನಬೇಕು. ಒಂದು ಗ್ರಾಂ ಮಣ್ಣಿನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಒಂದು ಲಕ್ಷದಿಂದ ಹಿಡಿದು ಅನೇಕ ಲಕ್ಷಗಳ ವರೆಗೆ ಇರುತ್ತದೆ. ಮಣ್ಣಿನ ಸಾವಯವ ಅಂಶ ಹೆಚ್ಚಿನ ಸಂಧರ್ಭಗಳಲ್ಲಿ ಬಹುಪಾಲು ಸೂಕ್ಷ್ಮಾಣು ಜೀವಿಗಳಿಂದಲೇ ಕೂಡಿರುತ್ತದೆ ಎಂದರೂ ತಪ್ಪಾಗಲಾರದು. ಒಂದು ಅನ್ನದ ಅಗಳು ನೆಲಕ್ಕೆ ಬಿದ್ದರೆ ಆ ಕ್ಷಣದಲ್ಲಿ ಅದಕ್ಕೆ ಸೂಕ್ಷ್ಮಾಣು ಜೀವಿಗಳು ಪ್ರವೇಶವಾಗುತ್ತವೆ. ಯಾವುದಾರರೂ ಹಸಿ ಕಾಳು ನೆಲಕ್ಕೆ ಬಿದ್ದರೆ ಕೆಲವೇ ಸಮಯದಲ್ಲಿ ಅದಕ್ಕೆ ಶಿಲೀಂದ್ರ ಸೋಂಕು ತಗಲುತ್ತದೆ. ಒಂದು ಸಣ್ಣ ದುಂಬಿ ಸತ್ತು ಬಿದ್ದರೆ ಸಾಕು, ಇರುವೆಗಳು ಓಡೋಡಿ ಬರುತ್ತವೆ. ಇದು ಮಣ್ಣಿನಲ್ಲಿ ನಿರಂತರವಾಗಿ ಕ್ರಿಯಾತ್ಮಕವಾಗಿರುವ ಜೀವಾಣುಗಳ ವಿಶೇಷ.

ಮಣ್ಣಿನ ಜೀವಾಣುಗಳ ಕುರಿತಾಗಿ ಹೇಳುವಾಗ ಅದನ್ನು ಈ ರೀತಿಯಾಗಿ ವರ್ಗೀಕರರಿಸಬೇಕಾಗುತ್ತದೆ.ಅಂತಹ ವರ್ಗೀಕರಣ ಹೀಗಿದೆ

ಸಸ್ಯ ಜೀವಿಗಳು:

ಇದರ ಅಡಿಯಲ್ಲಿ ಬ್ಯಾಕ್ಟೀರಿಯಾಗಳು, ಶಿಲೀಂದ್ರಗಳು, ಆಕ್ಟಿನೋಮೈಸಿಟಿಸ್ ಗಳು, ಪಾಚಿ ಅಥವಾ ಶೈವಲಗಳು.  ಇದರಲ್ಲಿ ಮತ್ತೆ ಪರಪೊಷಕಗಳು ಮತ್ತು  ಸ್ವಪೋಷಕಗಳು ಎಂದು ಎರಡು ವರ್ಗೀಕರಣ ಇರುತ್ತದೆ. ಪರಪೋಷಕಗಳೆಂದರೆ ಸಾವಯವ ವಿಘಟನೆಯಿಂದ ಜೀವಿಸಬಲ್ಲವುಗಳು. ಉದಾಹರಣೆಗೆ ಸಾರಜನಕ ಸ್ಥಿರೀಕರಣ ಮಾಡುವ ಬ್ಯಾಕ್ಟೀರಿಯಾಗಳು ಅದರಲ್ಲಿ ಕೆಲವು ಇನ್ನೊಂದರ ಜೊತೆಗೆ ಸಹಜೀವನ ನಡೆಸುವಂತವುಗಳು, ಮತ್ತೆ ಕೆಲವು ಸ್ವತಂತ್ರವಾಗಿ ಗಾಳಿಯಾಡುವ ಕಡೆ (Arobic) ಮತ್ತು ಗಾಳಿಯಾಡದ (Anarobic) ಸ್ಥಿತಿಯಲ್ಲಿ ಬದುಕುವವುಗಳು. ಸ್ವ ಪೋಷಕಗಳು ಎಂದರೆ ಸಾವಯವ ವಸ್ತುವಿನ ಅಗತ್ಯವಿಲ್ಲದೆ ಬದುಕುವಂತವುಗಳು. ಮಣ್ಣಿನಲ್ಲಿ ಖನಿಜ ರೂಪದ ಕೆಲವೊಂದು ಪೋಷಕಗಳು  ಇರುತ್ತವೆ. ಇವುಗಳನ್ನು ಸಸ್ಯಗಳು ಬಳಸುವಂತೆ ಮಾಡುವ ಅಥವಾ ಉತ್ಕರ್ಷ ಮಾಡುವವುಗಳು.ಇದಲ್ಲದೆ ಶಿಲೀಂದ್ರಗಳು, ಆಕ್ಟೀನೋಮೈಸೆಟಿಸ್ ಪಾಚಿಗಳು ಇರುತ್ತವೆ. ಪ್ರಾಣಿಗಳಲ್ಲಿ ಪ್ರೋಟೋಜೋವಾಗಳು, ಮತ್ತು ನಮಟೋಡ್ಸ್, ಮಣ್ಣು ಹುಳ, ಹುಳ ಹುಪ್ಪಟೆ, ಜೇಡ, ನುಸಿ, ಹೆಗ್ಗಣ, ಸಹಸ್ರಪದಿ, ಶತಪದಿ ಮುಂತಾದವುಗಳು . ಮಣ್ಣಿನ ಸಸ್ಯವರ್ಗ ಜೀವಿಗಳ ಸಂಖ್ಯೆ ಪ್ರಾಣಿವರ್ಗಗಳಿಗಿಂತ ಅಧಿಕ.  ಸಾವಯವ ವಸ್ತುಗಳ ವಿಘಟನೆಯಲ್ಲಿ ಇವುಗಳ ಪಾತ್ರವೇ ಪ್ರಧಾನ.

ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದ ಜೀವಾಣು ಜಿವಾಣುಗಳಿರುವ ಮಣ್ಣು.
ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದ ಜೀವಾಣು ಜಿವಾಣುಗಳಿರುವ ಮಣ್ಣು.

ಉನ್ನತ ಸಸ್ಯವರ್ಗ ಜೀವಿಗಳು:

ಯಾವುದೇ ಪೈರನ್ನು ಕೊಯಿಲು ಮಾಡಿದ ನಂತರ ನೆಲದಲ್ಲಿ ಉಳಿಯುವ ಬೇರು ಮತ್ತು ಅದರ ಕೆಲವು ಭಾಗ (ಕೂಳೆ) ಮಣ್ಣಿಗೆ ಸಾಕಷ್ಟು  ಸಾವಯವ ವಸ್ತುವನ್ನು ಒದಗಿಸುತ್ತದೆ. ಇದು ಹೆಚ್ಚಾಗಿ ಕೊಯಿಲಾದ ಬೆಳೆಯ ಅರ್ಧದಷ್ಟು ಆದರೂ ಇರುತ್ತದೆ. ಇವು ಮಣ್ಣಿನ ಜೊತೆಗೆ ನಿಕಟವಾಗಿ  ಬೆರೆತಿರುತ್ತದೆ. ಆದ ಕಾರಣ ಅದು ಇಂಗಾಲದ ಡೈಆಕ್ಸೈಡ್ ಮತ್ತಿನ್ನಿತರ ವಸ್ತುವನ್ನು ಹೊರ ಸೂಸುತ್ತದೆ. ಈ ಕಾರಣದಿಂದ ಪೋಷಕ ವಸ್ತುಗಳು ಬ್ಯಾಕ್ಟೀರಿಯಾ ಮತ್ತಿನ್ನಿತರ ಜೀವಿಗಳಿಗೆ ಹೆಚ್ಚಾಗಿ ಒದಗುತ್ತದೆ. ಅಲ್ಲಿ ಸೂಕ್ಷ್ಮಾಣು ಜೀವಿಗಳು ಕ್ರಿಯಾತ್ಮಕವಾಗಿರುತ್ತವೆ.

ಸೂಕ್ಷ್ಮ ಜೀವಿಗಳ ಹಾನಿಕರ ಪರಿಣಾಮಗಳು:

ಕ್ರಿಯಾತ್ಮಕವಾದ  ವೃದ್ದಿಯಾಗುತ್ತಿರುವ ಸೂಕ್ಷ್ಮ ಜೀವಿ ಸಮುದಾಯ ಮಣ್ಣಿನ ಫಲವತ್ತತೆಗೆ ಧ್ಯೊತಕ. ಮಣ್ಣು ಫಲವತ್ತಾಗಿರಬೇಕಾದರೆ ಸೂಕ್ಷ್ಮ ಜೀವಿಗಳ ಕ್ರಿಯೆ ಮುಖ್ಯ. ಆದರೆ ಸೂಕ್ಷ್ಮ ಜೀವಿಗಳು ಸಸ್ಯ ರೋಗಗಳಿಗೂ ಕಾರಣವಾಗುತ್ತವೆ.ಸಾಧಾರಣವಾಗಿ ಸಸ್ಯ ಸತ್ತ ನಂತರವೇ ಸೂಕ್ಷ್ಮಾಣು ಜೀವಿಗಳಿಗೆ  ಆಹಾರವಾಗಿ ಪರಿಣಮಿಸುವುದು.  ಕೆಲವು ರೀತಿಯ ಸೂಕ್ಷ್ಮಾಣು ಜೀವಿಗಳು ಸಜೀವ ಸಸ್ಯದೊಳಗೆ ತಮ್ಮ ಆಹಾರಾನ್ವೇಶಣೆಗೋಸ್ಕರ ಪ್ರವೇಶವಾಗುತ್ತವೆ.  ಆಗ ಅವು ರೋಗಕಾರಕವಾಗಿ ಪರಿಣಮಿಸುತ್ತವೆ. ಅಂತಹ ಸೂಕ್ಷ್ಮಾಣಿ ಜೀವಿಗಳನ್ನು ಕೆಲವು ಉಪಚಾರಗಳಿಂದ ಹತ್ತಿಕ್ಕುವುದು ಸಾಧ್ಯವಿದೆ. ಕೆಲವು ರೋಗಕಾರಕ ಸೂಕ್ಷಾಣು ಜೀವಿಗಳು ಆಮ್ಲೀಯ ಮಣ್ಣಿನಲ್ಲಿ ಕ್ರಿಯಾತ್ಮಕವಾದರೆ ಮತ್ತೆ ಕೆಲವು ಕ್ಷಾರೀಯ ಮಣ್ಣಿನಲ್ಲಿ ಕ್ರಿಯಾತ್ಮಕವಾಗುತ್ತವೆ. ಆಗ ಆಮ್ಲೀಯಕ್ಕೆ ಕ್ಷಾರೀಯ ವಸ್ತುವನ್ನು ಮಣ್ಣಿಗೆ ಸೇರಿಸಿ ತಟಸ್ಥೀಕರಣಗೊಳಿಸಿ ನಿಯಂತ್ರಣ ಮಾಡಬಹುದು. ಕ್ಷಾರೀಯಕ್ಕೆ ಆಮ್ಲೀಯ ವಸ್ತು ಸೇರಿಸಿ ತಟಸ್ಥೀಕರಣ ಮಾಡಿದರೆ ಆವುಗಳ ಪ್ರಾಬಲ್ಯ ಕಡಿಮೆಯಾಗುತ್ತದೆ.

ಸೂಕ್ಷ್ಮ ಜೀವಿಗಳು ಬದುಕಲು ಏನು ಆನುಕೂಲಗಳು ಬೇಕು?

ಯಾವುದೇ ಜೀವಿ ಬದುಕಬೇಕಾದರೆ ಅದಕ್ಕೆ ಆಹಾರ ಬೇಕು. ಹಾಗೆಯೇ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳಿಗೂ. ಎಲ್ಲದಕ್ಕಿಂತ ಮಿಗಿಲಾಗಿ ಮಣ್ಣಿನ ಸುಸ್ಥಿತಿ ಅವುಗಳ ಬದುಕಿಗೆ ಆಸರೆ. ಅಂದರೆ ರಸಸಾರ pH. ರಸಸಾರ ತಟಸ್ಥವಾಗಿದ್ದಾಗ ಅಥವಾ ತಟಸ್ಥಕ್ಕೆ ಸಮೀಪ ಇದ್ದಾಗ ಅವು  ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ರಸಸಾರ ಕಡಿಮೆಯಾದಾಗ ಅವುಗಳ ಚಟುವಟಿಕೆ ವಿಮುಖವಾಗುತ್ತದೆ. ಇದರ ಜೊತೆಗೆ ಅವು ಬದುಕಲು ಮಣ್ಣಿನಲ್ಲಿ ಸಾವಯವ ಅಂಶಗಳೂ ಬೇಕಾಗುತ್ತದೆ. ಇಂಗಾಲ ಅಥವಾ ಕಾರ್ಬನ್ ಅಂಶ ಸುಕ್ಷ್ಮಾಣಿ ಜೀವಿಗಳ ಚಟುವಟಿಕೆಗೆ ಅನುಕೂಲ ವಾತಾವರಣವನ್ನು ಒದಗಿಸುತ್ತದೆ.

ಮಣ್ಣಿನ ಉಷ್ಣತೆ ಹಾಗೆಯೇ ವಾತಾವರಣದ ತಾಪಮಾನ ಸಹ ಅವುಗಳು ಜೀವಂತವಾಗಿರಲು ಸಹಕಾರಿ.  ಸೂಕ್ಷ್ಮಾಣು ಜೀವಿಗಳ ಉತ್ತಮ ಚಟುವಟಿಕೆ 29.5 -35  ಡಿಗ್ರಿ ಸೆಲ್ಸಿಯಸ್ ತಾಪಮಾನದ ವರೆಗೆ ಅವು ಸಹಿಸಬಲ್ಲವು. 32 ಡಿಗ್ರಿ ಉಷ್ಣತೆ  ಅವುಗಳ ಚಟುವಟಿಕೆಗೆ ಅತ್ಯುತ್ತಮ. ಇದಷ್ಟೇ ಅಲ್ಲದೆ ಮಣ್ಣಿನಲ್ಲಿ ತೇವಾಂಶವೂ ಅತೀ ಮುಖ್ಯ. ಹದವಾದ ತೇವಾಂಶ ಅಂದರೆ ಒಂದು ಹಿಂಡಿ ಮಣ್ಣನ್ನು ಕೈಯಲ್ಲಿ ಗಟ್ಟಿ ಆದುಮಿದಾಗ ಒಂದು ತೊಟ್ಟೂ ಸಹ ನೀರು  ಜಿನುಗಬಾರದು. ಅಂತಹ ಮಣ್ಣು ಅಂದರೆ 50% ಕ್ಕಿಂತ ಹೆಚ್ಚಿರದ ತೇವಾಂಶ ಮಾತ್ರ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗೆ ಸಹಕಾರಿ.  ಜೌಗು ಸ್ಥಿತಿಯಲ್ಲಿ ಸೂಕ್ಷ್ಮಾಣು ಜೀವಿಗಳು ಕೆಲಸ ಮಾಡಲಾರವು. ಕೆಲವು ಹಾನಿಕಾರಕ ಜೀವಾಣುಗಳು ಚಟುವಟಿಕೆ ಮಾಡುತ್ತವೆ. ಮಣ್ಣು ತೀರಾ ಒಣಗಿದ ಸ್ಥಿತಿಯಲ್ಲಿ ಸೂಕ್ಷ್ಷ್ಮಾಣು ಜೀವಿಗಳು  ಕ್ರಿಯೆಯನ್ನು ಮಾಡಲಾರವು. ಮೇಲ್ಮಣ್ಣಿನ ಫಲವತ್ತತೆ, ಅದರ ಗಾಳಿಯಾಡುವ ಸ್ಥಿತಿ ಅಂದರೆ ಬೇರುಗಳು ಇಳಿದ  ಜಾಗ ಅದು ಸತ್ತ ನಂತರ ಉಂಟಾಗುವ ರಂದ್ರಗಳ (Porosity) ಅವಕಾಶದಲ್ಲಿ ಗಾಳಿಯಾಡುವಿಕೆ ಇದ್ದರೆ ಸೂಕ್ಷ್ಮಾಣು ಜೀವಿಗಳು ಸಕ್ರಿಯವಾಗಿರುತ್ತವೆ.  ಮಣ್ಣಿನಲ್ಲಿ ಕೆಲವು ಖನಿಜ ಪೊಷಕಾಂಶಗಳಿರುತ್ತವೆ. ಅದು ಇದ್ದಾಗ ಸೂಕ್ಷ್ಮಾಣು ಜೀವಿಗಳು ಸಕ್ರಿಯವಾಗಿರುತ್ತದೆ.

ಸಸ್ಯ ಬೆಳವಣಿಗೆಗೆ ಯಾವ ರೀತಿಯ ಹವಾಮಾನ, ತೇವಾಂಶ ಮಣ್ಣಿನ ಫಲವತ್ತತೆ ಇರಬೇಕೋ  ಆದೇ ಪ್ರಕಾರವಾಗಿ ಸುಕ್ಷ್ಮಾಣು ಜೀವಿಗಳಿಗೂ ಇರಬೇಕು. ಸೂಕ್ಷ್ಮಾಣು ಜೀವಿಗಳಿಲ್ಲದ ಮಣ್ಣು ಮಣ್ಣಲ್ಲ. ಅದೇ ಮಣ್ಣಿನ ಜೀವಾಳ. ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು  ಸದೆಬದಿಯುವ ಜೀವಾಣುಗಳೂ ಮಣ್ಣಿನಲ್ಲೇ ಇರುತ್ತವೆ. ಅವುಗಳ ಪ್ರಾಬಲ್ಯ  ಹೆಚ್ಚಾದರೆ ರೋಗ ರುಜಿನಗಳು ಕಡಿಮೆಯಾಗುತ್ತದೆ. ಮಣ್ಣಿನ ಈ ಒಂದು ವಿಶೇಷ ವ್ಯವಸ್ಥೆ ನಿಜಕ್ಕೂ ಅಚ್ಚರಿ.

Leave a Reply

Your email address will not be published. Required fields are marked *

error: Content is protected !!