ಯೂರಿಯಾ ಗೊಬ್ಬರ ಎಂದರೇನು. ಹೇಗೆ ಬಳಸಬೇಕು?

ಯೂರಿಯಾ ಗೊಬ್ಬರ ಎಂದರೇನು. ಹೇಗೆ ಬಳಸಬೇಕು?

ಯೂರಿಯಾ  ಇದು ನಮಗೆಲ್ಲಾ  ಗೊತ್ತಿರುವ ಸಾರಜನಕ  ಒದಗಿಸುವ  ಪೋಷಕಾಂಶ. ಜಗತ್ತಿನಾದ್ಯಂತ 90% ಕ್ಕೂ ಹೆಚ್ಚು ಸಾರಜನಕ ಗೊಬ್ಬರವಾಗಿ ಬಳಸಲ್ಪಡುವುದು ಯೂರಿಯಾ. ಕೇವಲ ಸಾರಜನಕ ಮಾತ್ರ ಇರುವ, ಅತ್ಯಧಿಕ ಪ್ರಮಾಣದಲ್ಲಿಯೂ ಇರುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಇದನ್ನು ಹೇಗೆ ತಯಾರಿಸಲಾಗುತ್ತದೆ, ಹೇಗೆ ಅದು ಹರಳು ರೂಪದಲ್ಲಿ ನಮಗೆ ಸಿಗುತ್ತದೆ. ಅದನ್ನು ಹೇಗೆ ಬೆಳೆಗಳಿಗೆ ಬಳಸಬೇಕು ಎಂಬುದು ರೈತರಾದವರಿಗೆ ಅಗತ್ಯವಾಗಿ ತಿಳಿದಿರಬೇಕು.

ಯೂರಿಯಾ  ಅಂಶವನ್ನು ಫ್ರೆಂಚ್ ರಸಾಯನ  ಶಾಸ್ತ್ರ ವಿಜ್ಞಾನಿಯು ಹಿಲೆರ್ ರೋಯಲ್ ಮೂತ್ರದಲ್ಲಿ ಮೊದಲು ಪತ್ತೆ ಮಾಡಿದನು ಎಂಬ ಉಲ್ಲೇಖವಿದೆ. ಮತ್ತೊಬ್ಬ ಜರ್ಮನ್ ರಸಾಯನ ಶಾಸ್ತ್ರ ವಿಜ್ಞಾನಿ ಅಮೋನಿಯಂ ನೈಟ್ರೇಟ್  ತಯಾರಿವ  ಪ್ರಯತ್ನದಲ್ಲಿ ವಿಫಲವಾಗಿ ಅದು ಯೂರಿಯಾ ಅಯಿತಂತೆ.  ಸಸ್ಯಗಳಿಗೆ ಅಧಿಕ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶ ಸಾರಜನಕ, ಅದರೆ ಅದು ಮಣ್ಣಿನಲ್ಲಿ  ಇರುವುದು ಅತೀ ಕಡಿಮೆ. ವಾತಾವರಣದ  ಅಂದರೆ ನಮ್ಮ ಸುತ್ತಮುತ್ತಲಿನ ಹವೆಯಲ್ಲಿ 79% ದಷ್ಟು  ಸಾರಜನಕ ಇದೆ. ಆದರೆ ಅದನ್ನು ಸಸ್ಯಗಳು ಹೀರಿಕೊಳ್ಳುವುದಿಲ್ಲ. ಕೆಲವೇ ಕೆಲವು ಅಂದರೆ ದ್ವಿದಳ ಸಸ್ಯಗಳು ಅದನ್ನು ಹೀರಿಕೊಳ್ಳುವುದು ಬಿಟ್ಟರೆ ಉಳಿದವುಗಳಿಗೆ ಇದರಿಂದ ಏನೂ ಪ್ರಯೋಜನ ಇಲ್ಲ. ಹಾಗಾಗಿ ಸಸ್ಯ ಬೆಳವಣಿಗೆಗೆ ಅಗತ್ಯವಾದ ಇದನ್ನು ಬೇರೆ ಮೂಲದಿಂದ ಒದಗಿಸಲೇ ಬೇಕು. ಈ ರಸಗೊಬ್ಬರವು ನಮ್ಮ ದೇಶಕ್ಕೆ 1959 ರಲ್ಲಿ  ಪರಿಚಯಿಸಲ್ಪಟ್ಟಿತು. ಮೊದಲಾಗಿ ನಮ್ಮ ಕೃಷಿಗೆ ಪರಿಚಯಿಸಲ್ಪಟ್ಟ ರಸ ಗೊಬ್ಬರ  ಸಿಂಗಲ್ ಸುಪರ್ ಫೊಸ್ಫೇಟ್ SSP ನಂತರ ಅಮೋನಿಯಂ ಸಲ್ಫೇಟ್,  ಹಾಗೆಯೇ ಮುಂದುವರಿದು ಅಮೋನಿಯಂ ಸಲ್ಫೇಟ್ ನೈಟ್ರೇಟ್ ( ಈಗ ಇಲ್ಲ)  ಯೂರಿಯಾ,ಅಮೋನಿಯಂ ಕ್ಲೋರೈಡ್, ಅಮೋನಿಯಂ ಫೋಸ್ಫೇಟ್ , ಕ್ಯಾಲ್ಸಿಯಂ ನೈಟ್ರೇಟ್(CAN, ನೈಟ್ರೋ ಫೋಫೇಟ್, ಡಿ ಎ ಪಿ DAP,  ಟ್ರಿಪಲ್ ಸೂಪರ್ ಫೋಸ್ಫೇಟ್,TSP (ಈಗ ಇಲ್ಲ) ಯೂರಿಯಾ ಅಮೋನಿಯಂ ಫೋಸ್ಫೇಟ್,  ನಂತರ 1968 ರಲ್ಲಿ ಸಂಯುಕ್ತ  (NPK Complex fertilisers) ರಸಗೊಬ್ಬರಗಳು ಪರಿಚಯಿಸಲ್ಪಟ್ಟವು.

ಯೂರಿಯಾ ಗೊಬ್ಬರವನ್ನು ಅಮೋನಿಯಾ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳನ್ನು ಬಿಸಿ ಮಾಡಿ ಪಡೆಯಲಾಗುತ್ತದೆ. ಹೀಗೆ ತಯಾರಾದ ಇದರಲ್ಲಿ ನೀರೂ ಸಹ ಇರುತ್ತದೆ. ಇದನ್ನು ದೊಡ್ದ ಚಿಮಿಣಿಗಳ ಮೂಲಕ ಕೆಳಕ್ಕೆ ಬಿಟ್ಟಾಗ ಅದರ ನೀರು ಆವಿಯಾಗಿ ಹರಳು ರೂಪದ ಯೂರಿಯಾ  ಸಿಗುತ್ತದೆ. ಬೇರೆ ರೂಪದಲ್ಲೂ ಪಡೆಯಬಹುದು. ಬಳಕೆಗೆ ಮತ್ತು ತಯಾರಿಕೆಕೆ  ಪ್ಯಾಕಿಂಗ್ ಗೆ ಸುಲಭವಾದದ್ದು ಹರಳು ರೂಪದ್ದು.

ಯೂರಿಯಾ ಗೊಬ್ಬರದಲ್ಲಿ ಎಷ್ಟು ಸಾರಜನ ಇದೆ:

ಯಾವುದೇ ಗೊಬ್ಬರವಿರಲಿ, ಅದರ ತೂಕದಷ್ಟು ಅದರ ಸತ್ವ ಇರುವುದಿಲ್ಲ. ಹಾಗೆಯೇ ಯೂರಿಯಾದಲ್ಲಿ 46%  ಸಾರಜನಕ ಇರುತ್ತದೆ. ಉಳಿದದ್ದು ಆ ಸಾರಜನಕವನ್ನು ಹಿಡಿದಿಟ್ಟುಕೊಳ್ಳುವ ವಸ್ತು ಅದನ್ನು ಕ್ಯಾರಿಯರ್ ಮೆಟಿರೀಯಲ್ (Carrier material ) ಎನ್ನುತ್ತಾರೆ. ಇದು ಯೂರಿಯಾ ತಯಾರಿಸುವಾಗ ಉಪಯೋಗಿಸುವ ವಸ್ತುವೇ ಆಗಿರುತ್ತದೆ. ಇದರಲ್ಲಿರುವ 46 % ವು ಸಸ್ಯಗಳಿಗೆ  ಪೋಷಕವಾಗಿ ಲಭ್ಯವಾಗುತ್ತದೆ. 1 ಕಿಲೋ ಗ್ರಾಂ ಯೂರಿಯಾದಲ್ಲಿ 460  ಗ್ರಾಂ ಮಾತ್ರ ಸಾರಜನಕ. ಉಳಿದವು ಉಪಯೋಗ ರಹಿತ. ಹಾಗೆಂದು ಅವು ವಾತವಾರಣದ ತೇವಾಂಶಕ್ಕೆ ಒಡ್ಡಿದಾಗ ಕರಗಿ ಮಣ್ಣಿನಲ್ಲಿ ವಿಲೀನವಾಗುತ್ತದೆ. ಇದರಿಂದ ಹಾನಿ ಏನೂ ಇಲ್ಲ. ಯೂರಿಯಾವನ್ನು  ಆಮೈಡ್ Amide ರೂಪದ ಗೊಬ್ಬರ ಎಂದು ಕರೆಯುತ್ತಾರೆ. ಹಾಗೆಂದರೆ  ಜಲಜನಕದೊಂದಿಗೆ ಸಾರಜನಕವು ಬೆರೆತುಕೊಂಡದ್ದು. .(Nitrogen bonded to hydrogen)  ಇದರಲ್ಲಿ ಇರುವ ಸಾರಜನಕ ಅಂಶ ತಯಾರು ಮಾಡುವಾಗ ಇದ್ದದ್ದು. ಅದು ಗಾಳಿಗೆ , ಬಿಸಿಲಿಗೆ ತೆರೆದುಕೊಂಡಾಗ ಸ್ವಲ್ಪ ಪ್ರಮಾಣದಲ್ಲಿ ಆವೀಕರಣ ಆಗಿ ನಷ್ಟವಾಗುದು ಇದೆ. ಯೂರಿಯಾ ತುಂಬುವ  ಚೀಲ ಮತ್ತು ದಾಸ್ತಾನು ವ್ಯವಸ್ಥೆಯಲ್ಲಿ  ನಷ್ಟ ಹೆಚ್ಚು ಕಡಿಮೆ ಆಗುತ್ತದೆ. ಇದನ್ನು ದಾಸ್ತಾನು ಇಟ್ಟಲ್ಲಿ ಒಂದು ವಾಸನೆ ಹೊರಬರುತ್ತದೆ. ಅದು ಗಾಳಿಯ ಮೂಲಕ ನಷ್ಟವಾಗುವುದಾಗಿರುತ್ತದೆ. ಇದರಲ್ಲಿರುವ ಅಮೈಡ್ ರೂಪದ ಸಾರಜನಕವು ಮಣ್ಣಿನಲ್ಲಿರುವ ನೀರಿನ ಅಂಶ ಮತ್ತು ಯೂರಿಯೇಜ್ ಎಂಬ ಕಿಣ್ವದ ಸನ್ನಿಧಿಯಲ್ಲಿ ಅಮೋನಿಯಂ ಕಾರ್ಬೋನೇಟ್ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ.ಅಮೋನಿಯಂ ಕಾರ್ಬೋನೇಟ್ ಸ್ಥಿರ ಲವಣ ಅಲ್ಲದ ಕಾರಣ ಅದು ಒಡೆದು ಅಮೋನಿಯಾ ಹೊರ ಬರುತ್ತದೆ.ಈ ಗಾಳಿಯು ನೀರಿನೊಂದಿಗೆ ಸೇರಿ ಅಮೋನಿಯಂ ಆಗುತ್ತದೆ. ಅಮೋನಿಯಂ ನೀರಿನೊಂದಿಗೆಗೆ ಸೇರಿದಾಗ ಅಮೋನಿಯಂ ಅಯಾನು ಆಗುತ್ತದೆ.

46% ಸಾರಜನಕ ಇರುವ ಗೊಬ್ಬರ

ಯೂರಿಯಾ ಗೊಬ್ಬರ ಬಳಸು ವಿಧಾನ:

ಇದರಲ್ಲಿ 46% ಸಾರಜನಕ ಇದ್ದರೂ ಸಹ ಬೆಳೆಗಳಿಗೆ ಇದೆಲ್ಲವೂ ಲಭ್ಯವಾಗುವುದಿಲ್ಲ ಒಂದು ಅದ್ಯಯನದಂತೆ ಕೆಲವು ಬೆಳೆಗಳಿಗೆ 46% ದಲ್ಲಿ  30-35% ದಷ್ಟು ಮಾತ್ರ ಲಭ್ಯವಾಗಿ ಉಳಿದವು ನಷ್ಟವಾಗುತ್ತದೆ. ಹಾಗೆಂದು ಅದು ಮಣ್ಣಿನಲ್ಲಿ ಉಳಿಯುವುದಿಲ್ಲ.ಮುಂದಿನ ಬೆಳೆಗೆ ಲಭ್ಯವಾಗುವುದೂ ಇಲ್ಲ. ಇದು ನಷ್ಟವಾಗುವ ರೀತಿಯೇ ಬೇರೆ.ನಾವು ಬಳಸಿದ ಯೂರಿಯಾ ಗೊಬ್ಬರವು (ಹಾಗೆಯೇ ಇನ್ನಿತರ ಸಾರಜನಕ ಗೊಬ್ಬರಗಳೂ ಸಹ) ಮಣ್ಣಿಗೆ ಸೇರಿದಾಗ ಅಲ್ಲಿ ಸಾಕಷ್ಟು ತೇವಾಂಶ ಇದ್ದರೆ ಗೊಬ್ಬರವು ಕರಗಿ ಮಣ್ಣಿಗೆ ಸೇರುತ್ತದೆ. ನೀರು ಹೆಚ್ಚಾದರೆ ( ಮಳೆಗಾಲ ಮತ್ತು ಅತಿ ನೀರಾವರಿ ಮಾಡುವಲ್ಲಿ) ಅಮೋನಿಯಂ ಅಯಾನುಗಳು ನೀರಿನ ಜೊತೆಗೆ ಭೂಮಿಯಾಳಕ್ಕೆ ಹೋಗುತ್ತದೆ. ಅಲ್ಲಿ ಬೇರುಗಳೇ ಇಲ್ಲದ ಕಾರಣ ಅದು ಸಸ್ಯಕ್ಕೆ ಲಭ್ಯವಾಗುವುದಿಲ್ಲ. ನಮ್ಮ ಬೆಳೆಗಳು ಅಡಿಕೆ ತೆಂಗು ಮುಂತಾದ ಏಕದಳ ಬೆಳೆಗಳಾಗಿದ್ದರೆ ಅದರ ಬೇರು 1-2 -3 ಅಡಿ ಆಳದ ತನಕ ಮಾತ್ರ ಇರುತ್ತವೆ. ಅದರ ಕೆಳಗೆ ಇಳಿದದ್ದು ಸಸ್ಯಕ್ಕೆ ಸಿಗದೆ ಅಂತರ್ಜಲವನ್ನು ಸೇರುತ್ತದೆ. ಮಣ್ಣಿನಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಇದ್ದರೆ  ಈ ರೀತಿ ಇಳಿದು ಹೋಗದಂತೆ ತಡೆಯಬಲ್ಲವು . ಆದರೆ ನೀರು ಜೌಗು ಸ್ಥಿತಿ ಇದ್ದರೆ ಈ ಬ್ಯಾಕ್ಟೀರಿಯಾಗಳೂ ಅಲ್ಲಿ ಬದುಕಲಾರವು.

ಒಂದು ವೇಳೆ ನಾವು ಯೂರಿಯಾ ಗೊಬ್ಬರವನ್ನು ಹಾಕಿದಾಗ ನೀರಿನ ತೇವಾಂಶ ಇರಲಿಲ್ಲವಾದರೆ , ಒಂದು ದಿನ ಪೂರ್ತಿ ನೀರಾವರಿ ಮಾಡದೆ ಇದ್ದರೆ ಅಥವಾ ಮಳೆ ಬಾರದೆ ಇದ್ದರೆ  ಅಲ್ಲಿ ಒಂದು ವಾಸನೆ ಬರುತ್ತದೆ. ಅದು ಸಾರಜನಕ ಅಮೋನಿಯಾ ರೂಪದಲ್ಲಿ ನಷ್ಟವಾಗುದು. ( ಕೊಟ್ಟಿಗೆ ಗೊಬ್ಬರ  ಹಾಕಿದಾಗಲೂ ಈ ವಾಸನೆ ಬರುತ್ತದೆ ಅದೂ ಸಹ ನಷ್ಟವೇ ಆಗಿರುತ್ತದೆ)

ಹೇಗೆ ಹಾಕಿದರೆ ಫಲ ಹೆಚ್ಚು?

ಯೂರಿಯಾ ಅಥವ ಸಾರಜನಕ ಯುಕ್ತ ಗೊಬ್ಬರವನ್ನು ಹಾಕುವಾಗ ಮಳೆ ವಿಪರೀತವಾಗಿ ಬಾರದಿದ್ದರೆ ಅನುಕೂಲ.  ವಿಪರೀತ ಮಳೆ ಬರುತ್ತಿದ್ದು, ನೀರು ತಳಕ್ಕೆ ಇಳಿಯುವ ಸ್ಥಿತಿ ಇದ್ದಾಗ ಸಾರಜನಕ ಗೊಬ್ಬರ ಕೊಟ್ಟರೆ ನಷ್ಟವಾಗುತ್ತದೆ. ಹಾಗಾಗಿ ಕೊಡದೆ ಇರುವುದು ಉತ್ತಮ. ಬೇಸಿಗೆಯಲ್ಲಿ ಅಥವ ಮಳೆ ಇಲ್ಲದ ಸಮಯದಲ್ಲಿ ಕೊಡುವಾಗ ಮಣ್ಣನ್ನು ಸ್ವಲ್ಪ ಕೆರೆದು (1-2 ಇಂಚು) ಹಾಕಬೇಕು. ನೀರಿನೊಂದಿಗೆ ಕರಗಿದಾಗ ಸಾರಜನಕ ನಷ್ಟವಾಗುವುದಿಲ್ಲ. ಹಾಗಾಗಿ ಹನಿ ನೀರಾವರಿ ಮೂಲಕ ಕೊಡಬಹುದು. ಮಳೆ ಇಲ್ಲದಾಗ ಗೊಬ್ಬರ ಕೊಟ್ಟು ನೀರು ಕೊಡಬೇಕು. ಆಗ ಅದು ಕರಗಿ ಮಣ್ಣಿಗೆ ಸೇರುತ್ತದೆ. ಹೆಚ್ಚು ಕೊಡಬಾರದು.  ಸಾರಜನಕ ಗೊಬ್ಬರವು ಬೇಗ ಬೆಳೆಗಳಿಗೆ ಲಭ್ಯವಾಗುವ ಗುಣ ಹೊಂದಿದೆ. ಹಾಗಾಗಿ ಒಮ್ಮೆಲೇ ಕೊಟ್ಟರೆ ಅಥವಾ ವರ್ಷಕ್ಕೆರಡು ಬಾರಿ ಕೊಟ್ಟರೆ ಸಾಕಾಗುವುದಿಲ್ಲ. ಪದೇ ಪದೇ ಸ್ವಲ್ಪ ಸ್ವಲ್ಪ ಕೊಡಬೇಕು. ಇನ್ನು ಇದಕ್ಕೆ  ಡಾಂಬರು ಲೇಪನ ಎಂಬುದು ಇದೆ. ಇದನ್ನು ಈಗ ಅನುಸರಿಸಲು ಕಷ್ಟವಾಗಬಹುದು.

ಸಾರಜನಕ ಒದಗಿಸುವ ಇತರ ಗೊಬ್ಬರಗಳು:

ಯೂರಿಯಾ ಹೊರತಾಗಿ ಬೇರೆ ಸಾರಜನ ಒದಗಿಸುವ ಗೊಬ್ಬರಗಳೂ ಇವೆ. ಆದರಲ್ಲಿ ಬೇರೆ ಪೋಷಕಗಳು ಹೆಚ್ಚು ಇರುವ ಕಾರಣ ಅದನ್ನು ಹೆಚ್ಚು ಇರುವ ಪೋಷಕದ ಹೆಸರಿನೊಂದಿಗೆ ಕರೆಯಲಾಗುತ್ತದೆ. ಅದು ಕ್ಯಾಲ್ಸಿಯಂ ನೈಟ್ರೇಟ್,  ಪೊಟ್ಯಾಶಿಯಂ ನೈಟ್ರೇಟ್ , ಡಿ ಎ ಪಿ, ಮೋನೋ ಅಮೋನಿಯಂ ಫೋಸ್ಫೇಟ್  ನೈಟ್ರೋ ಫೋಸ್ಫೇಟ್, ಯೂರಿಯಾ ಅಮೋನಿಯಂ ಫೋಸ್ಫೇಟ್ ಇತ್ಯಾದಿಗಳು. ಇದರಲ್ಲಿ ಪೊಟ್ಯಾಶಿಯಂ, ಮತ್ತು ರಂಜ್ಕ ಆಧಿಕ ಇರುತ್ತದೆ.

ಯೂರಿಯಾ ಗೊಬ್ಬರ ಎಷ್ಟು ಉತ್ತಮವೋ ಅಷ್ಟೇ ಹಾಳು ಸಹ. ಇದನ್ನು ವೈಜ್ಞಾನಿಕವಾಗಿ ಬಳಕೆ ಮಾಡಬೇಕು. ಇದು ಚರ್ಮಕ್ಕೆ ತಾಗಿದರೆ ಕೆಲವೊಮ್ಮೆ ಚರ್ಮ ತೊಂದರೆಗಳೂ ಬರುತ್ತದೆ. ಇದರ ಆವೀಕರಣದಿಂದ ಉಸಿರಾಟ ಸಮಸ್ಯೆಯೂ ಬರುತ್ತದೆ. ಎಲೆಗಳಿಗೆ ತಾಗಿದಾಗ ( ಸಾಂದ್ರವಾಗಿದ್ದಾಗ) ಕೊಳೆಯುವಿಕೆ ಉಂತಾಗುತ್ತದೆ. ಸುಳಿಗೆ ಬಿದ್ದರೆ ಕೊಳೆಯುತ್ತದೆ. ವಾತಾವರಣಕ್ಕೂ ಹಾಳು. ಯಥೇಚ್ಚ ಬಳಕೆ ಮಾಡಿದರೆ ಸಸ್ಯ ಕೋಶದಲ್ಲಿ ಸೇರಲ್ಪಟ್ಟು  ಮತ್ತೆ ತೆಗೆಯಲು ಅಸಾಧ್ಯವಾಗುತ್ತದೆ.

.

Leave a Reply

Your email address will not be published. Required fields are marked *

error: Content is protected !!