ಭೆಳೆ ಸಂರಕ್ಷಣೆಗೆ ಔಷಧಿ ಸಿಂಪರಣೆ ಅನಿವಾರ್ಯ.ರೈತರು ಅವರವರು ಬೆಳೆಸುವ ಬೆಳೆಗೆ ಕೀಟಕ್ಕೆ ಕೀಟನಾಶಕವನ್ನೂ ರೋಗಕ್ಕೆ ರೋಗನಾಶವನ್ನೂ ಸಿಂಪರಣೆ ಮಾಡುತ್ತಾರೆ. ಆದರೆ ಹೆಚ್ಚಿನವರು ಸಿಂಪರಣೆ ವಿಚಾರದಲ್ಲಿ ಸ್ವಲ್ಪ ಅಜಾಗರೂಕತೆ ಅಥವಾ ಅನಾವ್ಯಯವನ್ನು ಮಾಡುತ್ತಾರೆ. ಸಮರ್ಪಕ ಸಿಂಪರಣಾ ವಿಧಾನವನ್ನು ಪಾಲಿಸಿದರೆ ಖರ್ಚೂ ಉಳಿತಾಯ. ಪರಿಸರಕ್ಕೂ ಕಡಿಮೆ.
ಸುಮಾರು ವರ್ಷಕ್ಕೆ ಹಿಂದೆ ಒಮ್ಮೆ ಉಡುಪಿಯ ಮಲ್ಲಿಗೆ ಬೆಳೆಯುವ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಮಲ್ಲಿಗೆ ಬೆಳೆಯುವ ಕೆಲವರು ಔಷಧಿ ಸಿಂಪಡಿಸುವ ಕ್ರಮವನ್ನು ಕೇಳಿದಾಗ ಆಶ್ಚರ್ಯವಾಯಿತು. ಅಂಗಡಿಯವರು ಕೊಟ್ಟ ಕೀಟನಾಶಕ ಅಥವಾ ರೋಗನಾಶಕವನ್ನು ತಂದು ಬಕೆಟ್ ನಲ್ಲಿ ಕರಗಿಸಿ ಆ ದ್ರಾವಣಕ್ಕೆ ಕಸಬರಿಕೆ ಮುಳುಗಿಸಿ ಗಿಡಗಳ ಮೇಲೆ ಬೀಸಿ ಚಿಮುಕಿಸುವುದಂತೆ. ಇಲ್ಲಿ ಯಾವುದಕ್ಕೂ ಪ್ರಮಾಣ ಇಲ್ಲ. ಈಗ ಹಾಗೆ ಇರಲಿಕ್ಕಿಲ್ಲ. ನಮ್ಮಲ್ಲಿ ಕೆಲವರು ಬೋರ್ಡೋ ದ್ರಾವಣ ಸಿಂಪಡಿಸುವಾಗಲೂ ಇದೇ ರೀತಿ ಮಾಡುತ್ತಾರೆ. ಹಾಗೆಯೇ ಇನ್ನಿತರ ಕೀಟನಾಶಕ ರೋಗ ನಿಯಂತ್ರಕಗಳಲ್ಲೂ. ಈ ರೀತಿ ಸಿಂಪಡಿಸುವುದರಿಂದ ಖರ್ಚು ಅಧಿಕ ಹಾಗೆಯೇ ಔಷಧಿ ಅನವಶ್ಯಕವಾಗಿ ನೆಲದ ಮೇಲೆ ಬಿದ್ದು ಮಣ್ಣು ಮತ್ತು ಜೀವಾಣುಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಸಿಂಪಡಿಸುವವರು ಅದನ್ನು ಉಸಿರಾಡುವ ಸ್ಥಿತಿ ಹಾಗೆಯೇ ಮೈ ಮೇಲೆ ಬಿದ್ದು, ರೋಮ ನಾಳಗಳ ಮೂಲಕ ದೇಹಕ್ಕೆ ಸೇರುವ ಸಂಭವವೂ ಇರುತ್ತದೆ.
ಹೇಗೆ ಸಿಂಪಡಿಸಬೇಕು:
- ಹೆಚ್ಚಾಗಿ ಎಲ್ಲರೂ ಒಂದು ತೂತು ಉಳ್ಳ ನಾಸಲ್ ಅನ್ನು (Point spray nasal) ಬಳಸಿ ಬೋರ್ಡೋ ದ್ರಾವಣವನ್ನು ಸಿಂಪಡಿಸುತ್ತಾರೆ.
- ಇದರ ಅನುಕೂಲ ಏನೆಂದರೆ ಹೆಚ್ಚು ಎತ್ತರಕ್ಕೆ ಹಾರುವುದು. ಅಡಿಕೆ ಮರಗಳಿಗೆ ಏರಿ ಸಿಂಪರಣೆ ಮಾಡಬೇಕು.
- ಮರಕ್ಕೆ ಹತ್ತುವವರೇ ಇಲ್ಲದ ಕಾರಣ ಈ ನಾಸಲ್ ಬಳಸುವುದು ಅನಿವಾರ್ಯ.
- ಈ ರೀತಿ ಸಿಂಪಡಿಸುವಾಗ ಕೆಲವರು ಮಿತ ಒತ್ತಡದಲ್ಲಿ ದ್ರಾವಣವನ್ನು ಗೊನೆಗಳಿಗೆ ಸಿಂಪಡಿಸುತ್ತಾರೆ.
- ಆಗ ದ್ರಾವಣವು ಗೊನೆಗಳಿಗೆ ಬೀಳುತ್ತದೆ.
- ಗೊನೆ ಒದ್ದೆಯಾಗಿ ಸಿಂಪಡಿಸಿದ ದ್ರಾವಣದಲ್ಲಿ ಅರ್ಧಕ್ಕರ್ಧ ನೆಲಕ್ಕೆ ಬೀಳುತ್ತದೆ.

- ನಿಜವಾಗಿ ಗೊನೆಗಳಿಗೆ ಸಿಂಪರಣೆ ಮಾಡುವಾಗ ಅಧಿಕ ಒತ್ತಡದಲ್ಲಿ (High pressure) ಸಿಂಪರಣೆ ಮಾಡಬೇಕು.
- ದ್ರಾವಣವು ಗೊನೆಗಳ ಮೇಲೆ ಬೀಳುವಾಗ ಹಿಮದಂತೆ ಬಿದ್ದು ಒದ್ದೆಯಾಗಬೇಕು.
- ಶಿಲೀಂದ್ರ ನಿಯಂತ್ರಕವಾಗಿ ಬೋರ್ಡೋ ದ್ರಾವಣ ಸಿಂಪಡಿಸುವುದು ಬರೇ ಗೊನೆಯ ಕಾಯಿಗಳಿಗೆ.
- ಅಗತ್ಯ ಇದ್ದರೆ ಸ್ವಲ್ಪ ಸುಳಿ ಭಾಗಕ್ಕೆ ಮಾತ್ರ ಸಾಕಾಗುತ್ತದೆ.
- ಅನವಶ್ಯಕವಾಗಿ ನೆಲಕ್ಕೆ ಬೀಳಬಾರದು. ಇಬ್ಬನಿ ತರಹ ಸಿಂಪರಣೆ ಮಾಡಿದರೆ ಚೆನ್ನಾಗಿ ಗೊನೆಯ ಕಾಯಿಗಳ ಮೇಲೆ ಬೀಳುತ್ತದೆ.
- ಬೇಗನೆ ಕವರ್ ಸಹ ಆಗುತ್ತದೆ. ಡ್ರೋನ್ ಗಳಲ್ಲಿ ಸಿಂಪಡಿವಾಗ ಇಬ್ಬನಿ ತರಹ ಸಿಂಪರಣೆ ನಡೆಯುತ್ತದೆ.
- ಅದು ಕಾಣಿಸುವುದೂ ಇಲ್ಲ. ಅದರೆ ಪರಿಣಾಮ ಜಾಸ್ತಿ.
- ಸಿಂಪರಣೆಯಲ್ಲಿ ಬೇರೆ ಬೇರೆ ಕ್ರಮಗಳಿದ್ದು ಇಬ್ಬನಿ ತರಹ (Micron spray) ಒಳ್ಳೆಯದು.
- ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ಬೆಳೆಗಳಿಗೂ ಈ ರೀತಿ ಸಿಂಪಡಿಸಲು ಸಾಧ್ಯವಾಗದಿರಬಹುದು.
- ಆದರೆ ಸಾಧ್ಯವಿರುವಲ್ಲಿ ನೆಲಕ್ಕೆ ಬೀಳದಂತೆ ಸಿಂಪಡಿಸುವುದು ಉತ್ತಮ.
ಔಷಧಿ ನೆಲಕ್ಕೆ ಬಿದ್ದರೆ ಏನಾಗುತ್ತದೆ?

- ಅಡಿಕೆಯ ಕೊಳೆ ರೋಗಕ್ಕೆ ಸಿಂಪಡಿಸುವ ಬೋರ್ಡೋ ದ್ರಾವಣ ಹಾಗೆಯೇ ಬೇಸಿಗೆಯ ಆವಧಿಯಲ್ಲಿ ಸಿಂಗಾರ ಒಣಗುವುದಕ್ಕೆ ಸಿಂಪಡಿಸುವ ಇತರ ಶಿಲೀಂದ್ರ ನಾಶಕಗಳು ನೆಲಕ್ಕೆ ಬೀಳುವುದು ಸೂಕ್ತವಲ್ಲ.
- ಇವು ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಾಗಳಿಗಳಿಗೆ ಹಾನಿಕಾರಕ.
- ಜೊತೆಗೆ ತಾಮ್ರ ಎಂಬುದು ಘನ ಲೋಹವೂ ಸಹ.
- ಎಲ್ಲಾ ಶಿಲೀಂದ್ರಗಳೂ ಬೆಳೆಗಳಿಗೆ ಉಪಟಳ ನೀಡುವವುಗಳಲ್ಲ.
- ಬಹಳಷ್ಟು ಉಪಕಾರೀ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿ ಇರುತ್ತವೆ – ಇರಲೇ ಬೇಕು.
- ಶಿಲೀಂದ್ರ ನಾಶಕಗಳು ಇವುಗಳಿಗೂ ತೊಂದರೆ ಉಂಟುಮಾಡುತ್ತದೆ.
- ಹಾಗಾಗಿ ಅಲ್ಪ ಸ್ವಲ್ಪ ಅನಿವಾರ್ಯ ಪ್ರಸಂಗಗಳಲ್ಲಿ ಬೀಳುವುದು ಇರುತ್ತದೆ.
- ಗೊನೆಗೆ ಬೀಳುವುದಕ್ಕೂ ಹೆಚ್ಚು ನೆಲಕ್ಕೆ ಬೀಳುವುದು ಮಣ್ಣಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ನೆಲದಲ್ಲಿ ಎಲ್ಲಾ ತರಹದ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು ವಾಸವಾಗಿರುತ್ತದೆ. ಜೊತೆಗೆ ಕಣ್ಣಿಗೆ ಕಾಣುವ ಎರೆಹುಳು, ಸಹಸ್ರಪದಿಗಳು, ಗಂಗೆ ಹುಳಗಳು ಮುಂತಾದವುಗಳೂ ಇರುತ್ತವೆ. ಇವುಗಳ ಮೇಲೆ ಅಲ್ಪ ಸ್ವಲ್ಪ ತೊಂದರೆ ಈ ದ್ರಾವಣಗಳಿಂದ ಆಗುತ್ತದೆ. ನೆಲ ಎಂಬುದು ಅಸಂಖ್ಯಾತ ಸುಕ್ಷ್ಮಾಣು ಜೀವಿಗಳ ಗೂಡು. ಇವು ಅಲ್ಲಿ ಅನಿವಾರ್ಯ ಸಹ. ಅವುಗಳ ಜೀವಕ್ಕೆ ಹಾನಿಯಾಗದಂತೆ ಶಿಲೀಂದ್ರನಾಶಕ ಹಾಗೂ ಕೀಟನಾಶಕವನ್ನು ಬಳಸುವುದು ಜಾಣತನ.
ಶಿಲೀಂದ್ರ ನಾಶಕ ಇರಲಿ, ಕೀಟನಾಶಕ ಇರಲಿ, ಇದು ಬೆಳೆ ರಕ್ಷಣೆಗೆ ಗುರಿ ಆಧಾರಿತವಾಗಿ ಸಿಂಪಡಿಸುವಂತದ್ದು. ಅಲ್ಲಿ ಅನವಶ್ಯಕ ವ್ಯಯ ಮಾಡಬಾರದು. ಅದು ಖರ್ಚನ್ನೂ ಹೆಚ್ಚಿಸುತ್ತದೆ. ಪರಿಸರಕ್ಕೆ ಹಾಳು ಎಂಬ ಅಪವಾದ ಬರುವುದೂ ಇಲ್ಲಿಂದಲೇ. ನೆಲ ಮತ್ತು ನೀರಿಗೆ ಬಿದ್ದಾಗ ಕೀಟನಾಶಕ ಮತ್ತು ರೋಗನಾಶಕಗಳು ಬೇರೆ ಬೇರೆ ಪರಿಣಾಮವನ್ನು ಉಂಟುಮಾಡುತ್ತದೆ.